ಶಿವಮೊಗ್ಗ(ಜು.11): ಜಿಲ್ಲೆಯಲ್ಲಿ ಶುಕ್ರವಾರ 6 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಒಂದೆಡೆ ದೃಢಪಟ್ಟಿದ್ದರೆ, ಇನ್ನೊಂದೆಡೆ ಒಂದೇ ದಿನ 28 ಮಂದಿ ಸೋಂಕಿನಿಂದ ಗುಣಮುಖ ಹೊಂದುವುದರ ಮೂಲಕ ಶುಕ್ರವಾರ ಶುಭ ಸುದ್ದಿ ಲಭಿಸಿದೆ. ಪತ್ತೆಯಾದ 6 ಮಂದಿ ಸೋಂಕಿತರಿಗೆ ಯಾವುದೇ ಟ್ರಾವೆಲ್‌ ಹಿಸ್ಟರಿ ಇಲ್ಲ. ಒಬ್ಬರಿಗೆ ಶೀತ, ಜ್ವರ, ಕೆಮ್ಮಿನ ಲಕ್ಷಣ ಕಂಡುಬಂದಿದ್ದರೆ, ಮತ್ತೊಬ್ಬರಿಗೆ ತೀವ್ರ ಉಸಿರಾಟದ ತೊಂದರೆ ಉಂಟಾಗಿದೆ. ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿದೆ.

26 ವರ್ಷದ ಯುವತಿ (ಪಿ-31737), ಐದು ವರ್ಷದ ಬಾಲಕ ಪಿ-(31753), 38 ವರ್ಷದ ಯುವಕ (ಪಿ-31912), 32 ವರ್ಷದ ಯುವತಿ (ಪಿ-31921), 21 ವರ್ಷದ ಯುವಕ (ಪಿ-31930), 46 ವರ್ಷದ ಯುವತಿ (ಪಿ-31943)ಗೆ ಸೋಂಕು ತಗುಲಿದೆ. ಸೋಂಕಿತರಲ್ಲಿ ಆರ್‌ ಎಂಎಲ್‌ ನಗರದ ಕಿಣಿ ಲೇಔಟ್‌ ನಿವಾಸಿ ಹಾಗೂ ಶಿವಮೊಗ್ಗದ ಖಾಸಗಿ ಆಸ್ಪತ್ರೆಯ ಉದ್ಯೋಗಿಯಾಗಿರುವ 31 ವರ್ಷದ ವ್ಯಕ್ತಿಗೆ ಪಾಸಿಟಿವ್‌ ಬಂದಿದೆ. ಈ ಹಿನ್ನೆಲೆಯಲ್ಲಿ ಆತ ವಾಸಿಸುತ್ತಿರುವ ರಸ್ತೆ ಸೀಲ್‌ ಡೌನ್‌ ಮಾಡಲಾಗಿದೆ.

ಕೆ.ಸಿ.ಜನರಲ್‌ ಆಸ್ಪತ್ರೆಯ 15 ಸಿಬ್ಬಂದಿಗೆ ಕೊರೋನಾ ಸೋಂಕು..!

ತಾಲೂಕಿನ ತಾವರೆ ಚಟ್ನಹಳ್ಳಿಯ 37 ವರ್ಷದ ವ್ಯಕ್ತಿಗೂ ಪಾಸಿಟಿವ್‌ ಬಂದಿದೆ. ಇವರು ಬೆಂಗಳೂರಿನಿಂದ ಕೆಲದಿನಗಳ ಹಿಂದೆ ಬಂದಿದ್ದರು ಎನ್ನಲಾಗಿದೆ. ಕಳೆದ ಏಳೆಂಟು ದಿನಗಳಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾ ಸಾಗಿತ್ತು. ಇದರಿಂದ ಜಿಲ್ಲೆಯ ಜನತೆ ಆತಂಕಕ್ಕೀಡಾಗಿದ್ದರು. ಸಮಾಧಾನ ಪಡುವ ವಿಷಯ ಏನೆಂದರೆ ಶುಕ್ರವಾರ ಜಿಲ್ಲೆಯ ಆರು ಮಂದಿಗೆ ಮಾತ್ರ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕೊರೋನಾಗೆ ಮತ್ತೊಂದು ಬಲಿ?

ಶಿವಮೊಗ್ಗ ಗಾಂಧೀಬಜಾರ್‌ ಕಸ್ತೂರ ಬಾ ರಸ್ತೆಯ ನಿವಾಸಿ 62 ವಯಸ್ಸಿನ ವೃದ್ಧರು ಕೊರೋನದಿಂದ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದ್ದರು ಇದನ್ನು ಜಿಲ್ಲಾಡಳಿತವಾಗಲಿ ಆರೋಗ್ಯ ಇಲಾಖೆಯಾಗಲಿ ಸ್ಪಷ್ಟಪಡಿಸಿಲ್ಲ. ದೃಢಪಡಿಸಿಯೂ ಇಲ್ಲ. ಕಳೆದೆರೆಡು ದಿನಗಳ ಹಿಂದೆಯಷ್ಟೇ ಇವರಿಗೆ ಸೋಂಕು ತಗುಲಿತ್ತು. ಶೀತ ಹಾಗೂ ಜ್ವರದಿಂದ ಬಳಲುತ್ತಿದ್ದ ಇವರನ್ನ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೊರೋನ ಪಾಸಿಟವ್‌ ಎಂದು ತಿಳಿದು ಬಂದ ಕಾರಣ ನಿಗದಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಈವರೆಗೂ 8 ಮಂದಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಆದರೆ ಹೆಲ್ತ್‌ ಬುಲೆಟಿನ್‌ನಲ್ಲಿ ಕೇವಲ ನಾಲ್ಕು ಮಂದಿ ಪಟ್ಟಿರುವುದಾಗಿ ಪ್ರಕಟಗೊಂಡಿದೆ.