ಸೂರತ್-ಚೆನ್ನೈ ಎಕ್ಸ್‌ಪ್ರೆಸ್ ವೇ ಯೋಜನೆ: ಭೂಸ್ವಾಧೀನ ಪರಿಹಾರ, ರೈತರಿಗೆ ಮಹಾಮೋಸ..!
ನೀರಾವರಿ ಬದಲು ಖುಷ್ಕಿ ಜಮೀನು ಎಂದು ದಾಖಲೆ ತಿದ್ದಿ ಕಡಿಮೆ ಪರಿಹಾರ ನೀಡಿಕೆ: ಆರೋಪ
ಆನಂದ್.ಎಂ.ಸೌದಿ
ಯಾದಗಿರಿ(ಜು.30): ಸೂರತ್-ಚೆನ್ನೈ ಎಕ್ಸಪ್ರೆಸ್ ವೇ ಷಟ್ಪಥ ನಿರ್ಮಾಣದ ಸಲುವಾಗಿ ಜಿಲ್ಲೆಯಲ್ಲಿ ಭೂಸ್ವಾಧೀನ ಮಾಡಿಕೊಳ್ಳುತ್ತಿರುವ ಅಧಿಕಾರಿಗಳು ಅಲ್ಪ ಪರಿಹಾರ ನೀಡುವ ಸಲುವಾಗಿ ಫಲವತ್ತಾದ ನೀರಾವರಿ ಜಮೀನುಗಳನ್ನು ಖುಷ್ಕಿ (ಒಣಭೂಮಿ) ಎಂದು ದಾಖಲೆಗಳಲ್ಲಿ ನಮೂದಿಸಿ ವಂಚಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿದ್ದು ರೈತವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೇಂದ್ರ ಸರ್ಕಾರದ ಭಾರತಮಾಲಾ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಈ ಷಟ್ಪಥ ರಸ್ತೆಗಾಗಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ (ಕೆಬಿಜೆಎನ್ನೆಲ್) ಕಾಲುವೆ ಇಲ್ಲಿ ಹಾದು ಹೋಗಿರುವ ವಡಗೇರಾ ಹಾಗೂ ಶಹಾಪುರ ತಾಲೂಕುಗಳ 21 ಗ್ರಾಮಗಳಲ್ಲಿನ ಅಂದಾಜು 580 ಹೆಕ್ಟೇರ್(1433 ಎಕ್ರೆ) ಪ್ರದೇಶವನ್ನು ಸ್ವಾಧೀನಪಡಿಸಲಾಗುತ್ತಿದೆ. ಕಾಲುವೆಯಂಚಿನ, ತರಿ (ನೀರಾವರಿ) ಜಮೀನುಗಳಿಗೆ ಒಂದು ಎಕ್ರೆಗೆ .19 ಲಕ್ಷಕ್ಕೂ ಹೆಚ್ಚಿನ ಪರಿಹಾರ ನೀಡಬೇಕಾಗುತ್ತದೆ. ಅದೇ ಖುಷ್ಕಿ ಭೂಮಿಗಾದರೆ ಎಕ್ರೆಗೆ .9 ಲಕ್ಷಗಳವರೆಗೆ ಪರಿಹಾರ ಸಿಗುತ್ತದೆ. ಆದರೆ ನೀರಾವರಿ ಜಮೀನುಗಳನ್ನು ಪಹಣಿಗಳಲ್ಲಿ ‘ಖುಷ್ಕಿ’ ಎಂದು ನಮೂದಿಸಿ, ಕಡಿಮೆ ಪರಿಹಾರ ನೀಡುವ ಹುನ್ನಾರ ಅಧಿಕಾರಿಗಳಿಂದಲೇ ನಡೆದಿದೆ ಎಂಬ ಆರೋಪ ಇಲ್ಲಿನ ಸಣ್ಣ ರೈತರದ್ದು.
ಹೀಗಿದೆ ಲೆಕ್ಕಾಚಾರ:
ವಡಗೇರಾದಲ್ಲಿ ಖುಷ್ಕಿ ಭೂಮಿಗೆ ಪ್ರತಿ ಚದರ ಮೀಟರ್‌ಗೆ .53, ಅಂದರೆ ಎಕ್ರೆಗೆ .2.15 ಲಕ್ಷ ಆಗುತ್ತದೆ. ಇದರ ನಾಲ್ಕು ಪಟ್ಟು ಹಣ ಹಾಗೂ ಮೂಲ ಪರಿಹಾರಕ್ಕೆ ಶೇ.12ರಷ್ಟುಬಡ್ಡಿ ಸೇರಿಸಿ ಒಟ್ಟು .9 ಲಕ್ಷದಷ್ಟುಪರಿಹಾರ ಖುಷ್ಕಿ ಭೂಮಿಗೆ ಸಿಗುತ್ತದೆ. ಇನ್ನು ನೀರಾವರಿ ಭೂಮಿಗೆ ಪ್ರತಿ ಚದರ ಮೀಟರಿಗೆ .116 ದರ ನಿಗದಿ ಮಾಡಲಾಗಿದೆ. ಅಂದರೆ ಒಂದು ಎಕ್ರೆ ನೀರಾವರಿ ಜಮೀನಿಗೆ .4.7 ಲಕ್ಷ ನಿಗದಿಯಾಗುತ್ತದೆ. ಈ ಮೂಲ ಪರಿಹಾರದ ನಾಲ್ಕು ಪಟ್ಟು ಹಣ ಹಾಗೂ ಮೂಲಹಣದ ಶೇ.12ರಷ್ಟುಬಡ್ಡಿ ಸೇರಿಸಿದರೆ, ಅಂದಾಜು .19 ಲಕ್ಷಗಳಿಗೂ ಮಿಕ್ಕಿ ಪರಿಹಾರ ರೈತರಿಗೆ ಸಿಗಬೇಕು.
ಯಾದಗಿರಿ: ಹೆಚ್ಚಿನ ಪರಿಹಾರ ನೀಡದಿದ್ರೆ ಆತ್ಮಹತ್ಯೆ ಮಾಡಿಕೊಳ್ತೇವೆ, ರೈತರ ಆಕ್ರೋಶ
ನ್ಯಾಯಯುತ ಪರಿಹಾರ ನೀಡುವಂತೆ ಈ ರೈತರೆಲ್ಲ ಕೆಐಎಡಿಬಿ ಹಾಗೂ ಡೀಸಿ ಕಚೇರಿ ಅಲೆದಾಡಿ ಪ್ರತಿಭಟಿಸಿ, ಸುಸ್ತಾಗಿದ್ದಾರೆ. ಇವರಿಗೆ ಹಿಂಬರಹ ನೀಡಿರುವ ಕೆಐಎಡಿಬಿ, ಈಗಾಗಲೇ ಖುಷ್ಕಿ ಜಮೀನೆಂದು ಪರಿಗಣಿಸಿ, ಪರಿಹಾರ ನಿಗದಿಪಡಿಸಿ ಐತೀರ್ಪು ಹೊರಡಿಸಿರುವುದರಿಂದ ಹೆಚ್ಚಿನ ಪರಿಹಾರ ಧನ ನೀಡಲು, ದರ ಪರಿಷ್ಕರಣೆ ಮಾಡಲು, ಯಾವುದೇ ಕ್ರಮ ಜರುಗಿಸಲು ಈ ಕಾರ್ಯಾಲಯದಿಂದ ಅವಕಾಶ ಇಲ್ಲ ಎಂದಿದೆ. ಜೊತೆಗೆ ಜಿಲ್ಲಾಡಳಿತಕ್ಕೆ ಮೇಲ್ಮನವಿ ಸಲ್ಲಿಸಿ ಎಂದು ತಿಳಿಸಿದೆ.
ಏನಿದು ಸೂರತ್-ಚೆನ್ನೈ ಎಕ್ಸ್‌ಪ್ರೆಸ್‌ವೇ ಯೋಜನೆ?
ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಸಂಪರ್ಕಿಸುವ, ಸುಮಾರು .50000ಕೋಟಿ ವೆಚ್ಚದ ‘ಸೂರತ್-ಚೆನ್ನೈ’ ಎಕ್ಸಪ್ರೆಸ್ ವೇ(ರಾಷ್ಟ್ರೀಯ ಹೆದ್ದಾರಿ 150-ಸಿ) ಯೋಜನೆ ಯಾದಗಿರಿ ಸೇರಿದಂತೆ ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳ ಮೂಲಕ ಹಾದುಹೋಗಲಿದೆ. ಒಟ್ಟು 1271 ಕಿ.ಮೀ. ಉದ್ದದ ಈ ಎಕ್ಸಪ್ರೆಸ್ ವೇ ನಿರ್ಮಾಣದಿಂದಾಗಿ ಸೂರತ್-ಚೆನ್ನೈ ಮಧ್ಯೆ ಸುಮಾರು 330 ಕಿ.ಮೀ. ಅಂತರ ಕಡಿಮೆಯಾಗಲಿದ್ದು, 6-7 ಗಂಟೆಗಳ ಕಾಲ ಪ್ರಯಾಣದ ಅವಧಿ ಉಳಿಯಲಿದೆ. ಡಿಸೆಂಬರ್ 2025ರಲ್ಲಿ ಇದು ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.
ನನಸಾಯ್ತು ಯಾದಗಿರಿ ಮೆಡಿಕಲ್ ಕಾಲೇಜು ಕನಸು..!
ಅರ್ಧಕ್ಕರ್ಧ ನಷ್ಟ!
1. ಯಾದಗಿರಿಯ ವಡಗೇರಾ, ಶಹಾಪುರ ತಾಲೂಕಿನ 21 ಗ್ರಾಮದಲ್ಲಿ ಭೂಸ್ವಾಧೀನ
2. ಷಟ್ಪಥ ಹೆದ್ದಾರಿ ನಿರ್ಮಾಣಕ್ಕಾಗಿ ಸುಮಾರು 1433 ಎಕರೆ ಸ್ವಾಧೀನಕ್ಕೆ ತೀರ್ಮಾನ
3. ನೀರಾವರಿ ಜಮೀನಿಗೆ ಎಕರೆಗೆ 19 ಲಕ್ಷ, ಖುಷ್ಕಿ ಭೂಮಿಗೆ 9 ಲಕ್ಷ ಪರಿಹಾರ ನಿಗದಿ
4. ಆದರೆ, ರೈತರಿಗೆ ಪರಿಹಾರ ಕಡಿತಗೊಳಿಸಲು ಅಧಿಕಾರಿಗಳಿಂದ ದಾಖಲೆ ತಿದ್ದುಪಡಿ
5. ನೀರಾವರಿ ಬದಲು ಖುಷ್ಕಿ ಎಂದಾಗಿಸಿ ಪರಿಹಾರ ಅರ್ಧಕ್ಕರ್ಧ ಕಡಿತ: ಆರೋಪ
ಸಿಕ್ಕಷ್ಟುತಗೊಂಡು ಹೋಗಿ ಅಂತಾರೆ
ಈಗ ಕೊಡ್ತಿರೋ ಪರಿಹಾರ ತೊಗೊಂಡ್ಹೋಗಿ. ಆಮೇಲೆ ಕೋರ್ಟಿಗೆ ಹೋಗಿ, ಇಲ್ಲಾಂದ್ರೆ ಇದೂ ಸಿಗೋಲ್ಲ ಎಂದು ಅಧಿಕಾರಿಗಳು ಉಡಾಫೆಯ ಉತ್ತರ ನೀಡುತ್ತಾರೆ. ಖುಷ್ಕಿ ಇದ್ದರೂ ಕೆಲವರಿಗೆ ನೀರಾವರಿ ಪರಿಹಾರ ನೀಡಲಾಗಿದೆ ಅಂತ ವಡಗೇರಾದ ರೈತರು ಹೇಳಿದ್ದಾರೆ.
ಮೇಲ್ಮನವಿಗೆ ಸೂಚಿಸಿದ್ದೇನೆ
ನೀರಾವರಿ ಇದ್ದರೂ ದಾಖಲೆಗಳಲ್ಲಿ ಖುಷ್ಕಿ ಎಂಬ ಗೊಂದಲದ ಬಗ್ಗೆ ಗಮನಕ್ಕೆ ಬಂದಿದೆ. ಸ್ವಾಧೀನ ಪ್ರಕ್ರಿಯೆ ಸಂದರ್ಭದಲ್ಲಿ ಕೆಬಿಜೆಎನ್ನೆಲ್ ಅಧಿಕಾರಿಗಳು ನೀರಾವರಿ ಜಮೀನುಗಳ ಕುರಿತು ನಮಗೆ ಸರಿಯಾದ ಮಾಹಿತಿ ನೀಡಬೇಕಿತ್ತು. ಜಿಲ್ಲಾಡಳಿತಕ್ಕೆ ಮೇಲ್ಮನವಿ ಸಲ್ಲಿಸುವಂತೆ ತಿಳಿಸಿದ್ದೇವೆ ಅಂತ ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಪ್ರಕ್ರಿಯೆ ಅಧಿಕಾರಿ ಮಧುಕೇಶ್ವರ ತಿಳಿಸಿದ್ದಾರೆ.