ಶಿವಮೊಗ್ಗ: ಕುಸಿದು ಬಿದ್ದು ವ್ಯಕ್ತಿ ಸಾವು, ಬ್ಯಾಟರಿ ಲೈಟ್‌ನಲ್ಲಿ ಮರಣೋತ್ತರ ಪರೀಕ್ಷೆ, ನಾಗರಿಕರ ಆಕ್ರೋಶ
ಶವಗಾರದಲ್ಲಿ ವಿದ್ಯುತ್ ಸಂಪರ್ಕ ಇಲ್ಲದಿರುವುದನ್ನು ಕಂಡು ಇಲ್ಲಿನ ಅವ್ಯವಸ್ಥೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗ(ಜೂ.06): ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪಟ್ಟಣದ ಪುರಮಠ ವಾಸಿ ಕೃಷಿಕ ಬಿ. ಕೆ. ಲೋಕಪ್ಪ (68) ಅವರು ನಿನ್ನೆ(ಸೋಮವಾರ) ಮೂರು ವರ್ಷದ ಮೊಮ್ಮಗನೊಂದಿಗೆ ಜಮೀನಿಗೆ ತೆರಳಿದವರು ಅಲ್ಲಿಯೇ ಮೃತಪಟ್ಟಿದ್ದರು.
ಸರ್ವೆ ನಂಬರ್ 135 ರ ಹಕ್ಕಲಿನಲ್ಲಿ ಬಿಟ್ಟಿದ್ದ ಕವಳಿ ಹಣ್ಣು ಗಳನ್ನು ಮೊಮ್ಮಗನಿಗೆ ಕಿತ್ತು ಕೊಟ್ಟು ಮನೆಗೆ ಕಳಿಸಿದ್ದರು. ಮಧ್ಯಾಹ್ನವಾದರೂ ಮನೆಗೆ ಹಿಂದಿರುಗದ ಇವರನ್ನು ಕುಟುಂಬಸ್ಥರು ಹುಡುಕಲು ಹೋದಾಗ ಹಕ್ಕಲಿನಲ್ಲಿ ಲೋಕಪ್ಪರವರ ಮೃತದೇಹ ಪತ್ತೆಯಾಗಿತ್ತು. ಹೃದಯಾಘಾತದಿಂದ ಕುಸಿದು ಬಿತ್ತು ಸಾವನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇಬ್ಬರು ಪುತ್ರಿಯರು ಇದ್ದಾರೆ.
ಕೆ.ಎಸ್. ಈಶ್ವರಪ್ಪಗೆ ಜೂನ್ 30 ನಿರ್ಣಯಕ ದಿನ: ಸಂತೋಷ್ ಆತ್ಮಹತ್ಯೆ ಬಿ ರಿಪೋರ್ಟ್ ರದ್ದಾಗುವ ಭೀತಿ
ವಿದ್ಯುತ್ ಇಲ್ಲದ ಶವಗಾರ ನಾಗರಿಕರ ಆಕ್ರೋಶ :
ರಿಪ್ಪನ್‌ಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಿನ್ನೆ ಸಂಜೆ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಯ ತಪಾಸಣೆಗೆ ತಂದಾಗ ವೈದ್ಯರು ಮೊಬೈಲ್ ಟಾರ್ಚ್ ಹಾಗೂ ಚಾರ್ಜರ್ ಬ್ಯಾಟರಿ ಹಿಡಿದು ಮರಣೋತ್ತರ ಪರೀಕ್ಷೆ ನಡೆಸಿದರು.
ಶವಗಾರದಲ್ಲಿ ವಿದ್ಯುತ್ ಸಂಪರ್ಕ ಇಲ್ಲದಿರುವುದನ್ನು ಕಂಡು ಇಲ್ಲಿನ ಅವ್ಯವಸ್ಥೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಹಗಲು ವೇಳೆಯಲ್ಲಿ ಇಬ್ಬರು ವೈದ್ಯರು ಕಾರ್ಯ ನಿರ್ವಹಿಸುತ್ತಿರುವ ಈ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ಯಾವುದೇ ವೈದ್ಯರು ಕರ್ತವ್ಯದಲ್ಲಿ ಇರುವುದಿಲ್ಲ. ಈ ಬಗ್ಗೆ ಚುನಾಯಿತ ಪ್ರತಿನಿಧಿಗಳು, ಜಿಲ್ಲಾ ವೈಧ್ಯಾಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.