Anjanadri: ಶ್ರಾವಣ ಮಾಸದ ಮೊದಲ ಶನಿವಾರ ಹಾಗೂ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಭಕ್ತರ ದಂಡೇ ಹರಿದುಬಂದಿದೆ. ಹನುಮಂತನ ಜನ್ಮಸ್ಥಳವೆಂದು ನಂಬಲಾಗುವ ಅಂಜನಾದ್ರಿ ಬೆಟ್ಟದ..
ರಾಮಮೂರ್ತಿ ನವಲಿ
ಗಂಗಾವತಿ (ಆ.15): ಶ್ರಾವಣ ಮಾಸದ ಮೊದಲ ಶನಿವಾರ ಹಾಗೂ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಭಕ್ತರ ದಂಡೇ ಹರಿದುಬಂದಿದೆ. ಹನುಮಂತನ ಜನ್ಮಸ್ಥಳವೆಂದು ನಂಬಲಾಗುವ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದರ್ಶನಕ್ಕೆ ಕೊಪ್ಪಳ ಜಿಲ್ಲೆ ಮಾತ್ರವಲ್ಲದೆ ವಿವಿಧ ನಗರಗಳಿಂದಲೂ ಸಾವಿರಾರು ಭಕ್ತರು ಆಗಮಿಸಿದ್ದರು.
ಶನಿವಾರ ಬೆಳಗ್ಗೆಯಿಂದಲೇ ಅಂಜನಾದ್ರಿ ಬೆಟ್ಟದತ್ತ ಭಕ್ತರ ಸಂಚಾರ ಹೆಚ್ಚಾಗಿದ್ದು, ಒಂದೇ ದಿನ 30 ಸಾವಿರಕ್ಕೂ ಅಧಿಕ ಮಂದಿ ಸ್ವಾಮಿಯ ದರ್ಶನ ಪಡೆದರು ಎಂದು ತಿಳಿದುಬಂದಿದೆ. ಶ್ರಾವಣ ಶನಿವಾರದ ವಿಶೇಷತೆ ಹಾಗೂ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಎರಡೂ ಒಂದೇ ದಿನ ಬಂದಿದ್ದರಿಂದ ಈ ಬಾರಿ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು.
ಭಕ್ತರಿಗಾಗಿ ವಿಶೇಷ ಸಂಚಾರ ವ್ಯವಸ್ಥೆ
ಭಕ್ತರಿಗೆ ಮುನಿರಾಬಾದ್ ರಸ್ತೆಯ ಮಾರ್ಗದಿಂದ ಬೆಟ್ಟ ಏರಲು ಪ್ರವೇಶ ಕಲ್ಪಿಸಲಾಗಿತ್ತು. ದರ್ಶನ ಪಡೆದ ಬಳಿಕ ಚಿಕ್ಕರಾಂಪುರ ಮಾರ್ಗವಾಗಿ ಮೆಟ್ಟಿಲು ಇಳಿದು ತೆರಳಲು ವ್ಯವಸ್ಥೆ ಮಾಡಲಾಗಿತ್ತು. ದೂರದ ಊರುಗಳಿಂದ ಆಗಮಿಸಿದ್ದ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಸಾವಿರಾರು ಭಕ್ತರು ಕಾರು, ಬೈಕ್ ಸೇರಿದಂತೆ ವಿವಿಧ ವಾಹನಗಳಲ್ಲಿ ಅಂಜನಾದ್ರಿಗೆ ಆಗಮಿಸಿದ್ದರಿಂದ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿ ಸಂಚಾರ ವ್ಯವಸ್ಥೆ ಕೆಲಕಾಲ ಅಸ್ತವ್ಯಸ್ತಗೊಂಡಿತ್ತು.
ಹೂಗಳಿಂದ ಕಂಗೊಳಿಸಿದ ನವಲಿ ಆಂಜನೇಯಸ್ವಾಮಿ
ಇದೇ ವೇಳೆ ಸಮೀಪದ ನವಲಿ ಗ್ರಾಮದ ಐತಿಹಾಸಿಕ ಭೋಗಾಪುರೇಶ (ಆಂಜನೇಯಸ್ವಾಮಿ) ದೇವಸ್ಥಾನದಲ್ಲೂ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು. ರಾಷ್ಟ್ರಧ್ವಜದ ಮೂರು ಬಣ್ಣಗಳನ್ನು ಪ್ರತಿಬಿಂಬಿಸುವಂತೆ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಹೂಗಳಿಂದ ಆಂಜನೇಯಸ್ವಾಮಿಯ ಮೂರ್ತಿಯನ್ನು ಅಲಂಕರಿಸಲಾಗಿತ್ತು. ಕೇಸರಿ ಬಣ್ಣಕ್ಕೆ ಕನಕಾಂಬರ, ಬಿಳಿ ಬಣ್ಣಕ್ಕೆ ಮಲ್ಲಿಗೆ ಹಾಗೂ ಹಸಿರು ಬಣ್ಣಕ್ಕೆ ತುಳಸಿ ದಳಗಳನ್ನು ಬಳಸಲಾಗಿತ್ತು.
ಸ್ವಾತಂತ್ರ್ಯೋತ್ಸವದ ದಿನ ಹೂಗಳಿಂದ ಮೂಡಿಬಂದ ರಾಷ್ಟ್ರಧ್ವಜದ ಬಣ್ಣಗಳ ಅಲಂಕಾರ ಭಕ್ತರ ಗಮನ ಸೆಳೆಯಿತು. ಶ್ರಾವಣ ಶನಿವಾರದ ಪ್ರಯುಕ್ತ ನವಲಿ ಆಂಜನೇಯಸ್ವಾಮಿ ದೇವಸ್ಥಾನಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಶೇಷ ದರ್ಶನ ಪಡೆದರು. ಅಂಜನಾದ್ರಿಯಲ್ಲಿ ಭಕ್ತರ ಭರಾಟೆ, ನವಲಿಯಲ್ಲಿ ರಾಷ್ಟ್ರಧ್ವಜದ ಬಣ್ಣಗಳಲ್ಲಿ ಕಂಗೊಳಿಸಿದ ಆಂಜನೇಯಸ್ವಾಮಿ-ಸ್ವಾತಂತ್ರ್ಯೋತ್ಸವ ಹಾಗೂ ಶ್ರಾವಣ ಶನಿವಾರದಂದು ಕೊಪ್ಪಳ ಜಿಲ್ಲೆಯ ದೇವಾಲಯಗಳು ಭಕ್ತಿಯಿಂದ ಕಳೆಗಟ್ಟಿದವು.


