Asianet Suvarna News Asianet Suvarna News

ದಕ್ಷಿಣ ಕನ್ನಡದಲ್ಲಿ ಸಾವಿರ ದಾಟಿದ ಸಂಖ್ಯೆ, ವಿದೇಶದಿಂದ ತೊಡಗಿ ಸಮುದಾಯಕ್ಕೆ ಹಬ್ಬಿದ ಸೋಂಕು

ದ.ಕ. ಜಿಲ್ಲೆಯಲ್ಲಿ ಸಮುದಾಯ ಕೇಂದ್ರೀಕೃತವಾಗಿ ಹಬ್ಬುತ್ತಿರುವ ಕೊರೋನಾ ಸೋಂಕು ಶುಕ್ರವಾರ ಸಾವಿರದ ಗಡಿ ದಾಟಿದೆ. ಜೊತೆಗೆ ಸೋಂಕಿಗೆ ಮೃತಪಡುವವರ ಸಂಖ್ಯೆಯೂ 19ಕ್ಕೆ ತಲುಪಿದೆ. ಶುಕ್ರವಾರ ಒಂದೇ ದಿನ ಬರೋಬ್ಬರಿ 97 ಮಂದಿಗೆ ಪಾಸಿಟಿವ್‌ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,020ಕ್ಕೆ ಏರಿಕೆಯಾಗಿದೆ.

COVID19 Cases crosses thousand in mangaluru
Author
Bangalore, First Published Jul 4, 2020, 7:16 AM IST

ಮಂಗಳೂರು(ಜು.04): ದ.ಕ. ಜಿಲ್ಲೆಯಲ್ಲಿ ಸಮುದಾಯ ಕೇಂದ್ರೀಕೃತವಾಗಿ ಹಬ್ಬುತ್ತಿರುವ ಕೊರೋನಾ ಸೋಂಕು ಶುಕ್ರವಾರ ಸಾವಿರದ ಗಡಿ ದಾಟಿದೆ. ಜೊತೆಗೆ ಸೋಂಕಿಗೆ ಮೃತಪಡುವವರ ಸಂಖ್ಯೆಯೂ 19ಕ್ಕೆ ತಲುಪಿದೆ. ಶುಕ್ರವಾರ ಒಂದೇ ದಿನ ಬರೋಬ್ಬರಿ 97 ಮಂದಿಗೆ ಪಾಸಿಟಿವ್‌ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,020ಕ್ಕೆ ಏರಿಕೆಯಾಗಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 90ರ ಆಸುಪಾಸಿನಲ್ಲಿ ಪತ್ತೆಯಾಗುತ್ತಿದೆ. ಅದರಲ್ಲೂ ವಿದೇಶದಿಂದ ಆಗಮಿಸಿದ ಬೆರಳೆಣಿಕೆ ಮಂದಿಗೆ ಬಿಟ್ಟರೆ ಮಿಕ್ಕೆಲ್ಲ ಕೋವಿಡ್‌ ಪ್ರಕರಣಗಳು ಮೂಲ ಇಲ್ಲದೆ ಪತ್ತೆಯಾಗುತ್ತಿವೆ. ಹೀಗಾಗಿ ಈ ಸೋಂಕು ಸಮುದಾಯಕ್ಕೆ ವ್ಯಾಪಿಸಿದ್ದು, ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗುತ್ತಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜನತೆಯೇ ಸ್ವಯಂ ಲಾಕ್‌ಡೌನ್‌ಗೆ ಒಳಗಾಗಬೇಕಾದ ಅನಿವಾರ್ಯ ಎಂಬ ಪರಿಸ್ಥಿತಿ ಸೃಷ್ಟಿಯಾಗಿದೆ.

ದಿನ ಭವಿಷ್ಯ: ಈ ರಾಶಿಯವರಿಗೆ ಸಮೃದ್ಧಿಯ ದಿನ, ಹಣಕಾಸು ಲಾಭ!

ಸೋಂಕಿನ ಮೂಲ ಪತ್ತೆಯೇ ಸವಾಲು: ಜಿಲ್ಲೆಯಲ್ಲಿ ಶುಕ್ರವಾರ ದೊರೆತ ಪಾಸಿಟಿವ್‌ ಪ್ರಕರಣಗಳ ಪೈಕಿ 41 ಮಂದಿಯ ಸೋಂಕಿನ ಮೂಲ ಪತ್ತೆಯಾಗಿಲ್ಲ. ಇದೊಂದೇ ಅಂಶ ಜನತೆ ಇನ್ನು ಭಾರಿ ಜಾಗ್ರತೆ ವಹಿಸಬೇಕು ಎಂಬುದನ್ನು ಸೂಚಿಸುತ್ತಿದೆ. ಶೀತಜ್ವರ ಲಕ್ಷಣವಿದ್ದ 28 ಮಂದಿಗೆ ಸೋಂಕು ತಗಲಿದೆ. ವಿದೇಶದಿಂದ ಆಗಮಿಸಿದ 3 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 25 ಮಂದಿಗೆ ಕೋವಿಡ್‌ ತಟ್ಟಿದೆ. ಸೋಂಕಿತರಲ್ಲಿ ಒಂದು ಮತ್ತು ಎರಡು ವರ್ಷದ ಹೆಣ್ಣುಮಗು, ಐದು ವರ್ಷದ ಬಾಲಕ ಹಾಗೂ 74 ವರ್ಷದ ವೃದ್ಧ ಸೇರಿದ್ದಾರೆ.

ಜಿಲ್ಲೆಯಲ್ಲಿ ಶುಕ್ರವಾರ ಬಂದ 425 ಮಂದಿಯ ವರದಿಯಲ್ಲಿ 97 ಪಾಸಿಟಿವ್‌, 328 ನೆಗೆಟಿವ್‌ ಆಗಿದೆ. 427 ಮಂದಿಯ ವರದಿ ನಿರೀಕ್ಷಿಸಲಾಗಿದೆ. 280 ಮಂದಿಯನ್ನು ಹೊಸದಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ. ಉಸಿರಾಟ ಸಮಸ್ಯೆಯ 30 ಪ್ರಕರಣ ವರದಿಯಾಗಿದೆ.

ನರೇಂದ್ರ ಮೋದಿ ಲಡಾಖ್ ಭೇಟಿ ಹಿಂದಿನ ಅಸಲಿ ರಹಸ್ಯ

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 1,020 ಪಾಸಿಟಿವ್‌ ಪ್ರಕರಣ ಪತ್ತೆಯಾಗಿದೆ. ಈ ಪೈಕಿ 498 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 19 ಮಂದಿ ಮೃತಪಟ್ಟಿದ್ದಾರೆ. 503 ಮಂದಿ ಗುಣಮುಖರಾಗಿದ್ದಾರೆ. ಐದು ಮಂದಿ ತೀವ್ರ ನಿಗಾದಲ್ಲಿ ಇದ್ದಾರೆ. ಮೂರು ಮಂದಿ ತೀವ್ರ ನಿಗಾದಿಂದ ವಾರ್ಡ್‌ಗೆ ಮರಳಿದ್ದಾರೆ.— ಶುಕ್ರವಾರ 11 ವರ್ಷದ ಬಾಲಕಿ ಸಹಿತ 26 ಮಂದಿ ಗುಣಮುಖಗೊಂಡು ವೆನ್ಲಾಕ್‌ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಡಿಎಚ್‌ಒ ಕಚೇರಿ ಸೀಲ್‌ ಡೌನ್‌

ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಸೇರಿದಂತೆ ಮೂರು ಮಂದಿ ಹಿರಿಯ ಆರೋಗ್ಯಾಧಿಕಾರಿಗಳಿಗೆ ಕೊರೋನಾ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯನ್ನು ಶುಕ್ರವಾರ ಸೀಲ್‌ಡೌನ್‌ ಮಾಡಲಾಗಿದೆ. ಸೋಂಕಿತರ ಸಂಪರ್ಕದಿಂದ ಸಿಬ್ಬಂದಿಗೂ ಸೋಂಕು ಹರಡಿರುವ ಶಂಕೆಯಿದ್ದು, ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ.

ಉಳ್ಳಾಲದಲ್ಲಿ ರಾರ‍ಯಂಡಮ್‌ ಟೆಸ್ಟ್‌ ವೇಳೆ 28 ಮಂದಿಯಲ್ಲಿ ಕೊರೋನಾ ಸೋಂಕು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ನಗರ ಪ್ರದೇಶದಲ್ಲಿ ಸ್ವಯಂ ಲಾಕ್‌ಡೌನ್‌ಗೆ ಸ್ಥಳೀಯರು ನಿರ್ಧರಿಸಿದ್ದಾರೆ. ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಇದುವರೆಗೆ ಒಟ್ಟು 70ಕ್ಕೂ ಅ​ಧಿಕ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿದಿನ ಮಧ್ಯಾಹ್ನದ ಬಳಿಕ ಉಳ್ಳಾಲ ನಗರ ಭಾಗದ ಅಂಗಡಿ, ವಹಿವಾಟು ಬಂದ್‌ ಮಾಡಲು ಸ್ಥಳೀಯರು ನಿರ್ಧರಿಸಿದ್ದಾರೆ. ಇದೇ ರೀತಿ ಹರೇಕಳ ಹಾಗೂ ಮೂಡುಬಿದಿರೆಯಲ್ಲೂ ಅರ್ಧ ಹೊತ್ತು ಲಾಕ್ಡೌನ್‌ಗೆ ಜನತೆ ತೀರ್ಮಾನಿಸಿದೆ.

ಕೊರೋನಾ ಸೋಂಕಿಗೆ ಮತ್ತೊಂದು ಬಲಿ

ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಶುಕ್ರವಾರ ಕೊರೋನಾಗೆ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ. ಮಡಿಕೇರಿ ಮೂಲದ 47 ವರ್ಷದ ವ್ಯಕ್ತಿಯೊಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಚಿಕಿತ್ಸೆ ಫಲಿಸದೆ ಶುಕ್ರವಾರ ಸಾವಿಗೀಡಾದರು.

ವಿದೇಶದಿಂದ ತೊಡಗಿ ಸಮುದಾಯವರೆಗೆ ಹಬ್ಬಿದ ಸೋಂಕು

ದ.ಕ. ಜಿಲ್ಲೆಯಲ್ಲಿ ಮಾರ್ಚ್‌ನಲ್ಲಿ ಕಾಣಿಸಿದ ಕೊರೋನಾ ಸೋಂಕು ಈಗ ಒಂದು ಸಾವಿರ ದಾಟಿದೆ. ಆರಂಭದಲ್ಲಿ ವಿದೇಶದಿಂದ ಆಗಮಿಸಿದ ವ್ಯಕ್ತಿಯಲ್ಲಿ ಕಾಣಿಸಿದ ಕೊರೋನಾ ಮಹಾಮಾರಿ ಈಗ ಸಮುದಾಯಕ್ಕೆ ವ್ಯಾಪಿಸಿದೆ.

ಮಾ.19ರಂದು ದುಬೈನಿಂದ ಆಗಮಿಸಿದ್ದ ಭಟ್ಕಳ ಮೂಲದ ವ್ಯಕ್ತಿಯಲ್ಲಿ ಕೊರೋನಾ ಪಾಸಿಟಿವ್‌ ಕಾಣಿಸಿತ್ತು. ಇದು ಜಿಲ್ಲೆಯ ಮೊದಲ ಪಾಸಿಟಿವ್‌ ಪ್ರಕರಣ ಎಂದು ಮಾ.22ರಂದು ಜಿಲ್ಲಾ​ಧಿಕಾರಿ ಪ್ರಕಟಿಸಿದ್ದರು. ಮೇ 28ರಂದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 100ರ ಗಡಿ ದಾಟಿತು. ಜೂನ್‌ 26ರಂದು ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 500 ತಲುಪಿತ್ತು. ಶುಕ್ರವಾರ ಸಾವಿರ ಗಡಿ ಮೀರಿದೆ.

Follow Us:
Download App:
  • android
  • ios