ಧಾರವಾಡ (ಸೆ.21): ಮಲೆನಾಡು ನಟ್ಸ್‌ ಆ್ಯಂಡ್‌ ಸ್ಪೈಸಸ್‌ ರೈತ ಉತ್ಪಾದಕ ಸಂಸ್ಥೆ ವತಿಯಿಂದ ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಧಾರವಾಡದಲ್ಲಿ ಭಾನುವಾರ ಎರಡು ನೀರಾ ಮಾರಾಟ ಕೇಂದ್ರಗಳಿಗೆ ಚಾಲನೆ ನೀಡಲಾಯಿತು. 

ಇಲ್ಲಿನ ಸ್ಟೇಷನ್‌ ರಸ್ತೆಯ ತಹಸೀಲ್ದಾರ್‌ ಕಚೇರಿ ಹಾಗೂ ವಿವೇಕಾನಂದ ವೃತ್ತದ ಬಳಿ ಆರಂಭವಾದ ಸುಪ್ರೀಂ ನೀರಾ ಕೇಂದ್ರಗಳಿಗೆ ಭಾನುವಾರ ಚಾಲನೆ ನೀಡಿದ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ನೀರಾ ಅಂತಹ ಉತ್ತಮ ಪೇಯಗಳಿದ್ದು, ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ಮೂಲಕ ಅವುಗಳನ್ನು ಗ್ರಾಹಕರಿಗೆ ಮುಟ್ಟಿಸುವ ಕಾರ್ಯವಾಗಬೇಕಿದೆ ಎಂದು ಹೇಳಿದರು.

ಅಳಿವಿನಂಚಿನಲ್ಲಿರುವ ಫೆಸಿಫಿಕ್ ರಿಟ್ಲೆ ಪ್ರಬೇಧದ ಕಡಲಾಮೆ ಪತ್ತೆ
 
ನೀರಾ ಬಗ್ಗೆ ಇನ್ನೂ ತಪ್ಪು ಕಲ್ಪನೆಗಳಿವೆ. ನಾನು ವಿಧಾನಸೌಧದಲ್ಲಿ ನೀರಾ ಸೇವಿಸಿದ್ದು, ಆರೋಗ್ಯದ ದೃಷ್ಟಿಯಿಂದ ನೀರಾ ಉತ್ತಮ ಪೇಯ. ಆದರೆ, ಇಷ್ಟುದಿನಗಳ ಕಾಲ ಗ್ರಾಹಕರಿಗೆ ಲಭ್ಯವಾಗುತ್ತಿರಲಿಲ್ಲ. ಇದೀಗ ತಂತ್ರಜ್ಞಾನ ಬಳಸಿ ಅದನ್ನು ಕೊನೆ ಗ್ರಾಹಕರಿಗೆ ಮಲೆನಾಡು ನಟ್ಸ್‌ ಆ್ಯಂಡ್‌ ಸ್ಪೈಸಸ್‌ ರೈತ ಉತ್ಪಾದಕ ಸಂಸ್ಥೆ ಹಾಗೂ ಸುಪ್ರೀಂ ಸಂಸ್ಥೆಗಳು ಮುಟ್ಟಿಸುತ್ತಿವೆ. ಈ ಮೂಲಕ ಪ್ರತಿ ತೆಂಗಿನ ಮರಕ್ಕೆ ವಾರ್ಷಿಕ 1 ಸಾವಿರದ ಬದಲು ಇದೀಗ 6 ಸಾವಿರ ಸಿಗುವಂತಾಗಿದೆ ಎಂದರು.