Asianet Suvarna News Asianet Suvarna News

ಬಾಗಲಕೋಟೆ: ಜಿಪಂ ಮತಕ್ಷೇತ್ರ ರದ್ದು, ಭುಗಿಲೆದ್ದ ಅಸಮಾಧಾನ..!

ಹೆಚ್ಚು ಜನಸಂಖ್ಯೆ ಹೊಂದಿರೋ ಹಳ್ಳಿಗಳನ್ನ ತಂದು ಇದೀಗ ಕಡಿಮೆ ಜನಸಂಖ್ಯೆ ಇರುವ ಹಳ್ಳಿಗಳ ಜೊತೆ ಸೇರಿ ಹೊಸ ಜಿಲ್ಲಾ ಪಂಚಾಯಿತಿ ಕ್ಷೇತ್ರ ರೂಪಿಸಿರೋದು ಸ್ಥಳೀಯರ ಕಂಗೆಣ್ಣಿಗೆ ಗುರಿಯಾಗಿದೆ. 

Opposition to the Cancellation of the ZP at Bilagi in Bagalkot grg
Author
First Published Sep 17, 2023, 8:55 AM IST

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣ ನ್ಯೂಸ್, ಬಾಗಲಕೋಟೆ

ಬಾಗಲಕೋಟೆ(ಸೆ.17): ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗಳು ಮುಗಿದು ಇನ್ನೇನು ಎಲ್ಲರ ಚಿತ್ತ ಲೋಕಸಭೆಯತ್ತ ಇರುವಾಗಲೇ ಇತ್ತ ಬಾಗಲಕೋಟೆ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ ಮತಕ್ಷೇತ್ರಗಳ ವಿಂಗಡಣೆ ಕಾರ್ಯ ನಡೆದಿದ್ದು, ಇದರ ಬೆನ್ನಲ್ಲೇ ಅಲ್ಲಲ್ಲಿ ಅಸಮಾಧಾನಗಳು ಶುರುವಾಗಿವೆ. ನಿಯಮಾನುಸಾರ ಎಲ್ಲ ಅರ್ಹತೆ ಇರುವ ಜಿಲ್ಲೆಯ ಮುರನಾಳ ಮತಕ್ಷೇತ್ರವನ್ನ ಕೈಬಿಟ್ಟು ಹೊಸದಾಗಿ ಶೀಗಿಕೇರಿ ಜಿಲ್ಲಾ ಪಂಚಾಯತಿ ರಚನೆ ಮಾಡಿರೋದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಹೋರಾಟದ ಎಚ್ಚರಿಕೆ ಕೂಗು ಕೇಳಿ ಬಂದಿದೆ. ಈ ಕುರಿತ ವರದಿ ಇಲ್ಲಿದೆ..

ಒಂದೆಡೆ ಹೊಸ ಜಿಲ್ಲಾ ಪಂಚಾಯತಿ ರಚನೆ ನೆಪದಲ್ಲಿ ತಮ್ಮ ಜಿಲ್ಲಾ ಪಂಚಾಯಿತಿ ಮತಕ್ಷೇತ್ರ ಕೈಬಿಟ್ಟಿದ್ದಕ್ಕೆ ಅಸಮಾಧಾನಗೊಂಡಿರೋ ಮುಖಂಡರು, ಮುಖಂಡರ ನೇತೃತ್ವದಲ್ಲಿ ಸಭೆ ನಡೆಸಿದ ವಿವಿಧ ಹಳ್ಳಿಗಳ ಸಾರ್ವಜನಿಕರು, ಇವುಗಳ ಮಧ್ಯೆ ನಕ್ಷೆ ಹಿಡಿದು ನ್ಯಾಯಕ್ಕಾಗಿ ಆಗ್ರಹಿಸುತ್ತಿರೋ ಸ್ಥಳೀಯರು. ಅಂದಹಾಗೆ ಇಂತಹವೊಂದು ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆಯ ಮುರನಾಳ ಜಿಲ್ಲಾ ಪಂಚಾಯಿತ ಮತಕ್ಷೇತ್ರದಲ್ಲಿ.

ಜಮಖಂಡಿ: ಕಾರು-ಬೈಕ್‌ ಮುಖಾಮುಖಿ ಡಿಕ್ಕಿ, ಇಬ್ಬರ ದುರ್ಮರಣ

ಹೌದು. ಬಾಗಲಕೋಟೆ ಜಿಲ್ಲೆಯ ಬೀಳಗಿ ವಿಧಾನಸಭಾ ಮತಕ್ಷೇತ್ರದಲ್ಲಿ ಮುರನಾಳ ಮತ್ತು ಕಲಾದಗಿ ಎರಡು ಜಿಲ್ಲಾ ಪಂಚಾಯಿತ ಕ್ಷೇತ್ರಗಳಿದ್ದು, ಇವುಗಳ ಪೈಕಿ ಮುರನಾಳ ಮತಕ್ಷೇತ್ರವನ್ನ ರದ್ದು ಮಾಡಿ, ಮುರನಾಳ ಮತಕ್ಷೇತ್ರದ 21 ಹಳ್ಳಿಗಳನ್ನೇ ಇದೀಗ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ 8 ಹಳ್ಳಿಗಳ ಜೊತೆ ಸೇರಿಸಿ ಹೊಸದಾಗಿ ಶೀಗಿಕೇರಿ ಜಿಲ್ಲಾ ಪಂಚಾಯಿತಿಯನ್ನ ನೂತನವಾಗಿ ರಚನೆ ಮಾಡಿ ಗೆಜೆಟ್​ ಹೊರಡಿಸಲಾಗಿದೆ. ಹೆಚ್ಚು ಜನಸಂಖ್ಯೆ ಹೊಂದಿರೋ ಹಳ್ಳಿಗಳನ್ನ ತಂದು ಇದೀಗ ಕಡಿಮೆ ಜನಸಂಖ್ಯೆ ಇರುವ ಹಳ್ಳಿಗಳ ಜೊತೆ ಸೇರಿ ಹೊಸ ಜಿಲ್ಲಾ ಪಂಚಾಯಿತಿ ಕ್ಷೇತ್ರ ರೂಪಿಸಿರೋದು ಸ್ಥಳೀಯರ ಕಂಗೆಣ್ಣಿಗೆ ಗುರಿಯಾಗಿದೆ. ಈ ಸಂಭಂದ ಕ್ಷೇತ್ರ ವ್ಯಾಪ್ತಿ, ಜನಸಂಖ್ಯೆ, ಸೌಲಭ್ಯ ಎಲ್ಲವನ್ನ ಸೇರಿ ಸಮರ್ಪಕ ಮಾಹಿತಿಯೊಂದಿಗೆ ಈಗ ತಕರಾರು ಅರ್ಜಿ ಸಲ್ಲಿಸಿದ್ದು, ಕೂಡಲೇ ಸಂಭಂದಪಟ್ಟವರು ಎಲ್ಲ ಆಯಾಮಗಳಲ್ಲಿ ಯೋಗ್ಯವಾಗಿರೋ ಮುರನಾಳ ಜಿಲ್ಲಾ ಪಂಚಾಯಿತಿಯನ್ನ ಮುಂದುವರೆಸಬೇಕು ಇಲ್ಲವಾದಲ್ಲಿ ಬೃಹತ್ ಹೋರಾಟವನ್ನ ಹಮ್ಮಿಕೊಳ್ಳಲಾಗುವುದು ಎಂದು ಮುರನಾಳ ಜಿಲ್ಲಾ ಪಂಚಾಯಿತಿ ಸದಸ್ಯ ಮತ್ತು ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಹೂವಪ್ಪ ರಾಠೋಡ ಎಚ್ಚರಿಕೆ ನೀಡಿದ್ದಾರೆ.                           

ಮುರನಾಳ ಜಿಪಂ ಮತಕ್ಷೇತ್ರದ ಉಳಿವಿಗಾಗಿ ನಿಲ್ಲದ ಹೋರಾಟ

ಇನ್ನು ಮೇಲಾಗಿ ಈಗಿರುವ ಬೀಳಗಿ ಮತಕ್ಷೇತ್ರದ 21 ಹಳ್ಳಿಗಳ ಜನ್ರು ಜಿಲ್ಲಾ ಕೇಂದ್ರ ಬಾಗಲಕೋಟೆ ಪಟ್ಟಣ ದಾಟಿಕೊಂಡು ನೂತನ ಶೀಗಿಕೇರಿ ಜಿಲ್ಲಾ ಪಂಚಾಯಿತಿಗೆ ತೆರಳಬೇಕು, ಜೊತೆಗೆ ಮತಕ್ಷೇತ್ರವು ಸಹ ಬೇರೆಯಾಗೋದ್ರಿಂದ ಸಮರ್ಪಕವಾಗಿ ಜನಪ್ರತಿನಿಧಿಗಳಿಂದ ಕೆಲಸ ಪಡೆಯಲಾಗುವುದಿಲ್ಲ, ಮೇಲಾಗಿ ಒಂದೇ ಜಿಲ್ಲಾ ಪಂಚಾಯಿತಿ ಮತಕ್ಷೇತ್ರಗಳ ಮೇಲೆ ಇಬ್ಬರು ಶಾಸಕರು ಪ್ರಯೋಗ ಮಾಡೋದ್ರಿಂದ ಹೊಂದಾಣಿಕೆ ಸಾಧ್ಯವಾಗೋದಿಲ್ಲ. ಮೇಲಾಗಿ ಮೂರನಾಳ ಜಿಲ್ಲಾ ಪಂಚಾಯಿತಿ ಮತಕ್ಷೇತ್ರ ಈಗಲೂ ವಿಸ್ತಾರದ ಜೊತೆಗೆ ಅಗತ್ಯವಾಗಿರೋ ಜನಸಂಖ್ಯೆಯನ್ನೂ ಸಹ ಹೊಂದಿರುವುದರಿಂದ ಮುರನಾಳ ಮತಕ್ಷೇತ್ರ ರದ್ದು ಮಾಡದೇ ಮುಂದುವರೆಸುವಂತಾಗಬೇಕು ಇಲ್ಲವಾದಲ್ಲಿ ಮುರನಾಳ ಮತಕ್ಷೇತ್ರದ ಉಳಿವಿಗಾಗಿ ನಮ್ಮ ಹೋರಾಟ ಅನಿವಾರ್ಯ ಅಂತಾರೆ ಮುರನಾಳ ಮತಕ್ಷೇತ್ರದ ಗ್ರಾಮಸ್ಥ ಮಲ್ಲಿಕಾರ್ಜುನ ಗೌಡರ‌.

ಒಟ್ಟಿನಲ್ಲಿ ನೂತನ ಶೀಗಿಕೇರಿ ಜಿಲ್ಲಾ ಪಂಚಾಯತಿ ರಚಿಸಿ ಮುರನಾಳ ಜಿಲ್ಲಾ ಪಂಚಾಯಿತಿ ಮತಕ್ಷೇತ್ರ ಕೈಬಿಟ್ಟಿದ್ದಕ್ಕೆ ಮುರನಾಳ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರು ಆಕ್ರೋಶಗೊಂಡಿದ್ದು, ಈಗಾಗಲೇ ಸಂಭಂದಪಟ್ಟವರಿಗೆ ತಕರಾರು ಅರ್ಜಿಯನ್ನೂ ಸಹ ಕಳಿಸಿದ್ದಾರೆ. ಇಷ್ಟಕ್ಕೂ ಅಧಿಕಾರಿಗಳು ಮುರನಾಳ ಮತಕ್ಷೇತ್ರವನ್ನ ಮುಂದುವರೆಸುತ್ತಾರಾ ಅಥವಾ ರದ್ದು ಮಾಡಿ ಆ ಮತಕ್ಷೇತ್ರದ ಜನರ ಪ್ರತಿಭಟನಾ ಹೋರಾಟಕ್ಕೆ ಸಾಕ್ಷಿಯಾಗ್ತಾರಾ ಅಂತ ಕಾದು ನೋಡಬೇಕಿದೆ. 

Follow Us:
Download App:
  • android
  • ios