ಶಿವಮೊಗ್ಗದ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಪುತ್ರ ಬಸವೇಶ್ ಅವರು ಮಹಿಳಾ ಅಧಿಕಾರಿಗೆ ಅವಾಚ್ಯವಾಗಿ ಬಾಯಿಗೆ ಬಂದಂತೆ ಬೈದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಭದ್ರಾವತಿ ಭದ್ರಾ ನದಿತಟದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಮೇಲೆ ಗಣಿ ಇಲಾಖೆಯ ವಿಜ್ಞಾನಿ ಜ್ಯೋತಿ ಭಾನುವಾರ ಮಧ್ಯರಾತ್ರಿ ದಾಳಿ ಮಾಡಿದ್ದರು. ಈ ವೇಳೆ ನಡೆದ ಘಟನೆಯ ವಿಡಿಯೋ ವೈರಲ್ ಆಗಿದೆ.

ಭದ್ರಾವತಿ(ಫೆ.12): ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಹಿಳಾ ಅಧಿಕಾರಿಯೊಬ್ಬರು ದಾಳಿ ನಡೆಸಿದ ಸಂದರ್ಭದಲ್ಲಿ ಜಿಲ್ಲೆಯ ಶಾಸಕರೊಬ್ಬರ ಪುತ್ರ ಮೊಬೈಲ್ ಮೂಲಕ ಮಹಿಳಾ ಅಧಿಕಾರಿ ವಿರುದ್ಧ ಅಶ್ಲೀಲ ಪದ ಬಳಸಿ ಬೆದರಿಕೆ ಹಾಕಿದ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ.

ಶಿವಮೊಗ್ಗದ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಪುತ್ರ ಬಸವೇಶ್ ಅವರು ಮಹಿಳಾ ಅಧಿಕಾರಿಗೆ ಅವಾಚ್ಯವಾಗಿ ಬಾಯಿಗೆ ಬಂದಂತೆ ಬೈದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಭದ್ರಾವತಿ ಭದ್ರಾ ನದಿತಟದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಮೇಲೆ ಗಣಿ ಇಲಾಖೆಯ ವಿಜ್ಞಾನಿ ಜ್ಯೋತಿ ಭಾನುವಾರ ಮಧ್ಯರಾತ್ರಿ ದಾಳಿ ಮಾಡಿದ್ದರು. ಈ ವೇಳೆ ನಡೆದ ಘಟನೆಯ ವಿಡಿಯೋ ವೈರಲ್ ಆಗಿದೆ.

ಶಿವಮೊಗ್ಗ: ಸಿಗಂದೂರು ಲಾಂಚ್‌ ನೌಕರರಿಗೆ ಅಭದ್ರತೆಯ ಭೀತಿ!

ಮಹಿಳಾ ಅಧಿಕಾರಿ ವಿರುದ್ಧ ಅಶ್ಲೀಲ ಪದ ಬಳಸಿ ಹರಿಹಾಯ್ದ 47 ಸೆಕೆಂಡ್‌ಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ. ಮಹಿಳಾ ಅಧಿಕಾರಿ ಅಕ್ರಮ ಮರಳು ಗಣಿಗಾರಿಕೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಅಲ್ಲಿದ್ದ ವ್ಯಕ್ತಿಯೊಬ್ಬ ಯಾರಿಗೋ ಫೋನ್ ಮಾಡಿ ನಡೆದಿರುವ ಘಟನೆ ವಿವರಿಸುತ್ತಾನೆ. ಅತ್ತ ಕಡೆಯಿಂದ ಮಾತನಾಡುತ್ತಿದ್ದ ವ್ಯಕ್ತಿಯು ಅಧಿಕಾರಿಗೆ ಪೋನ್ ಕೊಡು ಎನ್ನುತ್ತಾನೆ. ಆದರೆ, ಮಹಿಳಾ ಅಧಿಕಾರಿ ನನ್ನ ಫೋನ್‌ಗೆ ಕರೆ ಮಾಡಲು ತಿಳಿಸಿ ಎಂದು ಮಾತನಾಡಲು ನಿರಾಕರಿಸುತ್ತಾರೆ. ಆಗ ಸ್ಥಳದಲ್ಲಿದ್ದ ವ್ಯಕ್ತಿ ಸ್ಪೀಕರ್ ಆನ್ ಮಾಡುತ್ತಾನೆ. ಅತ್ತ ಕಡೆಯಿಂದ ಅಶ್ಲೀಲ ಪದ ಬಳಸಿ ಮಹಿಳಾ ಅಧಿಕಾರಿಗೆ ಬೈಯ್ಯಲಾಗುತ್ತದೆ. ಅಧಿಕಾರಿ ಪ್ರತಿರೋಧ ತೋರಿದರೂ ಅಶ್ಲೀಲ ಪದ ಬಳಕೆ ಮಾಡಿ ಆತ ಮಾತನಾಡುತ್ತಾನೆ.

ಕೆಆರ್‌ಎಸ್ ಪಕ್ಷದ ಸಂಸ್ಥಾಪಕ ರವಿಕೃಷ್ಣಾ ರೆಡ್ಡಿ ಫೇಸ್‌ಬುಕ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದು, ಪೊಲೀಸರು ಶಾಸಕರ ಪುತ್ರನ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು. ಮಹಿಳಾ ಅಧಿಕಾರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ರವಿಕೃಷ್ಣಾ ರೆಡ್ಡಿ ಇದನ್ನು ಪೋಸ್ಟ್ ಮಾಡಿದ ಬಳಿಕ ವಿಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ. ಅಕ್ರಮ ಮರಳು ಗಣಿಗಾರಿಕೆ ತಡೆಯಲು ಹೋದ ಮಹಿಳಾ ಅಧಿಕಾರಿಯ ಮೇಲೆಯೇ ಜಾತಿ ನಿಂದನೆ ಪ್ರಕರಣ ದಾಖಲಿಸುವ ಬಗ್ಗೆಯೂ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಅಪ್ಪನ ಅಧಿಕಾರ ಬಲದಲ್ಲಿ ಮಗ ದಬ್ಬಾಳಿಕೆ ನಡೆಸುವ ಮೂಲಕ ರಿಪಬ್ಲಿಕ್ ಭದ್ರಾವತಿ ಮಾಡಲು ಹೊರಟಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಬಿಜೆಪಿ-ಜೆಡಿಎಸ್ ಕಿಡಿ

ಈ ಕುರಿತು ಪ್ರತಿಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಜೆಡಿಎಸ್, ಕಾಂಗ್ರೆಸ್ ಸರ್ಕಾರದಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆಯೇ ಇಲ್ಲವಾಗಿದೆ ಎಂದು ಕಿಡಿಕಾರಿದೆ.

ಅಧಿಕಾರಿಯಿಂದ ಪೊಲೀಸರಿಗೆ ದೂರು

ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿ ಅವರು ಘಟನೆ ಸಂಬಂಧ ಭದ್ರಾವತಿಯ ಹಳೆನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದು, ದೂರಿನಲ್ಲಿ ಯಾರ ಹೆಸರನ್ನು ಉಲ್ಲೇಖಿಸದೇ ದೂರು ನೀಡಿದ್ದಾರೆ.

ಒಂದು ಕಡೆ ಈ ಪ್ರಕರಣಕ್ಕೆ ಶಾಸಕ ಸಂಗಮೇಶ್‌ ಪುತ್ರ ಬಸವೇಶ್‌ ಅವರೇ ಕಾರಣ ಎಂದು ವಿರೋಧ ಪಕ್ಷಗಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೆ. ಇತ್ತ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿ ಅವರು ದೂರಿನಲ್ಲಿ ಯಾರ ಹೆಸರನ್ನೂ ಉಲ್ಲೇಖ ಮಾಡದೇ ದೂರು ನೀಡಿರುವುದು ಹಿರಿಯ ಅಧಿಕಾರಿಗಳ ಒತ್ತಡಕ್ಕೆ ಮಣಿದು ಜ್ಯೋತಿ ಅವರು ದೂರಿನಲ್ಲಿ ಯಾರ ಹೆಸರು ಉಲ್ಲೇಖ ಮಾಡಿಲ್ಲ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ: ಅಧಿಕಾರಿ ಜ್ಯೋತಿ

ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದೇನೆ. ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಅಕ್ರಮ ಗಣಿಗಾರಿಕೆ ಅಡ್ಡೆಯ ಮೇಲೆ ದಾಳಿ ನಡೆಸಿದ ವಿವರಗಳನ್ನು ದೂರಿನಲ್ಲಿ ನಮೂದಿಸಿದ್ದೇನೆ. ಅದರ ಪ್ರಕಾರ ಪೊಲೀಸರು ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತಾರೆ. ನನಗೆ ಫೋನಿನಲ್ಲಿ ಬೈದ ವಿವರಗಳನ್ನು ಅಕ್ರಮ ಗಣಿಗಾರಿಕೆ ವಿವರಗಳನ್ನು ದೂರಿನಲ್ಲಿ ನಮೂದು ಮಾಡಿದ್ದೇನೆ. ನಾನು ನೀಡಿದ ಮಾಹಿತಿ ಎಲ್ಲವೂ ಎಫ್ಐಆರ್‌ನಲ್ಲಿ ದಾಖಲಾಗಿವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿ ತಿಳಿಸಿದ್ದಾರೆ.

ರೇಡ್‌ ವೇಳೆ ನನ್ನ ಜೊತೆ ಮತ್ತೊಬ್ಬ ಗಣಿ ಅಧಿಕಾರಿಯಾಗಿದ್ದ ಪ್ರಿಯ ಕೂಡ ಇದ್ದರು. ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದಲ್ಲಿ ಆರು ಏಳು ಜನರಿದ್ದರು. ಒಬ್ಬ ವ್ಯಕ್ತಿ ಮೊಬೈಲ್ ಕರೆ ಮಾಡಿ ನನಗೆ ತಂದುಕೊಟ್ಟ. ಆ ಕಡೆಯಿಂದ ಒಬ್ಬ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ನಂತರ ನಮ್ಮ ವಾಹನದ ಮೇಲೆ ದಾಳಿ ಮಾಡಲು ಮುಂದಾಗಿದ್ದರು. ಅಲ್ಲಿನ ಪರಿಸ್ಥಿತಿ ಸರಿ ಇರದ ಕಾರಣ ದಾಳಿ ಮುಂದುವರಿಸದೆ ವಾಪಸ್ ಬಂದೆವು ಎಂದು ದೂರಿನಲ್ಲಿ ಇಲ್ಲೂ ಕೂಡ ಶಾಸಕರ ಪುತ್ರ ಬಸವೇಶ್ ಹೆಸರನ್ನು ತರದೆ ಘಟನೆಯನ್ನು ವಿವರಿಸಿದ್ದಾರೆ.

ಎಂಟು ಜನರ ವಿರುದ್ಧ ಎಫ್ಐಆರ್ ದಾಖಲು

ಘಟನೆ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿ ನೀಡಿದ ಆಧಾರದ ಮೇಲೆ ಎಂಟು ಜನ ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಭಾರತೀಯ ದಂಡ ಸಂಹಿತೆ 119, 132 ,352 ,351 (2) ಅಡಿಯಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿತರ ಮೇಲೆ ಉದ್ದೇಶಕ ಪೂರಕವಾಗಿ ದಾಳಿ ಮಾಡಿರುವುದು, ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು, ಅವಾಚ್ಯ ಶಬ್ದಗಳಿಂದ ಬೈಯ್ದಿರುವುದು, ಜೀವ ಬೆದರಿಕೆ ಹಾಕಿರುವ ಕುರಿತು ಪ್ರತ್ಯೇಕ ದೂರು ದಾಖಲಾಗಿದೆ.

ಸಂಗಮೇಶ್ವರ್ ರಾಜೀನಾಮೆ ನೀಡಲಿ, ಪುತ್ರ ಬಸವೇಶ್ ಬಂಧಿಸಿ

ಭದ್ರಾವತಿ: ಘಟನೆ ಸಂಬಂಧ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಬಿಜೆಪಿ ಮಂಡಲ ಮಹಿಳಾ ಮೋರ್ಚಾ ಶಾಸಕ ಬಿ.ಕೆ.ಸಂಗಮೇಶ್ವರ್‌ರವರು ತಕ್ಷಣ ತಮ್ಮ ಸ್ಥಾನ ರಾಜೀನಾಮೆ ನೀಡಬೇಕು. ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ನಿಂದಿಸಿರುವ ಪುತ್ರ ಬಸವೇಶ್‌ನನ್ನು ಪೊಲೀಸರು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್ ಮಾತನಾಡಿ, ಬಸವೇಶ್ ಅವಾಚ್ಯ ಶಬ್ದಗಳಿಂದ ಮಹಿಳಾ ಅಧಿಕಾರಿಗೆ ಹೀನಾಯವಾಗಿ ನಿಂದಿರುವುದು 100ಕ್ಕೆ 100ರಷ್ಟು ಸತ್ಯವಾಗಿದೆ. ಇಡೀ ಕ್ಷೇತ್ರಕ್ಕೆ ಬಸವೇಶ್ ಯಾರು, ಅವನ ವರ್ತನೆ ಯಾವ ರೀತಿ ಇದೆ, ಅವನ ಧ್ವನಿ ಯಾವ ರೀತಿ ಎಂಬುದು ಗೊತ್ತಿದೆ. ಆದರೆ ಈ ಘಟನೆಯ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ `ಈ ಘಟನೆಗೆ ಸಂಬಂಧಿಸಿದ ಸಂಭಾಷಣೆ ಧ್ವನಿ ಬಸವೇಶ್‌ಗೆ ಸಂಬಂಧಿಸಿದ್ದಲ್ಲ. ನಕಲಿ ಧ್ವನಿ'''' ಎಂದು ಸುಳ್ಳು ಸುದ್ದಿಗಳನ್ನು ಹರಿದು ಬಿಡಲಾಗುತ್ತಿದೆ. ಸತ್ಯ ಹೊರಬರಬೇಕಾದರೆ ಈ ಧ್ವನಿಯನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಿಕೊಡಿ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮಂಗೋಟೆ ರುದ್ರೇಶ್, ಎಂ.ಮಂಜುನಾಥ್, ಸುಲೋಚನಾ, ಜಿ.ಆನಂದಕುಮಾರ್, ಚನ್ನೇಶ್, ಅಣ್ಣಪ್ಪ, ಸತೀಶ್(ಟೈಲರ್), ಎಂ.ಎಸ್.ಸುರೇಶಪ್ಪ, ರಾಜಶೇಖರ್ ಉಪ್ಪಾರ, ಅನ್ನಪೂರ್ಣ, ಸುಬ್ರಮಣಿ, ಮಂಜುಳಾ ಸೇರಿದಂತೆ ಪಕ್ಷದ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಬಂಡೂರು ಟಗರು ₹1.48 ಲಕ್ಷಕ್ಕೆ ಮಾರಾಟ!

ಮಹಿಳಾ ಅಧಿಕಾರಿಗೆ ರಕ್ಷಣೆ ಕೊಡಿ: ಚನ್ನಬಸಪ್ಪ

ಭದ್ರಾವತಿ ಶಾಸಕರ ಮಗನ ವರ್ತನೆ ಹದ್ದು ಮೀರಿದ್ದು, ಮಹಿಳಾ ಅಧಿಕಾರಿಗೆ ಅಪಮಾನವಾಗಿದ್ದು, ಕೂಡಲೇ ಪೊಲೀಸರು ಸುಮೊಟೋ ಕೇಸ್ ದಾಖಲಿಸಿ ಶಾಸಕರ ಪುತ್ರನನ್ನು ಹಾಗೂ ಮರಳು ದಂಧೆಕೋರರನ್ನು ಬಂಧಿಸಬೇಕು ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಆಗ್ರಹಿಸಿದ್ದಾರೆ.

ಶಿವಮೊಗ್ಗದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿ ಅಕ್ರಮ ಮರಳು ದಂಧೆಯ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದಾಗ ನಡೆದ ಘಟನೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿದೆ. ಭದ್ರಾವತಿ ರಿಪಬ್ಲಿಕ್ ಮಾಡಲು ಶಾಸಕರು ಮತ್ತು ಪುತ್ರನ ತಂಡ ಹೊರಟಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೇ ನೀವು ಏನು ಮಾಡುತ್ತಿದ್ದೀರಿ? ಬೀದಿ ಬಸವನನ್ನು ಯಾಕಿನ್ನೂ ಬಂಧಿಸಿಲ್ಲ ? ನಿಮ್ಮ ಸರ್ಕಾರದ ಅವಧಿಯಲ್ಲಿ ಹಲವಾರು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಪಮಾನ ಮಾಡಿಸಿಕೊಂಡು ಮನೆಗೆ ಹಿಂದಿರುಗಿದ ಆ ಮಹಿಳಾ ಅಧಿಕಾರಿಗೆ ರಕ್ಷಣೆ ಕೊಡಿ ಎಂದು ಒತ್ತಾಯಿಸಿದರು.

ಮೂವರ ಬಂಧನ

ಈ ಘಟನೆಗೆ ಸಂಬಂಧಿಸಿದಂತೆ ಹಳೇನಗರ ಪೊಲೀಸ್ ಠಾಣೆಯಲ್ಲಿ ಕೆಲವರ ವಿರುದ್ಧ ಪ್ರಕರಣ ದಾಖಲಾಗಿದ್ದು, ತಕ್ಷಣ ಕಾರ್ಯಾಚರಣೆ ಕೈಗೊಂಡ ಪೊಲೀಸರು ಚನ್ನಗಿರಿ ತಾಲೂಕಿನ ಮಾವಿನಕಟ್ಟೆ ನಿವಾಸಿಯಾದ ರವಿ (38) ಬಿನ್ ಮಲ್ಲೇಶಪ್ಪ, ಹಾಸನ ಜಿಲ್ಲೆಯ ಅರಕಲಗೋಡಿನ ನಿವಾಸದ ವರಣ್ (34) ಬಿನ್ ರಾಜಶೇಖರ್, ಸುರೇಂದ್ರ ಗೌಡ ಕ್ಯಾಂಪ್ ನ ಅಜಯ್ ಬಿನ್ ತಿಪ್ಪೇಶ್ (28) ಎಂಬುವರನ್ನು ಭದ್ರಾವತಿ ಹಳೇ ನಗರ ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ

ಸೀಗೆಬಾಗಿ– ಬಾಬಳ್ಳಿ ಹತ್ತಿರದಲ್ಲಿ ಭದ್ರಾ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆದು ಟ್ರ್ಯಾಕ್ಟರ್‌ನಲ್ಲಿ ಸಾಗಣೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭದ್ರಾವತಿ ವಿಭಾಗದ ಭೂವಿಜ್ಞಾನಿ ಕೆ.ಕೆ.ಜ್ಯೋತಿ ಹಾಗೂ ಶಿವಮೊಗ್ಗ ವಿಭಾಗದ ಭೂ ವಿಜ್ಞಾನಿ ಪ್ರೀತಿ ದೊಡ್ಡಗೌಡರ್ ಅವರು ಮೂವರು ಸಿಬ್ಬಂದಿಯೊಂದಿಗೆ ರಾತ್ರಿ ಸ್ಥಳಕ್ಕೆ ತೆರಳಿದ್ದಾರೆ.

ಈ ವೇಳೆ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಕಾರ್ಮಿಕನೊಬ್ಬ ಜ್ಯೋತಿ ಅವರ ಬಳಿ ಬಂದು ಮೊಬೈಲ್ ಕೊಟ್ಟು ಅಣ್ಣಾ ಮಾತಾಡುತ್ತರೆ ಎಂದು ಹೇಳುತ್ತಾನೆ. ಫೋನ್ ಸ್ವೀಕರಿಸಲು ನಿರಾಕರಿಸುವ ಅಧಿಕಾರಿ, ಅವರಿಗೆ ನನ್ನ ಫೋನ್‌ಗೆ ಕರೆ ಮಾಡಲು ಹೇಳಿ ಎಂದು ತಿಳಿಸುತ್ತಾರೆ. ಅಧಿಕಾರಿಯ ಫೋನ್‌ಗೆ ಕರೆ ಮಾಡಬೇಕಂತೆ ಅಣ್ಣಾ ಎಂದು ಆ ಕಾರ್ಮಿಕ ಹೇಳುತ್ತಾನೆ. ಹೌದಾ ? ಎನ್ನುವ ಆ ವ್ಯಕ್ತಿ, ಲೌಡ್ ಸ್ಪೀಕರ್ ಆನ್‌ ಮಾಡು ಎಂದು ಹೇಳುತ್ತಾನೆ. ಲೌಡ್‌ ಸ್ಪೀಕರ್‌ ಆನ್‌ ಮಾಡುತ್ತಿದ್ದಂತೆ ಅತ್ಯಂತ ಅವಾಚ್ಯವಾಗಿ ಮಹಿಳಾ ಅಧಿಕಾರಿಗೆ ನಿಂದಿಸುತ್ತಾನೆ. ನೆಟ್ಟಗೆ ಮಾತನಾಡಿ, ಯಾರಿಗೆ ಮಾತಾಡುತ್ತೀರಿ. ಒಬ್ಬ ಅಧಿಕಾರಿಗೆ ಮಾತಾಡುತ್ತಿದ್ದೀರಿ. ಬೆಲೆ ಕೊಟ್ಟು ಮಾತನಾಡಿ ಎಂದು ಮಹಿಳಾ ಅಧಿಕಾರಿ ಹೇಳಿದರೂ ಆ ವ್ಯಕ್ತಿ ಹೀನಾಯವಾಗಿ ನಿಂದಿಸುವುದನ್ನು ಮುಂದುವರಿಸುತ್ತಾನೆ.

5 ನಿಮಿಷ ಅಣ್ಣಾ, ಸ್ಥಳಕ್ಕೆ ಡಿವೈಎಸ್‌ಪಿ ಬರುತ್ತಾರೆ. ನೀನೇ ಇಲ್ಲಿಗೆ ಬಂದು ಬಿಡು ಎಂದು ಫೋನ್‌ ಹಿಡಿದ ವ್ಯಕ್ತಿ ಹೇಳಿದಾಗ, ಆಯ್ತು ಬರುವೆ ಎನ್ನುತ್ತಾ ಆ ವ್ಯಕ್ತಿ ಕರೆ ಕಡಿತಗೊಳಿಸುವುದು ವಿಡಿಯೊದಲ್ಲಿ ದಾಖಲಾಗಿದೆ. ಕರೆ ಮಾಡಿದ ವ್ಯಕ್ತಿ ಯಾರು ಎನ್ನುವುದನ್ನು ಭೂ ವಿಜ್ಞಾನಿ ಜ್ಯೋತಿ ಅವರು ಸ್ಪಷ್ಟಪಡಿಸಿಲ್ಲ. ಫೋನ್ ಮೂಲಕ ಕರೆ ಮಾಡಿ ನಿಂದಿಸಿದವರು ಯಾರು ಎಂದು ತಿಳಿದಿಲ್ಲ. ಆ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ಕೊಟ್ಟಿದ್ದೇವೆ ಎಂದು ಇನ್ನೊಬ್ಬ ಅಧಿಕಾರಿ ಪ್ರೀತಿ ದೊಡ್ಡಗೌಡರ್‌ ತಿಳಿಸಿದ್ದಾರೆ.