ಮಂಗಳೂರು(ಸೆ.04): ದಕ್ಷಿಣ ಕನ್ನಡಕ್ಕೆ ಗಣೇಶ ಚೌತಿಗೆ ಆಗಮಿಸಿದ ಮಳೆ ಇನ್ನೂ ಮೂರು ದಿನಗಳ ಕಾಲ ಕರಾವಳಿ ಜಿಲ್ಲೆಯಲ್ಲಿ ಮುಂದುವರಿಯುವ ನಿರೀಕ್ಷೆ ಇದೆ. ಈ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿಯಲ್ಲಿ ಇನ್ನು ಮೂರು ದಿನಗಳ ಕಾಲ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದ್ದು, ಸಾಧಾರಣ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆ ಹೊಂದಲಾಗಿದೆ.

ಚೌತಿ ಮಳೆ:

ಪ್ರತಿ ವರ್ಷ ಚೌತಿ ವೇಳೆಗೆ ಮಳೆಯಾಗುವುದು ವಾಡಿಕೆ. ಈ ಬಾರಿ ಸೋಮವಾರ ಚೌತಿ ಗಣಪತಿಯ ಪ್ರತಿಷ್ಠೆ ವೇಳೆಗೆ ಧಾರಾಕಾರ ಮಳೆ ದಾಂಗುಡಿ ಇರಿಸಿತ್ತು. ಮಧ್ಯಾಹ್ನ ವೇಳೆಗೆ ಬಿಟ್ಟಮಳೆ ಮತ್ತೆ ಸಂಜೆ ಗಣೇಶ ಶೋಭಾಯಾತ್ರೆಗೆ ಮತ್ತೆ ಕಾಣಿಸಿತು. ಅಂತು ಮಳೆಯಲ್ಲೇ ಮೊದಲ ದಿನದ ಗಣೇಶೋತ್ಸವ ಮುಕ್ತಾಯಗೊಳ್ಳುವಂತಾಗಿತ್ತು.

ಮಂಗಳವಾರ ಕೂಡ ಜಿಲ್ಲೆಯಾದ್ಯಂತ ನಸುಕಿನ ಜಾವ ಧಾರಾಕಾರ ಮಳೆ ಸುರಿದಿದೆ. ಬೆಳಗ್ಗೆ 10 ಗಂಟೆ ವರೆಗೂ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಮಧ್ಯಾಹ್ನ ವರೆಗೆ ತುಂತುರು ಮಳೆ ಮುಂದುವರಿದಿದ್ದು, ಅಪರಾಹ್ನ ಮೋಡ ಕವಿದ ವಾತಾವರಣ, ತಂಗಾಳಿ ಕಂಡುಬಂತು.

ಮಳೆ ಪ್ರಮಾಣ:

ಮಂಗಳವಾರ ಬೆಳಗ್ಗಿನ ವರೆಗೆ ಜಿಲ್ಲೆಯ ಸುಳ್ಯದಲ್ಲಿ ಗರಿಷ್ಠ 47.6 ಮಿಲಿ ಮೀಟರ್‌ ಮಳೆ ದಾಖಲಾಗಿದೆ. ಬಂಟ್ವಾಳ 39.5 ಮಿ.ಮೀ, ಬೆಳ್ತಂಗಡಿ 44.3 ಮಿ.ಮೀ, ಮಂಗಳೂರು 33.9 ಮಿ.ಮೀ. ಪುತ್ತೂರು 38.4 ಮಿ.ಮೀ. ಮಳೆ ದಾಖಲಾಗಿದೆ. ದಿನದಲ್ಲಿ ಸುರಿದ ಒಟ್ಟು ಮಳೆ 40.7 ಮಿ.ಮೀ. ಆಗಿದ್ದು, ಕಳೆದ ಬಾರಿ ಕೇವಲ 2 ಮಿ.ಮೀ. ಮಳೆಯಾಗಿತ್ತು. ಸೆಪ್ಟೆಂಬರ್‌ನಲ್ಲಿ ಈವರೆಗೆ ಒಟ್ಟು 121.2 ಮಿ.ಮೀ. ಮಳೆಯಾಗಿದ್ದು, ಕಳೆದ ಬಾರಿ ಬರೇ 8.3 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 2,989.8 ಮಿ.ಮೀ. ಮಳೆಯಾಗಿದ್ದು, ಕಳೆದ ಬಾರಿ 4,235.7 ಮಿ.ಮೀ. ಮಳೆ ದಾಖಲಾಗಿದೆ.

ನದಿ ನೀರು ಏರಿಕೆ:

ಘಟ್ಟಪ್ರದೇಶದಲ್ಲಿ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ ನದಿ ನೀರಿನ ಮಟ್ಟದಲ್ಲಿ ಹಠಾತ್‌ ಏರಿಕೆ ಕಂಡುಬಂದಿದೆ. ನೇತ್ರಾವತಿ ನದಿ 26 ಮೀಟರ್‌ ಹಾಗೂ ಕುಮಾರಧಾರ ನದಿ 18 ಮೀಟರ್‌ ಹಾಗೂ ಬಂಟ್ವಾಳದಲ್ಲಿ ನೇತ್ರಾವತಿ ನದಿ ಹರಿವು 5.7 ಮೀಟರ್‌ಗೆ ಏರಿಕೆಯಾಗಿದೆ.

ಕರಾವಳಿಯ ಎಲ್ಲ ರೈಲುಗಳಿಗೂ ಸಿಸಿ ಕ್ಯಾಮೆರಾ ಕಣ್ಗಾವಲು..!