ಮೂಲ್ಕಿ(ಜೂ.11): ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜೂನ್‌ 14ರಿಂದ ಭಕ್ತರಿಗೆ ದೇವರ ದರ್ಶನ ಭಾಗ್ಯ ಆರಂಭಗೊಳ್ಳಲಿದೆ. ಆದರೆ ಭಕ್ತರು ದೇವಸ್ಥಾನದ ವೆಬ್‌ಸೈಟ್‌ನಿಂದ ಉಚಿತವಾಗಿ ಇ- ಟಿಕೆಟ್‌ ಮೂಲಕ ಪ್ರವೇಶವನ್ನು ಕಾದಿರಿಸಬೇಕಾಗುತ್ತದೆ. ರಾಜ್ಯದಲ್ಲಿ ದೇವಸ್ಥಾನವೊಂದು ದೇವರ ದರ್ಶನಕ್ಕೆ ಇ- ಟಿಕೆಟ್‌ ಮೂಲಕ ಕಾದಿರಿಸುವ ವ್ಯವಸ್ಥೆ ಮಾಡಿರುವುದು ಇದೇ ಮೊದಲ ಪ್ರಯೋಗವಾಗಿದೆ.

ದೇವರ ದರ್ಶನಕ್ಕೆ ಸರ್ಕಾರ ಕೆಲವೊಂದು ನಿಯಮಗಳನ್ನು ರೂಪಿಸಿರುವುದರಿಂದ ಇದನ್ನು ಪಾಲಿಸಲು ನದಿ ಮಧ್ಯದಲ್ಲಿರುವ ಕಟೀಲು ದೇವಸ್ಥಾನದಲ್ಲಿ ಕೊಂಚ ಕಷ್ಟವಾಗಿತ್ತು. ಭೇಟಿಯ ಸಂದರ್ಭ ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್‌ ಮತ್ತು ಥರ್ಮಲ್‌ ಸ್ಕ್ರೀನಿಂಗ್‌ ಮಾಡಬೇಕಾಗಿರುವುದರಿಂದ ಭಕ್ತರ ಸರತಿ ಸಾಲಿನ ವ್ಯವಸ್ಥೆಗೆ ಸ್ಥಳಾವಕಾಶದ ಕೊರತೆ ಇತ್ಯಾದಿ ಸಮಸ್ಯೆಗಳು ಇಲ್ಲಿ ಕಂಡುಬಂದಿದ್ದರಿಂದ, ಜೂನ್‌ 8ರಂದು ಕಟೀಲು ದೇವಸ್ಥಾನವು ಭಕ್ತರ ದರ್ಶನಕ್ಕೆ ತೆರೆದಿರಲಿಲ್ಲ.

ಕುಕ್ಕೆ ಸುಬ್ರಮಣ್ಯದಲ್ಲಿ ಎರಡನೇ ದಿನ 2 ಸಾವಿರಕ್ಕೂ ಅಧಿಕ ಭಕ್ತರು

ಇದೀಗ ಜೂನ್‌ 14ರಿಂದ ಭಕ್ತರಿಗೆ ದರ್ಶನಕ್ಕೆ ಮುಕ್ತವಾಗಲಿದೆ. ಸಾಮಾಜಿಕ ಅಂತರ ಕಾಪಾಡಲು ದೇವಳದ ವಠಾರದಲ್ಲಿ ಅಲ್ಲಲ್ಲಿ ಬಿಳಿ ಬಣ್ಣದ ಬಾಕ್ಸ್‌ ಹಾಕಲಾಗಿದೆ. ಇ- ಪಾಸ್‌ ವ್ಯವಸ್ಥೆಗೂ ಸಿದ್ಧತೆ ಮಾಡಲಾಗಿದ್ದು, ಪ್ರಾಯೋಗಿಕವಾಗಿಯೂ ನೋಡಲಾಗಿದೆ. ಭಕ್ತರು ವೆಬ್‌ಸೈಟ್‌ ಮೂಲಕ ನೋಂದಾಯಿಸಿ ದೇವಳಕ್ಕೆ ಬರಬಹುದಾಗಿದೆ. ಪ್ರತಿ ಹದಿನೈದು ನಿಮಿಷಕ್ಕೆ ಅರವತ್ತು ಮಂದಿಯಷ್ಟುಭೇಟಿ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಬೆಳಿಗ್ಗೆ 7.30ರಿಂದ ರಾತ್ರಿ 7.30ರ ತನಕ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

ಸ್ಥಳೀಯ ಭಕ್ತರಿಗೆ ಇ- ಪಾಸ್‌ ಇಲ್ಲದೆ ದೇವಳಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ ಭಕ್ತರನ್ನು ಒಳಬಿಡಲಾಗುತ್ತದೆ. ಆದರೆ ಅನ್ನಪ್ರಸಾದ ಸೇರಿದಂತೆ ಯಾವುದೇ ಸೇವೆಗಳಿಗೆ ಅವಕಾಶ ಇಲ್ಲ ಎಂದು ದೇವಳದ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.