Asianet Suvarna News Asianet Suvarna News

Mysuru : 35 ಪೌರ ಕಾರ್ಮಿಕ ಕುಟುಂಬದ ಗುಡಿಸಲು ತೆರವುಗೊಳಿಸಿ

ಹೆಬ್ಬಾಳು ಬಸವನಗುಡಿಯಲ್ಲಿ ವಾಸವಿರುವ 35 ಪೌರಕಾರ್ಮಿಕ ಕುಟುಂಬಗಳ ಗುಡಿಸಲನ್ನು ತೆರವುಗೊಳಿಸುವಂತೆ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಅಧಿಕಾರಿಗಳಿಗೆ ಸೂಚಿಸಿದರು.

Order For Clear municipality workers shelters snr
Author
First Published Jan 8, 2023, 11:17 AM IST

 ಮೈಸೂರು (ಜ. 08):  ಹೆಬ್ಬಾಳು ಬಸವನಗುಡಿಯಲ್ಲಿ ವಾಸವಿರುವ 35 ಪೌರಕಾರ್ಮಿಕ ಕುಟುಂಬಗಳ ಗುಡಿಸಲನ್ನು ತೆರವುಗೊಳಿಸುವಂತೆ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಅಧಿಕಾರಿಗಳಿಗೆ ಸೂಚಿಸಿದರು.

ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ಸ್ಲಂ ಬೋರ್ಡ್‌ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರಿಗೆ ರಕ್ಷಣೆ ನೀಡುವುದು ಆಯೋಗದ ಜವಾಬ್ದಾರಿ, ಅವರನ್ನು ಏಕಾಏಕಿ ಒಕ್ಕಲೆಬ್ಬಿಸಬಾರದು ಎಂದು ಅವರು ಸೂಚಿಸಿದರು.

ಪೌರಕಾರ್ಮಿಕ ಕುಟುಂಬವನ್ನು ತೆರವು ಮಾಡದಂತೆ ಎಂಡಿಎ ಆಯುಕ್ತರಿಗೆ ಪತ್ರ ಬರೆಯುವಂತೆ ಹಾಗೂ ಬಸವನಗುಡಿಗೆ ಸಂಬಂಧಿಸಿದ ಪೂರ್ಣ ಮಾಹಿತಿ ನೀಡಲು ಜಿಲ್ಲಾಧಿಕಾರಿಗೆ ಪತ್ರ ಬರೆಯುವಂತೆ ಆಪ್ತ ಸಹಾಯಕರಿಗೆ ಸೂಚಿಸಿದರು.

ತೆರವು ಕಾರ್ಯಾಚರಣೆ ವೇಳೆ ಮನವೊಲಿಸಬೇಕು. ಬಲವಂತವಾಗಿ ತೆರವುಗೊಳಿಸಬಾರದು. ತೆರವಿನ ವೇಳೆ ವ್ಯತ್ಯಾಸವಾಗಿ ದೊಡ್ಡ ಸುದ್ದಿಯಾಗುವುದು ಬೇಡ. ಇದರಿಂದ ಸರ್ಕಾರಕ್ಕೂ ಮುಜಗರವಾಗುತ್ತದೆ. ಹಾಗಾಗಿ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಸ್ಲಂ ಬೋರ್ಡ್‌ ಎಇಇ ರಾಮಚಂದ್ರ ಅವರು, ಹೆಬ್ಬಾಳು ಸರ್ವೇ ನಂಬರ್‌ 165ರಲ್ಲಿ 1990ರಿಂದ ಬಸವನಗುಡಿಯಲ್ಲಿ 35 ಪೌರಕಾರ್ಮಿಕ ಕುಟುಂಬ ವಾಸ ಇದ್ದಾರೆ. 2014ರಲ್ಲಿ ಈ ಕುಟುಂಬಗಳಿಗೆ ಮೇಟಗಳ್ಳಿಯ ಅಂಬೇಡ್ಕರ್‌ ಜ್ಞಾನಲೋಕದಲ್ಲಿ ಜೆನಮ್‌ರ್‍ ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಗುಡಿಸಲು ತೆರವು ಮಾಡುವಂತೆ ಎಂಡಿಎಯಿಂದ ಒತ್ತಡ ಇದೆ. ಜತೆಗೆ ಸ್ಥಳೀಯ ನಾಗರಿಕರೊಬ್ಬರು ನೂತನ ಮನೆ ಕೊಟ್ಟಬಳಿಕ ಖಾಲಿ ಮಾಡಿಸದಿರುವುದಕ್ಕೆ ಸ್ಲಂ ಬೋರ್ಡ್‌ ವಿರುದ್ಧವೇ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ ಎಂದು ಶಿವಣ್ಣ ಅವರ ಗಮನಕ್ಕೆ ತಂದರು.

ಪ್ರಭಾವಶಾಲಿಗಳು ಜಾಗ ಒಡೆದುಕೊಳ್ಳಲು ಯತ್ನಿಸುತ್ತಿರುವುದಾಗಿ ಸ್ಥಳೀಯರು ಮನವಿ ಕೊಟ್ಟಿದ್ದಾರೆ. ಪೌರಕಾರ್ಮಿಕರಿಗೆ ಮೀಸಲಿಟ್ಟಜಾಗವನ್ನು ಆಶ್ರಯ ಸಮಿತಿ ಕೊಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದು, ಗೊಂದಲವಿದೆ. ಪೂರ್ಣ ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದರು.

ಪ್ರಧಾನ ಮಂತ್ರಿ ವಸತಿ ಯೋಜನೆಯಡಿ ಗಾಂಧಿನಗರದಲ್ಲಿ 770 ಮನೆಗಳ ವಿತರಣೆಗೆ ಅನುಮೋದನೆ ದೊರೆತಿದ್ದು, ಫಲಾನುಭವಿಗಳಿಂದ ದಾಖಲೆ ಸಂಗ್ರಹಿಸಲಾಗಿತ್ತು. ಆದರೆ, ಸರ್ಕಾರ ಈ ಮನೆ ಹಿಂದಕ್ಕೆ ಪಡೆಯಿತು ಎಂದು ಸ್ಲಂ ಬೋರ್ಡ್‌ ಎಇಇ ತೇಜಶ್ರೀ ವಿವರಿಸಿದರು.

 ಗಾಂಧಿನಗರದ ಮುಖಂಡ ನಾರಾಯಣ ಮಾತನಾಡಿ, ಮನೆಗಳು ಯಾಕೇ ರದ್ದು ಮಾಡಿದರು ತಿಳಿಯುತ್ತಿಲ್ಲ. ವಸತಿ ಸಚಿವ ಸೋಮಣ್ಣ ಅವರೊಂದಿಗೆ ಮಾತನಾಡಿ ಮನೆ ಕೊಡಿಸಿದರೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

ಈ ಸಂಬಂಧ ವಸತಿ ಸಚಿವ ವಿ.ಸೋಮಣ್ಣ ಅವರೊಂದಿಗೆ ಚರ್ಚಿಸುವುದಾಗಿ ಶಿವಣ್ಣ ನುಡಿದರು.

ಹೈವೇ ಸರ್ಕಲ್‌ನಲ್ಲಿರುವ ಪೌರಕಾರ್ಮಿಕ ಕಾಲೋನಿಯನ್ನು ಸ್ವೀಕರಿಸಿ ಕಂದಾಯ ಸಂಗ್ರಹಿಸಿ ನಿರ್ವಹಣೆ ಮಾಡುವಂತೆ ನಗರ ಪಾಲಿಕೆಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಸ್ಲಂ ಬೋರ್ಡ್‌ನಲ್ಲಿ ಬಡಾವಣೆ ನಿರ್ವಹಣೆಗೆ ಹಣ ಇಲ್ಲ ಎಂದು ತೇಜಶ್ರೀ ತಿಳಿಸಿದರು.

ಕಾನೂನಿನ್ವಯ ಪೌರಕಾರ್ಮಿಕರಿಗೆ ನ್ಯಾಯ 

 ತುಮಕೂರು(ಡಿ.17): ಇಪ್ಪತ್ತು ವರ್ಷಗಳ ನಿರಂತರ ಹೋರಾಟದ ಫಲವಾಗಿ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ತುಮಕೂರು ಮಹಾನಗರ ಪಾಲಿಕೆಯಲ್ಲಿ ದಿನಗೂಲಿ ಆಧಾರದಲ್ಲಿ ದುಡಿಯುತ್ತಿದ್ದ 250 ಪೌರಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವಂತೆ ಆದೇಶ ನೀಡಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ನಗರಾಭಿವೃದ್ಧಿ ಇಲಾಖೆ ಅಗತ್ಯ ಕ್ರಮ ಕೈಗೊಂಡು, ಪೌರಕಾರ್ಮಿಕರಿಗೆ ಕಾನೂನಿನ ಅನ್ವಯ ನ್ಯಾಯ ಒದಗಿಸುವಂತೆ ತುಮಕೂರು ಜಿಲ್ಲಾ ಪೌರಕಾರ್ಮಿಕರ ಸಂಘ(ಸಿಐಟಿಯು) ಅಧ್ಯಕ್ಷ ಸೈಯದ್‌ ಮುಜೀವ್‌ ಮನವಿ ಮಾಡಿದ್ದಾರೆ.

ನಗರದ ಚಳವಳಿ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರ ಗಟ್ಟಿಯಾದ ಹೋರಾಟ ಮತ್ತು ಅದರ ಪರವಾಗಿ ನಿಂತ ಎಲ್ಲರ ಸಹಕಾರದಿಂದ ಕಾನೂನು ಹೋರಾಟ ತಾರ್ಕಿಕ ಅಂತ್ಯ ಕಂಡಿದೆ. ಅಧಿಕಾರಿಗಳು ಇದನ್ನು ಮತ್ತಷ್ಟು ಬೆಳೆಸದೆ, ಈ ನೆಲದ ಕಾನೂನಿಗೆ (Law) ಗೌರವ ನೀಡಿ, ನ್ಯಾಯಾಲಯದ ಆದೇಶದ ಅನ್ವಯ ಪರಿಶಿಷ್ಟಜಾತಿಗೆ ಸೇರಿದ 250 ಜನ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕೆಂಬುದು ಪೌರಕಾರ್ಮಿಕರ ಸಂಘದ ಕೋರಿಕೆಯಾಗಿದೆ ಎಂದರು.

ತುಮಕೂರು (Tumakur) ನಗರಸಭೆಗೆ 2002ರಲ್ಲಿ ಸುಮಾರು 250 ಜನ ಪೌರಕಾರ್ಮಿಕರು ದಿನಗೂಲಿ ಆಧಾರದಲ್ಲಿ ನೇಮಕಗೊಂಡಿದ್ದು, ಆನಂತರ ಗುತ್ತಿಗೆ, ನೇರ ನೇಮಕಾತಿ ಹೀಗೆ ದುಡಿಯುತ್ತಾ ಬಂದಿದ್ದು, ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಕಾಯಂಗೊಳಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಸರ್ಕಾರ ಸದರಿ ಮನವಿಯನ್ನು ಪರಿಶೀಲಿಸುವಂತೆ ಕೈಗಾರಿಕಾ ನ್ಯಾಯಾಧೀಕರಣಕ್ಕೆ ವಹಿಸಿತ್ತು. ಕೈಗಾರಿಕಾ ನ್ಯಾಯಾಧೀಕರಣವೂ 2006ರಲ್ಲಿ ನೌಕರರನ್ನು ಕಾಯಂ ಮಾಡಲು ಬರುವುದಿಲ್ಲ ಎಂಬ ಆದೇಶ ನೀಡಿದ್ದು, ಇದರ ವಿರುದ್ಧ 2009ರಲ್ಲಿ ಹೈಕೋರ್ಚ್‌ಗೆ ಪೌರಕಾರ್ಮಿಕರು ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಾಲಯವೂ ಪುನರ್‌ ಪರಿಶೀಲಿಸುವಂತೆ ಕೈಗಾರಿಕಾ ನ್ಯಾಯಾಧೀಕರಣಕ್ಕೆ ಕಡತವನ್ನು ಹಿಂದಿರುಗಿಸಿತ್ತು.

Follow Us:
Download App:
  • android
  • ios