Asianet Suvarna News Asianet Suvarna News

ಜನರಿಗೆ ಕಿರುಕುಳ ಕೊಟ್ರೆ ಕಲಬುರ್ಗಿಗೆ ಎತ್ತಂಗಡಿ: SP, ಅಧಿಕಾರಿಗಳಿಗೆ ಯಡಿಯೂರಪ್ಪ ಎಚ್ಚರಿಕೆ..!

ಮರಳು ವಿಚಾರವಾಗಿ ಅನಗತ್ಯವಾಗಿ ಜನರಿಗೆ ತೊಂದರೆ ಕೊಟ್ಟರೆ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗುತ್ತೆ ಅಂತ ಸಿಎಂ ಯಡಿಯೂರಪ್ಪ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಕಿರುಕುಳ ನೀಡುವ ದೂರುಗಳು ಇನ್ನು ಬರಬಾರದು. ಇದೇ ರೀತಿ ದೂರುಗಳು ಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ಖಡಕ್ಕಾಗಿ ಎಚ್ಚರಿಕೆ ನೀಡಿದರು. 

 

officers will be transferred to kalburgi if they torcher people says yediyurappa
Author
Bangalore, First Published Sep 1, 2019, 12:49 PM IST

ಶಿವಮೊಗ್ಗಆ.01): ಮರಳು ವಿಚಾರಕ್ಕೆ ಸಂಬಂಧಿಸಿದಂತೆ ಜನರಿಗೆ ಅನಗತ್ಯವಾಗಿ ತೊಂದರೆ ನೀಡಿದರೆ ಕಲಬುರ್ಗಿ ಕಡೆ ಎತ್ತಂಗಡಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಎಸ್ಪಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ನಗರದಲ್ಲಿ ಶನಿವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನೆರೆ ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ಸಮೀಕ್ಷೆ ಕಾರ್ಯ ಪೂರ್ಣ:

ನೆರೆ ಪರಿಹಾರ ಕಾರ್ಯಗಳ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌, ನೆರೆಪೀಡಿತರಾದ 6089 ಕುಟುಂಬಗಳಿಗೆ ತಲಾ 10 ಸಾವಿರದಂತೆ ಪರಿಹಾರದ ಮೊತ್ತ ಅವರ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡಲಾಗಿದೆ. 11 ಮಾನವ ಜೀವ ಹಾನಿ ಪ್ರಕರಣಗಳಲ್ಲಿ ಸಹ ತಲಾ ಐದು ಲಕ್ಷ ರು. ಪರಿಹಾರ ಒದಗಿಸಲಾಗಿದೆ. ಹಾನಿಗೀಡಾದ ಮನೆಗಳ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಲಾಗಿದ್ದು, ಒಟ್ಟು 4048 ಮನೆಗಳಿಗೆ ಹಾನಿ ಉಂಟಾಗಿದೆ. ಮನೆ ಹಾನಿ ಕುರಿತು ಜಿಪಿಎಸ್‌ ಮಾಡಿಸಲಾಗುತ್ತಿದ್ದು, 1531 ಪ್ರಕರಣಗಳಲ್ಲಿ ಮನೆಯ ಸೂಕ್ತ ದಾಖಲೆಗಳು ಇರುವುದಿಲ್ಲ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ವಿಧಾನಪರಿಷತ್‌ ಸದಸ್ಯ ಆರ್‌. ಪ್ರಸನ್ನಕುಮಾರ್‌ ಅವರು ಮಾತನಾಡಿ, ನಗರದಲ್ಲಿರುವ ಎಲ್ಲಾ ನೆರೆ ಸಂತ್ರಸ್ತರ ಖಾತೆಗೆ ಹಣ ಹೋಗಿಲ್ಲ. ಕೆಲವರಿಗೆ ಮಾತ್ರ ಹಣ ತಲುಪಿದೆ ಎಂದರು. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಮಾತನಾಡಿ, ಖಾತೆಯ ಸಮಸ್ಯೆಯಿದ್ದು, ಹಣ ತಲುಪದ ಸಂತ್ರಸ್ತರಿಗೆ ಹಣವನ್ನು ಖಾತೆಗೆ ಹಾಕಲಾಗುವುದು ಎಂದರು.

ಶಾಸಕ ಅಶೋಕ ನಾಯ್ಕ ಮಾತನಾಡಿ, ಬಡವರು ಮನೆ ಕಟ್ಟಲು ಗ್ರಾಮಾಂತರ ಪ್ರದೇಶಗಳಲ್ಲಿ ಹೊಳೆ, ದಿಣ್ಣೆಗಳ ಪಕ್ಕ ಮರಳು ತೆಗೆದು ಸಾಗಾಟ ಮಾಡುತ್ತಿರುವಾಗ ಅರಣ್ಯ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು ಮರಳಿನ ಸಹಿತ ಜನರನ್ನು ವಶಕ್ಕೆ ಪಡೆದು ದೂರು ದಾಖಲಿಸುತ್ತಾರೆ ಎಂದು ದೂರಿದರು.

ಜಿಮ್‌ನಲ್ಲಿ ಯುವತಿ ಜೊತೆ ಅಸಭ್ಯ ವರ್ತನೆ: ಕ್ಯಾಮೆರಾ ಅಳವಡಿಸಲು ಆಗ್ರಹ

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಇಂತಹ ಕಿರುಕುಳ ನೀಡುವ ದೂರುಗಳು ಇನ್ನು ಬರಬಾರದು. ಇದೇ ರೀತಿ ದೂರುಗಳು ಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ಖಡಕ್ಕಾಗಿ ಎಚ್ಚರಿಕೆ ನೀಡಿದರು.

ಸಾಗರ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಲಿಂಗನಮಕ್ಕಿ ಜಲಾಶಯದಲ್ಲಿ ಪರವಾನಗಿ ಹೊಂದಿದ ಮೀನುಗಾರರಿಗೆ ಅರಣ್ಯ ಇಲಾಖೆ ಅವರು ಬಲೆ, ಬೋಟುಗಳು ಸೇರಿದಂತೆ ಅವರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಅದನ್ನು ಪ್ರಶ್ನಿಸಿದರೆ ಅವರು ಅರಣ್ಯಪ್ರದೇಶದ ವ್ಯಾಪ್ತಿಯಲ್ಲಿ ಮೀನು ಹಿಡಿಯುತ್ತಿದ್ದಾರೆ ಎಂದು ಹೇಳುತ್ತಾರೆ ಎಂದರು. ಸಿಎಂ ಪ್ರತಿಕ್ರಿಯಿಸಿ ಮೀನುಗಾರರ ಪರಿಕರಗಳನ್ನು ಹಿಂತಿರುಗಿಸುವಂತೆ ಸೂಚಿಸಿದರು. ಜಿಲ್ಲಾಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಶಾಸಕ ಅರಗ ಜ್ಞಾನೇಂದ್ರ ಅವರು ಮಾತನಾಡಿ, ನೆರೆಯಿಂದಾಗಿ ಜಾನುವಾರು ಕೊಟ್ಟಿಗೆಗಳು ಸಹ ಹಾಳಾಗಿವೆ. ಅವುಗಳ ನಿರ್ಮಾಣಕ್ಕೂ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ಸ್ವಲ್ಪ ಉದಾರತೆ ತೋರಿ:

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ತಾತ್ಕಾಲಿಕ ಪರಿಹಾರ ಒದಗಿಸಲು ಬಿಟ್ಟು ಹೋಗಿರುವ ಕುಟುಂಬಗಳು ಇದ್ದರೆ ಅವರನ್ನು ಗುರುತಿಸಿ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಜಾನುವಾರುಗಳ ಕೊಟ್ಟಿಗೆಗಳಿಗೆ ಹಾನಿ ಉಂಟಾಗಿದ್ದರೆ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ಒದಗಿಸಬೇಕು ಎಂದ ಅವರು, ರೈತರು ಎಲ್ಲಿಯೇ ಮನೆ ಕಟ್ಟಿಕೊಂಡಿದ್ದರೂ ಹಾನಿಯಾದಲ್ಲಿ ಅದನ್ನು ಪರಿಗಣಿಸಿ ಪರಿಹಾರ ನೀಡಬೇಕು. ನಷ್ಟಅಂದಾಜು ಮಾಡುವ ಸಂದರ್ಭದಲ್ಲಿ ಸ್ವಲ್ಪ ಉದಾರತೆಯನ್ನು ತೋರಬೇಕು ಎಂದು ಸೂಚಿಸಿದರು.

ಕೆಲಸ ಮಾಡಿಕೊಡಲಿಲ್ಲ ಎಂದು ಕಚೇರಿ ಫೈಲ್‌ನ್ನೇ ಕದ್ದೊಯ್ದ ರೈತ..!

ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್‌. ಈಶ್ವರಪ್ಪ ಮಾತನಾಡಿ, ತುಂಗಾನದಿಗೆ ಕೇಂದ್ರ ಸರ್ಕಾರದಿಂದ ನೆರವಿನಲ್ಲಿ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಆದರೂ ಸಹ ಪ್ರವಾಹ ತಡೆಗೋಡೆಯನ್ನು ದಾಟಿ ನೀರು ಒಳ ನುಗ್ಗಿ ಬರುತ್ತಿದೆ. ಹಾಗಾಗಿ ಎರಡೂ ಬದಿಗಳಲ್ಲಿಯೂ ತಡೆಗೋಡೆ ನಿರ್ಮಿಸಬೇಕು ಎಂದರು.

ಸಭೆಯ ಆರಂಭದಲ್ಲಿಯೇ ಸಿಎಂ ಬಿ. ಎಸ್‌. ಯಡಿಯೂರಪ್ಪ ಅವರು, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆ. ಎಸ್‌. ಈಶ್ವರಪ್ಪ ಅವರನ್ನು ನೇಮಕ ಮಾಡಿರುವುದಾಗಿ ಘೋಷಣೆ ಮಾಡಿದರು. ತಮ್ಮನ್ನು ಜಿಲ್ಲಾ ಉಸ್ತುವಾರಿಯಾಗಿ ನೇಮಕಗೊಳಿಸಿದ್ದಕ್ಕೆ ಸಿಎಂಗೆ ಸಚಿವ ಕೆ. ಎಸ್‌. ಈಶ್ವರಪ್ಪ ಅವರು ಸಭೆಯಲ್ಲಿ ಧನ್ಯವಾದವನ್ನು ಸಲ್ಲಿಸಿದರು.

ಕಲ್ಲೊಡ್ಡು ಯೋಜನೆ ಮಾಡಿಯೇ ಸಿದ್ಧ: ಯಡಿಯೂರಪ್ಪ

ಹಾವೇರಿ ಜಿಲ್ಲೆಯಲ್ಲಿ ನೆರೆಹಾನಿ ಪ್ರದೇಶಗಳ ಪರಿಶೀಲನೆ ಮಾಡುವ ಹಿನ್ನೆಲೆಯಲ್ಲಿ ಕೆಲ ಸಮಯದ ನಂತರ ಮಳೆಹಾನಿ ಹಾಗೂ ಪರಿಹಾರ ಕುರಿತ ಸಭೆಯಿಂದ ಸಿಎಂ ಯಡಿಯೂರಪ್ಪ ಅವರು ನಿರ್ಗಮಿಸಿದರು. ನಂತರ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ಉಸ್ತುವಾರಿಯಲ್ಲಿ ಮುಂದುವರಿಯಿತು.

ಸಭೆಯಲ್ಲಿ ಕಂದಾಯ ಸಚಿವ ಆರ್‌. ಅಶೋಕ್‌, ಲೋಕಸಭಾ ಸದಸ್ಯ ಬಿ. ವೈ. ರಾಘವೇಂದ್ರ, ಜಿಪಂ ಅಧ್ಯಕ್ಷೆ ಜ್ಯೋತಿ ವಿಜಯ ಕುಮಾರ್‌, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಎಲ್‌. ವೈಶಾಲಿ, ಪೊಲೀಸ್‌ ವರಿಷ್ಠಾಧಿಕಾರಿ ಶಾಂತರಾಜ್‌, ಕುಮಾರ ಬಂಗಾರಪ್ಪ, ವಿಧಾನಪರಿಷತ್‌ ಸದಸ್ಯ ರುದ್ರೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios