ಬೆಂಗಳೂರು(ನ.04): ಸಗಟು ಮಾರುಕಟ್ಟೆಯಲ್ಲಿ ದರ ಇಳಿಕೆಯಾದರೂ ಚಿಲ್ಲರೆ ಮಾರುಕಟ್ಟೆಯಲ್ಲಿ ಅಧಿಕ ಬೆಲೆಗೆ ಈರುಳ್ಳಿ ಮಾರಾಟ ಮಾಡುತ್ತಿರುವುದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ಸಗಟು ದರ ಕೆ.ಜಿ. 60-65 ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟ ಆಧರಿಸಿ ಕೆ.ಜಿ. 80 ರಿಂದ 100 ರವರೆಗೆ ಮಾರಾಟವಾಗುತ್ತಿದೆ.

ಹಾಪ್‌ಕಾಮ್ಸ್‌ನಲ್ಲಿ ಹಬ್ಬದ ಪ್ರಯುಕ್ತ ಏರಿಕೆಯಾಗಿದ್ದ ಈರುಳ್ಳಿ ದರ ಇದೀಗ ಇಳಿಕೆಯಾಗಿದೆ. ಕಳೆದ ವಾರ ಕೆ.ಜಿ. 102 ಇದ್ದದ್ದು, ಇದೀಗ 94ಕ್ಕೆ ಮಾರಾಟವಾಗುತ್ತಿದೆ. ಆದರೆ, ಚಿಲ್ಲರೆ ಮಾರಾಟಗಾರರು ಈರುಳ್ಳಿಯನ್ನು ಗುಣಮಟ್ಟದ ಆಧಾರದ ಮೇಲೆ ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ.

ಕೆಲ ಮಾರುಕಟ್ಟೆಗಳಲ್ಲಿ ಸಾಂಬಾರ್‌ ಈರುಳ್ಳಿ ಕೆ.ಜಿ. 110 ರಿಂದ 120 ಇದ್ದರೆ, ಬಳ್ಳಾರಿ ಈರುಳ್ಳಿ ಕೆ.ಜಿ. 80-90 ರು.ವರೆಗಿದೆ. ಕೆಲವರು ಸಣ್ಣ ಈರುಳ್ಳಿಯನ್ನು 100ಕ್ಕೆ 3 ಕೆ.ಜಿ. ಮಾರಿದರೆ, ಕೆಲವೆಡೆ ಇದೇ ಈರುಳ್ಳಿ ಕೆ.ಜಿ.ಗೆ 40 ರಿಂದ .50ಕ್ಕೆ ಖರೀದಿಯಾಗುತ್ತಿದೆ. ಗುಣಮಟ್ಟದ ಈರುಳ್ಳಿ ಕೆ.ಜಿ.ಗೆ 90-100 ಇದ್ದು, ಎರಡು ಮತ್ತು ಮೂರನೇ ದರ್ಜೆ ಈರುಳ್ಳಿ 70ಕ್ಕೆ ಮಾರಾಟವಾಗುತ್ತಿದೆ. ಹೀಗೆ ಪ್ರದೇಶವಾರು ಈರುಳ್ಳಿ ಬೆಲೆಯಲ್ಲಿ ವ್ಯತ್ಯಾಸವಿದೆ. ಇದರಿಂದ ಹೆಚ್ಚಿನ ಬೆಲೆ ತೆತ್ತರೂ ಉತ್ತಮ ಈರುಳ್ಳಿ ಸಿಗದ ಪರಿಸ್ಥಿತಿ ಗ್ರಾಹಕರದ್ದಾಗಿದೆ.

ಈರುಳ್ಳಿ ಬೆಲೆ ಗಗನಕ್ಕೆ, ದಲ್ಲಾಳಿಗೆ ಬಂಪರ್, ರೈತ ಪಾಪರ್..!

ಈರುಳ್ಳಿ ಸಗಟು ದರದಲ್ಲಿ ಕಳೆದ ಒಂದು ತಿಂಗಳಿನಿಂದ ಏರಿಳಿತ ಕಾಣುತ್ತಿದೆ. ಸಗಟು ದರ ಇಳಿಕೆಯಾದರೂ ಚಿಲ್ಲರೆ ಮಾರುಕಟ್ಟೆಯ ವ್ಯಾಪಾರಿಗಳು ಮಾತ್ರ ಬೆಲೆ ಇಳಿಕೆ ಮಾಡಿಲ್ಲ. ವ್ಯಾಪಾರಿಗಳು ಖರ್ಚು-ವೆಚ್ಚ ಪರಿಗಣಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಮಳೆಯಿಂದ ಈರುಳ್ಳಿ ಬೆಳೆ ಹಾಳಾಗಿರುವುದರಿಂದ ಮಾರುಕಟ್ಟೆಗೆ ಗುಣಮಟ್ಟಈರುಳ್ಳಿ ಬರುತ್ತಿಲ್ಲ. ಜತೆಗೆ ಸಗಟು ಮಾರುಕಟ್ಟೆಗೆ ಪೂರೈಕೆಯಾಗುತ್ತಿರುವ ಈರುಳ್ಳಿ ಪ್ರಮಾಣದ ಮೇಲೆ ದರ ನಿಗದಿಯಾಗುತ್ತಿದ್ದು, ಬೆಲೆ ಏರಿಳಿತ ಕಾಣುತ್ತಿದೆ.

ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಈರುಳ್ಳಿ ಬೆಲೆ ಹೆಚ್ಚಾಗಿತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿ ಒಂದು ದಿನ 100ರ ಗಡಿ ದಾಟಿತ್ತು. ಎರಡು ವಾರಗಳ ಹಿಂದೆ ಯಶವಂತಪುರ ಎಪಿಎಂಸಿಯ ಸಗಟು ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿ ಕೆ.ಜಿ. 80-90 ರವರೆಗೆ ದಾಖಲಾಗಿತ್ತು. ಕೆಲ ದಿನಗಳ ನಂತರ ಬೆಲೆ ಸ್ವಲ್ಪ ಇಳಿಕೆಯಾಗಿತ್ತು. ಮಂಗಳವಾರ ಕೆ.ಜಿ. 62-65 ರವರೆಗೆ ನಿಗದಿಯಾಗಿದೆ.

ದಾಸ್ತಾನು ಇಟ್ಟಿರುವ ಈರುಳ್ಳಿಯನ್ನು ರೈತರು ಮಾರುಕಟ್ಟೆಗೆ ತರುತ್ತಿದ್ದಾರೆ. ಹೀಗಾಗಿ ಜಿಲ್ಲಾವಾರು ದರ ಕಡಿಮೆಯಿದೆ. ಕೆಲ ರೈತರು ಅಧಿಕ ಬೆಲೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಬೆಂಗಳೂರಿನ ಮಾರುಕಟ್ಟೆಗೆ ತರುತ್ತಾರೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬಂದರೆ ದರ ಇಳಿಯುತ್ತದೆ. ಹೊಸ ಈರುಳ್ಳಿ ಡಿಸೆಂಬರ್‌ ನಂತರ ಬರಲಿದ್ದು, ಅಲ್ಲಿಯವರೆಗೂ ಬೆಲೆಯಲ್ಲಿ ವ್ಯತ್ಯಾಸ ಇರುತ್ತದೆ ಎಂದು ಎಪಿಎಂಸಿಯ ಈರುಳ್ಳಿ, ಆಲೂಗಡ್ಡೆ ವರ್ತಕರ ಸಂಘದ ಕಾರ್ಯದರ್ಶಿ ಸಿ.ಉದಯ್‌ ಶಂಕರ್‌ ತಿಳಿಸಿದರು.

ಎಪಿಎಂಸಿ ಸಗಟು ದರ (ಕೆ.ಜಿ.ಗಳಲ್ಲಿ)

ಅತ್ಯುತ್ತಮ ಈರುಳ್ಳಿ 62-65
ಉತ್ತಮ ಈರುಳ್ಳಿ 58-60
ಸಾಧಾರಣ ಈರುಳ್ಳಿ 40-50
ಸಣ್ಣ ಈರುಳ್ಳಿ 20-30