Karnataka Rains: ನಿರಂತರ ಮಳೆಗೆ ಕೊಳೆತ ಈರುಳ್ಳಿ: ಕಂಗಾಲಾದ ಅನ್ನದಾತ..!
* ಎಕರೆಗೆ 30 ಸಾವಿರ ಖರ್ಚು ಮಾಡಿ ಬಿತ್ತಿದ್ದ ರೈತರು
* ಭೂಮಿಯ ತೇವಾಂಶ ಹೆಚ್ಚಳವಾಗಿ ಕೊಳೆತ ಈರುಳ್ಳಿ
* ಸರ್ವೇ ಕಾರ್ಯ ಪೂರ್ಣಗೊಳಿಸಿ
ಪಿ.ಎಸ್. ಪಾಟೀಲ
ರೋಣ(ನ.26): ಮಳೆ(Rain) ಹೆಚ್ಚಾಗಿ ಬಾಳ್ ತೊಂದ್ರಿ ಮಾಡೇತ್ರಿ. ಸಾಲಾ-ಸೋಲಾ ಮಾಡಿ ಬಿತ್ತಿದ್ವಿ, ಕೈಗ ಬಂದ್ ತುತ್ತು ಬಾಯಿಗೆ ಬರಲಿಲ್ರಿ. ಹೊಲದಾಗಿನ ಕೊಳೆತ ಬೆಳೆ ನೋಡಿದ್ರ ಹೊಟ್ಟ್ಯಾಗ ಸಂಕಟ ಆಗಿ, ಕಣ್ಣಾಗ ನೀರು ಬರ್ತಾವ...
ಕಳೆದೊಂದು ವಾರದಿಂದ ನಿರಂತರ ಸುರಿದ ಮಳೆಗೆ ತೇವಾಂಶ ಹೆಚ್ಚಳವಾಗಿ ಹೊಲದಲ್ಲಿಯೇ ಕೊಳೆತ ಈರುಳ್ಳಿ(Onion) ಎದುರು ರೋಣ(Ron) ತಾಲೂಕಿನ ರೈತರು(Farmers) ಕಣ್ಣೀರು ಸುರಿಸುತ್ತಿದ್ದಾರೆ. ಬೀಜ, ಗೊಬ್ಬರ, ಬಿತ್ತನೆ, ಔಷಧಿ, ಕೂಲಿ ಸೇರಿ ಎಕರೆಗೆ 30 ಸಾವಿರಕ್ಕೂ ಹೆಚ್ಚು ಖರ್ಚು ಮಾಡಲಾಗಿದೆ. ದಿನಕ್ಕೆ ಒಬ್ಬರಿಗೆ 200 ರಿಂದ 250 ಕೂಲಿ ನೀಡಿ ಈರುಳ್ಳಿ ಕಿತ್ತು ಹೊಲದಲ್ಲಿ ಹರವಿದ್ದಾರೆ. ಇದನ್ನು ಕಟಾವು ಮಾಡಿ ಮಾರುಕಟ್ಟೆಗೆ(Market) ಕಳುಹಿಸಬೇಕು ಎನ್ನುವುದರಲ್ಲಿ ವರುಣಾಘಾತವಾಗಿದೆ. ಭೂಮಿಯಲ್ಲಿ ತೇವಾಂಶ ಹೆಚ್ಚಳವಾಗಿ ಕಿತ್ತು ಹರವಿದ್ದ, ರಾಶಿ ಹಾಕಿದ್ದ ಹಾಗೂ ಭೂಮಿಯಲ್ಲಿ ಉಳಿದುಕೊಂಡಿರುವ ಈರುಳ್ಳಿ ಕೊಳೆಯಲು ಆರಂಭಿಸಿದೆ.
Crop Insurance: ವಿಮೆ ಮಾಡಿಸುವ ಮುನ್ನವೇ ಬೆಳೆ ಹಾನಿ..!
ಸಾವಿರಾರು ಹೆಕ್ಟೇರ್ ಹಾನಿ:
ತಾಲೂಕಿನಲ್ಲಿ 12 ಸಾವಿರ ಹೆಕ್ಟೇರ್‌ಕ್ಕೂ ಹೆಚ್ಚು ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ(Sowing) ಮಾಡಲಾಗಿದೆ. ಕಳೆದೊಂದು ತಿಂಗಳಿಂದ ಆಗಾಗೆ ಮತ್ತು ಕಳೆದೊಂದು ವಾರದಿಂದ ನಿರಂತರವಾಗಿ ಮಳೆ ಸುರಿದ ಪರಿಣಾಮ ಅಂದಾಜು 8 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ನಷ್ಟು ಬೆಳೆ ಹಾನಿಯಾಗಿದೆ(Crop Damage). ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಹೊಂದಿದ್ದ ಈರುಳ್ಳಿ ಸತತ ಸುರಿದ ಮಳೆಯಿಂದಾಗಿ ಬೆಲೆಯಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ. ಒಂದೆಡೆ ಬೆಲೆ ಇಳಿಕೆ ಪೆಟ್ಟು, ಮತ್ತೊಂದಡೆ ಕೈಗೆ ಬಂದ್ ಫಸಲು ಬಾಯಿಗೆ ಬರದಂತಾಗಿದ್ದು ರೈತ ಸಮೂಹವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ.
ದುರ್ನಾತ:
ಅಳಿದುಳಿದ ಈರುಳ್ಳಿಯನ್ನು ಕಿತ್ತು ಮಾರುಕಟ್ಟೆಗೆ ಸಾಗಿಸಲು ರೈತರು ಮುಂದಾಗಿದ್ದಾರೆ. ಆದರೆ, ಇದರಲ್ಲಿ ಶೇ. 15ರಷ್ಟು ಈರುಳ್ಳಿಯು ಉತ್ತಮವಾಗಿಲ್ಲ. ಇದನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಯಾರು ಕೇಳುವರು ಇಲ್ಲ ಎಂದು ಚೀಲದಲ್ಲಿ ತುಂಬಿ ಊರಾಚೆ ಚೆಲ್ಲುತ್ತಿದ್ದಾರೆ. ಹೀಗೆ ಎಲ್ಲೆಂದರಲ್ಲಿ ಬಿಸಾಡಿದ ಈರುಳ್ಳಿ ಕೊಳೆತು ದುರ್ನಾತ ಬಿರುತ್ತಿದೆ. ಈರುಳ್ಳಿಯನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡುವಲ್ಲಿ ರೈತರು ಅಥವಾ ಗ್ರಾಪಂ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಸಾಂಕ್ರಾಮಿಕ ಕಾಯಿಲೆ(Infectious Disease) ಭೀತಿ ಎದುರಾಗಲಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಸರ್ವೇ ಕಾರ್ಯ ಪೂರ್ಣಗೊಳಿಸಿ:
ಬೆಳೆಹಾನಿ ಸರ್ವೇ(Survey) ಕಾರ್ಯವನ್ನು ಸಂಬಂಧಿಸಿದ ಅಧಿಕಾರಿಗಳು ತ್ವರಿತವಾಗಿ ಪೂರ್ಣಗೊಳಿಸಬೇಕು. ಈಗಾಗಲೇ ಈರುಳ್ಳಿ ಬೆಳೆ ವಿವರವನ್ನು ಆ್ಯಪ್‌ನಲ್ಲಿ ಫೋಟೋ ಸಮೇತ ಅಳವಡಿಸಲಾಗಿದೆ. ಆಗಿನ ಬೆಳೆ ಪ್ರಮಾಣದಲ್ಲಿ ಹಾನಿ ಸಮೀಕ್ಷೆ ಮಾಡದೆ ಖುದ್ದು ಜಮೀನಿಗೆ ತೆರಳಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತರಾದ ಮಲ್ಲಿಕಾರ್ಜುನ ಚೌಡರಡ್ಡಿ, ಶರಣಪ್ಪ ಮಲ್ಲಾಪುರ, ವೀರೇಶ ದಾನಪ್ಪನವರ, ಮಲ್ಲಪ್ಪ ಹುಣಸಿಮರದ, ಪೀರಸಾಬ್ ನದಾಫ್, ಲಕ್ಷ್ಮೀ ಈಟಿ, ಸಾವಿತ್ರಿ ಮೂಲಿಮನಿ ಆಗ್ರಹಿಸಿದ್ದಾರೆ.
Crop Insurance for Farmers: 15 ದಿನದೊಳಗೆ ರೈತರಿಗೆ ಬೆಳೆ ವಿಮೆ
ಎಕರೆಗೆ 30 ಸಾವಿರ ಖರ್ಚು ಮಾಡಿ ನಾಲ್ಕು ಎಕರೆ ಈರುಳ್ಳಿ ಬಿತ್ತಿದ್ದೇನೆ. ಇನ್ನೇನು ಫಸಲು ಕೈ ಸೇರಿ ಲಾಭದ ನಿರೀಕ್ಷೆಯಲ್ಲಿ ಇದ್ದಾಗ ಅಕಾಲಿಕ ಮಳೆಯಿಂದ ಬೆಳೆ ಹೊಲದಲ್ಲಿಯೇ ಕೊಳೆಯುತ್ತಿದೆ. ಅಳಿದುಳಿದ ಈರುಳ್ಳಿಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರು ಕೇಳುವರು ಯಾರು ಇಲ್ಲ. ಹೊಲಕ್ಕೆ ಹೋದರೆ ಬೆಳೆ ನೋಡಿ ಕಣ್ಣೀರು ಬರುತ್ತಿದೆ ಅಂತ ಸಂದಿಗವಾಡದ ರೈತ ಬಸವರಾಜ ಗಿಣಿ ತಿಳಿಸಿದ್ದಾರೆ.
ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳ ಸಮೀಕ್ಷೆ ಕೈಗೊಳ್ಳುವಂತೆ ಜಿಲ್ಲಾ ಮತ್ತು ತಾಲೂಕು ಆಡಳಿತಕ್ಕೆ ಸೂಚಿಸಿದ್ದು ಶೀಘ್ರದಲ್ಲಿಯೇ ಬೆಳೆ ಹಾನಿ ಕೈಗೊಂಡು ವರದಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ರೋಣ ಸಹಾಯಕ ತೋಟಗಾರಿಕೆ ನಿರ್ದೇಶಕ ಬಸವರಾಜ ಬೆನಹಾಳ ಹೇಳಿದ್ದಾರೆ.
ಕಳೆದೊಂದು ವಾರದಿಂದ ಸುರಿದ ಮಳೆಯಿಂದಾಗಿ ಹಾನಿಗೊಳಗಾದ ಕುಸುಬಿ, ಜೋಳ, ಕಡಲೆ, ಸಜ್ಜಿ, ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ಮುಂತಾದ ಬೆಳೆಗಳ ಹಾನಿ ಕುರಿತು ಕೃಷಿ, ತೋಟಗಾರಿಕೆ, ಗ್ರಾಮ ಲೆಕ್ಕಾಧಿಕಾರಿಗಳ ಜಂಟಿ ಸಮೀಕ್ಷೆಗೆ ಈಗಾಗಲೇ ಸೂಚಿಸಲಾಗಿದೆ ಅಂತ ರೋಣ ತಹಸೀಲ್ದಾರ್ ಜಿ.ಬಿ. ಜಕ್ಕನಗೌಡ್ರ ತಿಳಿಸಿದ್ದಾರೆ.