'ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಬೆಂಬಲ'
ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದನ್ನು ತಡೆಯುವ ನಿಟ್ಟಿನಲ್ಲಿ ಕರ್ನಾಟಕ ದಲಿತ ಚಳವಳಿ ನವ ನಿರ್ಮಾಣ ವೇದಿಕೆಯು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದೆ ಎಂದು ವೇದಿಕೆಯ ಮುಖಂಡ ಹರಿಹರ ಆನಂದಸ್ವಾಮಿ ತಿಳಿಸಿದರು.
ಮೈಸೂರು : ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದನ್ನು ತಡೆಯುವ ನಿಟ್ಟಿನಲ್ಲಿ ಕರ್ನಾಟಕ ದಲಿತ ಚಳವಳಿ ನವ ನಿರ್ಮಾಣ ವೇದಿಕೆಯು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದೆ ಎಂದು ವೇದಿಕೆಯ ಮುಖಂಡ ಹರಿಹರ ಆನಂದಸ್ವಾಮಿ ತಿಳಿಸಿದರು.
ಕಳೆದ 2014ರಿಂದ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿವೆ. ಆಗಿನಿಂದಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹೆಡ್ಗೆವಾರ್, ಗೋಳ್ವಾಳ್ಕರ್ ಮತ್ತು ಸಾರ್ವಕರ್ ಪ್ರತಿಪಾದಿಸಿದ ಹಿಂದುತ್ವದ ಸಿದ್ಧಾಂತವನ್ನು ಸಂವಿಧಾನಕ್ಕೆ ವಿರುದ್ಧವಾಗಿ ಒಂದೊಂದಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಇದರಿಂದಾಗಿ ಅಹಿಂದ ವರ್ಗಕ್ಕೆ ಸಂವಿಧಾನದಿಂದ ದೊರಕಿದ್ದ ಹಕ್ಕು ಮತ್ತು ಸೌಲಭ್ಯಗಳಿಗೆ ಕುತ್ತು ಬಂದಿದೆ. ಅಲ್ಲದೆ, ದೇಶಾದ್ಯಂತ ಕೋಮು ದ್ವೇಷವನ್ನು ಹುಟ್ಟುಹಾಕಿ ಅಲ್ಪಸಂಖ್ಯಾತರು ಮತ್ತು ದಲಿತರಲ್ಲಿ ಭಯವನ್ನುಂಟು ಮಾಡುತ್ತಿದ್ದಾರೆ. ಅಸಮಾನತೆ ಮತ್ತೆ ಮುನ್ನೆಲೆಗೆ ಬಂದಿದ್ದು, ಬಡವ- ಶ್ರೀಮಂತರ ಅಂತರ ಜಾಸ್ತಿಯಾಗಿದೆ ಎಂದು ಅವರು ದೂರಿದರು.
ಪ್ರಧಾನಿ ಮೋದಿ ಸರ್ಕಾರ ಚುನಾವಣಾ ಬಾಂಡ್ ಗಳ ಮೂಲಕ ಕಾರ್ಪೊರೇಟ್ ಕುಳಗಳು ಮತ್ತು ಕೈಗಾರಿಕೋದ್ಯಮಿಗಳಿಂದ ಸಾವಿರಾರು ಕೋಟಿ ಲಂಚ ಪಡೆದು ದೊಡ್ಡ ಭ್ರಷ್ಟಾಚಾರದಲ್ಲಿ ತೊಡಗಿವೆ. ಅಧಿಕಾರಕ್ಕೆ ಬರುವ ಮುನ್ನ ಮೋದಿ ನೀಡಿದ್ದ ಭರವಸೆ ಈಡೇರಿಲ್ಲ. ಕೇವಲ ದೇವರು, ಧರ್ಮ ಎಂದು ಭಾವನಾತ್ಮಕ ವಿಚಾರಗಳನ್ನು ಜನರಲ್ಲಿ ತುಂಬಿ ಇಡೀ ದೇಶವನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಅವರು ಟೀಕಿಸಿದರು.
ವೇದಿಕೆಯ ಮುಖಂಡರಾಗ ಬಂಗವಾದಿ ನಾರಾಯಣಪ್ಪ, ಹೊರಳವಾಡಿ ನಂಜುಂಡಸ್ವಾಮಿ ಸತೀಶ್, ಟಿ. ಈರಯ್ಯ ತಾತನಹಳ್ಳಿ ಇದ್ದರು.