ಚಾಮರಾಜನಗರ(ಜ.02): ಹೊಸ ವರ್ಷದ ಮೊದಲ ದಿನ ನಾಡಿನ ಪ್ರಸಿದ್ಧ ಗೋಪಾಲಸ್ವಾಮಿ ಬೆಟ್ಟಹಾಗೂ ಗುಂಡ್ಲುಪೇಟೆಯ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಸಫಾರಿಯಲ್ಲೂ ಪ್ರವಾಸಿಗರ ದಂಡೇ ನೆರೆದಿತ್ತು.

ಹೊಸ ವರ್ಷದ ಮುನ್ನಾ ದಿನ ರಜೆ ಹಾಕಿ ಬಂದಿದ್ದ ಪ್ರವಾಸಿಗರು ವರ್ಷಾಚರಣೆಗೆ ಆಗಮಿಸಿದ್ದ ರಾಜ್ಯದ ವಿವಿಧ ಜಿಲ್ಲೆಯ ಜನರು ಗುಂಡ್ಲುಪೇಟೆ ಹಾಗೂ ಬಂಡೀಪುರ ಅರಣ್ಯದಂಚಿನ ರೆಸಾರ್ಟ್‌ನಲ್ಲಿ ಬೀಡು ಬಿಟ್ಟಿದ್ದರು.

ಶೈಕ್ಷಣಿಕ ವರ್ಷದ ಕೊನೆ ಹಂತ ತಲುಪಿದ್ರೂ ಇನ್ನೂ ವಿತರಣೆಯಾಗಿಲ್ಲ ಶೂ, ಸಾಕ್ಸ್‌ ..!

ಬುಧವಾರ ಮುಂಜಾನೆ ಗೋಪಾಲಸ್ವಾಮಿ ಬೆಟ್ಟಕ್ಕೆ ಸಾವಿರಾರು ಮಂದಿ ಪ್ರವಾಸಿಗರು ಬೆಟ್ಟಕ್ಕೆ ತೆರಳಿ, ಗೋಪಾಲನ ದರ್ಶನ ಪಡೆದರು. ಹಿಮದ ಸವಿಯನ್ನು ಸವಿದು ತೆರಳುತ್ತಿದ್ದ ದೃಶ್ಯ ಬೆಟ್ಟದಲ್ಲಿ ಕಂಡು ಬಂತು. ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ಬಳಿ ಖಾಸಗಿ ವಾಹನಗಳ ಪಾರ್ಕಿಂಗ್‌ ಮಾಡಿದ ಪ್ರವಾಸಿಗರು ಮಧ್ಯಾಹ್ನದ ವೇಳೆಗೆ ಪ್ರವಾಸಿಗರ ಸಂಖ್ಯೆ ಏರಿಕೆ ಕಂಡ ಅಧಿಕಾರಿಗಳಿಗೆ ಶಾಕ್‌ ಆಯಿತು.

25 ಬಸ್‌ ಬಿಟ್ಟಿದ್ದರು:

ಗೋಪಾಲಸ್ವಾಮಿ ಬೆಟ್ಟಕ್ಕೆ ಹೊಸ ವರ್ಷದ ದಿನ ಹೆಚ್ಚಿನ ಪ್ರವಾಸಿಗರು ಬರುವ ಸಾಧ್ಯತೆ ಕಂಡು ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ ಎಂ.ಜಿ.ಜಯಕುಮಾರ್‌ ಬುಧವಾರ 25 ಬಸ್‌ ತರಿಸಿ ಪ್ರವಾಸಿಗರು ತೆರಳಲು ಅವಕಾಶ ಕಲ್ಪಿಸಿದ್ದರು. ಗೋಪಾಲಸ್ವಾಮಿ ಬೆಟ್ಟಹೊರತುಪಡಿಸಿ ತೆರಕಣಾಂಬಿ ಬಳಿ ಹುಲಗಿನಮುರುಡಿ ಪಾರ್ವತಿ ಬೆಟ್ಟಹಾಗೂ ತ್ರಿಯಂಬಕಪುರದ ತ್ರಿಯಂಬಕೇಶ್ವರ ದೇವಸ್ಥಾನಕ್ಕೂ ಪ್ರವಾಸಿಗರು ಮುಖ ಮಾಡಿದ್ದರು.

ಸಫಾರಿಯಲ್ಲೂ ಜನವೋ ಜನ:

ಗೋಪಾಲಸ್ವಾಮಿ ಬೆಟ್ಟ, ಹುಲಗಿನ ಮುರಡಿ ಹಾಗೂ ಊಟಿಗೆ ತೆರಳಿ ವಾಪಸ್‌ ಬರುವ ಪ್ರವಾಸಿಗರು ಸಹ ಸಫಾರಿಗೆ ತೆರಳಲು ಬುಧವಾರ ಸಂಜೆ ಪ್ರವಾಸಿಗರು ಮುಗಿ ಬಿದ್ದಿದ್ದರು. ರಜಾ ಮುಗಿಸಿ ನಗರದತ್ತ ಪ್ರಯಾಣ ಬೆಳೆಸುವ ಮಂದಿ ಬಂಡೀಪುರ ಸಫಾರಿಯಲ್ಲಿ ಒಂದು ರೌಂಡ್‌ ಹಾಕಿ ಮನೆಗೆ ತೆರಳುವ ಸಲುವಾಗಿ ಬುಧವಾರ ಸಂಜೆ ಸಫಾರಿಗೆ ಎಂದಿಗಿಂತ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದರು.

ಅಕ್ಷಯ ಮಹದೇಶ್ವರ ಜಾತ್ರೆ:

ತಾಲೂಕಿನ ಬೆರಟಹಳ್ಳಿ ಗ್ರಾಮದ ಅಕ್ಷಯ ಮಹದೇಶ್ವರಸ್ವಾಮಿ 23ನೇ ವರ್ಷದ ಜಾತ್ರಾ ಮಹೋತ್ಸವ ಜನ ಸಾಗರದ ನಡುವೆ ಬುಧವಾರ ನೆರವೇರಿತು. ಗ್ರಾಮದ ಹೊರ ವಲಯದಲ್ಲಿರುವ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಗ್ರಾಮದಲ್ಲಿ ಹಾಲರವಿ ಹಾಗು ಹುಲಿ ವಾಹನ ಉತ್ಸವ ನಡೆಯಿತು. ಪ್ರತಿ ಹೊಸ ವರ್ಷದ ದಿನ ನಡೆವ ಈ ಜಾತ್ರೆಗೆ ಸುತ್ತ ಮುತ್ತಲಿನ ಗ್ರಾಮದ ಸಹಸ್ರಾರು ಜನರು ಭಾಗವಹಿಸಿದ್ದರು. ಜಾತ್ರೆಗೆ ಬಂದ ಭಕ್ತರಿಗೆಲ್ಲ ಪ್ರಸಾದ ವಿನಿಯೋಗ ನಡೆಯಿತು.