ಮಂಗಳೂರು[ಜ.07]: ಲಾಭದಲ್ಲಿರುವ ವಿಜಯಾ ಬ್ಯಾಂಕ್‌ನ್ನು ನಷ್ಟದಲ್ಲಿರುವ ಗುಜರಾತ್‌ ಮೂಲದ ಬ್ಯಾಂಕ್‌ ಆಫ್‌ ಬರೋಡಾ ಜತೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್‌ನಿಂದ ಜ.9ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ‘ಮಂಗಳೂರು ನಗರ ಬಂದ್‌’ಗೆ ಕರೆ ನೀಡಲಾಗಿದೆ.

ಈ ಹರತಾಳಕ್ಕೆ ಸರ್ವ ಕಾಲೇಜು ವಿದ್ಯಾರ್ಥಿ ಸಂಘ, ಹೋಟೆಲ್‌ ಮಾಲೀಕರ ಸಂಘ, ಬಸ್‌ ಮಾಲೀಕರ ಸಂಘ, ಖಾಸಗಿ ಕಂಪನಿಗಳ ಮಾಲೀಕರು ಬೆಂಬಲ ಸೂಚಿಸಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಮನವಿ ಮಾಡಲಾಗುವುದು. ಬ್ಯಾಂಕ್‌ ವಿಲೀನ ಜಿಲ್ಲೆಯ ಸ್ವಾಭಿಮಾನಕ್ಕೆ ಧಕ್ಕೆ ತರುವ ವಿಚಾರವಾಗಿದ್ದು, ಪಕ್ಷಭೇದ ಮರೆತು ಹೋರಾಡಬೇಕಿದೆ. ಆದ್ದರಿಂದ ಹರತಾಳಕ್ಕೆ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಶಾಸಕರಾದ ಡಾ.ಭರತ್‌ ಶೆಟ್ಟಿ, ವೇದವ್ಯಾಸ್‌ ಕಾಮತ್‌ ಅವರನ್ನೂ ಆಹ್ವಾನಿಸುತ್ತಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಭಾನುವಾರ ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಮಿಥುನ್‌ ರೈ ತಿಳಿಸಿದ್ದಾರೆ.