ಬೀರೂರು(ಜು.04): ಕೋವಿಡ್‌-19ಗೆ ತುತ್ತಾಗಿ ಶಿವಮೊಗ್ಗದಲ್ಲಿ ಮೃತಪಟ್ಟ ಕಡೂರಿನ ಶಿಕ್ಷಕರೊಬ್ಬರನ್ನು ಸ್ಥಳೀಯ ರೋಟರಿ ಮೋಕ್ಷಧಾಮದಲ್ಲಿ ಅಂತ್ಯಕ್ರಿಯೆ ನಡೆಸಿದ ತಾಲೂಕು ಆಡಳಿತದ ನಿರ್ಧಾರಕ್ಕೆ ಪಟ್ಟಣದ ನಾಗರಿಕರಿಂದ ಗುರುವಾರ ರಾತ್ರಿ ತೀವ್ರ ಆಕ್ರೋಶ ವ್ಯಕ್ತವಾಯಿತು.

ಗುರುವಾರ ಮೃತಪಟ್ಟ ಶಿಕ್ಷಕರನ್ನು ಕಡೂರಲ್ಲಿ ಅಂತ್ಯ ಸಂಸ್ಕಾರ ನಡೆಸಲು ಅವಕಾಶವಿತ್ತು. ಆದರೆ, ದಿಢೀರನೆ ನಿರ್ಧಾರ ಬದಲಿಸಿದ ತಾಲೂಕು ಆಡಳಿತ ಮತ್ತು ದಂಡಾಧಿಕಾರಿಗಳು ರಾತ್ರಿ 10 ಗಂಟೆಗೆ ಮೃತದೇಹವನ್ನು ಆಂಬ್ಯುಲೆನ್ಸ್‌ ಮೂಲಕ ಬೀರೂರಿನ ಮೋಕ್ಷಧಾಮಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಂಡು ಅಂತ್ಯಕ್ರಿಯೆ ನಡೆಸಲು ತಯಾರಿ ನಡೆಸಿದರು. ವಿಷಯ ತಿಳಿದ ಅಜ್ಜಂಪುರ ರಸ್ತೆಯ ಮಹಾನವಮಿ ಬಯಲು, ಶಿವಾಜಿನಗರ ಮತ್ತು ಸರಸ್ವತಿಪುರಂ ಬಡಾವಣೆಯ ಭಾಗದ ನಿವಾಸಿಗಳು ಅಂತ್ಯಕ್ರಿಯೆ ನಡೆಸಲು ವಿರೋಧ ವ್ಯಕ್ತಪಡಿಸಿದರು.

ರೋಟರಿ ಮೋಕ್ಷಧಾಮಕ್ಕೆ ತೆರಳುವ ಮಾರ್ಗದಲ್ಲಿ ಜಮಾಯಿಸಿದ ನಾಗರಿಕರು ಆ್ಯಂಬುಲೆನ್ಸ್‌ ತಡೆಯಲು ಯತ್ನಿಸಿದಾಗ ನಾಗರಿಕರ ಕಣ್ತಪ್ಪಿಸಿ ಮೋಕ್ಷಧಾಮ ತಲುಪಿ ಅಂತ್ಯಕ್ರಿಯೆಯ ಕಟ್ಟಿಗೆ ಮತ್ತು ಡಿಸೇಲ್‌ ಬಳಸಿ ಮೃತದೇಹದ ದಹನ ಕ್ರಿಯೆ ನಡೆಸಿದರು. ಇದನ್ನು ಪ್ರಶ್ನಿಸಿದಕ್ಕೆ ನಾಗರಿಕರ ಮೇಲೆ ದೌರ್ಜನ್ಯ ಎಸಗಿ ಲಾಠಿ ರುಚಿಯನ್ನು ತೋರಿಸಿ ಅಧಿಕಾರಿಗಳು ಸರ್ವಾಧಿಕಾರದ ಪ್ರವೃತ್ತಿ ತೋರಿದ್ದಕ್ಕೆ ನಾಗರಿಕರು ತಮ್ಮ ಅಸಮಾಧಾನ ಹೊರಹಾಕಿದರು.

ದಕ್ಷಿಣ ಕನ್ನಡದಲ್ಲಿ ಸಾವಿರ ದಾಟಿದ ಸಂಖ್ಯೆ, ವಿದೇಶದಿಂದ ತೊಡಗಿ ಸಮುದಾಯಕ್ಕೆ ಹಬ್ಬಿದ ಸೋಂಕು

ಶುಕ್ರವಾರ ಬೆಳಗ್ಗೆ ಪುರಸಭೆ ಎದುರು ಜಮಾವಣೆಗೊಂಡ ನಾಗರಿಕರು, ಕಡೂರು ಪಟ್ಟಣದಲ್ಲಿ ನಡೆಸಬೇಕಿದ್ದ ಅಂತ್ಯಕ್ರಿಯೆ ಇಲ್ಲಿ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿದ್ದು ಎಷ್ಟರಮಟ್ಟಿಗೆ ಸರಿ? ಕನಿಷ್ಠ ಮೃತರ ಸ್ವಗ್ರಾಮದಲ್ಲಾದರೂ ಅಥವಾ ದೂರದ ಪ್ರದೇಶದಲ್ಲಿ ಅಂತ್ಯಕ್ರಿಯೆ ಮಾಡಬಹುದಿತ್ತು. ಬೀರೂರು ಪಟ್ಟಣದ ಅಜ್ಜಂಪುರ ರಸ್ತೆಯಲ್ಲಿ ಈಗಾಗಲೇ ಕೊರೋನಾ ಸೋಂಕಿನ ಶಂಕೆಯಿಂದ ಸೀಲ್‌ಡೌನ್‌ ಮಾಡಿ ಜನರು ಭಯದಲ್ಲಿ ಸಂಚರಿಸುತ್ತಿದ್ದಾರೆ ಎಂದು ತಮ್ಮ ಅಳಲು ವ್ಯಕ್ತಪಡಿಸಿದರು. ಮುಂದೆ ಕೊರೋನಾದಿಂದ ಮೃತಪಟ್ಟವರಿಗೆ ಪ್ರತ್ಯೇಕ ಅಂತ್ಯಕ್ರಿಯೆ ನಡೆಸುವಲ್ಲಿ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಮೋಕ್ಷಧಾಮದಲ್ಲಿ ನಡೆಸಿರುವ ಅಂತ್ಯಕ್ರಿಯೆ ನಾಗರಿಕರಲ್ಲಿ ಆತಂಕ ಮೂಡಿಸಿದ್ದು, ಈ ಭಾಗದ ಮೂಲಕ ತಮ್ಮ ಜಮೀನುಗಳಿಗೆ ಮತ್ತು ರುದ್ರಭೂಮಿಗೆ ತೆರಳುವ ಮಾರ್ಗದಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ. ಕೊರೋನಾ ಸೋಂಕಿತರ ಮೃತದೇಹಗಳ ಅಂತ್ಯಸಂಸ್ಕಾರ ಸೂಕ್ತ ರೀತಿಯಲ್ಲಿ ನಡೆಸಬೇಕಾಗಿದೆ. ಇದಕ್ಕೆ ತಾಲೂಕು ದಂಡಾಧಿಕಾರಿಗಳು ಸಮಂಜಸ ಉತ್ತರ ನೀಡುವ ಬದಲು ಉದ್ದಟತನದ ವರ್ತನೆ ತೋರಿ, ಸರ್ವಾಧಿಕಾರಿ ಮನೋಭಾವ ವ್ಯಕ್ತಪಡಿಸಿದೆ. ಇದನ್ನು ಖಂಡಿಸುವುದಾಗಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಕೆ.ಎಂ.ವಿನಾಯಕ್‌ ತಿಳಿಸಿದರು.

ಅಂತ್ಯಸಂಸ್ಕಾರದಿಂದ ನಾಗರಿಕರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಕಡೂರಿಗಿಂತ ಬೀರೂರು ಮೋಕ್ಷಧಾಮ ಪಟ್ಟಣದಿಂದ ಹೊರಭಾಗದಲ್ಲಿದೆ. ಇಲ್ಲಿ ಸೋಂಕಿನಿಂದ ಮೃತಪಟ್ಟವರ ಶವಗಳ ಅಂತ್ಯಸಂಸ್ಕಾರ ನಡೆಸಿದರೆ ಸುರಕ್ಷಿತ ಎಂಬ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ತಾಲೂಕು ಆಡಳಿತದ ಜವಾಬ್ದಾರಿಯನ್ನು ಕಾನೂನಾತ್ಮಕವಾಗಿ ನಿರ್ವಹಿಸಲಾಗಿದೆ - ಜೆ.ಉಮೇಶ್‌, ತಹಸೀಲ್ದಾರ್‌, ಕಡೂರು ತಾಲೂಕು