ಚಿತ್ರದುರ್ಗ [ಫೆ.09]:  ಕಳೆದ ಮೂರುವರೆ ವರ್ಷದ ಅಧಿಕಾರ ಅವಧಿಯಲ್ಲಿ ಬಿಜೆಪಿಯನ್ನು ಪ್ರಬಲವಾಗಿ ಸಂಘಟಿಸಲಾಗಿದೆ ಎಂದು ನಿಕಟಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್‌.ನವೀನ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನ ಅಧಿಕಾರ ಅವಧಿಯಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲು ಜಿಲ್ಲೆಯ ಎಲ್ಲ ನಾಗರಿಕರು ಸಹಕರಿಸಿದ್ದಾರೆ. ನಾನು ಅಧಿಕಾರ ಸ್ವೀಕರಿಸಿದ ವೇಳೆ ಜಿಲ್ಲೆ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಜಿ.ಎಚ್‌. ತಿಪ್ಪಾರೆಡ್ಡಿ ಏಕ ಮಾತ್ರ ಬಿಜೆಪಿ ಶಾಸಕರಿದ್ದರು. ಈ ಹಿಂದೆ ಚಿತ್ರದುರ್ಗ ಜಿಲ್ಲೆ ಕಾಂಗ್ರೆಸ್‌ ಭದ್ರಕೋಟೆ, ಇಲ್ಲಿ ಬಿಜೆಪಿ ಪ್ರಬಲವಾಗಿ ಹೊರಹೊಮ್ಮಲು ಅಸಾಧ್ಯ ಎನ್ನುವ ಮಾತುಗಳು ರಾಜ್ಯ ನಾಯಕರು ಹಾಗೂ ಜನತೆಯಲ್ಲಿ ಬೇರೂರಿತ್ತು. ವಿಧಾನಸಭಾ ಚುನಾವಣೆಯಲ್ಲಿ 1-2 ಸ್ಥಾನ ಮಾತ್ರಗಳಿಸಬಹುದು ಎನ್ನಲಾಗುತ್ತಿತ್ತು. ಜಿಲ್ಲಾಧ್ಯಕ್ಷನಾಗಿ ನಿರಂತರ ಪ್ರವಾಸ ಮಾಡಿ ಸಂಘಟಿಸಿದ್ದರ ಫಲವಾಗಿ ಆರು ವಿಧಾನಸಭಾ ಕ್ಷೇತ್ರ ಪೈಕಿ 5ರಲ್ಲಿ ಬಿಜೆಪಿ ಗೆಲ್ಲಲ್ಲು ಸಹಕಾರಿಯಾಯಿತು. ಚಳ್ಳಕೆರೆಯಲ್ಲಿ ಸಂಘಟನೆ ಹಾಗೂ ಪಕ್ಷದ ವೈಮನಸ್ಸಿನಿಂದ ಕ್ಷೇತ್ರ ಕಳೆದುಕೊಳ್ಳಬೇಕಾಯಿತು ಎಂದರು.

ಸಂಪುಟ ಪುನರಚನೆಯೋ, ವಿಸ್ತರಣೆಯೋ ? ಎಲ್ಲಾ ಗೊಂದಲಗಳಿಗೆ BSY ತೆರೆ...

ಚುನಾವಣಾ ಪೂರ್ವ ಪ್ರಧಾನಿ ನರೇಂದ್ರ ಮೋದಿ ಎರಡು ಬಾರಿ ಹಾಗೂ ಅಮಿತ್‌ ಶಾ 3 ಬಾರಿ ಐದು ಕಡೆ, ಬಿ.ಎಸ್‌.ಯಡಿಯೂರಪ್ಪ ಪ್ರವಾಸ ಮಾಡಿದ್ದರ ಫಲವಾಗಿ ಎಲ್ಲ ಸಮುದಾಯಗಳ ವಿಶ್ವಾಸಗಳಿಸಿ ಉತ್ತಮ ಸಾಧನೆ ಮಾಡಲು ಸಹಾಯವಾಯಿತು. ಆದರೆ, ಸಹಕಾರಿ ಕ್ಷೇತ್ರಗಳಲ್ಲಿ ಮಾತ್ರ ಯಶಸ್ಸು ಸಾಧ್ಯವಾಗಲಿಲ್ಲ, ಮುಂಬರುವ ದಿನಗಳಲ್ಲಿ ಸಹಕಾರಿ ಕ್ಷೇತ್ರದಲ್ಲೂ ಪ್ರಾಬಲ್ಯ ಸಾಧಿಸಲು ಕೆಲಸ ಮಾಡಲಾಗುವುದು ಎಂದರು.

ಚುನಾವಣಾ ಪೂರ್ವ ಜಿಲ್ಲೆ ಅಭಿವೃದ್ಧಿಗೆ ಸಾಕಷ್ಟು ಭರವಸೆ ನೀಡಲಾಗಿತ್ತು. ಅದರಂತೆ ಭದ್ರಾಮೇಲ್ದಂಡೆ ತ್ವರಿತಗತಿ ಅನುಷ್ಠಾನ, ನೇರ ರೈಲು ಮಾರ್ಗಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಡುವುದು, ವೈದ್ಯಕೀಯ ಕಾಲೇಜು ಮಂಜೂರಿಗೆ ಕ್ರಮ, ಮದಕರಿ ನಾಯಕ ಥೀಮ್‌ ಪಾರ್ಕ್, ತಿಮ್ಮಣ್ಣನಾಯಕ ಕೆರೆ ಪಕ್ಕದಲ್ಲಿ ಪಕ್ಷೀಧಾಮ ಅನುಷ್ಠಾನಕ್ಕೆ ಪ್ರಯತ್ನಿಸಲಾಗಿದೆ. ಜೊತೆಗೆ ಚಳ್ಳಕೆರೆಯಲ್ಲಿ ಡೈರಿ ನಿರ್ಮಾಣ, ಹಿರಿಯೂರನ್ನು ವಿಶೇಷ ಕೈಗಾರಿಕಾ ಅಭಿವೃದ್ಧಿ ಪ್ರದೇಶವೆಂದು ಪರಿಗಣಿಸಲು ಹಾಗೂ ಹೊಸದುರ್ಗ ತಾಲೂಕಿನಲ್ಲಿ ಜಾಕಿ ಮತ್ತು ಅರವಿಂದ್‌ ಸಂಸ್ಥೆ ಸಹಭಾಗಿತ್ವದಲ್ಲಿ ಗಾರ್ಮೆಂಟ್ಸ್‌ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಶೀಘ್ರ ಎಲ್ಲ ಕಾರ್ಯ ಅನುಷ್ಠಾನÜ ಮೂಲಕ ಜಿಲ್ಲೆ ಅಭಿವೃದ್ಧಿ ಪಥದತ್ತ ದಾಪುಗಾಲಿಡಲಿದೆ ಎಂದರು.