Asianet Suvarna News Asianet Suvarna News

'ಅತ್ತಿಗೆಗೆ ತಿನ್ನೋಕು ಆಗ್ತಿರಲಿಲ್ಲ, ಮಾತಾಡೋಕು ಆಗ್ತಿರಲಿಲ್ಲ..' ಅಂಗಾಂಗ ದಾನಿ ಅರ್ಚನಾ ಕಾಮತ್‌ ಕೊನೇ ದಿನ ನೆನೆದ ನಾದಿನಿ!

ತನ್ನ ಅತ್ತೆಯ ತಂಗಿಗೆ ಲಿವರ್‌ ದಾನ ಮಾಡಿದ್ದ 33 ವರ್ಷದ ಉಪನ್ಯಾಸಕಿ ಅರ್ಚನಾ ಕಾಮತ್‌, ಶಸ್ತ್ರಚಿಕಿತ್ಸೆಯ ನಂತರದ ತೊಡಕುಗಳಿಂದಾಗಿ ಸಾವನ್ನಪ್ಪಿದ್ದಾರೆ. ಆಕೆಯ ಈ ನಿಸ್ವಾರ್ಥ ತ್ಯಾಗವು ಅನೇಕರನ್ನು ಭಾವುಕರನ್ನಾಗಿ ಮಾಡಿದೆ.

organ donor Archana Kamath sister in Law Prathiksha Kamath Bhabhi sacrificed her life to save one san
Author
First Published Sep 20, 2024, 11:59 PM IST | Last Updated Sep 20, 2024, 11:59 PM IST


ಬೆಂಗಳೂರು (ಸೆ.20): ತನ್ನ ಅತ್ತೆಯ ತಂಗಿಯ ಜೀವವನ್ನು ಉಳಿಸಲು ಹೋಗಿ 33 ವರ್ಷದ ಅರ್ಚನಾ ಕಾಮತ್‌ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಮಂಗಳೂರಿನ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ಅರ್ಚನಾ ಕಾಮತ್‌, ತಮ್ಮ ಶೇ. 60ರಷ್ಟು ಲಿವರ್‌ಅನ್ನು ದಾನ ಮಾಡಿದ್ದರು. ಆದರೆ, ಶಸ್ತ್ರಚಿಕಿತ್ಸೆಯ ಬಳಿಕ ಎದುರಾದ ಕಾಂಪ್ಲಿಕೇಶನ್‌ ಇಂದ ಅವರು ಸಾವು ಕಂಡಿದ್ದಾರೆ. ಬೆಂಗಳೂರಿನಲ್ಲಿ ದಾಖಲಾಗಿದ್ದ 65 ವರ್ಷದ ಸಂಬಂಧಿಗೆ ಲಿವರ್‌ ನೀಡುವ ಉದ್ದೇಶದಿಂದ ಮಂಗಳೂರಿನಲ್ಲಿ 15 ದಿನಗಳ ಹಿಂದೆ ಅವರಿಗೆ ಆಪರೇಷನ್‌ ಮಾಡಲಾಗಿತ್ತು. ಈ ವೇಳೆ ಅವರ ಶೇ. 60ರಷ್ಟು ಲಿವರ್‌ಅನ್ನು ಕಟ್‌ ಮಾಡಲಾಗಿತ್ತು. ಆದರೆ, ಆ ಬಳಿಕ ಲಿವರ್‌ ಸೋಂಕಿಗೆ ತುತ್ತಾಗಿದ್ದ ಅರ್ಚನಾ ಕಾಮತ್‌ ದಾರುಣ ಸಾವು  ಕಂಡಿದ್ದರು. ಸದಾ ಸಮಾಜಮುಖಿ ಚಿಂತನೆಯೊಂದಿಗೆ ಸಕ್ರಿಯವಾಗಿದ್ದ ಅರ್ಚನಾ ಕಾಮತ್‌, ತನ್ನ ಪತಿ ಚೇತನ್‌ ಕಾಮತ್‌, 4 ವರ್ಷದ ಪುತ್ರ ಕ್ಷಿತಿಜ್‌, ತಂದೆ-ತಾಯಿಯನ್ನು ಅಗಲಿದ್ದಾರೆ. ಇವರ ಸಾವಿನ ಬಗ್ಗೆ ಅವರ ನಾದಿನಿ ಪ್ರತೀಕ್ಷಾ ಕಾಮತ್‌ ಮಾತನಾಡಿದ್ದಾರೆ.

ನನ್ನ ತಾಯಿಯ ತಂಗಿಗೆ ಲಿವರ್‌ ದಾನ ಮಾಡುವ ವೇಳೆ ನನ್ನ ಅತ್ತಿಗೆ ಸಾವು ಕಂಡಿದ್ದಾರೆ. 9 ವರ್ಷದ ಹಿಂದೆ ನನ್ನ ಅಣ್ಣ ಚೇತನ್‌ ಕಾಮತ್‌ ಹಾಗೂ ಅತ್ತಿಗೆ ಅರ್ಚನಾ ಕಾಮತ್‌ ವಿವಾಹವಾಗಿದ್ದರು. ಅರ್ಚನಾ ಕಾಮತ್‌ ನಮ್ಮೆಲ್ಲರ ಬದುಕಿಗೆ ತಂಗಾಳಿಯಂತೆ ಬಂದಿದ್ದರು. ಅವರು ಬಂದ ಬಳಿಕ ನಮ್ಮ ಕುಟುಂಬವೇ ಬದಲಾಗಿ ಹೋಯಿತು. ಮದುವೆಯಾಗಿ ಐದು ವರ್ಷದ ಬಳಿಕ ಅತ್ತಿಗೆ ಗಂಡು ಮಗು ಕ್ಷಿತಿಜ್‌ಗೆ ಜನ್ಮ ನೀಡಿದ್ದರು. ಈ ವರ್ಷ ಪುಟ್ಟ ಕ್ಷಿತಿಜ್‌ಗೆ ನಾಲ್ಕು ವರ್ಷ ತುಂಬುತ್ತದೆ. ಕೆಲವು ತಿಂಗಳ ಹಿಂದೆಯಷ್ಟೇ ನಮ್ಮ ತಾಯಿಯ ತಂಗಿಯ ಆರೋಗ್ಯ ತುಂಬಾ ಹದಗೆಟ್ಟಿತ್ತು.  ಅವರಿಗೆ ತುರ್ತಾಗಿ ಲಿವರ್‌ ಕಸಿಗೆ ಒಳಗಾಗಬೇಕಿತ್ತು. ನಮ್ಮ ತಾಯಿಯ ತಂಗಿ ಕೂಡ ಅರ್ಚನಾ ಅವರೊಂದಿಗೆ ಬಹಳ ಆತ್ಮೀಯರಾಗಿದ್ದರು. 65 ವರ್ಷದ ಅವರನ್ನು ಅತ್ತಿಗೆ ತಮ್ಮ ತಾಯಿಯ ರೀತಿಯೇ ಭಾವಿಸಿದ್ದರು. ಹಾಗಾಗಿ ತಮ್ಮ ಲಿವರ್‌ಅನ್ನು ನೀಡುವುದಾಗಿ ಅವರು ಮುಂದೆ ಬಂದಿದ್ದರು. ಆದರೆ, ನಮಗ್ಯಾರಿಗೂ ಅದು ಇಷ್ಟವಿದ್ದಿರಲಿಲ್ಲ. ಆದರೆ, ಅತ್ತಿಗೆ ಮಾತ್ರ ನಿರ್ಧಾರ ಮಾಡಿಬಿಟ್ಟಿದ್ದರು. 

15 ದಿನಗಳ ಹಿಂದೆ ಅತ್ತಿಗೆ ತಮ್ಮ ಲಿವರ್‌ನ ಶೇ. 60ರಷ್ಟನ್ನು ದಾನ ಮಾಡಿದ್ದರು.  ಆದರೆ, ಅದಾದ ನಂತರ ಆಗಿದ್ದು ನಮ್ಮೆಲ್ಲರಿಗೂ ಆಘಾತ ತಂದಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಒಂದು ದಿನದ ಬಳಿಕ ಅತ್ತಿಗೆ ಏನೂ ತಿನ್ನೋಕೆ ಆಗುತ್ತಿರಲಿಲ್ಲ. ಒಂದಕ್ಷರ ಕೂಡ ಮಾತನಾಡುತ್ತಿರಲಿಲ್ಲ. ಅವರಲ್ಲಿದ್ದ ಶೇ. 40ರಷ್ಟು ಲಿವರ್‌ ಸಂಪೂರ್ಣವಾಗಿ ಡ್ಯಾಮೇಜ್‌ ಆಗಿತ್ತು. ಮೂರು ದಿನಗಳ ಹಿಂದೆ ನಾವು ಅವರನ್ನು ಬಹು ಅಂಗಾಂಗ ವೈಫಲ್ಯ ಹಾಗೂ ಕಾರ್ಡಿಯಾಕ್‌ ಅರೆಸ್ಟ್‌ನಿಂದಾಗಿ ಕಳೆದುಕೊಂಡಿದ್ದೇವೆ. ಆದರೆ, ತಾಯಿಯ ತಂಗಿಗೆ ಇನ್ನೂ ಇದು ಗೊತ್ತಿಲ್ಲ. ಅತ್ತಿಗೆಯ ಸಾವಿನ ಬಗ್ಗೆ ಅವರಿಗೆ ನಾವಿನ್ನೂ ತಿಳಿಸಿಲ್ಲ. ಅಣ್ಣ ಹಾಗೂ ಕ್ಷಿತಿಜ್‌ನನ್ನು ಸಮಾಧಾನ ಮಾಡೋಕೆ ನಮಗೆ ಆಗುತ್ತಿಲ್ಲ. ನಮ್ಮ ಅತ್ತಿಗೆಗೆ ಕೇವಲ 33 ವರ್ಷ ವಯಸ್ಸು. ಅವರು ನಿಜಕ್ಕೂ ಏಂಜೆಲ್‌. ಒಬ್ಬರನ್ನು ಉಳಿಸುವ ಸಲುವಾಗಿ ತಮ್ಮ ಅಮೂಲ್ಯ ಜೀವವನ್ನೇ ತ್ಯಾಗ ಮಾಡಿದ್ದಾರೆ' ಎಂದು ಅಫೀಶಿಯಲ್‌ ಪೀಪಲ್‌ ಆಫ್‌ ಇಂಡಿಯಾ ಇನ್ಸ್‌ಟಾಗ್ರಾಮ್‌ ಪೇಜ್‌ಗೆ ಪ್ರತೀಕ್ಷಾ ಕಾಮತ್‌ ತಿಳಿಸಿದ್ದಾರೆ.

ಅಂಗಾಂಗ ದಾನಿ ಅರ್ಚನಾ ಕಾಮತ್ ಇನ್ನಿಲ್ಲ; ಪರರ ಜೀವ ಉಳಿಸಲು ತನ್ನ ಪ್ರಾಣಾರ್ಪಣೆ!

ಬಾಳಿಗೊಂದು ಅರ್ಥಪೂರ್ಣವಾದ ನಿಯಮ ಇರಬೇಕು ಎನ್ನುತ್ತಾ ಸದಾ ಎಲ್ಲರಲ್ಲೂ ಪ್ರೇರಣಾಸ್ಫೂರ್ತಿಯಾಗಿದ್ದ ಸೋದರಿ ಶ್ರೀಮತಿ ಅರ್ಚನಾ ಕಾಮತ್ ರವರು ಮತ್ತೊಂದು ಜೀವವೊಂದನ್ನು ಉಳಿಸುವ ಸಂದರ್ಭದಲ್ಲಿ ತನ್ನ ಉಸಿರನ್ನೇ ನಿಲ್ಲಿಸಿರುವುದು ಅತ್ಯಂತ ನೋವಿನ ಸಂಗತಿ. ಅವರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ ನನ್ನ ಆತ್ಮೀಯರಾದ ಶ್ರೀ ಸಿ.ಎ ಚೇತನ್ ಕಾಮತ್ ರವರ ಕುಟುಂಬ ವರ್ಗಕ್ಕೆ ಹಾಗೂ ಸೋದರಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಣ ಸಂಸ್ಥೆಯ ಎಲ್ಲಾ ವೃಂದಕ್ಕೂ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಭಗವಂತ ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್‌ ಕಾಮತ್‌ ಹೇಳಿದ್ದಾರೆ.

'ನಾನು ಐಪಿಎಸ್‌ ಆಫೀಸರ್‌ ಆಗಿದ್ದೇನೆ..' ಅಮ್ಮನ ತಬ್ಬಿಕೊಂಡು ಹೇಳುವಾಗಲೇ ವ್ಯಕ್ತಿಯನ್ನ ಎತ್ತಾಕಿಕೊಂಡು ಹೋದ ಪೊಲೀಸ್!

 

Latest Videos
Follow Us:
Download App:
  • android
  • ios