ಧಾರವಾಡ(ಮೇ.20): ಅಧಿಕಾರಿಗಳು ಯಾವುದೇ ಕಾರಣಕ್ಕೂ ಕೊರೋನಾ ವೈರಸ್‌ನ ನೆಪ ಹೇಳಿ ಇಲಾಖೆಯ ಮೂಲ ಕೆಲಸದಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂದು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಎಚ್ಚರಿಕೆ ನೀಡಿದ್ದಾರೆ. 

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಮಂಗಳವಾರ ನಡೆದ ವಿಶೇಷ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಂದಿರುವ ಅನುದಾನ ಯಾವುದೇ ಕಾರಣಕ್ಕೂ ಮರಳಿ ಹೋಗದಂತೆ ನೋಡಿಕೊಳ್ಳಲು ಮೊದಲಿನ ಸಭೆಯಲ್ಲಿ ಸದಸ್ಯರೆಲ್ಲರೂ ಸೂಚನೆ ನೀಡಿದ್ದರೂ ಸಹ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ಪಾಲಿಸಿಲ್ಲ ಎಂದು ಇಲಾಖೆ ಅಧಿಕಾರಿ ಮನೋಹರ ಮಂಡೊಳ್ಳಿ ಎಂಬುವರಿಗೆ ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ ಸೇರಿದಂತೆ ಎಲ್ಲ ಸದಸ್ಯರು ಗದರಿದರು.

ಎಂಜಲು ಉಗಿದು ಗಲಾಟೆ: ಸುಪಾರಿ ಹಂತಕ ಸಲೀಂಗೆ ಕೊರೋನಾ ಟೆಸ್ಟ್‌

ಬರೀ ಶೇ. 48ರಷ್ಟು ಬಳಕೆ:

ಇದಕ್ಕಿಂತ ಮುಂಚೆ ಸಭೆಗೆ ಮಾಹಿತಿ ಒದಗಿಸಿದ ಅಧಿಕಾರಿ ಮನೋಹರ, ಪ್ರಯತ್ನ ಮೀರಿ ಕೆಲಸ ಮಾಡಿದರೂ ಸಹ ಅನಿವಾರ್ಯ ಕಾರಣಗಳಿಂದ ಸಾಕಷ್ಟುಕೆಲಸಗಳ ಬಿಲ್‌ ನೀಡಿಲ್ಲ. ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ, ಜಿಪಂ ಕಚೇರಿ ನಿರ್ವಹಣೆ ಸೇರಿದಂತೆ ವಿವಿಧ ಇಲಾಖೆಗಳ ಕಟ್ಟಡ, ನಿರ್ವಹಣೆ ಸೇರಿ ಒಟ್ಟಾರೆ ಸರ್ಕಾರದಿಂದ . 16.15 ಕೋಟಿ ಅನುದಾನ ಬಂದಿದ್ದು ಈ ಪೈಕಿ 7.63 ಕೋಟಿ ವೆಚ್ಚ ಮಾಡಿದ್ದು ಶೇ. 48ರಷ್ಟು ಅನುದಾನ ಬಳಕೆಯಾಗಿದೆ ಎಂದು ಹೇಳಿದರು.

ದೀರ್ಘ ರಜೆ ತಗೋರಿ:

ಈ ಮಾಹಿತಿಗೆ ಬೆಚ್ಚಿ ಬಿದ್ದ ಜಿಪಂ ಉಪಾಧ್ಯಕ್ಷ ಕರಿಗಾರ, ಮನೋಹರ ಅವರಿಗೆ ದೀರ್ಘಾವಧಿ ರಜೆ ಕೊಟ್ಟು ಕಳುಹಿಸಿಬಿಡಿ. ಶೇ. 62ರಷ್ಟು ಅನುದಾನ ಬಳಸದೇ ಸರ್ಕಾರಕ್ಕೆ ಮರಳಿಸಿದ್ದು ಅವರಿಂದ ಏನು ಪ್ರಯೋಜನ. ಅನುದಾನ ಸರಿಯಾಗಿ ಬಳಸಿ ಎಂದು ಎಷ್ಟೇ ಹೇಳಿದರೂ ಈ ತಪ್ಪು ಮಾಡಿದ್ದು ಈ ಕುರಿತು ಜಿಪಂ ಸಿಇಒ ಅವರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಆಗ ಈ ಕುರಿತು ಸ್ಪಷ್ಟನೆ ನೀಡಿದ ಜಿಪಂ ಸಿಇಒ ಡಾ. ಬಿ.ಸಿ. ಸತೀಶ್‌, ಬರೀ ಧಾರವಾಡ ಜಿಲ್ಲೆ ಮಾತ್ರವಲ್ಲದೇ ಇಡೀ ರಾಜ್ಯಾದ್ಯಂತ ಬಹುತೇಕ ಇಲಾಖೆಗಳ ಅನುದಾನ ಸಂಪೂರ್ಣ ಬಳಕೆಯಾಗಿಲ್ಲ. ಅತಿವೃಷ್ಟಿಹಾಗೂ ಕೊರೋನಾ ವೈರಸ್‌ ಸಹ ಇದಕ್ಕೆ ಕಾರಣ. ಆದ್ದರಿಂದ ಈ ಕುರಿತು ಗ್ರಾಮೀಣಾಭಿವೃದ್ಧಿ ಇಲಾಖೆ ಸಭೆಯಲ್ಲಿ ಚರ್ಚೆಯಾಗಿದ್ದು, ಬಾಕಿ ಉಳಿದ ಬಿಲ್‌ಗಳನ್ನು ಕಳುಹಿಸಿದರೆ ಶೇ. 100ರಷ್ಟು ಅನುದಾನ ಸರ್ಕಾರ ನೀಡಲಿದೆ ಎಂದರು.

ಡಿಎಚ್‌ಒಗೆ ತರಾಟೆ:

ನಂತರ ನಡೆದ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಡಿಎಚ್‌ಒ ಡಾ. ಯಶವಂತ ಮಾನಕರ ಅವರು ಅಂಕಿ-ಅಂಶ ಸಮೇತ ಸಭೆಗೆ ಹಾಜರಾಗದ ಕಾರಣ ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರು ಮಾತಿನ ಪೆಟ್ಟು ನೀಡಿದರು. ಗ್ರಾಮೀಣ ಪ್ರದೇಶದಲ್ಲಿ ಎಷ್ಟುವೈದ್ಯರಿಗೆ ಪಿಪಿಇ ಕಿಟ್‌, ಮಾಸ್ಕ್‌ ಹಾಗೂ ಸ್ಯಾಟನಿಟೈಸ್‌ ನೀಡಿದ್ದಿರಿ? ಎಂಬ ಕರಿಗಾರ ಅವರು ಪ್ರಶ್ನೆಗೆ ಡಾ. ಮಾನಕರ ಸಮರ್ಪಕ ಉತ್ತರ ನೀಡದ ಕಾರಣ ಒಂದು ಹಂತದಲ್ಲಿ ಅಧಿಕಾರಿಗಳ ಪರ ಮಾತನಾಡುತ್ತಿದ್ದ ಸಿಇಒ ಅವರು ಸಹ ಬೇಸರ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದಲ್ಲಿ ಮನೆ-ಮನೆಗೆ ಹೋಗಿ ಮಾಹಿತಿ ಕಲೆ ಹಾಕುತ್ತಿರುವ ಆಶಾಗಳಿಗೆ ಸರಿಯಾಗಿ ಮಾಸ್ಕ್‌ ಹಾಗೂ ಸ್ಯಾಟನಿಟೈಸರ್‌ ಕೊಟ್ಟಿಲ್ಲ. ಸೀರೆಯ ಸೆರಗನ್ನು ಬಾಯಿಗೆ ಮುಚ್ಚಿಕೊಂಡು ಕೆಲಸ ಮಾಡಿದ್ದಾರೆ ಎಂದು ಜಿಪಂ ಸದಸ್ಯರು ಆರೋಗ್ಯಾಧಿಕಾರಿಗಳ ವಿರುದ್ಧ ಹರಿಹಾಯ್ದರು. ಜತೆಗೆ ಬರೀ ನಗರ ಪ್ರದೇಶಕ್ಕೆ ಮಾತ್ರ ಆರೋಗ್ಯ ಇಲಾಖೆ ಸೌಲಭ್ಯ ನೀಡಿದೆ ಎಂದು ಆರೋಪಿಸಿದರು.

ತೋಟಗಾರಿಕೆ ಇಲಾಖೆ ಕುರಿತು ಮಾಹಿತಿ ನೀಡಿದ ಇಲಾಖೆ ಉಪ ನಿರ್ದೇಶಕ ಡಾ. ರಾಮಚಂದ್ರ ಮಡಿವಾಳರ, ಕೊರೋನಾ ನಿಮಿತ್ತ ಎಲ್ಲ ಜಾತಿಯ ಹೂವು ಬೆಳೆದ ರೈತರಿಗೆ ಗರಿಷ್ಠ 25 ಸಾವಿರ ನೀಡಲು ಸರ್ಕಾರ ಆದೇಶ ಮಾಡಿದ್ದು, ಈ ಕುರಿತು ಅರ್ಜಿ ಕರೆಯಲಾಗಿದ್ದು ಮೇ 25 ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಪರಿಶೀಲಿಸಿ ಬೆಳೆದರ್ಶಕ ಆ್ಯಪ್‌ ಮೂಲಕ ಫಲಾನುಭವಿಗಳಿಗೆ ಹಣವನ್ನು ಅಕೌಂಟ್‌ಗಳಿಗೆ ಹಾಕಲಾಗುವುದು. ಇದರೊಂದಿಗೆ ತರಕಾರಿ ಹಾಗೂ ಹಣ್ಣು ಬೆಳೆದ ರೈತರಿಗೂ ಗರಿಷ್ಠ ಒಂದು ಹೆಕ್ಟೇರ್‌ಗೆ 15 ಸಾವಿರ ನೀಡಲು ಸರ್ಕಾರ ತಿಳಿಸಿದ್ದು ಇನ್ನೂ ಸೂಕ್ತ ಮಾರ್ಗದರ್ಶಿಗಳು ಬಂದಿಲ್ಲ ಎಂದರು.

ಉಳಿದಂತೆ ಕೃಷಿ, ಹೈನುಗಾರಿಕೆ, ಶಿಕ್ಷಣ, ಸಮಾಜ ಕಲ್ಯಾಣ, ಸಾಮಾಜಿಕ ಅರಣ್ಯ ಸೇರಿದಂತೆ 15 ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಅಧಿಕಾರಿಗಳು ನಡೆಸುವ ಅಭಿವೃದ್ಧಿ ಕಾರ್ಯಗಳಲ್ಲಿ ಜನಪ್ರತಿನಿಧಿಗಳನ್ನು ಪಾಲ್ಗೊಳ್ಳುವಂತೆ ಎಚ್ಚರಿಕೆ ವಹಿಸಲು ಜಿಪಂ ಅಧ್ಯಕ್ಷರು ಪದೇ ಪದೇ ಸಭೆಯಲ್ಲಿ ಮನವಿ ಮಾಡಿಕೊಂಡಿದ್ದು ವಿಶೇಷ. ಸದಸ್ಯರಾದ ಚನ್ನಬಸಪ್ಪ ಮಟ್ಟಿ, ಜಿಪಂ ಉಪ ಕಾರ್ಯದರ್ಶಿ ಮೂಗನೂರಮಠ ಇದ್ದರು.

ಕೊರೋನಾ ಪಾಠ ಹೇಳಿದ ಸಿಇಒ

ಕೊರೋನಾ ಕುರಿತಾದ ಕೇಳಿದ ಕೆಲವು ಪ್ರಶ್ನೆಗಳಿಗೆ ಡಿಎಚ್‌ಒ ಡಾ. ಮಾನಕರ ಸರಿಯಾಗಿ ಉತ್ತರಿಸದ ಹಿನ್ನೆಲೆಯಲ್ಲಿ ಮಧ್ಯ ಪ್ರವೇಶಿಸಿದ ಸಿಇಒ ಡಾ. ಸತೀಶ್‌, ಯಾರಿಗೆ ಯಾವ ರೀತಿಯ ಮಾಸ್ಕ್‌ ನೀಡಲಾಗುತ್ತಿದೆ. ಪಿಪಿಇ ಕಿಟ್‌ ಯಾರಿಗೆ, ಏತಕ್ಕೆ ನೀಡಬೇಕು, ಆಶಾಗಳ ಕಾರ್ಯ, ಅವರಿಗೆ ಒದಗಿಸಿದ ಮಾಸ್ಕ್‌ ವಿವರ, ಜಿಲ್ಲೆಗೆ ಬಂದಿರುವ ಅನುದಾನ, ಪಿಪಿಇ ಕಿಟ್‌ಗಳ ಬಗ್ಗೆ ಸುಮಾರು ಅರ್ಧ ಗಂಟೆ ಕಾಲ ಸರಿಯಾಗಿ ಪಾಠ ಮಾಡಿದರು.