ಒಕ್ಕಲಿಗ ಸಮಾಜಕ್ಕೆ ತೆಗೆದುಕೊಂಡು ಅಭ್ಯಾಸವಿಲ್ಲ
ಮೈಸೂರಿನ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾವು ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಮತ್ತು ಒಕ್ಕಲಿಗ ರಾಜಮನೆತನದ ಇತಿಹಾಸ ಕುರಿತು ವಿಚಾರಸಂಕಿರಣವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು.
ಮೈಸೂರು (ಅ. 09) : ನಮ್ಮ ಒಕ್ಕಲಿಗ ಸಮಾಜಕ್ಕೆ ಕೊಟ್ಟು ಅಭ್ಯಾಸವೇ ಹೊರತು, ತೆಗೆದುಕೊಂಡು ಅಭ್ಯಾಸವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಅಖಿಲ ಕರ್ನಾಟಕ (karnataka) ಒಕ್ಕಲಿಗರ ಮಹಾ ಸಭಾವು ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ (Kempegowda) ಮತ್ತು ಒಕ್ಕಲಿಗ ರಾಜ ಮನೆತನದ ಇತಿಹಾಸ ಕುರಿತ ರಾಜ್ಯ ಮಟ್ಟದ 2 ದಿನಗಳ ವಿಚಾರ ಸಂಕಿರಣವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಮಾಜಕ್ಕೆ ನಾವು ಉಳಿಯಬೇಕು, ಜೊತೆಗೆ ತುಳಿತಕ್ಕೆ ಒಳಗಾದ ಬೇರೆಯವರೂ ಉಳಿಯಬೇಕು ಎನ್ನುವ ಆಶಯವಿದೆ ಎಂದರು.
ಸಾಹಿತ್ಯ ಕ್ಷೇತ್ರದಲ್ಲಿ ಕುವೆಂಪು, ಧಾರ್ಮಿಕ ಕ್ಷೇತ್ರದಲ್ಲಿ ಶ್ರೀ ಬಾಲ ಗಂಗಾಧರನಾಥ ಸ್ವಾಮೀಜಿ, ರಾಜಕೀಯ (Politics) ಕ್ಷೇತ್ರದಲ್ಲಿ ನಮ್ಮ ತಂದೆ ಎಚ್.ಡಿ. ದೇವೇಗೌಡರು ದಿಗ್ಗಜರು. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಪ್ರಧಾನಿಯಾಗಿ ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದು ಹೆಮ್ಮೆಯ ವಿಚಾರ. ಹೀಗಾಗಿ ನನ್ನ ತಂದೆ ರಾಜಕೀಯ ಕ್ಷೇತ್ರದ ದಿಗ್ಗಜರು ಎಂದು ಅವರು ಬಣ್ಣಿಸಿದರು.
ನಮ್ಮ ಸ್ವಾಮೀಜಿ ಒಕ್ಕಲಿಗ ಸಮುದಾಯವನ್ನು ಒಗ್ಗೂಡಿಸುವುದರ ಜೊತೆಗೆ ಹಲವು ಸಮಾಜಕ್ಕೆ ದಾರಿ ತೋರಿಸಿದ್ದಾರೆ. ನಮ್ಮ ಯುವ ಪೀಳಿಗೆಗೆ ನಮ್ಮ ಇತಿಹಾಸದ ನೆನಪು ಮೂಡಿಸುವ ಕಾರ್ಯಕ್ರಮಗಳು ನಿರಂತರ ನಡೆಯಬೇಕು. ಇಲ್ಲಿ ರಾಜಕೀಯಕ್ಕೆ ಆಸ್ಪದ ಕೊಡಬೇಡಿ. ಸಮಾಜಕ್ಕೆ ಉತ್ತಮ ಕೊಡುಗೆ ನೀಡಿ. ನಾಡಿನ ಬೆಳವಣಿಗೆಗೆ ನಿಮ್ಮ ಸೇವೆ ಸಿಗಲಿ ಎಂದು ಅವರು ಕಿವಿಮಾತು ಹೇಳಿದರು.
ಕೆಂಪೇಗೌಡರ ಕೊಡುಗೆ ಅಪಾರ:
ಕರ್ನಾಟಕಕ್ಕೆ ನಾಡಪ್ರಭು ಕೆಂಪೇಗೌಡರ ನೀಡಿರುವ ಕೊಡುಗೆ ಅಪಾರ. ಇಂದು ಬೆಂಗಳೂರು ಇಷ್ಟೊಂದು ಎತ್ತರಕ್ಕೆ ಬೆಳೆದಿರುವುದರ ಹಿಂದೆ ಕೆಂಪೇಗೌಡ ಪರಿಶ್ರಮವೇ ಕಾರಣ. ಅವರು ರಾಜಧಾನಿ ಬೆಂಗಳೂರನ್ನು ನಿರ್ಮಿಸಿ ಸಾವಿರ ಕೆರೆಗಳನ್ನು ಅಭಿವೃದ್ಧಿ ಪಡಿಸಿದ್ದರು. ಒಂದು ವೇಳೆ ಆ ಎಲ್ಲಾ ಕೆರೆಗಳನ್ನು ಹಾಗೇ ಮುಂದವರಿಸಿಕೊಂಡು ಬಂದಿದ್ದರೆ, ಇಂದು ಬೆಂಗಳೂರಿಗೆ ಪ್ರವಾಹ ಎದರುರಾಗುತ್ತಿರಲಿಲ್ಲ ಎಂದರು.
ಇದೇ ವೇಳೆ ಮಹಾ ಕವಯತ್ರಿ ಡಾ. ಲತಾ ರಾಜಶೇಖರ್ ಅವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಲ್ಲದೆ, ನಾಡಪ್ರಭು ಕೆಂಪೇಗೌಡ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಆದಿಚುಂಚನಗಿರಿ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಲ್. ನಾಗೇಂದ್ರ, ವಿಧಾನಪರಿಷತ್ತು ಸದಸ್ಯ ಸಿ.ಎನ್. ಮಂಜೇಗೌಡ, ಕಾಂಗ್ರೆಸ್ ಮುಖಂಡ ಕೆ. ಹರೀಶ್‌ಗೌಡ, ಮಹಾಸಭಾಗದ ಸಂಸ್ಥಾಪಕ ಅಧ್ಯಕ್ಷ ಎನ್. ಬೆಟ್ಟೇಗೌಡ, ಗೌರವ ಸಲಹೆಗಾರರಾದ ಕೆ. ದೇವೇಗೌಡ, ಡಾ.ಬಿ.ಎನ್. ರವೀಶ್ ಮೊದಲಾದವರು ಇದ್ದರು. ಮಾ. ವೆಂಕಟೇಶ್ ನಿರೂಪಿಸಿದರು.
ಕೆಂಪೇಗೌಡರು ಬೆಂಗಳೂರಿನಲ್ಲಿ ಸಾವಿರ ಕೆರೆಗಳನ್ನು ನಿರ್ಮಿಸಿರುವ ಇತಿಹಾಸವಿದೆ. ಮಳೆಯ ಆಧಾರದ ಮೇಲೆ ಕೆರೆಗಳನ್ನು ನಿರ್ಮಿಸಿದ್ದರು. ನಂತರ ದಿನಗಳಲ್ಲಿ ಬೆಂಗಳೂರು ನಗರ ಅಭಿವೃದ್ಧಿ ಹೆಸರಿನಲ್ಲಿ ಕೆರೆಗಳು ಮಾಯವಾಗಿದೆ. ಕೆರೆಗಳನ್ನು, ರಾಜ ಕಾಲುವೆಗಳನ್ನು ಉಳಿಸಿದ್ದರೇ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉಂಟಾಗುತ್ತಿರಲಿಲ್ಲ, ಪ್ರವಾಹ ಸಹ ಆಗುತ್ತಿರಲಿಲ್ಲ.
- ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
- ನಮ್ಮ ಒಕ್ಕಲಿಗ ಸಮಾಜಕ್ಕೆ ಕೊಟ್ಟು ಅಭ್ಯಾಸವೇ ಹೊರತು, ತೆಗೆದುಕೊಂಡು ಅಭ್ಯಾಸವಿಲ್ಲ
- ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಅಖಿಲ ಕರ್ನಾಟಕ (karnataka) ಒಕ್ಕಲಿಗರ ಮಹಾ ಸಭಾವು ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ (Kempegowda) ಮತ್ತು ಒಕ್ಕಲಿಗ ರಾಜ ಮನೆತನದ ಇತಿಹಾಸ ಕುರಿತ ರಾಜ್ಯ ಮಟ್ಟದ 2 ದಿನಗಳ ವಿಚಾರ ಸಂಕಿರಣ
- ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾಗಿ