ಬೆಂಗಳೂರು [ಫೆ.07]:  ಬ್ಯಾಟರಾಯನಪುರ ವಾರ್ಡಿನ ಕೆಂಪಾಪುರದ ಜಿ.ರಾಮಯ್ಯಲೇಔಟ್‌ನಲ್ಲಿ  ವಾಲಿದ್ದ ಐದು ಅಂತಸ್ತಿನ ಕಟ್ಟಡ ತೆರವು ಕಾರ್ಯಾಚರಣೆ ಗುರುವಾರದಿಂದ ಆರಂಭಗೊಂಡಿದೆ.

ರಾಹುಲ್‌ ಎಂಬುವವರಿಗೆ ಸೇರಿದ ಐದು ಅಂತಸ್ತಿನ ಕಟ್ಟಡದ ಪಕ್ಕದ ನಿವೇಶನದಲ್ಲಿ ಪಾಯ ತೆಗೆಯುವಾಗ ಪಿಲ್ಲರ್‌ಗೆ ಧಕ್ಕೆ ಉಂಟಾಗಿ ಬುಧವಾರ ಕಟ್ಟಡ ವಾಲಿತ್ತು. ಇದರಿಂದ ಸುತ್ತಮುತ್ತಲಿನ ನಿವಾಸಿಗಳು ಆತಂಕಗೊಂಡಿದ್ದರು. ತಕ್ಷಣ ಅಕ್ಕ-ಪಕ್ಕದ ಕಟ್ಟಡದಲ್ಲಿ ವಾಸವಿದ್ದ 35 ಕುಟುಂಬದ 150ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿತ್ತು. ವಾಲಿದ ಕಟ್ಟಡ ತೆರವು ಕಾರ್ಯಾಚರಣೆಯನ್ನು ಗುರುವಾರ ಬೆಳಗ್ಗೆಯಿಂದ ಆರಂಭಿಸಲಾಗಿದ್ದು, ಕಟ್ಟಡ ಹೆಚ್ಚಿನ ಪ್ರಮಾಣದಲ್ಲಿ ವಾಲಿರುವುದರಿಂದ ಯಾವುದೇ ಯಂತ್ರೋಪಕರಣ ಬಳಕೆ ಮಾಡದೇ ಮೇಲ್ಭಾಗದ ಮಹಡಿಯಿಂದ ಕಟ್ಟಡ ಒಡೆಯುವ ಕಾರ್ಯ ನಡೆಸಲಾಗುತ್ತಿದೆ.

ವಾಲಿದ ಕಟ್ಟಡ ಹಾಗೂ ಸುತ್ತಮುತ್ತಲಿನ ಕಟ್ಟಡ ಬಳಿ ಯಾರಿಗೂ ಪ್ರವೇಶಕ್ಕೆ ಅವಕಾಶ ನೀಡದೆ ಪೊಲೀಸ್‌ ಭದ್ರತೆ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿ ಶಾಮಕ ದಳ ಸಿಬ್ಬಂದಿ, ಆ್ಯಂಬುಲೆನ್ಸ್‌ ವಾಹನವನ್ನು ಕಟ್ಟಡ ವಾಲಿದ ಸ್ಥಳಕ್ಕೆ ನಿಯೋಜಿಸಲಾಗಿದೆ.

ಕಟ್ಟಡ ತೆರವಿಗೆ 15 ದಿನಬೇಕು:

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಜ್ಞರು ಪರಿಶೀಲಿಸಿ ಕಟ್ಟಡ ತೆರವು ನೇತೃತ್ವ ವಹಿಸಿಕೊಂಡಿದ್ದಾರೆ. ಗುರುವಾರ 12 ಮಂದಿ ಸಿಬ್ಬಂದಿ ಬಳಸಿ ನಿಧಾನವಾಗಿ ತೆರವು ಮಾಡಲಾಗುತ್ತಿದೆ. ಇಡೀ ಕಟ್ಟಡ ತೆರವಿಗೆ 15 ದಿನ ಬೇಕಾಗಲಿದೆ ಎಂದು ಎನ್‌ಡಿಆರ್‌ಎಫ್‌ ಅಧಿಕಾರಿಗಳು ಹೇಳಿದ್ದಾರೆ. ಶುಕ್ರವಾರದಿಂದ ಹಿಟಾಚಿ ಹಾಗೂ ಯಂತ್ರ ಬಳಸಿ ತ್ವರಿತವಾಗಿ ಕಟ್ಟಡ ತೆರವು ಮಾಡುವುದಕ್ಕೆ ಪಾಯ ತೆಗೆಯಲಾದ ನಿವೇಶನದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಯಲಹಂಕ ವಲಯದ ಮುಖ್ಯ ಎಂಜಿನಿಯರ್‌ ರಂಗನಾಥ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ನೆಲಕ್ಕುರುಳುವ ಭೀತಿಯಲ್ಲಿದೆ 4 ಅಂತಸ್ತಿನ ಕಟ್ಟಡ; ಆತಂಕದಲ್ಲಿ ನಿವಾಸಿಗಳು

ವಾಲಿದ ಕಟ್ಟಡದಲ್ಲಿದ್ದವರಿಗೆ ಹಾಗೂ ಅಕ್ಕಪಕ್ಕದ ಕಟ್ಟಡದಲ್ಲಿದ ನಿವಾಸಿಗಳಿಗೆ ಅಮೃತಹಳ್ಳಿಯ ಆಸ್ಪತ್ರೆ ಹಾಗೂ ಶಾಲೆಯಲ್ಲಿ ಐದು ದಿನ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಊಟ, ರಾತ್ರಿ ಮಲಗುವುದಕ್ಕೆ ಬೇಕಾದ ಹೊದಿಕೆ ಸೇರಿದಂತೆ ಅಗತ್ಯ ಸೌಲಭ್ಯವನ್ನು ಬಿಬಿಎಂಪಿ ವತಿಯಿಂದ ಕಲ್ಪಿಸಲಾಗಿದೆ ಎಂದು ತಿಳಿಸಿದರು.