ಶಿವಮೊಗ್ಗ(ಜು.20): ಜಿಲ್ಲೆಯಲ್ಲಿ ಭಾನುವಾರ 46 ಕೊರೋನಾ ಪಾಸಿಟಿವ್‌ ಪ್ರಕರಣ ಪತ್ತೆಯಾಗುವುದರೊಂದಿಗೆ ಸೋಂಕಿತರ ಸಂಖ್ಯೆ 857 ಏರಿಕೆಯಾಗಿದ್ದರೆ, ಶೇ. 50ರಷ್ಟು ಮಂದಿ ಗುಣಮುಖರಾಗಿದ್ದಾರೆ.

ಶಿವಮೊಗ್ಗದಲ್ಲಿ 23 ಮಂದಿಗೆ ಸೋಂಕು ತಗುಲಿರುವುದು ಧೃಡಪಟ್ಟಿದೆ. ಉಳಿದಂತೆ ಭದ್ರಾವತಿ- 3, ಶಿಕಾರಿಪುರದಲ್ಲಿ 20 ಪ್ರಕರಣ ಪತ್ತೆಯಾಗಿದೆ.

ಶೇ.50ರಷ್ಟು ಗುಣಮುಖ: ಭಾನುವಾರ 28 ಮಂದಿ ಸೇರಿ ಇಲ್ಲಿಯವರೆಗೆ ಒಟ್ಟು 428 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಶೇ. 50ರಷ್ಟದೆ ಎಂಬುದು ಗಮನಿಸಬೇಕಾದ ಸಂಗತಿ. ಜಿಲ್ಲೆಯಲ್ಲಿ ಒಟ್ಟು 415 ಸಕ್ರಿಯ ಪ್ರಕರಣಗಳಿದ್ದರೆ, ಸೋಂಕಿತರಲ್ಲಿ 198 ಮಂದಿ ಕೋವಿಡ್‌-19 ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.190 ಮಂದಿ ಕೋವಿಡ್ ಕೇರ್‌ ಸೆಂಟರ್‌ನಲ್ಲಿ, 17 ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಹಾಗೂ 10 ಮಂದಿ ತಮ್ಮ ಮನೆಯಲ್ಲಿ ಐಸೋಲೇಶನ್‌ ಒಳಗಾಗಿದ್ದಾರೆ.

ಹಲವೆಡೆ ಕೊರೋನಾ:

ವಿನೋಬ ನಗರದ 5 ನೇ ಕ್ರಾಸ್‌ ಹಾಗೂ ರವೀಂದ್ರ ನಗರದ 4ನೇ ತಿರುವಿನ ವ್ಯಕ್ತಿಯೋರ್ವರಿಗೆ ಸೋಂಕು ಪತ್ತೆಯಾಗಿದೆ, ಬೊಮ್ಮನ ಕಟ್ಟೆಯಲ್ಲಿ ಡಿ ಬ್ಲಾಕ್‌ ಹಾಗೂ ಜಿ ಬ್ಲಾಕ್‌ನಲ್ಲಿ ವಾಸವಾಗಿರುವ ಶಿಕ್ಷಕರಿಬ್ಬರಲ್ಲಿ ಸೋಂಕು ತಗುಲಿದ್ದು, ವಾಸಿಸುತ್ತಿರುವ ರಸ್ತೆಗಳು ಸೀಲ್ ಡೌನ್ ಆಗಿದೆ.

ಕೊರೋನಾ ವಿರುದ್ಧ ಹೋರಾಟ: ಬೆಂಗಳೂರಿನ ಖಾಸಗಿ ಆಸ್ಪತ್ರೆ ಉಸ್ತುವಾರಿಗೆ IAS-IPSಗಳ ತಂಡ

ಆರ್‌ಎಂಎಲ್ ನಗರದ 9ನೇ ತಿರುವಿನ ನಿವಾಸಿಯೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಮಾಚೇನಹಳ್ಳಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂವರಲ್ಲಿ ಸೋಂಕು ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ವಿನೋಬ ನಗರದ ಪೊಲೀಸ್‌ ಚೌಕಿ ಸಮೀಪದಲ್ಲಿ ತಾಯಿ ಹಾಗೂ ಮಗಳಿಗೆ ಸೋಂಕು ಪತ್ತೆಯಾಗಿದೆ.

ಕೊರಮರ ಕೇರಿಯಲ್ಲಿ ಸೋಂಕಿತರೊಬ್ಬರ ಪ್ರಾಥಮಿಕ ಸಂಪರ್ಕದಿಂದಾಗಿ ಒಬ್ಬರಲ್ಲಿ ಕೊರೋನಾ ಪತ್ತೆಯಾಗಿದೆ. ಲಷ್ಕರ್‌ ಮೊಹಲ್ಲಾದ ಮಹಿಳೆಯೋರ್ವರಿಗೆ ಸೋಂಕು ತಗುಲಿದೆ. ಗೋಪಾಳದ ಆದಿ ರಂಗನಾಥ ರಸ್ತೆ ನಿವಾಸಿಗಳಿಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಸ್ವಾಮಿ ವಿವೇಕಾನಂದ ಬಡಾವಣೆಯ ವ್ಯಕ್ತಿಯೊಬ್ಬರಿಗೆ ಹಾಗೂ ಗೋಪಾಳ ಗೌಡ ಬಡಾವಣೆಯ ಪೊಲೀಸ್‌ ಲೇಔಚ್‌ನಲ್ಲಿ ನಿವೃತ್ತ ಪೊಲೀಸರೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ ಎನ್ನಲಾಗಿದೆ.

ಶಿವಮೊಗ್ಗದ ಎಪಿಎಂಸಿ ಅಡಕೆ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ ಶೃಂಗೇರಿ ಮೂಲದ ಯುವತಿಯೊಬ್ಬಳಿಗೆ, ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಹೆಡ್ ಕಾನ್ಸ್ ಟೕಬಲ್‌ ಒಬ್ಬರಿಗೆ, ಸೀಗೆಹಟ್ಟಿಯ ಕೆರೆದುರ್ಗಮ್ಮನ ಕೇರಿಯ ವೃದ್ಧರೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ಮಿಳಘಟ್ಟದ ಕೆರೆ ಅಂಗಳದ 3ನೇ ತಿರುವಿನ ನಿವಾಸಿಗೆ ಸೊಂಕು ಪತ್ತೆಯಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸೀಗೆಹಟ್ಟಿಯ ಕೆರೆ ದುರ್ಗಮ್ಮನ ಕೇರಿ ಯುವತಿಯೊಬ್ಬರಿಗೆ, ಕೆಂಚಪ್ಪ ಲೇಔಚ್‌ನ ಮೂವರಲ್ಲಿ ಸೋಂಕು ಪತ್ತೆಯಾಗಿರುವುದಾಗಿ ಮಾಹಿತಿ ಲಭಿಸಿದೆ.