Asianet Suvarna News Asianet Suvarna News

ವ್ಯಾಪಾರಿ ಮೇಲೆ ಪುರಸಭೆ ಸದಸ್ಯನಿಂದ ಹಲ್ಲೆ: ವಿಡಿಯೋ ವೈರಲ್‌ನಿಂದ ಮಾನ ಹರಾಜು

ವಿರಾಜಪೇಟೆ ಪಟ್ಟಣದ ಗೌರಿಕೆರೆ ವಾರ್ಡಿನಲ್ಲಿ ಕಳೆದ 15 ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಕಾರ್ತಿಕ್ ಎಂಬುವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ದೃಶ್ಯಗಳು ಅಂಗಡಿಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. 

Shopkeeper was assaulted by a member of the municipality
Author
First Published Nov 22, 2022, 9:47 PM IST

ವರದಿ: ರವಿ. ಎಸ್ ಹಳ್ಳಿ, ಏಷ್ಯಾನೆಟ್‌ ಸುವರ್ಣ ನ್ಯೂಸ್
ಕೊಡಗು (ನ.22): ವ್ಯಾಪಾರ ಪರವಾನಗಿ ಕೇಳುವ ನೆಪದಲ್ಲಿ ಬೇಕರಿಯೊಂದಕ್ಕೆ ನುಗಗಿದ ವಿರಾಜಪೇಟೆ ಪುರಸಭೆ ಕಾಂಗ್ರೆಸ್ ಸದಸ್ಯ ಪೃಥ್ವಿ ನಾಯಕ್ ಮತ್ತು ಪುರಸಭೆ ಸಿಬ್ಬಂದಿ ಸಣ್ಣುಕುಮಾರ್ ಎಂಬುವರ ಅಂಗಡಿಯ ವ್ಯಾಪಾರಿ ಮೇಲೆ ಹಲ್ಲೆ ನಡೆಸಿ ದರ್ಪ ಮೆರೆದಿರುವ ಘಟನೆ ನಡೆದಿದೆ. 

ವಿರಾಜಪೇಟೆ ಪಟ್ಟಣದ ಗೌರಿಕೆರೆ ವಾರ್ಡಿನಲ್ಲಿ ಕಳೆದ 15 ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಕಾರ್ತಿಕ್ ಎಂಬುವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ದೃಶ್ಯಗಳು ಅಂಗಡಿಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. 

ಲೈಸೆನ್ಸ್ ತೋರಿಸದ್ದಕ್ಕೆ ಹಲ್ಲೆ: ಗೌರಿಕೆರೆ ವಾರ್ಡಿನ ಕೌನ್ಸಿಲರ್ ಆಗಿರುವ ಪೃಥ್ವಿನಾಯಕ್ ಮತ್ತು ವಿರಾಜಪೇಟೆ (Virajapete) ಪುರಸಭೆಯ ಸಿಬ್ಬಂದಿ ಸಣ್ಣುಕುಮಾರ್ ಎಂಬುವರು ನ.19 ರಂದು ಸಂಜೆ ಐದು ಗಂಟೆಯ ವೇಳೆಗೆ ಕಾರ್ತಿಕ್ ಅವರ ಬೇಕರಿಗೆ ಹೋಗಿದ್ದಾರೆ. ಮಾಲೀಕರಿಗೆ ಅಂಗಡಿ ವ್ಯಾಪಾರದ ಪರವಾನಗಿ (Trade license) ಎಲ್ಲಿ ಎಂದು ಕೇಳಿದ್ದಾರೆ. ಕಾರ್ತಿಕ್ ಅವರು ಲೈಸೆನ್ಸ್ ಇದೆ ಎಂದು ಉತ್ತರಿಸಿದ್ದಾರೆ. ಇದಕ್ಕೆ ಸುಮ್ಮನಾಗದ ಪೃಥ್ವಿ ನಾಯಕ್ ಮತ್ತು ಸಣ್ಣುಕುಮಾರ್ ಮಡಿಕೇರಿಯಿಂದ (Madikeri) ಲೈಸೆನ್ಸ್ ಪಡೆದಿದ್ದೀಯ ಅದು ಎಲ್ಲಿ ಎಂದು ಕೇಳಿದ್ದಾರೆ. ಅದನ್ನು ಪಡೆದಿದ್ದೇನೆ ಎಂದು ವ್ಯಾಪಾರಿ ಕಾರ್ತಿಕ್ ಹೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಪುರಸಭೆಯ ಕಾಂಗ್ರೆಸ್ ಸದಸ್ಯ ಪೃಥ್ವಿನಾಯಕ್ ಮತ್ತು ಸಣ್ಣುಕುಮಾರ್ ಅದನ್ನು ನವೀಕರಣ (Renewal) ಮಾಡಿದ್ದೀಯ, ಅದನ್ನು ತೆಗೆಯೋ ಎಂದು ಕೇಳುತ್ತಾ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಹಾಗೆಲ್ಲಾ ಬೈಯ್ಯಬೇಡಿ ಎಂದು ಹೇಳಿದ್ದಕ್ಕೆ ಈ ಇಬ್ಬರು ಕೂಡ ಕಾರ್ತಿಕ್ ಮೇಲೆ ಹಲ್ಲೆ (onslaught) ಮಾಡಿದ್ದಾರೆ.

 

Mudigere MLA Beaten: ಚುನಾವಣೆಗೆ ನಿಲ್ಲದಂತೆ ಸಂಚು ಮಾಡಿ ನನ್ನ ಮೇಲೆ ಹಲ್ಲೆ: ಶಾಸಕ ಕುಮಾರಸ್ವಾಮಿ

ಪುರಸಭೆ ಮುಂದೆ ಪ್ರತಿಭಟನೆ: ಪುರಸಭೆಯ ಸದಸ್ಯ ಪೃಥ್ವಿನಾಯಕ್ ಮತ್ತು ಸಣ್ಣುಕುಮಾರ್ ಇಬ್ಬರು ದರ್ಪ ಮತ್ತು ಅವಾಚ್ಯ ಶಬ್ಧಗಳಿಂದ ನಿಂದಿಸುವುದೆಲ್ಲಾ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಲ್ಲೆ ನಡೆದಿದ್ದರೂ ಭಯಗೊಂಡ ಕಾರ್ತಿಕ್ ಏನೂ ಮಾತನಾಡದೆ ಸುಮ್ಮನಾಗಿದ್ದಾರೆ. ಆದರೆ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದ್ದಂತೆ ವಿರಾಜಪೇಟೆ ಪಟ್ಟಣದ ಸಾಕಷ್ಟು ಜನರು ಕಾರ್ತಿಕ್ ಬೆಂಬಲಕ್ಕೆ (Support) ನಿಂತು, ವಿರಾಜಪೇಟೆ ನಗರ ಪೊಲೀಸ್ ಠಾಣೆಗೆ ದೂರು (Complaint) ಕೊಡಿಸಿದ್ದಾರೆ. ಮಂಗಳವಾರ ಕಾರ್ತಿಕ್ ನೊಂದಿಗೆ ವಿರಾಜಪೇಟೆ ಪುರಸಭೆ ಮುಂದೆ ಜಮಾಯಿಸಿದ ಜನರು ಮುಖ್ಯಾಧಿಕಾರಿ ಚಂದ್ರಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಪುರಸಭೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಹಲ್ಲೆ ಮಾಡಿದ ಸಿಬ್ಬಂದಿ ಸಣ್ಣುಕುಮಾರ್ ಅವರನ್ನು ಕೆಲಸದಿಂದ ವಜಾ ಮಾಡಬೇಕು. ಹಾಗೆಯೇ ಪುರಸಭೆ ಸದಸ್ಯನ ವಿರುದ್ಧ ಕಾನೂನು ರೀತಿ ಕ್ರಮ (Action) ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪುರಸಭೆ ಸಿಬ್ಬಂದಿಗೆ ನೋಟಿಸ್‌: ಪುರಸಭೆ ಕಾಂಗ್ರೆಸ್ ಸದಸ್ಯ ಪೃಥ್ವಿನಾಯಕ್ ಮತ್ತು ಪುರಸಭೆ ಸಿಬ್ಬಂದಿಯ ನಡೆಗೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಪುರಸಭೆ ಸದಸ್ಯನ ವಿರುದ್ಧ ಸಾರ್ವಜನಿಕರು ಹಿಡಿ ಶಾಪ ಹಾಕಿದ್ದಾರೆ. ಹಲ್ಲೆ ಮಾಡಿರುವ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ (Notice) ಜಾರಿ ಮಾಡಲಾಗಿದೆ. ಬಳಿಕ ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕೆಲವರು ವ್ಯಾಪಾರ ಪರವಾನಗಿಯನ್ನು (Trade License) ನವೀಕರಣ ಮಾಡಿಕೊಂಡಿಲ್ಲ. ಅದನ್ನು ಮಾಡಿಕೊಳ್ಳುವಂತೆ ಸೂಚಿಸಿ ಮನವರಿಕೆ ಮಾಡಲಾಗುತ್ತಿದೆ. ಆದರೆ ಹಲ್ಲೆ ಮಾಡಿರುವುದು ಖಂಡನೀಯ (Reprehensible) ಮತ್ತು ತಪ್ಪು ಎಂದು ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್ ತಿಳಿಸಿದ್ದಾರೆ.

ನಾವು ಕಳೆದ 15 ವರ್ಷಗಳಿಂದ ಬೇಕರಿ ನಡೆಸುತ್ತಿದ್ದೇವೆ. ಅಂದಿನಿಂದಲೂ ವ್ಯಾಪಾರ ಪರವಾನಗಿ ಹೊಂದಿದ್ದು, ನವೀಕರಣ ಮಾಡಿಕೊಂಡು ಬಂದಿದ್ದೆವು. ಆದರೆ ಇತ್ತೀಚೆಗೆ ಆನ್‍ಲೈನ್ ನವೀಕರಣ ಮಾಡಬೇಕಿರುವ ಕಾರಣ ಅದು ಗೊತ್ತಾಗದೆ, ಪುರಸಭೆಯ ಸಿಬ್ಬಂದಿಯೊಬ್ಬರಿಗೆ ನವೀಕರಣಕ್ಕೆ ದಾಖಲೆಗಳನ್ನು ಕೊಟ್ಟಿದ್ದೆ. ಅಷ್ಟರಲ್ಲಿ ಬಂದು ನನ್ನ ಮೇಲೆ ವಿನಾಕಾರಣ ಹಲ್ಲೆ ಮಾಡಿದ್ದಾರೆ.
- ಕಾರ್ತಿಕ್, ಹಲ್ಲೆಗೊಳಗಾಗಿರುವ ವ್ಯಾಪಾರಿ 

Follow Us:
Download App:
  • android
  • ios