ಧಾರವಾಡದ ಗರಗ ಗ್ರಾಮದಲ್ಲಿ 'ಲವ್ ಜಿಹಾದ್'ಗೆ ಅಪ್ರಾಪ್ತ ದಲಿತ ಬಾಲಕಿ ಬಲಿಯಾಗಿದ್ದಾಳೆಂಬ ಆರೋಪದಡಿ ತೀವ್ರ ಪ್ರತಿಭಟನೆ ನಡೆದಿದೆ. ಬಜರಂಗದಳದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ನ್ಯಾಯ ಕೇಳಿದ ಹಿಂದೂ ಮುಖಂಡನ ಮೇಲೆಯೇ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.

ಧಾರವಾಡ (ಜೂ.14): ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಅಪ್ರಾಪ್ತ ದಲಿತ ಬಾಲಕಿಯೊಬ್ಬಳು 'ಲವ್ ಜಿಹಾದ್' ಕಾಟಕ್ಕೆ ಹೆದರಿ ಸಾವಿಗೆ ಶರಣಾಗಿರುವ ಘಟನೆ ಈಗ ಜಿಲ್ಲೆಯಲ್ಲಿ ಭಾರಿ ರಾಜಕೀಯ ಹಾಗೂ ಸಾಮಾಜಿಕ ಸಂಚಲನ ಮೂಡಿಸಿದೆ. ಈ ಘಟನೆಯನ್ನು ಖಂಡಿಸಿ ಗರಗ ಗ್ರಾಮದಲ್ಲಿ ಬಜರಂಗದಳ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹಿಂದೂ ಮುಖಂಡರು ಹಾಗೂ ಪೊಲೀಸರ ನಡುವೆ ವಾಗ್ದಾಳಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನದಲ್ಲೇ ವಾಗ್ದಾಳಿ!

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಜರಂಗದಳದ ಪ್ರಮುಖ ಕಾರ್ಯಕರ್ತ ಹಾಗೂ ಹಿಂದೂ ಮುಖಂಡ ಶಿವಾನಂದ ಸತ್ತಿಗೇರಿ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. 'ಒಬ್ಬ ದಲಿತ ಹೆಣ್ಣು ಮಗಳಿಗೆ ಇಷ್ಟೊಂದು ಅನ್ಯಾಯವಾಗಿದ್ದರೂ, ದಲಿತರ ಪರ ಎಂದು ಹೇಳಿಕೊಳ್ಳುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಎಲ್ಲಿದ್ದಾರೆ?' ಎಂದು ಏಕವಚನದಲ್ಲೇ ಪ್ರಶ್ನಿಸಿ ಕಿಡಿಕಾರಿದರು. ಬಾಲಕಿಯ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಸರ್ಕಾರದ ನಿಲುವನ್ನು ತರಾಟೆಗೆ ತೆಗೆದುಕೊಂಡ ಸತ್ತಿಗೇರಿ, 'ಸಂತ್ರಸ್ತ ಅಪ್ರಾಪ್ತೆ ಬಾಲಕಿಯ ಕುಟುಂಬಕ್ಕೆ ಸರ್ಕಾರ ತಕ್ಷಣವೇ 25 ಲಕ್ಷ ರೂಪಾಯಿ ಪರಿಹಾರ ಧನ ಘೋಷಿಸಬೇಕು' ಎಂದು ಆಗ್ರಹಿಸಿದರು.

ಗರಗ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವ ಎಚ್ಚರಿಕೆ!

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಶಿವಾನಂದ ಸತ್ತಿಗೇರಿ ಅವರು ಪೊಲೀಸರ ಕಾರ್ಯವೈಖರಿ ವಿರುದ್ಧ ಆಕ್ರೋಶದ ಜ್ವಾಲೆ ಉಗುಳಿದರು. 'ಇನ್ನು ಮುಂದೆ ಗರಗ ಪೊಲೀಸರು ಇದೇ ರೀತಿ ಅಸಡ್ಡೆಯಿಂದ ನಡೆದುಕೊಂಡರೆ, ನಾವು ಗರಗ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಬೇಕಾಗುತ್ತದೆ' ಎಂದು ನೇರವಾಗಿಯೇ ಎಚ್ಚರಿಕೆ ನೀಡಿದರು.

ಪ್ರತಿಭಟಿಸಿದ ಮುಖಂಡನ ಮೇಲೆಯೇ ಅಟ್ರಾಸಿಟಿ ಕೇಸ್ ಅಸ್ತ್ರ?

ಮತ್ತೊಂದೆಡೆ, ಬಾಲಕಿಯ ಸಾವಿಗೆ ನ್ಯಾಯ ಕೇಳಿ ಪ್ರತಿಭಟನೆ ನಡೆಸಿದ ಹಿಂದೂ ಮುಖಂಡನ ಮೇಲೆಯೇ ಇದೀಗ ಅಟ್ರಾಸಿಟಿ ಕಾಯ್ದೆಯಡಿ (SC/ST Act) ಪ್ರಕರಣ ದಾಖಲಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಕ್ರಮವು ಪ್ರತಿಭಟನಾಕಾರರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ. 'ನ್ಯಾಯ ಕೇಳಲು ಹೋದವರ ಧ್ವನಿ ಅಡಗಿಸಲು ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ' ಎಂದು ಬಜರಂಗದಳದ ಕಾರ್ಯಕರ್ತರು ಆಪಾದಿಸಿದ್ದಾರೆ.

ಸದ್ಯ ಗರಗ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.