ಶಿವಮೊಗ್ಗ(ಜು.21): ಜಿಲ್ಲೆಯ ಮಟ್ಟಿಗೆ ಭೀಮನ ಅಮವಾಸ್ಯೆ ಶುಭ ಸುದ್ದಿ ತಂದಂತೆ ಕಾಣುತ್ತಿದೆ. ಕಳೆದ 10 ದಿನಗಳಿಂದ ನಾಗಾಲೋಟದಲ್ಲಿ ಓಡುತ್ತಿದ್ದ ಕೊರೋನಾ ಸೋಂಕಿತರ ಸಂಖ್ಯೆ ಸೋಮವಾರ ಏಕಾಏಕಿ 12ಕ್ಕೆ ಇಳಿದಿದೆ. ಒಟ್ಟಾರೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 869 ಆಗಿದು, ಸೋಮವಾರ ಓರ್ವ ಮಹಿಳೆ ಕೊರೋನಾದಿಂದ ಮೃತಪಟ್ಟಿದ್ದಾರೆ.

ಸೋಮವಾರ 61 ಮಂದಿ ಗುಣಮುಖರಾಗುವುದರೊಂದಿಗೆ ಇಲ್ಲಿಯವರೆಗೆ ಒಟ್ಟು 489 ಮಂದಿ ಕೊರೋನಾ ಸೋಂಕಿನಿಂದ ಮುಕ್ತಿ ಪಡೆದಿದ್ದಾರೆ. ಗಮನಿಸಬೇಕಾದ ಸಂಗತಿ ಎಂದರೆ ಸೋಮವಾರ ಜಿಲ್ಲೆಯಲ್ಲಿ ಕೇವಲ 12 ಮಂದಿಗೆ ಸೋಂಕು ತಗುಲಿದ್ದರೆ, 61 ಮಂದಿ ಗುಣಮುಖರಾಗಿದ್ದಾರೆ. ಶಿವಮೊಗ್ಗದಲ್ಲಿ 4, ಭದ್ರಾವತಿ- 6, ಸಾಗರ-1, ಶಿಕಾರಿಪುರ- 1 ಪಾಸಿಟಿವ್ ಪ್ರಕರಣ ಕಂಡುಬಂದಿದೆ. ಒಟ್ಟು 365 ಸಕ್ರಿಯ ಪ್ರಕರಣಗಳಿದ್ದು, ನಿಗದಿತ ಕೋವಿಡ್-19 ಅಸ್ಪತ್ರೆಯಲ್ಲಿ 172 ಮಂದಿ ಚಿಕಿತ್ಸೆ ಪಡೆಯುತ್ತಿದ್ದರೆ, 166 ಮಂದಿ ಕೋವಿಡ್ ಕೇರ್ ಸೆಂಟರ್ ನಲ್ಲಿ, 17 ಮಂದಿ ಖಾಸಗಿ ಅಸ್ಪತೆಯಲ್ಲಿ ಹಾಗೂ 10 ಮಂದಿ ಮನೆಯಲ್ಲಿಯೇ ಐಸೊಲೇಶನ್‌ಗೆ ಒಳಗಾಗಿದ್ದಾರೆ. 

ಗುಡ್ ‌ನ್ಯೂಸ್: ಶಿವಮೊಗ್ಗದಲ್ಲಿ ಕೊರೋನಾದಿಂದ 50% ಗುಣಮುಖ

ಮತ್ತೊಂದು ಬಲಿ: ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ 48 ವರ್ಷ ವಯೋಮಾನದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇವರು ಶಿವಮೊಗ್ಗ ನಗರದ ಮಂಜುನಾಥ ಬಡಾವಣೆಯ ನಿವಾಸಿ ಎಂದು ತಿಳಿದುಬಂದಿದೆ. 

ಸೀಲ್ ಡೌನ್:  ಗಾಂಧಿ ಬಜಾರ್ ಸಿನೆಮಾ ಮಂದಿರ ರಸ್ತೆ, ಹೊಸಮನೆ 5ನೇ ತಿರುವು, ಬಿ.ಬಿ. ರಸ್ತೆ ಭವಾನಿ ಶಂಕರ ದೇವಸ್ಥಾನದ ಎದುರಿನ ರಸ್ತೆ, ಮೇಲಿನ ತುಂಗಾನಗರದ 2ನೇ ತಿರುವಿನಲ್ಲಿರುವ ಮರಿಯಮ್ಮ ದೇವಾಲಯದ ಹಿಂಭಾಗದ ರಸ್ತೆಯ ನಿವಾಸಿಯೋರ್ವರಿಗೂ ಕೊರೋನಾ ಸೋಂಕು ದೃಢಪಟ್ಟಿದೆ ಎನ್ನಲಾಗಿದ್ದು, ಸೋಂಕಿತ ವ್ಯಕ್ತಿಗಳು ವಾಸಿಸುತ್ತಿ ರುವ ಸುತ್ತಮುತ್ತಲಿನ ಪ್ರದೇಶವನ್ನು ಸಿಲ್‌ಡೌನ್ ಮಾಡಲಾಗಿದೆ.