ಮಂಗಳೂರು(ಸೆ.04): ಕರಾವಳಿಯ ಕೊಂಕಣ್‌ ಮಾರ್ಗದಲ್ಲಿ ಸಂಚರಿಸುವ ಎರಡು ರೈಲುಗಳಿಗೆ ಅಳವಡಿಸಿದ್ದ ಸಿಸಿ ಕ್ಯಾಮರಾ ಇನ್ನು ಮುಂದೆ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ವಿಧದ ರೈಲುಗಳಿಗೂ ವಿಸ್ತರಣೆಗೊಳ್ಳಲಿದೆ.

ರೈಲ್ವೆ ಪ್ರಯಾಣಿಕರಿಗೆ ಪ್ರಯಾಣದ ವೇಳೆ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವ ಕುರಿತಂತೆ ಕೇಂದ್ರ ರೈಲ್ವೆ ಮಂತ್ರಾಲಯ ನೀಡಿದ ಸೂಚನೆ ಮೇರೆಗೆ ರೈಲ್ವೆ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದಾರೆ.

ಸುರಕ್ಷಿತ ಪ್ರಯಾಣ:

ರೈಲು ನಿಲ್ದಾಣಗಳ ಪ್ರವೇಶ ದ್ವಾರ ಹಾಗೂ ಫ್ಲ್ಯಾಟ್‌ಫಾರಂಗಳ ಅಲ್ಲಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ರೈಲು ನಿಲ್ದಾಣಗಳಲ್ಲಿ ಆಂತರಿಕ ಸುರಕ್ಷೆ ಇನ್ನಷ್ಟುಬಲಗೊಳ್ಳುವಂತಾಗಿದೆ. ಅಲ್ಲದೆ ಪ್ರಯಾಣಿಕರು ಕೂಡ ನೆಮ್ಮದಿಯಿಂದ ಪ್ರಯಾಣಿಸಲು ಸಾಧ್ಯವಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಕರಾವಳಿ ರೈಲಿಗೂ ಬಂತು:

ಸಿಸಿ ಕ್ಯಾಮರಾ ಕಲ್ಪನೆ ಹೊಸತಲ್ಲದಿದ್ದರೂ ಇದು ಕರಾವಳಿಯ ರೈಲು ಬೋಗಿಗಳಿಗೆ ಈವರೆಗೆ ಇರಲಿಲ್ಲ. ಇದೀಗ ಸುರಕ್ಷತೆಯನ್ನು ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಎಲ್ಲ ವಿಧದ ರೈಲು ಬೋಗಿಗಳಿಗೆ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ.

ಕರಾವಳಿಯಲ್ಲಿ ಕೊಂಕಣ ರೈಲ್ವೆ ವ್ಯಾಪ್ತಿಯ ಜನದಟ್ಟಣೆ ಹೊಂದಿರುವ ಕೊಂಕಣ್‌-ಕನ್ಯಾ ಮಾಂಡೋವಿ ಎಕ್ಸ್‌ಪ್ರೆಸ್‌ ಹಾಗೂ ಸಿಎಸ್‌ಟಿ-ಮಡ್ಗಾಂವ್‌ ಎಕ್ಸ್‌ಪ್ರೆಸ್‌ ರೈಲಿನ ಬೋಗಿಗಳಿಗೆ ಈಗಾಗಲೇ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಈ ಎರಡು ರೈಲುಗಳಿಗೆ ಸಿಸಿ ಕ್ಯಾಮರಾ ಅಳವಡಿಸಿರುವುದು ಯಶಸ್ವಿಯಾಗಿದ್ದು, ಸಿಸಿ ಕ್ಯಾಮರಾ ಅಳವಡಿಸಿದ ಬಳಿಕ ಕಳೆದ ಮೂರು ತಿಂಗಳಲ್ಲಿ ಯಾವುದೇ ಕ್ರಿಮಿನಲ್‌ ಕೇಸ್‌ ದಾಖಲಾಗಿಲ್ಲ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಸ್ಲೀಪರ್ ಕೋಚ್‌ಗೂ ಕ್ಯಾಮೆರಾ:

ಎಲ್‌ಎಚ್‌ಬಿ ಕೋಚ್‌ ಹೊಂದಿರುವ ಈ ರೈಲುಗಳಲ್ಲಿ 36 ಸ್ಲೀಪರ್‌ ಕೋಚ್‌ಗಳಿವೆ. ಈ ಎಲ್ಲ ಸ್ಲೀಪರ್‌ ಕೋಚ್‌ಗಳಿಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ರೈಲ್ವೆ ಕೋಚ್‌ನ್ನು ಪ್ರವೇಶಿಸುವ ಮೇಲ್ಭಾಗದಲ್ಲಿ ಹಾಗೂ ಸ್ಲೀಪರ್‌ ಕೋಚ್‌ನ ಕಾರಿಡಾರ್‌ಗಳಲ್ಲಿ ಸಿಸಿ ಕ್ಯಾಮರಾ ಹಾಕಲಾಗಿದೆ. ಈ ಕ್ಯಾಮರಾ ಸೆರೆಹಿಡಿಯುವ ದೃಶ್ಯಾವಳಿಗಳು ರೈಲಿನಲ್ಲೇ ಪ್ರತ್ಯೇಕವಾಗಿ ರೂಪಿಸಿದ ಕಂಟ್ರೋಲ್‌ ರೂಂ ಮಾದರಿಯ ವ್ಯವಸ್ಥೆಯಲ್ಲಿ ಸಂಗ್ರಹಗೊಳ್ಳುತ್ತವೆ. ಇದರ ವಿಡಿಯೋ ಪಡೆದುಕೊಳ್ಳಲು ರೈಲ್ವೆ ಇಲಾಖೆಗೆ ಅವಕಾಶ ಇರುತ್ತದೆ ಎಂದು ಮೂಲಗಳು ತಿಳಿಸಿವೆ.

ಇನ್ಮುಂದೆ ಕರಾವಳಿಯ ಎಲ್ಲ ರೈಲುಗಳಿಗೂ ಸಿಸಿ ಕ್ಯಾಮೆರಾ ಕಣ್ಗಾವಲು!

ಎಲ್ಲ ಬೋಗಿಗಳಲ್ಲೂ ಸಿಸಿ ಕ್ಯಾಮರಾ ಅಳವಡಿಕೆಯಾಗಲಿದೆ. ಇದರಿಂದಾಗಿ ರೈಲುಗಳಲ್ಲಿ ನಡೆಯುವ ಕಳ್ಳತನ, ದರೋಡೆ, ಟಿಕೆಟ್‌ ರಹಿತ ಪ್ರಯಾಣ ಹಾಗೂ ಅಪಘಾತದಂತಹ ಪ್ರಕರಣಗಳು ಸಂಭವಿಸಿದಾಗ ಈ ಸಿಸಿ ಕ್ಯಾಮರಾಗಳು ಪ್ರಯೋಜನಕ್ಕೆ ಬರಲಿವೆ ಎನ್ನುವುದು ರೈಲ್ವೆ ಅಧಿಕಾರಿಗಳ ಮಾತು.

ಮಂಗಳೂರು: ನೇತ್ರಾವತಿ ಸೇತುವೆಗೆ ಸಿಸಿ ಟಿವಿ ಅಳವಡಿಕೆ

ಪ್ರಸಕ್ತ ಕೊಂಕಣ ಮಾರ್ಗ ಮತ್ತು ಕೇರಳ ನಡುವೆ ಸಂಚರಿಸುವ ನೇತ್ರಾವತಿ ಎಕ್ಸ್‌ಪ್ರೆಸ್‌, ಮಂಗಳಾ ಎಕ್ಸ್‌ಪ್ರೆಸ್‌, ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲುಗಳ ಮಹಿಳಾ ಕೋಚ್‌ಗಳಿಗೆ ಮಾತ್ರ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಇದರ ಕಂಟ್ರೋಲ್‌ ರೈಲಿನ ಎಂಜಿನ್‌ ಭಾಗದಲ್ಲಿ ಇರುತ್ತದೆ ಎಂದು ಮೂಲಗಳು ತಿಳಿಸಿವೆ.

-ಆತ್ಮಭೂಷಣ್