ಮಂಗ​ಳೂ​ರು(ಫೆ.18): ದಕ್ಷಿಣ ಕನ್ನ​ಡದ ಪ್ರತಿ​ಷ್ಠಿತ ಶಿಕ್ಷಣ ಸಂಸ್ಥೆ​ಗಳ ಮೇಲೆ ಬೀಸಲು ಆದಾಯ ತೆರಿಗೆ ಇಲಾಖೆ ಅಧಿ​ಕಾ​ರಿ​ಗಳು ಫುಟ್ಬಾಲ್‌ ಚಾಂಪಿ​ಯ​ನ್‌​ಶಿ​ಪ್‌ ಸೋಗಿ​ನಲ್ಲಿ ಕಾರ್‌ಬುಕ್‌ ಮಾಡಿ​ರು​ವುದು ಇದೀಗ ಬೆಳ​ಕಿಗೆ ಬಂದಿದೆ. 

ಯಾವ್ಯಾವ ಸ್ಥಳ​ಗ​ಳಿಗೆ ದಾಳಿ ಮಾಡ​ಬೇಕು ಎಂಬ ಕುರಿತು ಮೊದಲೇ ಯೋಜನೆ ಹಾಕಿ​ಕೊಂಡಿದ್ದ ಆದಾಯ ತೆರಿಗೆ ಇಲಾ​ಖೆಯು ಮಂಗಳವಾರ ಸಂಜೆಯೇ 250ಕ್ಕೂ ಅಧಿಕ ಐಟಿ ಅಧಿಕಾರಿಗಳು, ಸಿಬ್ಬಂದಿಯನ್ನು ಕಳು​ಹಿ​ಸಿ​ಕೊ​ಟ್ಟಿ​ತ್ತು. ದಾಳಿ ಕುರಿತು ಯಾರಿಗೂ ಸಣ್ಣ ಸುಳಿವು ಕೂಡ ಸಿಗ​ಬಾ​ರದು ಎನ್ನುವ ಕಾರ​ಣಕ್ಕೆ ಕೇರಳದಲ್ಲಿ ಅಂತಾರಾಜ್ಯ ಫುಟ್‌ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊ​ಳ್ಳ​ಬೇ​ಕಿದೆ ಎಂದು ಹೇಳಿ ಸುಮಾರು 60 ಇನ್ನೋ​ವಾ​ಗಳನ್ನು ಟ್ರಾವೆಲ್‌ ಏಜೆ​ನ್ಸಿ​ಯೊಂದರ ಮೂಲಕ ಬುಕ್‌ ಮಾಡಲಾ​ಗಿ​ತ್ತು. ಅದ​ರಂತೆ ಮಂಗ​ಳ​ವಾರ ರಾತ್ರಿಯೇ ಬೆಳ್ಳಂಬೆ​ಳಗ್ಗೆ ಆಟಗಾರರು ಬರಲಿದ್ದಾರೆ, ಸಿದ್ಧ​ವಾ​ಗಿರಿ ಎಂಬ ಸೂಚನೆಯನ್ನು ಡ್ರೈವರ್‌ಗಳಿಗೆ ನೀಡಲಾಗಿತ್ತು. 

ಅಧಿ​ಕಾ​ರಿ​ಗಳ ಸೂಚ​ನೆ​ಯಂತೆ ಇನ್ನೋವಾ ಕಾರು​ಗ​ಳು ಮುಂಜಾನೆ ಮೊದಲೇ ಸೂಚಿಸಿದ್ದ ಸ್ಥಳ​ಗ​ಳಿಗೆ ಬಂದಿದ್ದವು. ಕಾರು ಹತ್ತುವ ಮುನ್ನ ಅಧಿ​ಕಾ​ರಿ​ಗಳು ಕಾರುಗಳಿಗೆ ‘ಇಂಟರ್‌ಸ್ಟೇಟ್‌ ಫುಟ್ಬಾಲ್‌ ಚಾಂಪಿಯನ್‌ಶಿಪ್‌’ ಎಂಬ ಸ್ಟಿಕ್ಕರ್‌ ಅನ್ನೂ ಅಂಟಿಸಿದ್ದ​ರು.

ರಾಜ್ಯಾದ್ಯಂತ ಮೆಡಿಕಲ್ ಕಾಲೇಜುಗಳಿಗೆ ಐಟಿ ಶಾಕ್!

ಈ ಹಿಂದೆ ಕೊಡ​ಗಿ​ನಲ್ಲಿ ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ದಾಳಿ ನಡೆ​ಸುವ ವೇಳೆಯೂ ಅಧಿ​ಕಾ​ರಿ​ಗಳು ಇದೇ ರೀತಿ​ಯ ತಂತ್ರ ​ಬ​ಳ​ಸಿ​ದ್ದರು. ಮೈಸೂ​ರಿ​ನಲ್ಲಿ ಮದು​ವೆ​ ಹೆಸ​ರಲ್ಲಿ ಕಾರ್‌ ಬುಕ್‌ ಮಾಡಿದ್ದ ಅಧಿ​ಕಾ​ರಿ​ಗ​ಳು ನಂತರ ಬೆಳ್ಳಂಬೆ​ಳಗ್ಗೆ ರಶ್ಮಿಕಾ ಮನೆಗೆ ದಾಳಿ ನಡೆಸಿ ದಾಖ​ಲೆ​ಗ​ಳನ್ನು ಪರಿ​ಶೀ​ಲಿ​ಸಿ​ದ್ದ​ರು.

ಉದ್ಯಮಿ ಶ್ರೀನಿವಾಸ ರಾವ್‌ ತಂದೆ ಅಸ್ವಸ್ಥ

ಮಂಗ​ಳೂ​ರಿನ ಪ್ರಸಿದ್ಧ ಉದ್ಯ​ಮಿಗ​ಳ​ಲ್ಲೊ​ಬ್ಬ​ರಾದ ಶ್ರೀನಿ​ವಾಸ ಸಮೂಹ ಸಂಸ್ಥೆಗಳ ಮೇಲೆ ಐಟಿ ಅಧಿ​ಕಾ​ರಿ​ಗಳು ದಾಳಿ ನಡೆ​ಸಿದ ಸಂದ​ರ್ಭ​ದಲ್ಲಿ ಮಾಲೀಕ ಶ್ರೀನಿ​ವಾಸ ರಾವ್‌ ಅವರ ವೃದ್ಧ ತಂದೆ ಅಸ್ವ​ಸ್ಥ​ರಾದ ಘಟ​ನೆಯೂ ನಡೆ​ಯಿ​ತು. ಶ್ರೀನಿವಾಸ ರಾವ್‌ ಅವರ ಜೈಲ್‌ ರಸ್ತೆಯಲ್ಲಿರುವ ಬಂಗಲೆ ಮೇಲೆ ಬೆಳ್ಳಂಬೆ​ಳಗ್ಗೆ ಐಟಿ ಅಧಿ​ಕಾ​ರಿ​ಗಳು ದಾಳಿ ನಡೆಸಿದ ಸಂದರ್ಭದಲ್ಲಿ ಅವರ ವೃದ್ಧ ತಂದೆ ರಾಘವೇಂದ್ರ ರಾವ್‌ ಮನೆ​ಯಲ್ಲೇ ಇದ್ದರು. ಐಟಿ ದಾಳಿ ವಿಚಾರ ತಿಳಿ​ಯು​ತ್ತಿ​ದ್ದಂತೆ ದಿಢೀರ್‌ ಅಸ್ವಸ್ಥಗೊಂಡ ಅವ​ರನ್ನು ತಕ್ಷ​ಣ ಆಂಬ್ಯುಲೆನ್ಸ್‌ನಲ್ಲಿ ಆಕ್ಸಿಜನ್‌ ತರಿಸಿ ಚಿಕಿತ್ಸೆ ನೀಡಲಾಯಿತು. ಈ ಘಟನೆಯಿಂದ ಐಟಿ ಅಧಿಕಾರಿಗಳು ಕೆಲಕಾಲ ವಿಚ​ಲಿ​ತ​ರಾ​ದರೂ ನಂತರ ರಾಘ​ವೇಂದ್ರ ರಾವ್‌ ಚೇತ​ರಿ​ಸಿ​ಕೊಂಡ ಬಳಿಕ ಕಾರ್ಯಾ​ಚ​ರಣೆ ಮುಂದು​ವ​ರಿ​ಸಿ​ದ​ರು.