ನುಡಿದಂತೆ ನಡೆದ ಏಕೈಕ ಸರ್ಕಾರ ನಮ್ಮದು. ಕಳೆದ 40 ವರ್ಷಗಳ ನಿರಂತರ ಮೀಸಲು ಹೋರಾಟಕ್ಕೆ ಮುಕ್ತಿ ಕೊಡುವಲ್ಲಿ ಬಿಜೆಪಿ ಸರ್ಕಾರ ಯಶಸ್ವಿಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಬಿಪ್ರಾಯಪಟ್ಟರು. 

ವರದಿ: ರವಿಕುಮಾರ್ ವಿ. ಏಷ್ಯಾನೆಟ್ ಸುವರ್ಣನ್ಯೂಸ್

ಚಿಕ್ಕಬಳ್ಳಾಪುರ (ಅ.9): ಇತಿಹಾಸದಲ್ಲಿ ನುಡಿದಂತೆ ನಡೆದ ಏಕೈಕ ಸರ್ಕಾರ ಎಂದರೆ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರವಾಗಿದ್ದು, ಕಳೆದ 40 ವರ್ಷಗಳ ನಿರಂತರ ಮೀಸಲು ಹೋರಾಟಕ್ಕೆ ಮುಕ್ತಿ ಕೊಡುವಲ್ಲಿ ಬಿಜೆಪಿ ಸರ್ಕಾರ ಯಶಸ್ವಿಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಬಿಪ್ರಾಯಪಟ್ಟರು. ತಾಲೂಕಿನ ಮುದ್ದೇನಹಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಕಳೆದ 40 ವರ್ಷಗಳಿಂದ ಪರಿಶಿಷ್ಟಪಂಗಡದ ಸಮುದಾಯ ನಿರಂತರ ಹೋರಾಟ ಮಾಡುತ್ತಲೇ ಇತ್ತು. ಆದರೆ ಈ ಹಿಂದೆ ಬಂದ ಯಾವುದೇ ಸರ್ಕಾರಗಳು ಇತ್ತ ಗಮನ ಹರಿಸಿದ ಉದಾಹರಣೆ ಇಲ್ಲ ಎಂದು ಸಚಿವ ಸುಧಾಕರ್ ಹೇಳಿದರು. ಕಳೆದ 40 ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದ್ದರೂ, ಕಾಂಗ್ರೆಸ್ ಸರ್ಕಾರ ಹಲವು ಬಾರಿ ಬಂದು ಹೋದರೂ ಮೀಸಲು ಸೌಲಭ್ಯ ನೀಡಲು ಮಾತ್ರ ಅವರಿಂದ ಸಾಧ್ಯವಾಗಿಲ್ಲ. ಆದರೆ ಬಿಜೆಪಿ ಸರ್ಕಾರ ಬಂದರೆ ಮೀಸಲಾತಿ ತೆಗೆಯುತ್ತಾರೆ, ಸಂವಿಧಾನ ಬದಲಿಸುತ್ತಾರೆ ಎಂದು ಆರೋಪಿಸುತ್ತಿದ್ದರು. ಇಂತಹ ಸುಳ್ಳು ಆರೋಪಗಳಿಗೆ ಸರ್ಕಾರ ಈಗ ತಕ್ಕ ಉತ್ತರ ನೀಡಿದೆ ಎಂದರು.

ನ್ಯಾ. ನಾಗಮೋಹನ್ ದಾಸ್ ಅವರ ವರದಿಯನ್ನು ಸಂಪೂರ್ಣವಾಗಿ ಸಂಪುಟದಲ್ಲಿ ಒಪ್ಪಿಕೊಳ್ಳಲಾಗಿದೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ಹೆಚ್ಚಿಸಲು ಒಪ್ಪಿಗೆ ಸೂಚಿಸಲಾಗಿದೆ. ಎಸ್ ಟಿ ಸಮುದಾಯಕ್ಕೆ 50ಕ್ಕೂ ಹೆಚ್ಚು ಜಾತಿಗಳು ಸೇರಿದ್ದರೆ, ಎಸ್ ಸಿ ಸಮುದಾಯಕ್ಕೂ ಹೆಚ್ಚಿನ ಜಾತಿಗಳು ಸೇರಿವೆ. ಅಲ್ಲದೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಇರಬೇಕು ಎಂಬುದು ನಮ್ಮ ಸರ್ಕಾರದ ಉದ್ಧೇಶವಾಗಿದ್ದು, ಇದನ್ನು ಇಂದು ನಿರೂಪಿಸಲಾಗಿದೆ ಎಂದು ಹೇಳಿದರು.

ಸಮಿತಿ ರಚಿಸಿದ್ದೇ ಸಮ್ಮಿಶ್ರ ಸರ್ಕಾರ: ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ವೇಳೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಮಿತಿ ರಚಿಸಲಾಗಿತ್ತು. ಆದರೆ ಆರೇ ತಿಂಗಳಲ್ಲಿ ಸರ್ಕಾರ ಹೋಯಿತು, ನಂತರ ನಮ್ಮ ಸರ್ಕಾರ ಬಂದು ಯಡಿಯೂರಪ್ಪನವರು ಮುಖ್ಯಮಂತ್ರಿಯಾದರು. ಈ ಸಂದರ್ಭದಲ್ಲಿ ಸಮಿತಿ ಹೆಚ್ಚಿನ ಕಾಲವಕಾಶ ನೀಡುವಂತೆ ಕೋರಿತು. ಇದರಿಂದಾಗಿ ನಮ್ಮ ಸರ್ಕಾರ ಒಂದು ವರ್ಷ ಅವಧಿ ವಿಸ್ತರಿಸಲಾಯಿತು, ನಂತರ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಬಂದ ನಂತರವೂ ಸಮಿತಿಯನ್ನು ಸಂಪರ್ಕಿಸಿ ಚರ್ಚಿಸಲಾಗಿದೆ ಎಂದು ಹೇಳಿದರು.

 ಬಿಜೆಪಿ ಮಾತ್ರವೇ ಮಾಡಿದ ಸಾಧನೆಗಳು: ಎಸ್ ಸಿ ಮತ್ತು ಎಸ್ ಟಿ ಮಮುದಾಯಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಕಂಕಣ ಬದ್ಧವಾಗಿದೆ ಎಂಬುದನ್ನು ತೋರಿಸಿದ್ದೇವೆ. ಬಿಜೆಪಿ ವಿರುದ್ಧ ಜನರಿಗೆ ತಪ್ಪು ತಿಳವಳಿಕೆ ಮೂಡಿಸುವ ಪ್ರಯತ್ನ ನಿರಂತರವಾಗಿ ನಡೆದಿದೆ. ಎಸ್ ಟಿ ಸಮುದಾಯದ ವಾಲ್ಮೀಕಿ ಜಯಂತಿಯನ್ನು ಆರಂಭಿಸಿದ್ದು ಬಿಜೆಪಿ, ವಾಲ್ಮೀಕಿ ಪ್ರಶಸ್ತಿ ಪ್ರಕಟಿಸಿದ್ದು ಬಿಜೆಪಿ, ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಯೋಚನೆ ಮಾಡಿದ್ದು ಬಿಜೆಪಿ, ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು ಬಿಜೆಪಿ, ಅಲ್ಲದೆ ಪರಿಶಿಷ್ಟ ವರ್ಗಗಳಿಗಾಗಿಯೇ ಪ್ರತ್ಯೇಕ ಇಲಾಖೆ ಮಾಡಲಾಗಿದೆ. ಎಲ್ಲವನ್ನೂ ಮಾಡಿರುವುದು ಬಿಜೆಪಿ ಸರ್ಕಾರವಾದರೆ ಸುಳ್ಳು ಆರೋಪ ಮಾಡುವುದನ್ನೇ ವಿರೋಧ ಪಕ್ಷಗಳು ಕಾಯಕ ಮಾಡಿಕೊಂಡಿವೆ ಎಂದು ಕಿಡಿ ಕಾರಿದರು.

 ಜಿಲ್ಲೆಯಲ್ಲಿ ಬೃಹತ್ ಸಮಾವೇಶ: 40 ವರ್ಷಗಳ ನಿಮ್ಮ ಬೇಡಿಕೆಯಂತೆ ಶೇ.3ರಿಂದ ಶೇ.7ಕ್ಕೆ ಮೀಸಲಾತಿ ಹೆಚ್ಚಿಸಲಾಗಿದೆ. ಇದು ಬಿಜೆಪಿ ಸರ್ಕಾರದ ಬದ್ಧತೆ. ಹಾಗಾಗಿಯೇ ಸ್ವಾತಂತ್ರೃ ಉದ್ಯಾನವನದಲ್ಲಿ ಕಳೆದ 241 ದಿನಗಳಿಂದ ವಾಲ್ಮೀಕಿ ಜಗದ್ಗುರುಗಳು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು, ಸರ್ಕಾರದ ಆದೇಶ ಪತ್ರದೊಂದಿಗೆ ಸಂಪುಟ ಸಚಿವರು ಹೋಗಿ ಆದೇಶಪತ್ರ ನೀಡಿ, ಉಪವಾಸ ಕೈ ಬಿಡುವಂತೆ ಕೋರಲಾಯಿತು. ಇದರಿಂದ ಶ್ರೀಗಳು ಉಪವಾಸ ಕೈ ಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಸ್ವಾಮೀಜಿಗಳನ್ನು ಜಿಲ್ಲೆಗೆ ಕರೆಯಿಸಿ ಪರಿಶಿಷ್ಟ ವರ್ಗಗಳ ಬೃಹತ್ ಸಮಾವೇಶ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

 ಎಸ್ ಸಿಗೂ ಮೀಸಲು ಹೆಚ್ಚಳ: ಪರಿಶಿಷ್ಟ ಜಾತಿಗಾಗಿ ಇದ್ದ ಶೇ.15 ಮೀಸಲಾತಿಯನ್ನು ಶೇ.17ಕ್ಕೆ ಹೆಚ್ಚಿಸಲಾಗಿದೆ. ಇವರಲ್ಲಿ ಸ್ಪೃಶ್ಯರು ಮತ್ತು ಅಸ್ಪೃಶ್ಯರೂ ಇದ್ದಾರೆ. ಜೊತೆಗೆ ಬೋವಿ, ಹೈದರಾಬಾದ್ ಕರ್ನಾಟಕ ಮೂಲಕ ಲಂಬಾಣಿ, ಕೊಡಚ, ಕೊರಮ ಸೇರಿದಂತೆ ಹಲವು ಸಮುದಾಯಗಳು ಸೇರಿವೆ. ಇವರೆಲ್ಲರ ಅನುಕೂಲಕ್ಕಾಗಿ ಮೀಸಲಾತಿ ಹೆಚ್ಚಳ ಮಾಡಿದ್ದು, ಇದು ಉಭಯ ಸಮುದಾಯಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ಶಿಕ್ಷಣ ವಲಯವಾಗಿ ಮುದ್ದೇನಹಳ್ಳಿ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮುದ್ದೇನಹಳ್ಳಿ ಗ್ರಾಪಂ ಅನ್ನು ಶಿಕ್ಷಣ ವಲಯವಾಗಿ ರೂಪಿಸಲು ಶ್ರಮಿಸಲಾಗುತ್ತಿದೆ. ಸತ್ಯಸಾಯಿ ಸಂಸ್ಥೆಯಲ್ಲಿ ನೂತನ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಈಗಾಗಲೇ ಪರವಾನಿಗೆ ನೀಡಲಾಗಿದೆ. ಒಂದೇ ತಾಲೂಕಿನಲ್ಲಿ ಎರಡು ವೈದ್ಯಕೀಯ ಕಾಲೇಜು ನಿರ್ಮಾಣವಾಗುತ್ತಿರುವುದು ಕ್ಷೇತ್ರದ ಜನರಿಗೆ ಹೆಮ್ಮೆ ತರಲಿದೆ ಎಂದು ಸಚಿವರು ಹೇಳಿದರು.

SC-ST Reservation: ಮೀಸಲಾತಿ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ

ಜನರಿಗೆ ಆರೋಗ್ಯ ಮುಖ್ಯ, ಹಾಗಾಗಿಯೇ ನಮ್ಮ ಕ್ಷೇತ್ರದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆ ಈಗಾಗಲೇ ಚಾಲನೆಯಲ್ಲಿದೆ. ಮುಂದಿನ ಜನವರಿಯಲ್ಲಿ ವೈದ್ಯಕೀಯ ಕಾಲೇಜು ಉದ್ಘಾಟನೆಯಾಗಲಿದ್ದು, ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರಮೋದಿ ಅವರನ್ನು ಆಹ್ವಾನಿಸಲಾಗುವುದು ಎಂದು ಸಚಿವರು ಹೇಳಿದರು.

ಯಾವ ರಾಜ್ಯದಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಮೀಸಲಾತಿ ಇದೆ? ಹಿಂದುಳಿದ ವರ್ಗದ ಕತೆಏನು?

ಬಲಹೀನ ವರ್ಗಗಳಿರುವ ಗ್ರಾಪಂ ಮುದ್ದೇನಹಳ್ಳಿ, ಇಲ್ಲಿ ಬಡತನವೂ ಹೆಚ್ಚಿದೆ. ಹಾಗಾಗಿಯೇ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ರಾಜ್ಯದಲ್ಲಿಯೇ ಮಾದರಿ ಗ್ರಾಪಂ ಆಗಿ ರೂಪಿಸುವ ಗುರಿ ಹೊಂದಲಾಗಿದೆ. ಮುದ್ದೇನಹಳ್ಳಿ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಜನಿಸಿದ ಗ್ರಾಮ, ರಾಜ್ಯದಲ್ಲಿ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ ಇಂಜಿನಿಯರ್ ಸರ್ ಎಂವಿ. ಬೆಂಗಳೂರಿನಲ್ಲಿರುವ 1.3 ಕೋಟಿ ಜನಸಂಖ್ಯೆಗೆ ಕುಡಿಯುವ ನೀರು ನೀಡಲು ಇವರು ನಿರ್ಮಿಸಿದ ಕನ್ನಂಬಾಡಿ ಕಟ್ಟೆ ಕಾರಣವಾಗಿದೆ ಎಂದರು.