ಅಣ್ಣಿಗೇರಿ(ಸೆ.05): ಕೊರೋನಾ ಪಾಸಿಟಿವ್‌ ಬಂದಿದೆ ಎನ್ನಲಾದ ವೃದ್ಧ ನೇಣಿಗೆ ಶರಣಾದ ಘಟನೆ ಅಣ್ಣಿಗೇರಿ ತಾಲೂಕಿನ ದುಂದೂರು ಗ್ರಾಮದಲ್ಲಿ ನಡೆದಿದ್ದು, ನಸುಕಿನಲ್ಲಿ ಘಟನೆ ನಡೆದರೂ ವೈದ್ಯರು ವಿಳಂಬವಾಗಿ ಆಗಮಿಸಿದ್ದಕ್ಕೆ ಕುಟುಂಬಸ್ಥರು, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳ ಜತೆ ವಾಗ್ವಾದ ನಡೆಸಿದ್ದಾರೆ.

ಗ್ರಾಮದ 68 ವರ್ಷದ ವೃದ್ಧನು ಕಳೆದ 29ರಂದು ವೈದ್ಯರಿಂದ ತಪಾಸಣೆ ಗೊಳಪಡಿಸಿಕೊಂಡಿದ್ದ. ಆತನ ಕೊರೋನಾ ಪರೀಕ್ಷೆಯನ್ನೂ ಮಾಡಲಾಗಿತ್ತು. ಆಗ ಪಾಸಿಟಿವ್‌ ಎಂದು ಬಂದಿತ್ತು ಎಂದು ಹೇಳಲಾಗಿದೆ. ಆದರೆ, ಗಂಭೀರ ರೋಗ ಲಕ್ಷಣಗಳು ಇಲ್ಲದ ಕಾರಣ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ. ಕೊರೋನಾ ಆತಂಕದಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಈತ ಬೆಳಗಿನ ಜಾವ 5ರ ಸುಮಾರಿಗೆ ಹೊಲಕ್ಕೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಧಾರವಾಡ: ಕರ್ನಾಟಕ ವಿಶ್ವದ್ಯಾಲಯ ಕುಲಪತಿ ನೇಮಕಕ್ಕೆ ಜಾತಿಯ ಸೋಂಕು?

ಆದರೆ ಮಧ್ಯಾಹ್ನದವರೆಗೂ ವೈದ್ಯರು ಆಗಮಿಸಿರಲಿಲ್ಲ. ಇದರಿಂದ ಕುಟುಂಬಸ್ಥರು, ಗ್ರಾಮಸ್ಥರು ತೀವ್ರ ಬೇಸರಗೊಂಡಿದ್ದರು. ಬಳಿಕ ವೈದ್ಯರು, ಪೊಲೀಸರು ಸ್ಥಳಕ್ಕೆ ತೆರಳುತ್ತಿದ್ದಂತೆ ಮಹಿಳೆಯರು ಸೇರಿದಂತೆ ಗ್ರಾಮದ ಜನತೆ ತೀವ್ರ ಆಕ್ರೋಶ ಹೊರಹಾಕಿದರು. ವೈದ್ಯರು ನೀಡಿದ ವರದಿಯ ಕುರಿತಾಗಿ ನಮಗೆ ಸಂದೇಹವಿದೆ. ಸರಿಯಾಗಿ ವರದಿ ನೀಡಿಲ್ಲ. ಹೋಂ ಐಸೋಲೇಶನ್‌ನಲ್ಲಿ ಇದ್ದರೂ ಸಮರ್ಪಕವಾಗಿ ಔಷಧ ಒದಗಿಸಿಲ್ಲ, ಆರೋಗ್ಯ ವಿಚಾರಣೆ ಮಾಡದೆ ನಿರ್ಲಕ್ಷ್ಯ ತೋರಿದ್ದಾರೆ. ಇದೇ ಕಾರಣಕ್ಕೆ ಆತ್ಮಹತ್ಯೆ ನಡೆಯುವಂತಾಗಿದೆ ಎಂದು ವಾಗ್ವಾದ ನಡೆಸಿದ್ದಾರೆ. ಅಲ್ಲದೆ, ಅಧಿಕಾರಿಗಳನ್ನು ಇಲ್ಲಿಂದ ಹೋಗಲು ಬಿಡಬೇಡಿ ವಾಹನಗಳಿಗೆ ಬೆಂಕಿ ಹಚ್ಚಿ ಎಂದೂ ಕೆಲವರು ಸಿಟ್ಟಿನಿಂದ ಕೂಗಾಡಿದ್ದಾರೆ ಎನ್ನಲಾಗಿದೆ.

ಬಳಿಕ ಪೊಲೀಸ್‌ ಇನ್‌ಸ್ಪೆಕ್ಟರ್‌ ಲಾಲ್‌ಸಾಬ್‌ ಜುಲಕಟ್ಟಿಗ್ರಾಮಸ್ಥರ ಮನವೊಲಿಸಿದರು. ಈ ಕುರಿತು ಮಾತನಾಡಿದ ಅವರು, ನಿಧನ ಸಂಭವಿಸಿದ್ದ ಕಾರಣ ಗ್ರಾಮಸ್ಥರಲ್ಲಿ ಕೊಂಚ ಬೇಸರ, ಆಕ್ರೋಶವಿತ್ತು. ಆದರೆ ಹೆಚ್ಚಿನ ಗಲಾಟೆ ಏನೂ ಆಗಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಸರ್ಕಾರದ ನಿರ್ದೇಶನದಂತೆ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನಡೆಸಲು ತೀರ್ಮಾನಿಸಲಾಯಿತು.