ಬೆಂಗಳೂರು: ಕೆಂಪೇಗೌಡ ಲೇಔಟಲ್ಲಿ ಮನೆ ಕಟ್ಟುವಾಗ ಬಿಡಿಎಯಿಂದ 30 ಸಾವಿರ ವಸೂಲಿಗೆ ಆಕ್ರೋಶ
ಆಧುನಿಕ ವ್ಯವಸ್ಥೆಯ ಬಡಾವಣೆ ಆಗಿದ್ದರೂ ರಸ್ತೆ ಕಟ್ಟಿಂಗ್, ಯುಜಿಡಿ, ಕುಡಿಯುವ ನೀರು ವ್ಯವಸ್ಥೆ ಇತ್ಯಾದಿ ಸೌಲಭ್ಯದ ನೆಪವೊಡ್ಡಿ ನಿವೇಶನದಾರರಿಂದ ಬಿಡಿಎ ಹೆಚ್ಚುವರಿಯಾಗಿ ₹30 ಸಾವಿರ ವಸೂಲಿ ಮಾಡುತ್ತಿದೆ.
ಸಂಪತ್ ತರೀಕೆರೆ
ಬೆಂಗಳೂರು(ಮೇ.16): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿ ಮನೆ, ಕಟ್ಟಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸುವ ನಿವೇಶನದಾರರಿಂದ ಮೂಲ ಸೌಕರ್ಯ ಪುನಃಶ್ಚೇತನದ ನೆಪವೊಡ್ಡಿ ಹೆಚ್ಚುವರಿಯಾಗಿ ತಲಾ ₹30 ಸಾವಿರ ವಸೂಲಿ ಮಾಡಲು ಮುಂದಾಗಿರುವುದು ನಿವೇಶನದಾರರ ಆಕ್ರೋಶಕ್ಕೆ ಗುರಿಯಾಗಿದೆ.
ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಕುಡಿಯುವ ನೀರು, ಒಳ ಚರಂಡಿ, ವಿದ್ಯುತ್, ಅಪ್ಟಿಕಲ್ ಕೇಬಲ್ ಮುಂತಾದ ಮೂಲ ಸೌಕರ್ಯಗಳನ್ನು ನೆಲದಡಿ ಕಲ್ಪಿಸಲಾಗಿದೆ. ಭವಿಷ್ಯದಲ್ಲಿ ದುರಸ್ತಿ ಅಥವಾ ಸಂಪರ್ಕ ಒದಗಿಸಲು ಅಕ್ಕಪಕ್ಕದ ಎರಡು ನಿವೇಶನಗಳ ನಡುವೆ ಕೊಳವೆ ಮಾರ್ಗಕ್ಕೆ ಛೇಂಬರ್ ನಿರ್ಮಿಸಲಾಗಿದೆ. ಇದೊಂದು ಆಧುನಿಕ ವ್ಯವಸ್ಥೆಯ ಬಡಾವಣೆ ಆಗಿದ್ದರೂ ರಸ್ತೆ ಕಟ್ಟಿಂಗ್, ಯುಜಿಡಿ, ಕುಡಿಯುವ ನೀರು ವ್ಯವಸ್ಥೆ ಇತ್ಯಾದಿ ಸೌಲಭ್ಯದ ನೆಪವೊಡ್ಡಿ ನಿವೇಶನದಾರರಿಂದ ಬಿಡಿಎ ಹೆಚ್ಚುವರಿಯಾಗಿ ₹30 ಸಾವಿರ ವಸೂಲಿ ಮಾಡುತ್ತಿದೆ ಎಂದು ಆರೋಪ ಕೇಳಿಬಂದಿದೆ.
ಬೆಂಗಳೂರು: ಕೆಂಪೇಗೌಡ ಲೇಔಟ್‌ಗೆ ಮತ್ತೆ 3973 ಎಕರೆ ವಶ
ಇಲ್ಲಿನ ನಿವೇಶನದಾರರು ಕಟ್ಟಡ ನಿರ್ಮಾಣ ಯೋಜನೆ ಮಂಜೂರಾತಿಗಾಗಿ ಬಿಡಿಎ ಅಭಿಯಂತರ ವಿಭಾಗ ಸಂಪರ್ಕಿಸಿದ್ದರು. ಈ ವೇಳೆ ಯೋಜನೆ ಅನುಮೋದನೆಗೆ ಮನೆ ನಿರ್ಮಾಣದ ಅಂದಾಜು ವೆಚ್ಚದ (ಎಸ್ಟಿಮೇಶನ್) ಶೇ.1ರಷ್ಟು ಶುಲ್ಕದೊಂದಿಗೆ ರಸ್ತೆ ಕಟ್ಟಿಂಗ್, ಕುಡಿಯುವ ನೀರು, ಯುಜಿಡಿ ವ್ಯವಸ್ಥೆ ಸೇರಿದಂತೆ ಇತರೆ ವ್ಯವಸ್ಥೆಗಾಗಿ ಹೆಚ್ಚುವರಿಯಾಗಿ ₹30 ಸಾವಿರಗಳನ್ನು ಪಾವತಿಸಬೇಕು. ಇಲ್ಲದಿದ್ದರೆ ಅನುಮೋದನೆ ನೀಡುವುದಿಲ್ಲ ಎಂದು ಅಧಿಕಾರಿಗಳು ಅನುಮತಿ ನಿರಾಕರಿಸುತ್ತಿದ್ದಾರೆ ಎಂದು ಹಲವರು ಅಲವತ್ತುಕೊಂಡಿದ್ದಾರೆ.
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಾಗಿ ಎಂಟು ವರ್ಷ ಕಳೆದಿದ್ದರೂ ಬಿಡಿಎ ಮೂಲಭೂತ ಸೌಕರ್ಯ ಒದಗಿಸಿಲ್ಲ. ಇದರಿಂದಾಗಿ ಪ್ರತಿ ನಿವೇಶನದಾರರಿಗೆ ಲಕ್ಷಾಂತರ ರು. ನಷ್ಟವಾಗಿದೆ. ಈಗ ಮನೆ, ಕಟ್ಟಡ ನಿರ್ಮಾಣಕ್ಕೆಂದು ಯೋಜನೆ ಅನುಮೋದನೆಗೆ ಅರ್ಜಿ ಸಲ್ಲಿಸಿದರೆ, ಮತ್ತೆ ಹೆಚ್ಚುವರಿಯಾಗಿ ₹30 ಸಾವಿರ ಕಟ್ಟುವಂತೆ ಬಿಡಿಎ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಇದು ಕಾನೂನು ಬಾಹಿರ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ ಕಿಡಿಕಾರಿದೆ.
ಹೆಚ್ಚುವರಿ ಹಣ ಪಾವತಿ ಆಗಿದೆ: ಮಾಲೀಕರು
ಆಶ್ಚರ್ಯವೆಂದರೆ, ಬಿಡಿಎ ನಿವೇಶನಗಳ ಮಾರಾಟ ಸಂದರ್ಭದಲ್ಲಿ ಭೂಸ್ವಾಧೀನಕ್ಕೆ ಹೆಚ್ಚು ಪರಿಹಾರ ನೀಡಿದ್ದೇವೆ, ಮಾಡ್ರನ್ ಬಡಾವಣೆ ಮಾಡುತ್ತೇವೆ ಎಂಬಿತ್ಯಾದಿಯಾಗಿ ಹೇಳಿ, ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರವನ್ನು ಪಡೆದಿತ್ತು. 2016, 2018ರಲ್ಲಿಯೇ ನಿವೇಶನಗಳ ಮಾಲೀಕರಿಂದ ಮೂಲಭೂತ ಸೌಕರ್ಯವೂ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸುವ ಒಪ್ಪಂದಲ್ಲಿ ಹೆಚ್ಚುವರಿ ಶುಲ್ಕವನ್ನು ಪಡೆದುಕೊಳ್ಳಲಾಗಿತ್ತು. ಆದರೆ ಈಗ ರಸ್ತೆ ಪುನಃಶ್ಚೇತನಕ್ಕೆಂದು ಮತ್ತೆ ₹30 ಸಾವಿರ ಪಡೆಯುತ್ತಿರುವುದು ಖಂಡನಾರ್ಹ ಎಂದು ಎನ್‌ಪಿಕೆಎಲ್ ಮುಕ್ತ ವೇದಿಕೆಯ ಸೂರ್ಯಕಿರಣ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಕೆಂಪೇಗೌಡ ಲೇಔಟಲ್ಲಿ ಉಕ್ಕುತ್ತಿದೆ ಅಂತರ್ಜಲ!
ಬಿಡಿಎ ಎಲ್ಲಾ ಹಳೆಯ ಬಡಾವಣೆಗಳಲ್ಲಿ ವಿದ್ಯುತ್, ನೀರು ಮತ್ತು ಒಳ ಚರಂಡಿಗಾಗಿ ರಸ್ತೆ ಅಗೆಯುವುದು ಅನಿವಾರ್ಯ. ಇದರಿಂದ ಹಾನಿಗೊಳಗಾಗುವ ರಸ್ತೆಯನ್ನು ಸುಸ್ಥಿತಿಗೆ ತರಲು ಮನೆ ಕಟ್ಟುವವರಿಂದ ಶುಲ್ಕವನ್ನು ಪಡೆಯಬೇಕಾಗುತ್ತದೆ. ಆದರೆ, ರಸ್ತೆಯನ್ನು ಅಗೆಯುವುದನ್ನು ತಡೆಯಲೆಂದೇ ಈಗಾಗಲೇ ಬಡಾವಣೆಯಲ್ಲಿ ಆಧುನಿಕ ರೀತಿಯ ಸೌಲಭ್ಯಗಳಿಗೆ ಅಂತರ್ಗತ ಕಾಮಗಾರಿಗಳಿಗೆ ಆಗುವ ವೆಚ್ಚವನ್ನು ನಿವೇಶನದಾರರಿಂದ ಪಡೆದುಕೊಂಡಾಗಿದೆ. ಈಗ ಮತ್ತೆ ಹೆಚ್ಚುವರಿ ಶುಲ್ಕ ಪಡೆಯುವುದು ಕಾನೂನು ಬಾಹಿರ ಎಂದು ನಿವೇಶನದಾರರು ಅಸಮಾಧಾನ ಹೊರ ಹಾಕಿದ್ದಾರೆ.
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮನೆ ನಿರ್ಮಾಣ ಮಾಡುವವರಿಗೆ ಸಮರ್ಪಕ ಸೌಲಭ್ಯವನ್ನು ಬಿಡಿಎ ಒದಗಿಸಿಲ್ಲ. ಜೊತೆಗೆ ಮೂಲಸೌಕರ್ಯ ಒದಗಿಸಲೆಂದೇ ಆರಂಭದಲ್ಲೇ ನಿವೇಶನದಾರರಿಂದ ಶುಲ್ಕ ವಸೂಲಿ ಮಾಡಲಾಗಿದೆ. ಈಗ ಸಲ್ಲದ ಕಾರಣವನ್ನು ಹೇಳಿ ಹೆಚ್ಚುವರಿಯಾಗಿ ₹30 ಸಾವಿರ ವಸೂಲಿಗೆ ಮುಂದಾಗಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದೂರು ನೀಡುತ್ತೇವೆ. ಕೂಡಲೇ ಈ ಶುಲ್ಕ ವಸೂಲಿ ನಿಲ್ಲಿಸಬೇಕು ಎಂದು ಎನ್‌ಪಿಕೆಎಲ್ ಓಪನ್ ಫೋರಂ ಅಧ್ಯಕ್ಷ ಎಂ.ಇ.ಚನ್ನಬಸವರಾಜ ತಿಳಿಸಿದ್ದಾರೆ.