Asianet Suvarna News Asianet Suvarna News

ಈರುಳ್ಳಿ ಪೂರೈಕೆ ಏರಿಕೆ: ಬೆಲೆ ಇಳಿಕೆಯಾಯ್ತಾ?

ಕಳೆದೊಂದು ತಿಂಗಳಿಂದ ಸರಾಸರಿ 55-60 ಸಾವಿರ ಚೀಲಗಳಷ್ಟು (50 ಕೇಜಿ ಚೀಲ) ಈರುಳ್ಳಿ ಮಾತ್ರ ಯಶವಂತಪುರಕ್ಕೆ ಬರುತ್ತಿತ್ತು. ದಾಸನಪುರ ಮಾರುಕಟ್ಟೆಗೆ 2-3 ಸಾವಿರ ಚೀಲ ಬಂದಿತ್ತು. ಹೀಗಾಗಿ ಸಗಟು ದರವೇ ಕೇಜಿಗೆ ₹60- ₹70ರವರೆಗೆ ತಲುಪಿತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ₹100 ದಾಟಿತ್ತು. ಆದರೆ, ಈಗ ಬೆಲೆಯೇರಿಕೆಗೆ ಬ್ರೇಕ್‌ ಬೀಳುವ ಸಾಧ್ಯತೆಯಿದೆ.

Onion Price Drop For supply increased in Bengaluru grg
Author
First Published Nov 3, 2023, 4:35 AM IST

ಬೆಂಗಳೂರು(ನ.03): ಗ್ರಾಹಕರ ಜೇಬು ಸುಡುತ್ತಿದ್ದ ಈರುಳ್ಳಿ ಇನ್ನು ತುಸು ನೆಮ್ಮದಿ ನೀಡುವ ಸಾಧ್ಯತೆಗಳಿವೆ. ಏಕೆಂದರೆ, ಇಲ್ಲಿನ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುತ್ತಿರುವ ಈರುಳ್ಳಿ ಪ್ರಮಾಣ ಹೆಚ್ಚಿದ್ದು, ಗಗನಕ್ಕೇರುತ್ತಿದ್ದ ಬೆಲೆಯ ಗ್ರಾಫ್‌ ಸಗಟು ಮಾರುಕಟ್ಟೆಯಲ್ಲಿ ತುಸು ಇಳಿದಿದೆ. ಈರುಳ್ಳಿ ಪೂರೈಕೆ ಪ್ರಮಾಣ ಹೀಗೆಯೇ ಮುಂದುವರಿದರೆ ಮೂರ್ನಾಲ್ಕು ದಿನಗಳಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲೂ ದರ ಇಳಿಯುವ ಸಾಧ್ಯತೆಯಿದೆ.

ಕಳೆದೊಂದು ತಿಂಗಳಿಂದ ಸರಾಸರಿ 55-60 ಸಾವಿರ ಚೀಲಗಳಷ್ಟು (50 ಕೇಜಿ ಚೀಲ) ಈರುಳ್ಳಿ ಮಾತ್ರ ಯಶವಂತಪುರಕ್ಕೆ ಬರುತ್ತಿತ್ತು. ದಾಸನಪುರ ಮಾರುಕಟ್ಟೆಗೆ 2-3 ಸಾವಿರ ಚೀಲ ಬಂದಿತ್ತು. ಹೀಗಾಗಿ ಸಗಟು ದರವೇ ಕೇಜಿಗೆ ₹60- ₹70ರವರೆಗೆ ತಲುಪಿತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ₹100 ದಾಟಿತ್ತು. ಆದರೆ, ಈಗ ಬೆಲೆಯೇರಿಕೆಗೆ ಬ್ರೇಕ್‌ ಬೀಳುವ ಸಾಧ್ಯತೆಯಿದೆ.

ಗ್ರಾಹಕರ ಕಣ್ಣಲ್ಲಿ ನೀರು ಬರೋದು ಗ್ಯಾರಂಟಿ: 100ರ ಸನಿಹದಲ್ಲಿ ಈರುಳ್ಳಿ ದರ..!

ಕಳೆದ ಮೂರು ದಿನಗಳಿಂದ ಈರುಳ್ಳಿ ಬರುವುದು ಹೆಚ್ಚಾಗಿದ್ದು, ಸರಾಸರಿ 80 ಸಾವಿರ ಚೀಲ ಮಾರುಕಟ್ಟೆಗೆ ಆಗಮಿಸುತ್ತಿದೆ. ಇದರಿಂದ ಸಗಟು ದರ ಕೇಜಿಗೆ ₹50- ₹55ಕ್ಕೆ ಬಂದಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಸದ್ಯ ದುಬಾರಿ ದರವೇ ಮುಂದುವರಿದಿದ್ದು, ಕೇಜಿಗೆ ₹70- ₹80ಕ್ಕೆ ಮಾರಾಟವಾಗುತ್ತಿದೆ.

ಗುರುವಾರ ಯಶವಂತಪುರ ಮಾರುಕಟ್ಟೆಗೆ 480 ಲಾರಿಗಳಲ್ಲಿ 79,670 ಚೀಲ ಈರುಳ್ಳಿ ಬಂದಿದೆ. ದಾಸನಪುರ ಉಪ ಮಾರುಕಟ್ಟೆಗೆ 8 ವಾಹನದಲ್ಲಿ 2,684 ಚೀಲ ಈರುಳ್ಳಿ ಬಂದಿದೆ. ಕಳೆದ ಅ.28ರಂದು 63 ಸಾವಿರ ಈರುಳ್ಳಿ ಚೀಲ, ಅ.11ರಂದು 53 ಸಾವಿರ ಚೀಲ ಈರುಳ್ಳಿ ಬಂದಿತ್ತು. ಈ ಹಂತದಿಂದ ಸಗಟು, ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಿತ್ತು ಎಂದು ವರ್ತಕರು ಹೇಳುತ್ತಾರೆ.

ಅವರ ಪ್ರಕಾರ ಈರುಳ್ಳಿ ಬೆಲೆ ಈಗಲೇ ಗರಿಷ್ಠ ಮಟ್ಟ ತಲುಪಿ ಈಗ ಇಳಿಕೆಯತ್ತ ಮುಖ ಮಾಡಿದೆ ಎನ್ನಲು ಸಾಧ್ಯವಿಲ್ಲ. ಈ ವಾರ ಬರುತ್ತಿರುವಂತೆ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಬರುವುದಕ್ಕೆ ನಿರಂತರವಾಗಿರಗಲಿದೆ ಎಂದು ಈಗಲೇ ಹೇಳಲಾಗದು. ಹಲವು ರೈತರು ಅಥವಾ ದಳ್ಳಾಳಿಗಳು ಈರುಳ್ಳಿ ಈಗಾಗಲೇ ಗರಿಷ್ಠ ದರ ತಲುಪಿದ್ದು, ಮತ್ತೆ ಪುನಃ ದರ ಹೆಚ್ಚಾಗಲಾರದು ಅಥವಾ ಮುಂದೆ ದರ ಕಡಿಮೆಯಾಗಬಹುದು ಎಂಬ ಭಾವನೆಯಿಂದ ತಮ್ಮಲ್ಲಿ ದಾಸ್ತಾನಿದ್ದ ಬೆಳೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರಬಹುದು. ಈ ಕಾರಣದಿಂದ ಬೆಲೆ ₹5- ₹10 ಕಡಿಮೆಯಾಗಿದೆ. ಇದೇ ಭಾವನೆ ಮುಂದುವರೆದರೇ ದರ ಇಳಿಯಬಹುದು. ಒಂದು ವೇಳೆ ರೈತರು ಅಥವಾ ದಳ್ಳಾಳಿಗಳು ಈರುಳ್ಳಿಯ ಪೂರೈಕೆಯನ್ನು ಮತ್ತೆ ನಿಲ್ಲಿಸಿದರೆ ಮುಂದಿನ ವಾರ ಬೆಲೆ ಹೆಚ್ಚಲೂಬಹುದು ಎಂದು ವರ್ತಕರು ಅಭಿಪ್ರಾಯ ಪಡುತ್ತಾರೆ.

ಜನಸಾಮಾನ್ಯರಿಗೆ ಗುಡ್‌ ನ್ಯೂಸ್‌: ಕೇಂದ್ರ ಸರ್ಕಾರದಿಂದ 25 ರೂ.ಗೆ ಈರುಳ್ಳಿ ಮಾರಾಟ

ಕೇಂದ್ರ ಸರ್ಕಾರ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ ಬಳಿಯಿದ್ದ ಈರುಳ್ಳಿಯನ್ನು ₹25 ಕೇಜಿಗೆ ಮಾರಾಟ ಮಾಡಲು ಮುಂದಾಗಿರುವುದು ಹಾಗೂ ರಫ್ತಿನ ಮೇಲೆ ಟನ್‌ಗೆ 800 ಡಾಲರ್‌ ಕನಿಷ್ಠ ರಫ್ತು ಬೆಲೆ (ಎಂಇಪಿ) ನಿಗದಿಪಡಿಸಿ ನಿಬಂಧನೆ ಹೇರಿರುವುದು ಬೆಲೆ ಇಳಿಕೆಗೆ ಕಾರಣವಾಗಿದೆ. ಜೊತೆಗೆ ರಾಜಸ್ಥಾನದ ಖಾರೀಫ್‌ ಬೆಳೆಗಳು ಮಾರುಕಟ್ಟೆ ಪ್ರವೇಶಿಸುವುದು ಇದರ ಮೇಲೆ ಪರಿಣಾಮ ಬೀರುತ್ತಿದೆ. ಇದು ಮುಂದುವರಿದಲ್ಲಿ ಶೀಘ್ರವೇ ಸಗಟು ದರ ₹40ಕ್ಕೆ ಇಳಿದರೂ ಆಶ್ಚರ್ಯವಿಲ್ಲ. ಇನ್ನೊಂದು ವಾರ ಈರುಳ್ಳಿ ಬೆಲೆ ಅನಿಶ್ಚಿತವಾಗಿ ಮುಂದುವರಿಯಬಹುದು ಎಂದು ವರ್ತಕರು ಹೇಳಿದರು.

ರಫ್ತು ನಿಬಂಧನೆ, ಸರ್ಕಾರಿ ಈರುಳ್ಳಿ ಪೂರೈಕೆ ಹಾಗೂ ಇತರೆ ಕಾರಣದಿಂದ ಈರುಳ್ಳಿ ಆವಕ ಹೆಚ್ಚಾಗಿರುವುದರಿಂದ ಮಂಡಿಗಳಲ್ಲಿ ಸಗಟು ದರ ಇಳಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಇಳಿಯಲು ಒಂದೆರಡು ದಿನ ಬೇಕು. ಆದರೆ, ಈರುಳ್ಳಿ ಬೆಲೆ ಈಗಲೇ ಗರಿಷ್ಠ ಮಟ್ಟ ತಲುಪಿ ಈಗ ಇಳಿಕೆಯತ್ತ ಮುಖ ಮಾಡಿದೆ ಎನ್ನಲು ಸಾಧ್ಯವಿಲ್ಲ ಎಂದು ಬೆಂಗಳೂರು ಈರುಳ್ಳಿ, ಆಲೂಗಡ್ಡೆ ವರ್ತಕರ ಸಂಘದ ಕಾರ್ಯದರ್ಶಿ ಬಿ.ರವಿಶಂಕರ್‌ ತಿಳಿಸಿದ್ದಾರೆ.  

Follow Us:
Download App:
  • android
  • ios