ದಾಬಸ್‌ಪೇಟೆ (ನ.09):  ಸಸ್ಯಾಹಾರವೇ ಇರಲಿ ಮಾಂಸಾಹಾರವೇ ಇರಲಿ ಈರುಳ್ಳಿ ಇದ್ದರೆ ಮಾತ್ರ ಅಡುಗೆ ಪರಿಪೂರ್ಣ. ಆದರೆ, ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಗ್ರಾಹಕನ ಕಣ್ಣಲ್ಲಿ ನೀರು ತರಿಸುತ್ತಿದೆ. ಕಳೆದ ಒಂದು ವಾರದಿಂದ ಈರುಳ್ಳಿಗೆ ಚಿನ್ನದ ಬೆಲೆ ಬಂದಿದೆ. ಒಂದು ಕೆ.ಜಿ. ಈರುಳ್ಳಿ ಬೆಲೆ 100 ರು. ದಾಟಿದೆ. ಕಳೆದ ಎರಡು ತಿಂಗಳ ಹಿಂದೆ ಟೊಮೆಟೋ ಬೆಲೆ ಗಗನಕ್ಕೇರಿತ್ತು. ಈಗ ಈರುಳ್ಳಿ ಸರದಿ.

ಕೊರೋನಾ ಹಿನ್ನೆಲೆಯಲ್ಲಿ ಇದುವರೆಗೂ ಮಂಡಿಗಳಲ್ಲಿ ಸಂಗ್ರಹಿಸಿಡಲಾಗಿದ್ದ ಈರುಳ್ಳಿ ದಾಸ್ತಾನು ದೇಶಾದ್ಯಂತ ಸರಬರಾಜು ಮಾಡಲಾಗಿದೆ. ಬೇಸಿಗೆಯಲ್ಲಿ ಬೆಳೆದ ಈರುಳ್ಳಿ ನವೆಂಬರ್‌ ನಂತರ ಮಾರುಕಟ್ಟೆಪ್ರವೇಶಿಸಲಿದೆ. ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಮಳೆಯೂ ಹೆಚ್ಚಾಗಿದ್ದರಿಂದ ಬಹುಪಾಲು ಈರುಳ್ಳಿ ಬೆಳೆ ಕೊಳೆತುಹೋಗಿದೆ. ಹೀಗಾಗಿ ಈರುಳ್ಳಿ ಬೆಲೆ ವಾರದಿಂದ ವಾರಕ್ಕೆ ಹೆಚ್ಚಳವಾಗುತ್ತಿದೆ.

ಈರುಳ್ಳಿ ದರದಲ್ಲಿ ಏರಿಳಿತ: ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ ಉಳ್ಳಾಗಡ್ಡಿ..!

ಖರೀದಿ ಗ್ರಾಂ ಲೆಕ್ಕಕ್ಕೆ ಬಂತು:  4 ತಿಂಗಳ ಹಿಂದೆಯಷ್ಟೇ ಕೆ.ಜಿ.ಗೆ 25 ರು.ಗಳಿಗೆ ಮಾರಾಟವಾಗುತ್ತಿದ್ದ ಈರುಳ್ಳಿ ಇದೀಗ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿಯೇ 100 ಗ್ರಾಂ, 150 ಗ್ರಾಂ ಲೆಕ್ಕದಲ್ಲಿ ಮಾರಾಟವಾಗುತ್ತಿದೆ. ಕೆಜಿ ಪ್ರಮಾಣದಲ್ಲಿ ಈರುಳ್ಳಿ ಖರೀದಿಸುತ್ತಿದ್ದ ಗ್ರಾಹಕರು ಗ್ರಾಂ ಲೆಕ್ಕೆದಲ್ಲಿ ಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಬಹುತೇಕ ಹೋಟಲ್‌ ಉದ್ಯಮಗಳು, ಫಾಸ್ಟ್‌ ಪುಡ್‌ ಮಳಿಗೆಗಳು ಮತ್ತು ರಸ್ತೆ ಬದಿಯಲ್ಲಿ ಮಾರಾಟವಾಗುವ ಪಾನಿಪುರಿ ಅಂಗಡಿಗಳಲ್ಲಿ ಈರುಳ್ಳಿ ಮಿತವಾಗಿ ಬಳಸುತ್ತಿದ್ದಾರೆ.

ಜಿಲ್ಲೆಯ ಕೆಲವು ಪ್ರದೇಶದಲ್ಲಿ ಬೆಳೆದ ನಾಟಿ ಚಿಕ್ಕಗಾತ್ರದ ಈರುಳ್ಳಿ ಬೆಳೆದಿರುವ ರೈತರಿಗೂ ಈಗ ಬಂಪರ್‌ ಬೆಲೆ ಸಿಕ್ಕಿದಂತಾಗಿದೆ. 15 ಕೆ.ಜಿ ತೂಗುವ ಸಿಮೆಂಟ್‌ ಚೀಲದಲ್ಲಿ ತುಂಬಿದ ಸಣ್ಣಗಾತ್ರದ ಈರುಳ್ಳಿಗೆ 1000ರಿಂದ 1300 ರು.ಗೆ ಮಾರುತ್ತಿದ್ದಾರೆ. ಈರುಳ್ಳಿ ಸರಬರಾಜು ಕಡಿಮೆಯಾದ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಕಂಡಿದೆ. ಬೆಲೆ ಏರಿಳಿತಗಳು ತಕ್ಷಣ ಕಡಿಮೆಯಾಗುವುದಿಲ್ಲ. ಎರಡು ಮೂರು ತಿಂಗಳು ಯಥಾ ಸ್ಥಿಯಲ್ಲಿರುತ್ತವೆ ಕ್ರಮೇಣ ಕಡಿಮೆಯಾಗಲಿದೆ ಎನ್ನುವುದು ಈರುಳ್ಳಿ ಮಾರಾಟಗಾರರ ನಿರೀಕ್ಷೆ.