Asianet Suvarna News Asianet Suvarna News

ಮುರುಘಾ ಶ್ರೀ ವಿರುದ್ಧದ ಪೋಕ್ಸೋ ಪ್ರಕರಣ: ಮಕ್ಕಳೊಡನೆ ನಾವಿದ್ದೇವೆ ಎಂದ ಒಡನಾಡಿ ಸಂಸ್ಥೆ

ಚಿತ್ರದುರ್ಗದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಿದ ಒಡನಾಡಿ ಸಂಸ್ಥೆ

Odanadi Organization Held Bike Rally For Children in Chitradurga grg
Author
First Published Sep 10, 2022, 9:47 PM IST | Last Updated Sep 10, 2022, 9:47 PM IST

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಸೆ.10):  ಮುರುಘಾ ಶ್ರೀ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ಈಗಾಗಲೇ ಎ೧ ಆರೋಪಿ ಮುರುಘಾ ಶರಣರು ಹಾಗೂ ಎ2 ಆರೋಪಿಗೆ ನ್ಯಾಯಾಂಗ ಬಂಧನವಾಗಿದೆ. ಇದರ ಬೆನ್ನಲ್ಲೇ ಒಡನಾಡಿ ಸಂಸ್ಥೆಯವರು ಕೋಟೆನಾಡಿನಲ್ಲಿ ಬೃಹತ್ ಬೈಕ್  ರ್‍ಯಾಲಿ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ಮಾಡುವ ಮೂಲಕ ಮಕ್ಕಳೊಡನೆ ನಾವಿದ್ದೇವೆ ಎನ್ನುವ ಸಂದೇಶವನ್ನು ಮತ್ತೊಮ್ಮೆ ಎದುರಾಳಿಗಳಿಗೆ ರವಾನಿಸಿದ್ದಾರೆ. 

ಕಳೆದ ಹದಿನೈದು ದಿನಗಳಿಂದ ಕೋಟೆನಾಡು ಚಿತ್ರದುರ್ಗದಲ್ಲಿ ಏನೆಲ್ಲಾ ಬೆಳವಣಿಗೆಗಳು ಆಗ್ತಿವೆ ಎಂದು ರಾಜ್ಯವಲ್ಲದೇ ಅಂತಾರಾಷ್ಟ್ರೀಯ ಮಟ್ಟಕ್ಕೂ ಗೊತ್ತಿರುವ ವಿಚಾರವೇ ಬಿಡಿ. ಮುರುಘಾ ಶ್ರೀ ವಿರುದ್ದದ ಪೋಕ್ಸೋ ಪ್ರಕರಣದಲ್ಲಿ ಈಗಾಗಲೇ ಎ1 ಹಾಗೂ ಎ2 ಆರೋಪಿಗೆ ನ್ಯಾಯಾಂಗ ಬಂಧನವಾಗಿದೆ. ಇದಕ್ಕೆಲ್ಲ ಮೂಲ‌ ಕಾರಣಕರ್ತರು ನಮ್ಮ ಮೈಸೂರಿನ ಒಡನಾಡಿ ಸಂಸ್ಥೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಆದ್ರೆ ಈ ಪ್ರಕರಣ ದಿನದಿಂದ ದಿನಕ್ಕೆ ಹೊಸ ರೂಪವನ್ನು ತಾಳುತ್ತಾ ಹಾದಿ ತಪ್ಪುತ್ತಿತ್ತು. ಆದ್ರೆ ಒಡನಾಡಿ ಸಂಸ್ಥೆ ಮಾತ್ರ ಸಂತ್ರಸ್ತ ಯುವತಿಯರಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲಲ್ಲ ಎಂದು ಸದಾ ಸಿದ್ದರಾಗಿದ್ದರು. ಅದರಂತೆಯೇ ಇಂದು ಕೂಡ ಕೋಟೆನಾಡು ಚಿತ್ರದುರ್ಗದಲ್ಲಿ ಮಕ್ಕಳೊಡನೆ ನಾವಿದ್ದೇವೆ ಎನ್ನುವ ಸಂದೇಶವನ್ನು ಇಟ್ಟುಕೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ಹಾಗೂ ಬೃಹತ್ ಬೈಕ್ ರ್‍ಯಾಲಿ ನಡೆಸಿದರು.

'ರಮೇಶ್‌ ಜಾರಕಿಹೊಳಿಗೊಂದು ಕಾನೂನು, ಮುರುಘಾ ಶ್ರೀಗಳಿಗೆ ಒಂದು ಕಾನೂನಾ?'

ಈ ಸಂದರ್ಭದಲ್ಲಿ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಹಾಗೂ ಪರಶು ನೇತೃತ್ವ ವಹಿಸಿ ಯಶಸ್ವಿಗೆ ಕಾರಣೀಭೂತರಾದರು. ಇನ್ನೂ ಈ ವೇಳೆ ಮಾತನಾಡಿದ ಸ್ಟ್ಯಾನ್ಲಿ, ಇದೊಂದು ಮಾನವೀಯ ಜಾಥಾ. ಮಕ್ಕಳಿಗೋಸ್ಕರ ನಾವಿದ್ದೇವೆ ಎನ್ನುವ ಸಂದೇಶ ರವಾನಿಸುವ ಉದ್ದೇಶದಿಂದ ಈ ಜಾಥಾ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ನಮ್ಮ ರಾಜ್ಯವಷ್ಟೇ ಅಲ್ಲದೇ, ಕೇರಳ, ತಮಿಳು ನಾಡಿನಿಂದಲೂ ಅನೇಕ ಜನರು ಮಕ್ಕಳೊಂದಿಗೆ ನಾವೂ ಇದ್ದೇವೆ ಎಂದು ಬಂದಿರೋದು ನೋಡಿದ್ರೆ ಮಾನವೀಯತೆ ಇನ್ನೂ ಸತ್ತಿಲ್ಲ, ನ್ಯಾಯಕ್ಕೋಸ್ಕರ ನಾವಿದ್ದೇವೆ ಎಂಬುದು ಸ್ಪಷ್ಟವಾಗಿದೆ ಅಂತ ಒಡನಾಡಿ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ ತಿಳಿಸಿದ್ದಾರೆ. 

ಇನ್ನೂ ಇದೇ ಸಂದರ್ಭದಲ್ಲಿ ಮಾತನಾಡಿದ ಪರಶು ಅವರು, ಇದೊಂದು ಮನುಷ್ಯತ್ವದ ನಡೆ. ಈ ಹೋರಾಟವನ್ನು ಇಬ್ಬರು ಹೆಣ್ಣು ಮಕ್ಕಳು ಶುರು ಮಾಡಿದ್ದರು. ಅವರ ಧ್ವನಿಯಾಗಿ ಒಂದು ಚಿತ್ರದುರ್ಗದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರಿದ್ದೀವಿ. ಪೊಲೀಸ್ ವ್ಯವಸ್ಥೆ ಏನು ಮಾಡ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ನಾವೆಲ್ಲರೂ ಮಕ್ಕಳ ಪರವಾಗಿ ಬೀದಿಗೆ ಇಳಿದಿದ್ದೇವೆ. ಇಡೀ ರಾಜ್ಯದ ಮೂಲೆ ಮೂಲೆಗಳಿಂದ ಜನರು ಬಂದಿದ್ದಾರೆ. ಇಲ್ಲಿ ಯಾವುದೇ ರಾಜಕೀಯ ಮಾಡಲಿಕ್ಕೆ ನಾವು ಬಂದಿಲ್ಲ. ಮೇಲಾಗಿ ಯಾವುದೇ ಧರ್ಮ ಹೊಡೆಯುವ ಹುನ್ನಾರ ನಮ್ಮದಲ್ಲ. ನಾವು ಇರೋದು ಮನುಷ್ಯತ್ವ, ಮಾನವೀಯತೆ ಎತ್ತಿ ಹಿಡಿಯಲು. ಈ ಪ್ರಕರಣ ನ್ಯಾಯಾಂಗ ತನಿಖೆ ಆಗಬೇಕು ಆಗ ಮಾತ್ರ ಈ ನೊಂದ ಮಕ್ಕಳಿಗೆ ನ್ಯಾಯ ಸಿಗಲಿದೆ ಎಂದು ಒತ್ತಾಯಿಸಿದರು.

ಪರಶು ಒಡನಾಡಿ ಸಂಸ್ಥೆ ಮೈಸೂರು 

ಒಟ್ಟಾರೆಯಾಗಿ ಮುರುಘಾ ಶ್ರೀ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ಇರುವ ಸಂತ್ರಸ್ತ ಮಕ್ಕಳಿಗೆ ಸೂಕ್ತ ನ್ಯಾಯ ಸಿಗಬೇಕಿದೆ. ನೊಂದವರ ಪಾಲಿಗೆ ಬೆಳಕಾಗಲು ನಾವು ಸದಾ ಸಿದ್ದ ಎಂದ ಒಡನಾಡಿ ಸಂಸ್ಥೆಯವರ ಸಂದೇಶಕ್ಕೆ ಎಲ್ಲರೂ ಕೈ ಜೋಡಿಸಿ ಆ ಸಂತ್ರಸ್ತ ಯುವತಿಯರ ಬೆನ್ನಿಗೆ ನಿಲ್ಲಬೇಕಿದೆ.
 

Latest Videos
Follow Us:
Download App:
  • android
  • ios