ಕೊಪ್ಪಳ(ಡಿ.09): ಜಿಲ್ಲಾದ್ಯಂತ ಗ್ರಾಮ ಪಂಚಾಯಿತಿ ಚುನಾವಣೆ ಅಬ್ಬರ ಜೋರಾಗಿಯೇ ಸಾಗಿದೆ. ಪ್ರತಿ ಹಳ್ಳಿಯಲ್ಲಿಯೂ ಅವಿರೋಧ ಆಯ್ಕೆ ಕಸರತ್ತು ನಡೆದಿರುವುದರಿಂದ ನಾಮಪತ್ರ ಸಲ್ಲಿಕೆ ಇನ್ನು ತುರುಸುಗೊಂಡಿಲ್ಲ. ಎರಡು ದಿನವಾದರೂ ಕೇವಲ 58 ನಾಮಪತ್ರಗಳು ಸಲ್ಲಿಕೆಯಾಗಿವೆ. ಮೊದಲ ಹಂತದಲ್ಲಿ 73 ಗ್ರಾಮ ಪಂಚಾಯಿತಿಗಳ 1321 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದರೂ ನಾಮಪತ್ರ ಸಲ್ಲಿಕೆ ಮಾತ್ರ ಭಾರಿ ನಿಧಾನಗತಿಯಲ್ಲಿಯೇ ಇದೆ.

ಜಿಲ್ಲಾದ್ಯಂತ ನಡೆಯುತ್ತಿರುವ ಮೊದಲ ಹಂತದ ಚುನಾವಣೆ 1321 ಸ್ಥಾನಗಳ ಪೈಕಿ ಅರ್ಧದಷ್ಟಾದರೂ ನಾಮಪತ್ರ ಸಲ್ಲಿಕೆಯಾಗಬೇಕಾಗಿತ್ತು. ಆದರೆ, ಗ್ರಾಮಗಳಲ್ಲಿ ಅವಿರೋಧ ಆಯ್ಕೆಯಾಗಿ ದೊಡ್ಡ ಪ್ರಮಾಣದಲ್ಲಿಯೇ ಕಸರತ್ತು ನಡೆದಿದೆ. ಹೀಗಾಗಿ ನಾಮಪತ್ರ ಸಲ್ಲಿಕೆ ಇನ್ನೂ ನಿಧಾನಗತಿಯಲ್ಲಿಯೇ ಇದೆ.

ಕೊಪ್ಪಳ ತಾಲೂಕಿನ 38 ಗ್ರಾಮ ಪಂಚಾಯಿತಿಗಳ 736 ಸ್ಥಾನಗಳ ಪೈಕಿ ಕೇವಲ 23 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿವೆ. ಇನ್ನೂ 702 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯೇ ಆಗಿಲ್ಲ. ಯಲಬುರ್ಗಾ ತಾಲೂಕಿನ 20 ಗ್ರಾಮ ಪಂಚಾಯಿತಿಗಳ 345 ಸ್ಥಾನಗಳ ಪೈಕಿ ಇದುವರೆಗೂ 35 ನಾಮತ್ರಗಳು ಸಲ್ಲಿಕೆಯಾಗಿದ್ದರೆ ಇದುವರೆಗೂ 328 ಸ್ಥಾನಗಳಿಗೆ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿಲ್ಲ. ಕುಕನೂರು ತಾಲೂಕಿನ 15 ಗ್ರಾಮ ಪಂಚಾಯಿತಿಗಳ 240 ಸ್ಥಾನಗಳ ಪೈಕಿ ಇದುವರೆಗೂ ಕೇವಲ 3 ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿದ್ದು, ಇನ್ನು 236 ಸ್ಥಾನಗಳಿಗೆ ನಾಮಪತ್ರವೇ ಸಲ್ಲಿಕೆಯಾಗಿಲ್ಲ. ಹೀಗೆ ಬಹುತೇಕ ಗ್ರಾಮ ಪಂಚಾಯಿತಿಗಳಿಲ್ಲಿ ಇನ್ನು ನಾಮಪತ್ರ ಸಲ್ಲಿಕೆಯೇ ಆರಂಭವಾಗಿಲ್ಲ. ಇದುವರೆಗೂ ಸಲ್ಲಿಕೆಯಾಗಿರುವ ನಾಮಪತ್ರಗಳ ಪೈಕಿ 38 ಪುರುಷರು ಇದ್ದರೆ 20 ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ.

'ಸಿದ್ದರಾಮಯ್ಯ ಹೋರಾಟದ ನೇತೃತ್ವ ವಹಿಸಿಕೊಳ್ಳಲಿ, RSS, ಈಶ್ವರಪ್ಪ ಯಾಕೆ ಬೇಕು?'

ಅವಿರೋಧದ್ದೆ ಸದ್ದು:

ಈಗ ಹಳ್ಳಿ ಹಳ್ಳಿಯಲ್ಲಿಯೂ ಅವಿರೋಧದ್ದೆ ಸದ್ದು ಬಲವಾಗಿ ಕೇಳಿ ಬರುತ್ತಿದೆ. ಹಳ್ಳಿಯಲ್ಲಿನ ಹಿರಿಯರು ಯುವಕರನ್ನು ಮುಂದೆ ಕೂಡಿಸಿಕೊಂಡು ಅವಿರೋಧ ಆಯ್ಕೆ ಮಾಡುವ ಕುರಿತು ಹತ್ತಾರು ಸುತ್ತಿನ ಮಾತುಕತೆ ಮಾಡುತ್ತಿದ್ದಾರೆ.
ಚುನಾವಣೆಯಲ್ಲಿ ಅಬ್ಬರ ಮಾಡಿ, ಹಣ ವ್ಯಯ ಮಾಡುವ ಬದಲು ಸ್ವಯಂಪ್ರೇರಣೆಯಿಂದ ನಮ್ಮೂರಿನಲ್ಲಿಯೇ ಸೂಕ್ತವಾದವರನ್ನು ಆಯ್ಕೆ ಮಾಡಿ ಗ್ರಾಮದಲ್ಲಿ ನೆಮ್ಮದಿಯನ್ನು ಉಳಿಸಿಕೊಳ್ಳೋಣ ಎಂದು ಬುದ್ಧಿ ಹೇಳುತ್ತಿದ್ದಾರೆ.

ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ನಾಮಪತ್ರ ಸಲ್ಲಿಕೆಯಾಗುತ್ತಲೇ ಇಲ್ಲ. ಎಲ್ಲವೂ ಅವಿರೋಧ ಆಯ್ಕೆಯ ಕುರಿತು ನಾನಾ ರೀತಿಯಲ್ಲಿ ಮಾತುಕತೆ ಮಾಡುತ್ತಿದ್ದಾರೆ. ಈಗ ನಡೆದಿರುವ ಲೆಕ್ಕಾಚಾರ ಯಶಸ್ವಿಯಾದರೆ ಈ ಬಾರಿ ಚುನಾವಣೆಗಿಂತಲೂ ಅವಿರೋಧವೇ ಅಧಿಕ ಪ್ರಮಾಣದಲ್ಲಿ ಆಯ್ಕೆಯಾಗುವ ಸಾಧ್ಯತೆ ಇದೆ. ಆದರೆ, ಇದು ಎಷ್ಟರ ಮಟ್ಟಿಗೆ ಅಂತಿಮವಾಗಿ ವರ್ಕೌಟ್‌ ಆಗುತ್ತದೆ ಎಂದು ಈಗಲೇ ಲೆಕ್ಕ ಹಾಕುವುದು ಕಷ್ಟವಾಗುತ್ತದೆ. ನಾಮಪತ್ರ ಸಲ್ಲಿಕೆಯ ಅಂತಿಮ ದಿನಕ್ಕೆ ಒಂದು ಅಂದಾಜು ಲೆಕ್ಕಾಚಾರ ಸಿಕ್ಕರೂ ನಾಮಪತ್ರ ಸಲ್ಲಿಕೆಯಾದ ಬಳಿಕ ವಾಪಸ್‌ ಪಡೆಯುವ ಸಮಯ ಮುಗಿದ ಮೇಲೆಯೇ ನಿಜವಾದ ಚಿತ್ರಣ ಹೊರಗೆ ಬರಲಿದೆ. ಸದ್ಯಕ್ಕಂತೂ ಅವಿರೋಧ ಆಯ್ಕೆಯ ಮಾತು ಮಾತ್ರ ಹಳ್ಳಿಯಲ್ಲಿ ಜೋರಾಗಿ ಇರುವುದು ಮಾತ್ರ ಪಕ್ಕಾ. ಹಿಂದಿನ ಚುನಾವಣೆಗಳಿಗೆ ಹೋಲಿಕೆ ಮಾಡಿದರೆ ಇದೇ ಮೊದಲ ಬಾರಿ ಅವಿರೋಧ ಆಯ್ಕೆ ಕಸರತ್ತು ದೊಡ್ಡ ಪ್ರಮಾಣದಲ್ಲಿ ನಡೆದಿದೆ.