Asianet Suvarna News Asianet Suvarna News

ಕೊನೆಗೂ ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ಶುರು ಮಾಡಿದ ಚುನಾವಣೆ ಆಯೋಗ

ಹಲವು ಗದ್ದಲ ಗೊಂದಲಗಳ ನಡುವೆಯೂ ಬಿಬಿಎಂಪಿ ಚುನಾವಣೆಗೆ ಕಾಲ ಸನ್ನಿಹಿತವಾಗಿದ್ದು, ಕರ್ನಾಟಕ ಚುನಾವಣೆ ಆಯೋಗ ಮಹತ್ವದ ಸಭೆ ನಡೆಸಿದೆ. ಅಲ್ಲದೇ ಚುನಾವಣೆ ಬಗ್ಗೆ ಕೆಲ ಸೂಚನೆಗಳನ್ನ ಸಹ ಕೊಟ್ಟಿದೆ.

Karnataka Election commission Starts BBMP Poll Preparation rbj
Author
Bengaluru, First Published Aug 20, 2022, 6:17 PM IST

ವರದಿ - ರಕ್ಷಾ ಕಟ್ಟೆಬೆಳಗುಳಿ

ಬೆಂಗಳೂರು, (ಆಗಸ್ಟ್.20):
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಕೊನೆಗೂ ಕಾಲ‌ ಕೂಡಿಬರುತ್ತಿದೆ. ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಆಗುತ್ತೋ ಇಲ್ಲವೊ ಎಂಬ ಗೊಂದಲ ಮಧ್ಯೆ ರಾಜ್ಯ ಚುನಾವಣಾ ಆಯೋಗ ಬಿಬಿಎಂಪಿ ಚುನಾವಣೆ ಸಿದ್ದತೆ ವಿಚಾರವಾಗಿ ಅಧಿಕೃತವಾಗಿ ಇಂದು(ಶನಿವಾರ) ಮಹತ್ವದ ಸಭೆ ಮಾಡಿದೆ.

ಎರಡು ಗಂಟೆಗೂ ಹೆಚ್ಚು ಕಾಲ ಜರುಗಿದ ಸಭೆಯಲ್ಲಿ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಬಸವರಾಜ್, ಬಿಬಿಎಂಪಿ ಮುಖ್ಯತುಷಾರ್ ಗಿರಿನಾಥ್, ವಿಶೇಷ ಆಯುಕ್ತರಾದ ರಂಗಪ್ಪ, ರಾಮ್ ಪ್ರಸಾದ್ ಸೇರಿದಂತೆ ಮತ್ತಿತರು ಭಾಗಿಯಾಗಿದ್ದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ ರಂಗ ಸಜ್ಜಾಗಿದ್ದು, ಆಗಸ್ಟ್ 25 ರಂದು ಮತದಾರರ ಪಟ್ಟಿಯ ಕರಡು ಪ್ರಕಟ ಮಾಡಲು ಸೂಚನೆ ನೀಡಲಾಯಿತು.

ಬೆಂಗಳೂರು: ಬಿಬಿಎಂಪಿ ಮೀಸಲು ಕರಡು ಪಟ್ಟಿಯೇ ಫೈನಲ್‌..!

 ಮತದಾರರ ಪಟ್ಟಿಯ ಕರಡು ಪ್ರಕಟಗೊಂಡ ಕೂಡಲೇ ಪಾಲಿಕೆಯ ಅಂತರ್ಜಾಲ ತಾಣದಲ್ಲಿ ಮಾಹಿತಿ ಹಾಕಬೇಕು. ಇದರ ಜೊತೆಗೆ ನೋಂದಾಯಿತ ರಾಜಕೀಯ ಪಕ್ಷಗಳ ಕಚೇರಿಗೆ ಹಾಗೂ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳಿಗೆ ಮತದಾರರ ಪಟ್ಟಿಯ ಕರಡು ಪ್ರತಿಯನ್ನು ನೀಡುವಂತೆ ಪಾಲಿಕೆಯ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಲಾಯ್ತು.  ವಾರ್ಡ್ ಮರು ವಿಂಗಡನೆಯಾಗಿರುವ ಹಿನ್ನೆಲೆಯಲ್ಲಿ ಮೊದಲು ಮತಗಟ್ಟೆಗಳ ಪರಿಶೀಲನೆ ಆಗಬೇಕಿದೆ. 

ವಾರ್ಡ್ ಗಳಿಗೆ ಉಸ್ತುವಾರಿ ಅಧಿಕಾರಿಗಳನ್ನು ಗುರುತಿಸಿ ನೇಮಕ ಮಾಡಲು ಪಟ್ಟಿ ಸಿದ್ಧಗೊಳಿಸಬೇಕಿದೆ ಎಂದು ರಾಜ್ಯ ಚುನಾವಣಾ ಆಯೋಗ ಪಾಲಿಕೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪ್ರತಿ ಬಾರಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ಅತ್ಯಂತ ಕಡಿಮೆ ಇರುತ್ತದೆ. ಮತದಾನದ ಪ್ರಮಾಣ ಹೆಚ್ಚಿಸಲು ವ್ಯಾಪಕ ಪ್ರಚಾರ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆ ಇದೆ. ಆದರೆ, ಈ ನಿಟ್ಟಿನಲ್ಲಿ ವೆಚ್ಚ ಮಾಡುವಲ್ಲಿ ಮಿತವ್ಯಯ ಸಾಧಿಸುವ ಬಗ್ಗೆ ಚರ್ಚೆಯಾಯಿತು.

 ಇನ್ನು ವೋಟರ್ ಐಡಿ, ವಾರ್ಡ್ ಬೌಂಡರಿ, ಚುನಾವಣೆಗೆ ಅಗತ್ಯವಾದ ಸಿಬ್ಬಂದಿ ನೇಮಕಕ್ಕೆ ತಯಾರಿಯಾಗಬೇಕು. ಇವಿಎಂ ಸೇರಿ ಚುನಾವಣೆಗೆ ಬೇಕಾದ ಎಲ್ಲಾ ಸಿದ್ಧತೆಗೆ  ಚುನಾವಣಾ ಆಯೋಗ ಸೂಚನೆ‌ ನೀಡಿತು. ರಾಜ್ಯ ಚುನಾವಣಾ ಆಯೋಗವೇನೋ ಬಿಬಿಎಂಪಿ ಚುನಾವಣಾ ಪ್ರಕ್ರಿಯೆ ಶುರು ಮಾಡಿದೆ. 

ಎಲ್ಲ ಅಂದುಕೊಂಡಂತೆ ಆದರೆ ಅಕ್ಟೋಬರ್ ಮೊದಲ ವಾರದಲ್ಲಿ ನೋಟಿಫಿಕೇಷನ್ ಹೊರಡಿಸಿ,  21 ದಿನಗಳಲ್ಲಿ ಚುನಾವಣಾ ಪ್ರಕ್ರಿಯೆ ಸಂಪೂರ್ಣಗೊಳ್ಳಲಿದೆ. ಆದರೆ ಮೀಸಲಾತಿ ಪ್ರಶ್ನಿಸಿ ಹಲವರು ಕೋರ್ಟ್‌ ಮೊರೆ ಹೋಗಿದ್ದಾರೆ. ಈ ಸಂಬಂಧ ಹೈಕೋರ್ಟ್, ಸುಪ್ರಿಂಕೋರ್ಟ್ ಏನು ಸೂಚನೆ ಕೊಡುತ್ತೋ ಅನ್ನೋದರ ಮೇಲೆ ಬಿಬಿಎಂಪಿ ಚುನಾವಣಾ ಯಾವಾಗ ಜರುಗುತ್ತೆ ಅನ್ನೋದು ನಿರ್ಧಾರವಾಗಲಿದೆ.

Follow Us:
Download App:
  • android
  • ios