ಒಡಿಶಾ ರೈಲು ದುರಂತದಲ್ಲಿ ಪಾರಾದವರು ಕಾರ್ಕಳಕ್ಕೆ ವಾಪಸ್..!
ಅಪಘಾತ ನಡೆದ ಸಂದರ್ಭದಲ್ಲಿ ವಿದ್ಯುತ್ ಪೂರೈಕೆ ನಿಂತು ಹೋಗಿದ್ದು, ನೀರಿನ ಕೊರತೆ ಕಾಡಿತ್ತು. ಹತ್ತಿರದಲ್ಲೇ ಬೊರ್‌ವೆಲ್ ಮೂಲಕ ನೀರು ಪೂರೈಸುವಂತಾಯಿತು. ಅದರ ಜೊತೆಗೆ ಎನ್‌ಜಿಒಗಳು ಧೈರ್ಯ ತುಂಬಿದರು ಎಂದು ಯಾತ್ರಿಕರಲ್ಲೊಬ್ಬರಾದ ವಿದ್ಯಾನಂದ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ರಾಂ ಅಜೆಕಾರು
ಕಾರ್ಕಳ(ಜೂ.13): ಒಡಿಶಾದ ಬಾಲಸೋರ್ ರೈಲು ದುರಂತದಲ್ಲಿ ಪಾರಾಗಿ ಬದುಕಿ ಬಂದ ಕಾರ್ಕಳದ ತೀರ್ಥ ಯಾತ್ರಿಗಳ ತಂಡ ಸುರಕ್ಷಿತವಾಗಿ ಸೋಮವಾರ ಮುಂಜಾನೆ ಕಾರ್ಕಳ ತಲುಪಿದೆ.
ಕಳಸದ ಬಲಿಗೆ ಮಹಿಮಾ ಸಾಗರ ಮುನಿ ಮಹರಾಜರು ಜೂ. 1ರಿಂದ ಜಾರ್ಖಂಡ್ ಸಮ್ಮೇದ ಶಿಖರ್ಜಿ ಯಾತ್ರೆ ಸಂಕಲ್ಪಿಸಿದ್ದರು. ಅದರಲ್ಲಿ ದ.ಕ. ಸೇರಿದಂತೆ ವಿವಿಧ ಜಿಲ್ಲೆಗಳ ಒಟ್ಟು 110 ಜನರಿದ್ದರು. ಇವರೆಲ್ಲಾ ಜೂ.1ರಂದು ಬೆಂಗಳೂರು-ಹೌರಾ ರೈಲಿನ ಮೂಲಕ ಶಿಖರ್ಜಿ ಯಾತ್ರೆ ಹೊರಟಿದ್ದರು. ಆದರೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಇವರಿದ್ದ ರೈಲಿಗೆ ಡಿಕ್ಕಿ ಹೊಡೆದಿತ್ತು. ಆದರೆ ಅಪಾಯದಿಂದ ಪಾರಾಗಿದ್ದ ಇವರನ್ನು ಜೂ.3ರ ಮುಂಜಾನೆ, ಅಪಘಾತ ನಡೆದ ಬೆಂಗಳೂರು-ಹೌರಾ ರೈಲಿನ ಮೂರು ಬೋಗಿಗಳನ್ನು ಪ್ರತ್ಯೇಕಿಸಿ ಉಳಿದ ಬೋಗಿಗಳಲ್ಲಿದ್ದ ಪ್ರಯಾಣಿಕರನ್ನು ಹೌರಾದತ್ತ ಕರೆದೊಯ್ಯಲಾಗಿತ್ತು. ಅವರು ಅಪರಾಹ್ನ 2 ಗಂಟೆಗೆ ಕೊಲ್ಕೋತ್ತಾ ತಲುಪಿದರು. ಬಳಿಕ, ಬಸ್ ಹಾಗೂ ಎರಡು ಟೆಂಪೊ ಟ್ರಾವೆಲರ್ ಮೂಲಕ ತಡರಾತ್ರಿ 1.30ಕ್ಕೆ ಸಮ್ಮೇದ ಶಿಖರ್ಜಿಯ ಮಧುವನ ತಲುಪಿದ್ದರು. ಶಿಖರ್ಜಿ ಯಾತ್ರೆ ಮುಗಿಸಿ ತೆರಳಿದ್ದ 110 ಯಾತ್ರಿಕರು ಬೆಂಗಳೂರಿನ ಬೈಯಪ್ಪನಹಳ್ಳಿಗೆ ಭಾನುವಾರ ರಾತ್ರಿ 9.15ಕ್ಕೆ ಬಂದು ತಲುಪಿದ್ದರು. ಸೋಮವಾರ ಕಾರ್ಕಳಕ್ಕೆ ಆಗಮಿಸಿದ್ದಾರೆ.
ಅ.31ರವರೆಗೆ ಕೊಂಕಣ ರೈಲು ಮಾರ್ಗದಲ್ಲಿನ ಎಲ್ಲಾ ರೈಲಿನ ವೇಳಾಪಟ್ಟಿ ಬದಲಾವಣೆ, ಯಾವೆಲ್ಲ ಜಿಲ್ಲೆಯಲ್ಲಿದೆ ಕೊಂಕಣ ರೈಲು
ಅಪಘಾತ ನಡೆದ ಸಂದರ್ಭದಲ್ಲಿ ವಿದ್ಯುತ್ ಪೂರೈಕೆ ನಿಂತು ಹೋಗಿದ್ದು, ನೀರಿನ ಕೊರತೆ ಕಾಡಿತ್ತು. ಹತ್ತಿರದಲ್ಲೇ ಬೊರ್‌ವೆಲ್ ಮೂಲಕ ನೀರು ಪೂರೈಸುವಂತಾಯಿತು. ಅದರ ಜೊತೆಗೆ ಎನ್‌ಜಿಒಗಳು ಧೈರ್ಯ ತುಂಬಿದರು ಎಂದು ಯಾತ್ರಿಕರಲ್ಲೊಬ್ಬರಾದ ವಿದ್ಯಾನಂದ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಈ ತಂಡದಲ್ಲಿ ಕಾರ್ಕಳದ 9 ಮಂದಿ ಇದ್ದರು. ಜೂ.2ರಂದು ರಾತ್ರಿ 7.30ರ ವೇಳೆಗೆ ಬಾಲಸೋರ್‌ನ ಬಹನಗಾ ನಿಲ್ದಾಣದ ಜಂಕ್ಷನ್‌ನಲ್ಲಿ ಗೂಡ್‌್ಸ ರೈಲಿಗೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದು ಹಳಿ ತಪ್ಪಿತ್ತು. ಅದರ ಬೋಗಿಗಳು ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್ ರೈಲಿನ ಕೊನೆಯ 3 ಬೋಗಿಗಳಿಗೆ ಡಿಕ್ಕಿ ಹೊಡೆದಿದ್ದರಿಂದ ಸಂಭವಿಸಿದ ಅಪಘಾತದಲ್ಲಿ 275 ಮಂದಿ ಮೃತಪಟ್ಟಿದ್ದರು.
ಬೆಂಗಳೂರಿನಿಂದ ಹೊರಟಾಗ ಈ ಯಾತ್ರಿಕರು ಬೆಂಗಳೂರು-ಹೌರಾ ರೈಲಿನ ಕೊನೆಯ ಎಸ್-7 ಬೋಗಿಯಲ್ಲಿದ್ದರು. ಆದರೆ, ವಿಶಾಖಪಟ್ಟಣಂನಲ್ಲಿ ಎಂಜಿನ್ ಬದಲಾಯಿಸುವ ವೇಳೆ ಹಿಂದಿನ ಎಸ್-7 ಬೋಗಿಯ ಮುಂದೆ ಎಂಜಿನ್ ಅಳವಡಿಸಲಾಗಿತ್ತು. ಇದೇ ಇವರ ಪಾಲಿಗೆ ವರವಾಗಿ ಪರಿಣಮಿಸಿದ್ದು, ಇವರೆಲ್ಲಾ ಅಪಾಯದಿಂದ ಪಾರಾಗಿದ್ದಾರೆ. ರೈಲಿನ ಕೊನೆಯ ಮೂರು ಜನರಲ್ ಬೋಗಿಗಳು ಅಪಘಾತಕ್ಕೆ ಈಡಾಗಿವೆ. ಹಾಗಾಗಿ ಇವರೆಲ್ಲ ಅಪಾಯದಿಂದ ಪಾರಾಗಿದ್ದರು.