ಚಾಮರಾಜನಗರ(ಜ.02): ಇಲಾಖೆಗಳಲ್ಲಿ ಅನುದಾನವನ್ನು ಬಳಕೆ ಮಾಡದೇ ಸಾರ್ವಜನಿಕರ ಕೆಲಸಗಳನ್ನು ವಿಳಂಬ ಮಾಡುತ್ತಿರುವ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಣ ಸಚಿವಎಸ್‌. ಸುರೇಶ್‌ ಕುಮಾರ್‌ ಮುಂದಾಗಬೇಕಿದೆ.

ಬಿಇಒ, ಡಿಡಿಪಿಐ ವಿರುದ್ಧ ಕ್ರಮ:

ಮೇ 6ರಂದೇ ಆದೇಶ ಹೊರಡಿಸಿ ಜೂ. 30ರೊಳಗೆ ಶೂ, ಸಾಕ್ಸ್‌ ವಿತರಣೆ ಪೂರ್ಣಗೊಳಿಸಬೇಕು ಹಾಗೂ ಕಳಪೆ ಗುಣಮಟ್ಟದ ಶೂ, ಸಾಕ್ಸ್‌ ಪೂರೈಸಬಾರದು. ಈ ನಿಟ್ಟನಲ್ಲಿ ಹೆಸರಾಂತ ಪ್ರತಿಷ್ಠಿತ ಕಂಪನಿಗಳಾದ ಬಾಟಾ, ಪ್ಯಾರಾಗನ್‌, ಲಿಬರ್ಟಿ, ಲ್ಯಾನ್ಸರ್‌, ಕರೋನ, ಆಕ್ಷನ್‌, ಲಕಾನಿ ಕಂಪನಿಗಳ ಶೂ, ಸಾಕ್ಸ್‌ ಅಧಿಕೃತ ಮಾರಾಟಗಾರರಿಂದ ಖರೀದಿಸಬೇಕು ಹಾಗೂ ಕಳಪೆ ಗುಣಮಟ್ಟದ ಶೂ, ಸಾಕ್ಸ್‌ ಪತ್ತೆಯಾದರೆ ಶಾಲೆ ಮುಖ್ಯೋಪಾಧ್ಯಾಯರು ಬಿಇಒ ಹಾಗೂ ಡಿಡಿಪಿಐ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಶಿಕ್ಷಣ ಇಲಾಖೆ ಆದೇಶ ನೀಡಲಾಗಿದೆ.

215 ಶಾಲೆಗಳ ಮಕ್ಕಳಿಗೆ ಮಾತ್ರ ಶೂ, ಸಾಕ್ಸ್‌:

ಆದರೆ ಪ್ರಸಕ್ತ 2019-20ನೇ ಶೈಕ್ಷಣಿಕ ಸಾಲಿನ ಸರ್ಕಾರಿ ಶಾಲೆಗಳು ಪ್ರಾರಂಭವಾಗಿ 7 ತಿಂಗಳು ಕಳೆದಿದ್ದರೂ ಜಿಲ್ಲೆಯಲ್ಲಿರುವ ಎಲ್ಲ ಶಾಲೆಗಳ ಮಕ್ಕಳಿಗೆ ಒಂದು ಜೊತೆ ಶೂ, ಸಾಕ್ಸ್‌ ವಿತರಣೆ ಮಾಡುವಲ್ಲಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಎಡವಿದೆ. ಜಿಲ್ಲೆಯಲ್ಲಿ 744 ಪ್ರಾಥಮಿಕ ಶಾಲೆ, 86 ಪ್ರೌಢಶಾಲೆ ಸೇರಿದಂತೆ ಒಟ್ಟು 830 ಶಾಲೆಗಳು ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿದ್ದು, ಇದರಲ್ಲಿ 172 ಪ್ರಾಥಮಿಕ ಶಾಲೆ, 43 ಪ್ರೌಢಶಾಲೆ ಸೇರಿದಂತೆ 215 ಶಾಲೆಗಳ ಮಕ್ಕಳಿಗೆ ಮಾತ್ರ ಶೂ ಮತ್ತು ಸಾಕ್ಸ್‌ ಸಿಕ್ಕಿದ್ದು, 615 ಶಾಲೆ ಮಕ್ಕಳಿಗೆ ಶೂ ಮತ್ತು ಸಾಕ್ಸ್‌ ಸಿಕ್ಕಿಲ್ಲ.

ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ಮುಗಿಯಲು ಕನಿಷ್ಠ 3 ತಿಂಗಳು..!

ಜಿಲ್ಲೆಯಲ್ಲಿ 5 ತಾಲೂಕುಗಳಿದ್ದು, ಕೊಳ್ಳೇಗಾಲ ತಾಲೂಕಿನಲ್ಲಿ ಮಾತ್ರ ಎಲ್ಲ ಶಾಲೆಗಳಲ್ಲೂ ಶೂ, ಸಾಕ್ಸ್‌ ವಿತರಣೆಯಾಗಿದೆ. ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ, ಹನೂರು ತಾಲೂಕುಗಳಲ್ಲಿ 7 ತಿಂಗಳು ಕಳೆದರೂ ಶೂ, ಸಾಕ್ಸ್‌ ವಿತರಣೆಯಲ್ಲಿ ಇಲಾಖೆ ನಿರ್ಲಕ್ಷ್ಯ ತೋರಿದೆ.

ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವ ಸಚಿವರ ಗಮನಕ್ಕೆ ಜಿಲ್ಲೆಯ ಶಾಲಾ ಮಕ್ಕಳಿಗೆ ಶೂ, ಸಾಕ್ಸ್‌ ವಿತರಣೆಯಾಗದಿರುವುದು ಬಂದಿದಿಯೇ ಅಥವಾ ಬಂದಿಲ್ಲವೋ ಆದರೆ ಜಿಲ್ಲೆಯ 615 ಶಾಲೆಯ ಮಕ್ಕಳಿಗೆ ಶೂ ಸಾಕ್ಸ್‌ ಇಲ್ಲದೇ ಶಾಲೆಗೆ ಬರುವಂತಾಗಿದೆ.

ವಿತರಣೆ, ವಿತರಣೆಯಾಗದಿರುವ ವಿವರ

ಜಿಲ್ಲೆಯಲ್ಲಿರುವ 5 ತಾಲೂಕುಗಳಲ್ಲಿ ವಿತರಣೆಯಾಗಿರುವ ಶೂ ಸಾಕ್ಸ್‌ ವಿವರ

ಚಾಮರಾಜನಗರ ತಾಲೂಕಿನಲ್ಲಿ 257 ಪ್ರಾಥಮಿಕ ಶಾಲೆ, 29 ಪ್ರೌಢಶಾಲೆ ಸೇರಿ 286 ಶಾಲೆಗಳಿದ್ದು, 2 ಪ್ರಾಥಮಿಕ ಶಾಲೆ, 20 ಪ್ರೌಢಶಾಲೆ ಸೇರಿದಂತೆ 22 ಶಾಲೆಗಳ ಮಕ್ಕಳಿಗೆ ಮಾತ್ರ ವಿತರಣೆಯಾಗಿದ್ದು, 264 ಶಾಲೆಗಳ ಮಕ್ಕಳಿಗೆ ಶೂ, ಸಾಕ್ಸ್‌ ವಿತರಣೆಯಾಗಿಲ್ಲ. ಯಳಂದೂರು ತಾಲೂಕಿನಲ್ಲಿ 56 ಪ್ರಾಥಮಿಕ ಶಾಲೆ, 7 ಪ್ರೌಢಶಾಲೆ ಸೇರಿ 63 ಶಾಲೆಗಳಿದ್ದು, 45 ಪ್ರಾಥಮಿಕ ಶಾಲೆ, 6 ಪ್ರೌಢಶಾಲೆ ಸೇರಿದಂತೆ 51 ಶಾಲೆಗಳ ಮಕ್ಕಳಿಗೆ ಮಾತ್ರ ವಿತರಣೆಯಾಗಿದ್ದು, 12 ಶಾಲೆಗಳ ಮಕ್ಕಳಿಗೆ ಶೂ, ಸಾಕ್ಸ್‌ ವಿತರಣೆಯಾಗಿಲ್ಲ.

ಬಂಡೀಪುರದಲ್ಲಿ ಜೋಡಿ ಹುಲಿಗಳು ಪತ್ತೆ

ಗುಂಡ್ಲುಪೇಟೆ ತಾಲೂಕಿನಲ್ಲಿ 181 ಪ್ರಾಥಮಿಕ ಶಾಲೆ, 20 ಪ್ರೌಢಶಾಲೆ ಸೇರಿ 201 ಶಾಲೆಗಳಿದ್ದು, 16 ಪ್ರಾಥಮಿಕ ಶಾಲೆ, 5 ಪ್ರೌಢಶಾಲೆ ಸೇರಿದಂತೆ 21 ಶಾಲೆಗಳ ಮಕ್ಕಳಿಗೆ ಮಾತ್ರ ವಿತರಣೆಯಾಗಿದ್ದು, 180 ಶಾಲೆಗಳ ಮಕ್ಕಳಿಗೆ ಶೂ, ಸಾಕ್ಸ್‌ ವಿತರಣೆಯಾಗಿಲ್ಲ. ಹನೂರು ತಾಲೂಕಿನಲ್ಲಿ 158 ಪ್ರಾಥಮಿಕ ಶಾಲೆ, 18 ಪ್ರೌಢಶಾಲೆ ಸೇರಿ 176 ಶಾಲೆಗಳಿದ್ದು, 17 ಪ್ರಾಥಮಿಕ ಶಾಲೆಗೆ ಮಾತ್ರ ಶೂ, ಸಾಕ್ಸ್‌ ವಿತರಣೆಯಾಗಿದ್ದು, 17 ಶಾಲೆಗಳ ಮಕ್ಕಳಿಗೆ ಮಾತ್ರ ವಿತರಣೆಯಾಗಿದ್ದು, 159 ಶಾಲೆಗಳ ಮಕ್ಕಳಿಗೆ ಶೂ, ಸಾಕ್ಸ್‌ ವಿತರಣೆಯಾಗಿಲ್ಲ.

ಶೂ, ಸಾಕ್ಸ್‌ ವಿತರಣೆಗೆ 50ರಷ್ಟುಅನುದಾನ ಬಂದಿಲ್ಲ

ಶೂ, ಸಾಕ್ಸ್‌ ವಿತರಣೆ ಮಾಡಲು ನೇರವಾಗಿ ಎಸ್‌ಡಿಎಂಸಿ ಖಾತೆಗೆ ಹಣ ತಲುಪಲಿದೆ. ಶಿಕ್ಷಣ ಇಲಾಖೆಗೆ ಶಾಲೆಯ ಮುಖ್ಯೋಪಾಧ್ಯಾಯರು ಹಣ ಬಂದಿರುವುದರ ಮಾಹಿತಿ ತಿಳಿಸಲಿದ್ದಾರೆ. ಶೂ, ಸಾಕ್ಸ್‌ ವಿತರಣೆಗೆ ಜಿಲ್ಲೆಯಲ್ಲಿರುವ 50ರಷ್ಟುಶಾಲೆಗಳಿಗೆ ಅನುದಾನ ಬಂದಿದ್ದು, ಅನುದಾನ ಬಂದಿರುವ ಶಾಲೆಗಳಲ್ಲಿ ವಿತರಣೆ ಮಾಡಲಾಗಿದೆ. ಜಿಲ್ಲೆಯ 50ರಷ್ಟುಶಾಲೆಗಳಿಗೆ ಶೂ, ಸಾಕ್ಸ್‌ ವಿತರಣೆಗೆ ಅನುದಾನ ಬಂದಿಲ್ಲದಿರುವುದರಿಂದ ವಿತರಣೆಯಾಗಿಲ್ಲ. ಅನುದಾನ ಬಂದಿಲ್ಲದ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಲು ಸಚಿವರಿಗೆ ಮನವಿ ಮಾಡಲಾಗಿದೆ. ತಿಂಗಳೊಳಗೆ ಅನುದಾನ ಬಿಡುಗಡೆಯಾಗುವ ಬರವಸೆ ನೀಡಿದ್ದಾರೆ. ಅನುದಾನ ವಾರದೊಳಗೆ ಬಂದರೆ ತಿಂಗಳೊಳಗೆ ಶೂ, ಸಾಕ್ಸ್‌ ಪೂರ್ಣವಾಗಿ ವಿತರಣೆಯಾಗಲಿದೆ ಎಂದು ಪ್ರಭಾರ ಡಿಡಿಪಿಐ ಮಂಜುನಾಥ ತಿಳಿಸಿದರು.

-ಎನ್‌. ರವಿಚಂದ್ರ