ಕೆ.ಎಂ. ಮಂಜುನಾಥ್ 

ಬಳ್ಳಾರಿ(ಡಿ.07): ಚಳಿ ಜಾಸ್ತಿ ಇದೆ ಎಂದು ಒಂದಷ್ಟು ಈರುಳ್ಳಿ ಪಕೋಡ ತಿನ್ನೋಣ ಎಂದು ಹೋಟೆಲ್‌ಗೆ ಕಾಲಿಟ್ಟರೆ ನಿಮಗೆ ನಿರಾಸೆ ಖಚಿತ. ಇನ್ನು ಈರುಳ್ಳಿ ದೋಸೆ ತಿನ್ನುವ ಚಪಲ ಇದ್ದವರು ಸದ್ಯಕ್ಕೆ ಈರುಳ್ಳಿ ಸಹವಾಸದಿಂದ ದೂರ ಉಳಿಯುವುದೇ ಮೇಲು! 

ಈರುಳ್ಳಿ ದರ ದಿನದಿನಕ್ಕೆ ಏರಿಕೆಯಾಗುತ್ತಿರುವುದು ಹೋಟೆಲ್ ಮಾಲೀಕರನ್ನು ಕಂಗಾಲಾಗಿಸಿದ್ದು, ಹೆಚ್ಚು ಈರುಳ್ಳಿ ಬಳಕೆಯಾಗುವ ಈರುಳ್ಳಿ ದೋಸೆ, ಈರುಳ್ಳಿ ಪಕೋಡ, ಬ್ರೆಡ್ ಸ್ಯಾಂಡ್‌ವಿಚ್ ಸೇರಿದಂತೆ ಅನೇಕ ಆಹಾರ ಪದಾರ್ಥಗಳ ತಯಾರಿಕೆಯಿಂದ ದೂರ ಉಳಿದಿದ್ದಾರೆ! 

ಹಣ ಕೊಟ್ಟರೂ ಗುಣಮಟ್ಟದ ಈರುಳ್ಳಿ ಸಿಗುತ್ತಿಲ್ಲ. ಕೊಳೆತ ಈರುಳ್ಳಿಯನ್ನೂ ದುಬಾರಿ ಹಣ ನೀಡಿ ಖರೀದಿಸಬೇಕು. ಹೀಗಾಗಿ, ಈರುಳ್ಳಿ ಬಳಕೆಯನ್ನು ಕಡಿಮೆ ಮಾಡಿಕೊಳ್ಳಲಾಗುತ್ತಿದ್ದು, ಸಾಂಬಾರ್, ಚಟ್ನಿ ಮತ್ತಿತರ ಪದಾರ್ಥಗಳಿಗೆ ಮಾತ್ರ ಅನಿವಾರ್ಯವಾಗಿ ಈರುಳ್ಳಿ ಬಳಕೆ ಮಾಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ದುಡ್ಡು ಕೊಟ್ರೂ ಈರುಳ್ಳಿ ಸಿಗುತ್ತಿಲ್ಲ. ದರ ಇಳಿಕೆಯಾಗಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ, ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ದುಪ್ಪಟ್ಟಾಗಿದೆ. 70 ರಿಂದ 75  ರು. ಗೆ ಒಂದು ಕೆಜಿ ದೊರೆಯುತ್ತಿದ್ದ ಈರುಳ್ಳಿ ಬೆಲೆ 150 ದಾಟಿದೆ. ಅದು ಕೂಡ ಗುಣಮಟ್ಟದ ಈರುಳ್ಳಿ ಅಲ್ಲ. ಹೆಚ್ಚಿನ ಹಣ ನೀಡಲು ಸಿದ್ಧವಿದ್ದರೂ ಈರುಳ್ಳಿಯೇ ಮಾರುಕಟ್ಟೆಗೆ ಬರುತ್ತಿಲ್ಲ. ಹೀಗಾಗಿ, ತೀವ್ರ ತೊಂದರೆಯಾಗಿದೆ. ಅನಿವಾರ್ಯವಾಗಿ ಅನೇಕ ಆಹಾರ ಪದಾರ್ಥಗಳ ತಯಾರಿಕೆಯನ್ನು ರದ್ದು ಮಾಡಿಕೊಂಡಿದ್ದೇವೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬ್ರೆಡ್ ಸ್ಯಾಂಡ್‌ವಿಚ್ ಸೇರಿದಂತೆ ಅನೇಕ ಬೇಕರಿ ಪದಾರ್ಥಗಳನ್ನು ಸಹ ಈರುಳ್ಳಿ ಇಲ್ಲದೆ ಸ್ಥಗಿತಗೊಳಿಸಬೇಕಾಗಿದೆ ಎನ್ನುತ್ತಾರೆ ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ಹರೀಶ್ ಶೆಟ್ಟಿ. ಗ್ರಾಹಕರಿಗೂ ತಟ್ಟಿದ ದರ ಏರಿಕೆ ಬಿಸಿ ಈರುಳ್ಳಿ ದರ ಏರಿಕೆ ಹೋಟೆಲ್ ಮಾಲೀಕರಿಗಷ್ಟೇ ಬಿಸಿ ತಟ್ಟಿಲ್ಲ, ಗ್ರಾಹಕರಿಗೂ ತಟ್ಟಿದೆ. ಬೆಲೆ ಏರಿಕೆಯಿಂದಾಗಿ ಚಿಲ್ಲರೆ ಅಂಗಡಿಗಳು ಈರುಳ್ಳಿ ಮಾರಾಟ ಮಾಡುತ್ತಿಲ್ಲ. ಕೆಲವರು ಮಾರಾಟ ಮಾಡಿದರೂ ಗುಣಮಟ್ಟ ಇರುವುದಿಲ್ಲ. ಕೊಳೆತ ಈರುಳ್ಳಿ ರಾಶಿಯಲ್ಲಿ ನೋಡಿ ಆಯ್ದು ಕೊಳ್ಳಬೇಕು. ಇದು ಗ್ರಾಹಕರನ್ನು ತತ್ತರಿಸುವಂತೆ ಮಾಡಿದೆ. 

ಚಿತ್ರದುರ್ಗ, ಹುಬ್ಬಳ್ಳಿ, ಗದಗ ಸೇರಿದಂತೆ ನಾನಾ ಜಿಲ್ಲೆಗಳಿಂದ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುತ್ತಿದ್ದ ಈರುಳ್ಳಿ ನಿಂತು ಹೋಗಿದೆ. ಕಮೀಷನ್ ಏಜೆಂಟರ್‌ಗಳು ಸಹ ಹೆಚ್ಚಿನ ದಾಸ್ತಾನು ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದ ಈರುಳ್ಳಿ ಖರೀದಿಗಾಗಿ ಎಪಿಎಂಸಿಗೆ ಬರುವ ಗ್ರಾಹಕರ ಸಂಖ್ಯೆಯೂ ತೀವ್ರ ಕುಸಿದಿದೆ. 

ಮಹಾರಾಷ್ಟ್ರ ಮತ್ತಿತರ ಕಡೆಗಳಿಂದ ಈರುಳ್ಳಿ ಮೂಟೆಗಳು ಒಂದಷ್ಟು ಬಂದರೂ 150 ಕ್ಕೂ ಹೆಚ್ಚಿನ ಬೆಲೆ ಇರುವುದರಿಂದ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹೋಟೆಲ್ ಮಾಲೀಕರು ದುಬಾರಿ ಈರುಳ್ಳಿ ಖರೀದಿಯ ಬದಲು ಈರುಳ್ಳಿ ಬಳಕೆಯನ್ನು ಸ್ಥಗಿತಗೊಳಿಸಿಕೊಂಡಿದ್ದಾರೆ. 

ರಾಜ್ಯ ಸರ್ಕಾರ ಕ್ರಮ ವಹಿಸಬೇಕು: 

ಆಂಧ್ರಪ್ರದೇಶ ಸರ್ಕಾರ ಈರುಳ್ಳಿ ಬೆಲೆ ನಿಯಂತ್ರಿಸಲು ಕ್ರಮ ಕೈಗೊಂಡಿದೆ. ಬೇರೆಡೆಯಿಂದ ಈರುಳ್ಳಿ ಖರೀದಿಸಿ ಆಧಾರ್‌ಕಾರ್ಡ್ ಆಧಾರದಲ್ಲಿ 25 ಗೆ ಕೆಜಿಯಿಂತೆ ಮಾರಾಟ ಮಾಡುತ್ತಿದೆ. ಅಂತೆಯೇ ರಾಜ್ಯ ಸರ್ಕಾರ ಕೂಡ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಗ್ರಾಹಕರ ಹಿತಾಸಕ್ತಿ ಕಾಯಲು ಮುಂದಾಗಬೇಕು ಎಂದು ಅನೇಕ ಸಂಘಟನೆಗಳು ಒತ್ತಾಯಿಸಿವೆ. 

ಯಾವುದೇ ಆಹಾರ ಪದಾರ್ಥಗಳು ಬೆಲೆ ಏರಿಕೆಯಾದಾಗ ನಿಯಂತ್ರಿಸಬೇಕಾದದ್ದು ಸರ್ಕಾರದ ಕರ್ತವ್ಯ. ಆದರೆ, ಈ ವರೆಗೆ ಈರುಳ್ಳಿ ಬೆಲೆ ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಂತೆ ಕಂಡು ಬರುವುದಿಲ್ಲ. ಹೀಗಾದರೆ, ಬಡ ಹಾಗೂ ಮಧ್ಯಮ ವರ್ಗದ ಜನರ ಗತಿಏನು ಎಂದು ಪ್ರಶ್ನಿಸುತ್ತಾರೆ ನವ ಕರ್ನಾಟಕ ಯುವಶಕ್ತಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಸಿದ್ಮಲ್ ಮಂಜುನಾಥ. 

ಜಿಲ್ಲೆಯ ರೈತರಿಗಿಲ್ಲ ಲಾಭ: 

ಈರುಳ್ಳಿ ಬೆಲೆ ಗಗನಮುಖಿ ಯಾಗಿದ್ದರೂ ಜಿಲ್ಲೆಯಲ್ಲಿ ಈರುಳ್ಳಿ ಬೆಳೆಗಾರರಿಗೆ ಯಾವುದೇ ಲಾಭವಾಗಿಲ್ಲ. ಈರುಳ್ಳಿ ಕೈಗೆ ಬರುತ್ತಿದ್ದಂತೆಯೇ ಮಾರಾಟ ಮಾಡಿಕೊಂಡಿದ್ದು, ಹೆಚ್ಚಿದ ಬೇಡಿಕೆ ಹಾಗೂ ದರದ ಏರಿಕೆ ಕಂಡು ರೈತರು ಅಚ್ಚರಿಗೊಂಡಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯುವುದಿಲ್ಲ. ಅರೆ ನೀರಾವರಿ ಹಾಗೂ ಒಣಭೂಮಿ ಪ್ರದೇಶಗಳಲ್ಲಿ ಮಾತ್ರ ಈ ಬೆಳೆಯತ್ತ ರೈತರು ಮನಸ್ಸು ಮಾಡುತ್ತಾರೆ. ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಜಿಲ್ಲೆಯಲ್ಲಿ 10,740 ಕ್ವಿಂಟಲ್ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ಮಳೆಯಿಂದಾಗಿ ಸಾಕಷ್ಟು ಈರುಳ್ಳಿ ಬೆಳೆ ನಷ್ಟವಾಗಿದ್ದು 6101 ಕ್ವಿಂಟಲ್ ಮಾತ್ರ ರೈತರ ಕೈ ಸೇರಿದೆ. 

ಬಳ್ಳಾರಿ ತಾಲೂಕಿನಲ್ಲಿ 29  ಕ್ವಿಂಟಲ್ ನಿರೀಕ್ಷೆಯಿದ್ದು, 32 ಕ್ವಿಂಟಲ್ ಈರುಳ್ಳಿ ಬೆಳೆಯಲಾಗಿದ್ದು, ಹಡಗಲಿ 1742  ಕ್ವಿಂಟಲ್ ನಿರೀಕ್ಷೆಗೆ 959 ಕ್ವಿಂಟಲ್, ಹಗರಿಬೊಮ್ಮನಹಳ್ಳಿ 2741  ಕ್ವಿಂಟಲ್ ಗುರಿಗೆ 1622  ಕ್ವಿಂಟಲ್, ಹೊಸಪೇಟೆ 238 ಕ್ವಿಂಟಲ್ ಬದಲಿಗೆ ಕೇವಲ 82 ಕ್ವಿಂಟಲ್, ಕೂಡ್ಲಿಗಿ 3099  ಕ್ವಿಂಟಲ್ ಗುರಿಗೆ 212 ಕ್ವಿಂಟಲ್, ಸಂಡೂರು 161 ಕ್ವಿಂಟಲ್ ನಿರೀಕ್ಷೆಗೆ 133 ಕ್ವಿಂಟಲ್, ಸಿರುಗುಪ್ಪ 30 ಕ್ವಿಂಟಲ್ ಗುರಿಗೆ 31 ಕ್ವಿಂಟಲ್ ಹಾಗೂ ಹರಪನಹಳ್ಳಿ ತಾಲೂಕಿನಲ್ಲಿ 2700 ಕ್ವಿಂಟಲ್ ಗುರಿಗೆ 3030 ಕ್ವಿಂಟಲ್‌ನಷ್ಟು ಈರುಳ್ಳಿ ಬಂದಿದೆ. ಆದರೆ, ಬೆಳೆ ಬರುತ್ತಿದ್ದಂತೆಯೇ ರೈತರು ಮಾರಾಟ ಮಾಡಿಕೊಂಡಿರುವುದರಿಂದ ಕಳೆದ ಹದಿನೈದು ದಿನಗಳಿಂದ ಏರಿಕೆಯಾಗುತ್ತಿರುವ ಬೆಲೆ ಏರಿಕೆಯ ಲಾಭ ಜಿಲ್ಲೆಯ ರೈತರಿಗಾಗಿಲ್ಲ. 

ನೆರೆಹಾವಳಿಯಿಂದ ಈ ಬಾರಿ ಸಾಕಷ್ಟು ಪ್ರಮಾಣದ ಈರುಳ್ಳಿ ನಾಶವಾಯಿತು. ಇದರಿಂದ ಬೆಳೆಗಾರರು ನಷ್ಟವಾದರೂ ಇದೀಗ ಉತ್ತಮ ಬೆಲೆ ಇದೆ. ಮಾರಿಕೊಳ್ಳಲು ನಮ್ಮ ರೈತರ ಬಳಿ ಈರುಳ್ಳಿಯೇ ಇಲ್ಲ ಎಂದು ಬಳ್ಳಾರಿಯ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮಗೌಡ ದರೂರು ಅವರು ಹೇಳಿದ್ದಾರೆ.