ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದಾಗಲೇ 32 ವರ್ಷದ ನರ್ಸ್ ಲತಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರಾತ್ರಿ ಊಟದ ನಂತರ ವಾಶ್ ರೂಮ್ ಬಳಿ ತೆರಳಿದಾಗ ವಾಂತಿ, ಸುಸ್ತು ಮತ್ತು ಎದೆನೋವಿನಿಂದ ಕುಸಿದು ಬಿದ್ದ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ತುಮಕೂರು: ನಗರದ ಜಿಲ್ಲಾಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ 32 ವರ್ಷದ ಲತಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿಯೇ ಲತಾ ಅವರಿಗೆ ಹೃದಯಾಘಾತವಾಗಿದೆ. ಶುಕ್ರವಾರ ರಾತ್ರಿ ಪಾಳೆಯ ಕೆಲಸಕ್ಕೆ ಲತಾ ಹಾಜರಾಗಿದ್ದರು.

ರಾತ್ರಿ ಊಟ ಮುಗಿಸಿಕೊಂಡು ವಾಶ್ ರೂಮ್ ಬಳಿ ತೆರಳಿದ್ದ ವೇಳೆ ಲತಾ ಅವರಿಗೆ ವಾಂತಿಯಾಗಿ ಸುಸ್ತಾಗಿ ಎದೆನೋವು ಎಂದು ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಯಲ್ಲಿರೋದರಿಂದ ಆ ಕ್ಷಣದಲ್ಲಿಯೇ ಲತಾ ಅವರಿಗೆ ಚಿಕಿತ್ಸೆ ಕೊಡಿಸಲು ವೈದ್ಯರು ಮುಂದಾಗಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಲತಾ ನಿಧನರಾಗಿದ್ದಾರೆ. ಸುಮಾರು ರಾತ್ರಿ 11 ಗಂಟೆಗೆ ಹೃದಯಾಘಾತ ಉಂಟಾಗಿದೆ ಎಂದು ತಿಳಿದು ಬಂದಿದೆ.

ಜಿಲ್ಲಾಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಲತಾ ಅವರು ತುಮಕೂರು ತಾಲ್ಲೂಕಿನ ‌ಹಿರೇಹಳ್ಳಿ ಗ್ರಾಮದ ನಿವಾಸಿಯಾಗಿದ್ದರು. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಇನ್ ಸರ್ವಿಸ್(ಡೆಪ್ಟೆಷನ್) ಮೇಲೆ ಕೆಲಸ ಮಾಡುತ್ತಿದ್ದರು. ವಿಷಯ ತಿಳಿದು ಜಿಲ್ಲಾಸ್ಪತ್ರೆಗೆ ಆಗಮಿಸಿದ ಲತಾ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಲತಾ ಅವರ ನೇತ್ರಗಳನ್ನು ಮಾಡೋದಾಗಿ ಕುಟುಂಬಸ್ಥರು ಹೇಳಿದ್ದಾರೆ. ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಸ್ಸಲ್ಲೇ ಯುವಕನಿಗೆ ಹೃದಯಾಘಾತ

ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುವಾಗ ಯುವ ಪ್ರಯಾಣಿಕನೋರ್ವ ಕುಳಿತಲ್ಲೇ ಹೃದಯಾಘಾತದಿಂದ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ. ಗುಬ್ಬಿಯ ಕೆ.ಜಿ.ಟೆಂಪಲ್ ನಿವಾಸಿ ಕಿರಣ್( 25) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಈತ ಮೆಜೆಸ್ಟಿಕ್‌ನಿಂದ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎನ್ನಲಾಗಿದೆ. 

ನೆಲಮಂಗಲ ಬಸ್ ನಿಲ್ದಾಣಕ್ಕೆ ತಲುಪಿದ ಬಿಎಂಟಿಸಿ ಬಸ್‌ನಿಂದ ಪ್ರಯಾಣಿಕರೆಲ್ಲರೂ ಕೆಳಗಿಳಿದರೂ ಯುವಕ ಕಿರಣ್ ಮಾತ್ರ ಕೆಳಗಿಳಿದಿಲ್ಲದ ಕಾರಣ ಬಸ್ ನಿರ್ವಾಹಕ ಆತನನ್ನು ಏಳಿಸಲು ಪ್ರಯತ್ನಿಸಲು ಹೋದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಬಸ್‌ ಚಾಲಕ ಬಸ್ಸನ್ನೇ ನೆಲಮಂಗಲ ತಾಲೂಕು ಆಸ್ಪತ್ರೆ ಸಮೀಪಕ್ಕೆ ಕೊಂಡೊಯ್ದು ಆಸ್ಪತ್ರೆ ವೈದ್ಯರ ಬಳಿ ಪರೀಕ್ಷಿಸಲಾಗಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಖಚಿತ ಪಡಿಸಿದ್ದಾರೆ. ನೆಲಮಂಗಲ ಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತರಬೇತಿದಾರರಿಗೆ ತರಬೇತಿ!

ಹೃದಯಾಘಾತ ಪ್ರಕರಣಗಳಿಂದ ಇಡೀ ರಾಜ್ಯವೇ ತಲ್ಲಣಗೊಳ್ಳುತ್ತಿದೆ. ವೈದ್ಯಕೀಯ ಕಾಲೇಜುಗಳ ಪ್ರಾಧ್ಯಾಪಕರಿಗೆ, ವೈದ್ಯರಿಗೆ ಕೆಎಂಸಿಆರ್‌ಐನಲ್ಲಿ ಎಮರ್ಜೆನ್ಸಿ ಲೈಫ್‌ ಸಪೋರ್ಟ್‌ ಎಂಬ ವಿಶೇಷದಲ್ಲಿ ತರಬೇತಿ ಶಿಬಿರ ನಡೆಸಲಿದೆ.

ಕೇಂದ್ರ ಸರ್ಕಾರದ ನ್ಯಾಷನಲ್‌ ಎಮೆರ್ಜೆನ್ಸಿ ಲೈಫ್‌ ಸಪೋರ್ಟ್‌ (ನೆಲ್ಸ್‌) ಕಾರ್ಯಕ್ರಮದಡಿ ಜು. 21ರಿಂದ 25ರ ವರೆಗೆ 5 ವೈದ್ಯಕೀಯ ಕಾಲೇಜುಗಳ 24 ವೈದ್ಯರಿಗೆ ಈ ತರಬೇತಿ ನೀಡಲಾಗುತ್ತಿದೆ. ಹಾಗೆ ನೋಡಿದರೆ ಕಳೆದ 2 ವರ್ಷದಿಂದ ಆಗಾಗ ಈ ತರಬೇತಿ ನೀಡುತ್ತಿದೆ. ಆದರೆ, ಇದೀಗ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹೆಚ್ಚಿನ ಮಹತ್ವ ಬಂದಂತಾಗಿದೆ. ತರಬೇತಿದಾರರಿಗೆ ತರಬೇತಿ ಎಂಬ ಘೋಷವಾಕ್ಯದೊಂದಿಗೆ ಈ ಶಿಬಿರ ನಡೆಸಲು ಕೆಎಂಸಿಆರ್‌ಐ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.