ಹುಬ್ಬಳ್ಳಿ(ಮೇ.20): ಕೊರೋನಾ ಕಾರಣದಿಂದ ಬಸ್‌ ಚಾಲಕ, ನಿರ್ವಾಹಕರಿಗೆ ಯಾವುದೇ ಸಮಸ್ಯೆ ಆಗದಿರಲಿ ಎಂಬ ಕಾರಣದಿಂದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಟಿಕೆಟ್‌ ಮೊತ್ತವನ್ನು ಬಸ್‌ನಲ್ಲಿ ಪ್ರಯಾಣಿಕರು ಕ್ಯೂಆರ್‌ ಕೋಡ್‌ ವ್ಯವಸ್ಥೆ ಮೂಲಕ ಆನ್‌ಲೈನ್‌ನಲ್ಲಿ (ಫೋನ್‌ ಪೇ, ಪೇಟಿಎಂ, ಯುಪಿಐ) ಪಾವತಿಸುವ ವ್ಯವಸ್ಥೆ ಅಳವಡಿಸಿಕೊಳ್ಳಲು ಚಿಂತನೆ ನಡೆಸಿದೆ.

ಇನ್ನೊಂದು ವಾರದಲ್ಲಿ ಈ ಕುರಿತು ಸ್ಪಷ್ಟ ರೂಪುರೇಷೆ ರಚಿಸಿಕೊಂಡು ನಿರ್ಧಾರ ಕೈಗೊಳ್ಳುವುದಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ತಿಳಿಸಿದ್ದಾರೆ. 

ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರತಿ ಬಸ್‌ ನಿರ್ವಾಹಕರಿಗೆ ಒಂದು ಕ್ಯೂಆರ್‌ ಕೋಡ್‌ ನೀಡುವ, ಬಸ್‌ನಲ್ಲಿ ಕ್ಯೂಆರ್‌ ಕೋಡ್‌ ಅಳವಡಿಸುವ ಕುರಿತಂತೆ ಚಿಂತನೆ ನಡೆಸಿದ್ದೇವೆ. ಇದಕ್ಕಾಗಿ ಸಾಫ್ಟ್‌ವೇರ್‌ ಏಜೆನ್ಸಿಗಳನ್ನು ಸಂಪರ್ಕಿಸಲಾಗಿದೆ. ಈ ಕುರಿತು ಸ್ಪಷ್ಟ ಚಿತ್ರಣವುಳ್ಳ ಪ್ಲಾನಿಂಗ್‌ ನೀಡುವ ಏಜೆನ್ಸಿಯ ರೂಪುರೇಷ ತಿಳಿಸಿದೆ.

'ಕೊರೋನಾ ನೆಪ ಹೇಳಿ ಕೆಲಸದಿಂದ ತಪ್ಪಿಸಿಕೊಳ್ಳುವಂತಿಲ್ಲ'

ಒಟ್ಟಾರೆ ನಮ್ಮ ಬಿಲ್ಲಿಂಗ್‌ ಸಿಸ್ಟಮ್‌ಗೆ ಅನುಕೂಲವಾಗುವಂತೆ ಟಿಕೆಟ್‌ ನೀಡುವ ವ್ಯವಸ್ಥೆ ರೂಪಿಸಲಾಗುವುದು. ಪ್ರಯಾಣಿಕರು ಟಿಕೆಟ್‌ಗಾಗಿ ನಿರ್ವಾಹಕರ ಜತೆ ವ್ಯವಹರಿಸುವಾಗ ಕೊರೋನಾ ತಗಲುವ ಸಾಧ್ಯತೆ ಇರುವುದರಿಂದ ಈ ಕ್ರಮ ಜಾರಿಗೆ ಯೋಜಿಸಿದ್ದೇವೆ. ಇದಿನ್ನೂ ಪ್ರಾಥಮಿಕ ಹಂತದ ಚಿಂತನೆ. ಆದರೆ ಒಂದು ವಾರದಲ್ಲಿ ನಿರ್ಧಾರ ಪ್ರಕಟಿಸಿ ಕಾರ್ಯಪ್ರವೃತ್ತರಾಗಲಿದ್ದೇವೆ ಎಂದರು.

ನಷ್ಟ ಸರಿದೂಗಿಸಿಕೊಳ್ಳಲು ಸರಕು ಸಾಗಣೆ

ಕೇವಲ 30 ಪ್ರಯಾಣಿಕರನ್ನು ಕರೆದೊಯ್ಯುವುದರಿಂದ ನಷ್ಟ ಹೆಚ್ಚಾಗುತ್ತದೆ. ಇನ್ನು 2-3 ತಿಂಗಳು ಸಾರಿಗೆ ಸಂಸ್ಥೆ ಇದೇ ಪರಿಸ್ಥಿತಿ ಅನುಭವಿಸಬಹುದು. ಹೀಗಾಗಿ ಈ ಕುರಿತಂತೆ ನಷ್ಟದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಇದರ ಜತೆಗೆ ಬಸ್‌ನಲ್ಲಿ ಸರಕು ಸಾಗಣೆ ಮಾಡುವ ಕುರಿತಂತೆ ಚಿಂತನೆ ನಡೆಸಿದ್ದೇವೆ. ಬಸ್‌ನಲ್ಲಿ ಕೇವಲ ಜನರನ್ನು ಕೊಂಡೊಯ್ಯುವ ಬದಲು ಗ್ರಾಮೀಣ ಭಾಗದಿಂದ ಕೃಷಿ ಸರಕನ್ನು ಎಪಿಎಂಸಿಗೆ ತೆಗೆದುಕೊಂಡು ಬರುವ ಕುರಿತು ಎಪಿಎಂಸಿಗಳ ಜತೆಗೆ ಚರ್ಚಿಸಲು ನಿರ್ಧರಿಸಿದ್ದೇವೆ. ಇನ್ನೊಂದು ವಾರದಲ್ಲಿ ಈ ಕುರಿತಂತೆ ಸ್ಪಷ್ಟನಿರ್ಧಾರ ತೆಗೆದುಕೊಳ್ಳಲಾಗುವುದು. ಇನ್ನು ಕೈಗಾರಿಕೆಗಳಿಗೂ ಇದೆ ರೀತಿ ಕಚ್ಚಾ ವಸ್ತುಗಳನ್ನು ಒದಗಿಸುವ ಬಗ್ಗೆ, ಸರ್ಕಾರಿ ಕಚೇರಿಗಳಿಗೆ ಸೇವೆಯನ್ನು ಒದಗಿಸುವುದು ಸೇರಿ ಐದು ಯೋಜನೆಗಳನ್ನು ರೂಪಿಸಿಕೊಂಡಿದ್ದೇವೆ ಎಂದರು. ಇವುಗಳಿಗೆ ದರ ನಿಗದಿಯಲ್ಲೂ ಕೊಂಚ ಬದಲಾವಣೆ ಮಾಡಿಕೊಳ್ಳಲಾಗುವುದು ಎಂದರು.

ತಿಂಗಳ ಪಾಸ್‌ ದರ ಪರಿಷ್ಕರಣೆ

ವಿದ್ಯಾರ್ಥಿಗಳ, ವೃದ್ಧರ ಪಾಸ್‌ಗಳನ್ನು ಹೊರತುಪಡಿಸಿ ಉಳಿದ ತಿಂಗಳ ಪಾಸ್‌ಗಳ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ. 30 ಪ್ರಯಾಣಿಕರಲ್ಲಿ ಬಹುತೇಕರು ಪಾಸ್‌ ತೆಗೆದುಕೊಂಡೆ ಬಂದರೆ ಸಂಸ್ಥೆಗೆ ಆದಾಯ ಸಮಸ್ಯೆ ಉಂಟಾಗಲಿದೆ. ಹೀಗಾಗಿ ದರವನ್ನು ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದ್ದು, ಈ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗುವುದು. ಶೀಘ್ರ ಈ ಬಗ್ಗೆ ಪ್ರಕಟಿಸಲಿದ್ದೇವೆ ಎಂದರು.