Asianet Suvarna News Asianet Suvarna News

ಹುಬ್ಬಳ್ಳಿ: ಕಿಮ್ಸ್‌ನಲ್ಲಿ ಎಡವಟ್ಟು, ಮಗು ಅದಲು ಬದಲು, ಪಾಲಕರ ಆಕ್ರೋಶ

ಗಂಡು ಮಗುವಿನ ಕೈಯಲ್ಲಿದ್ದ ಬ್ಯಾಂಡ್‌ ಕಳಚಿ ಬಿದ್ದಿದೆ ಸರಿ. ಹೆಣ್ಣು ಮಗುವಿನ ಕೈ ಬ್ಯಾಂಡ್‌ ಕಳಚಿ ಬಿದ್ದಿತ್ತಾ? ಎಂದು ಪ್ರಶ್ನೆ ಇದೀಗ ಸಾರ್ವಜನಿಕರದ್ದು. ಆದರೆ ಈ ಬಗ್ಗೆ ಕಿಮ್ಸ್‌ ಬಳಿ ಉತ್ತರವಿಲ್ಲ. ಈ ನಡುವೆ ಈ ಎಡವಟ್ಟು ಮಾಡಿರುವ ನರ್ಸ್‌ ಮೇಲೆ ಕಿಮ್ಸ್‌ ಆಡಳಿತ ಮಂಡಳಿ ಶಿಸ್ತು ಕ್ರಮ ಕೈಗೊಂಡಿದೆ.

Nurse Given Baby Girl to a Couple with Boy at KIMS in Hubballi grg
Author
First Published Sep 21, 2023, 10:45 PM IST

ಹುಬ್ಬಳ್ಳಿ(ಸೆ.21): ಇಲ್ಲಿನ ಕಿಮ್ಸ್‌ನಲ್ಲಿ ಸಿಬ್ಬಂದಿಯ ಎಡವಟ್ಟಿನಿಂದ ಮಗು ಅದಲು ಬದಲಾಗಿದೆ!. ಗಂಡು ಮಗುವಿನ ದಂಪತಿಗೆ ಹೆಣ್ಣು ಮಗು ನೀಡಿದ್ದಾರೆ. ಈ ಬಗ್ಗೆ ಪಾಲಕರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಆ ದಂಪತಿಗಳ ಮಗುವನ್ನು ನೀಡಲಾಗಿದೆ. ಈ ನಡುವೆ ಎಡವಟ್ಟಿಗೆ ಕಾರಣವಾದ ನರ್ಸ್‌ ಮೇಲೆ ಕಿಮ್ಸ್‌ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ.

ಆಗಿದ್ದೇನು?

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಶಿವಪ್ಪ ಹಾಗೂ ಮುತ್ತವ್ವ ದಂಪತಿಯ ನವಜಾತ ಶಿಶು ಬದಲಾವಣೆ ಆಗಿತ್ತು. ಮುತ್ತವ್ವಳಿಗೆ ಸೆ. 3ರಂದು ಗಂಡು ಮಗು ಜನನವಾಗಿತ್ತು. ಈ ಸುದ್ದಿಯನ್ನು ಮಗುವಿನ ತಂದೆ ಶಿವಪ್ಪಗೆ ವೈದ್ಯರೇ ತಿಳಿಸಿದ್ದರು. ಮಗುವಿನ ದೇಹ ಬೆಳವಣಿಗೆ, ಅಂಗಾಂಗ, ಲಿಂಗದ ಮಾಹಿತಿ ನೀಡಿ ತಂದೆ ಕಡೆಯಿಂದ ಸಹಿ ಕೂಡ ಪಡೆದಿದ್ದರು. ಬಳಿಕ ತಾಯಿ ಹಾಗೂ ಮಗುವಿನ ಆರೋಗ್ಯ ಏರುಪೇರಾಗಿತ್ತು. ಹೀಗಾಗಿ, ತಾಯಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಿದರೆ, ಮಗುವನ್ನು ಮಕ್ಕಳ ತೀವ್ರ ನಿಗಾ ಘಟಕದಲ್ಲಿಡಲಾಗಿತ್ತು. ತಾಯಿ ಮತ್ತು ಮಗು ಇಬ್ಬರು ಗುಣಮುಖವಾಗಿದ್ದರಿಂದ ಇಬ್ಬರನ್ನು ಸಾಮಾನ್ಯ ವಾರ್ಡಿಗೆ ಸ್ಥಳಾಂತರಿಸಲಾಗಿತ್ತು.

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಪ್ರಚೋದನಾತ್ಮಕ ಹೇಳಿಕೆ; ಪ್ರಮೋದ್ ಮುತಾಲಿಕ್ ವಿರುದ್ಧ ಎಫ್‌ಐಆರ್!

ಆಗ ಮಗುವಿನ ತಂದೆ -ತಾಯಿಗೆ ತಮಗೆ ಜನಿಸಿರುವುದು ಗಂಡು ಮಗು. ಆದರೆ, ಇಲ್ಲಿ ಹೆಣ್ಣು ಮಗುವಿದೆಯಲ್ಲ ಎಂದು ವೈದ್ಯರನ್ನು ವಿಚಾರಿಸಿದ್ದಾರೆ. ಆದರೆ, ವೈದ್ಯರಾಗಲಿ, ನರ್ಸ್‌ಗಳಾಗಲಿ ಸರಿಯಾದ ಮಾಹಿತಿ ನೀಡಿಲ್ಲ. ಇದರಿಂದ ರೊಚ್ಚಿಗೆದ್ದ ಮಗುವಿನ ತಂದೆ ಶಿವಪ್ಪ, ವೈದ್ಯರೊಂದಿಗೆ ವಾಗ್ವಾದ ನಡೆಸಿದ್ದಾನೆ. ಜತೆಗೆ ತಮ್ಮ ಗ್ರಾಮಕ್ಕೆ ಫೋನ್‌ ಮಾಡಿ ಮುಖಂಡರಿಗೆ ವಿಷಯ ತಿಳಿಸಿದ್ದಾನೆ. ಗ್ರಾಮದ ಹಿರಿಯರು ಬಂದು ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಆ ಬಳಿಕ ಮಗು ಅದಲು ಬದಲಾಗಿರುವುದು ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಬಳಿಕ ಅವರ ಗಂಡು ಮಗುವನ್ನು ಪಾಲಕರಿಗೆ ನೀಡಿದ್ದಾರೆ.

ಅದಲು ಬದಲಾಗಿದ್ದು ಹೇಗೆ?

ಮುತ್ತವ್ವಳಿಗೆ ಹೆರಿಗೆಯಾದ ದಿನವೇ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದ ಬಿಬಿಜಾನ್‌ ನದಾಫ್‌ ಎಂಬುವರಿಗೂ ಹೆರಿಗೆಯಾಗಿತ್ತು. ಆದರೆ, ಇವರಿಗೆ ಹೆಣ್ಣು ಮಗುವಾಗಿತ್ತು. ಬೆಳಗ್ಗೆ 10.26ಕ್ಕೆ ಬಿಬಿಜಾನ್‌ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅದರ ತೂಕ 1.76 ಕೆಜಿ ಇತ್ತು. ಮುತ್ತವ್ವಳಿಗೆ ಬೆಳಗ್ಗೆ 11.15 ಗಂಟೆಗೆ ಹೆರಿಗೆಯಾಗಿತ್ತು. ಇವರ ಮಗುವಿನ ತೂಕ 1.94 ಕೆಜಿ ಇತ್ತು. ನಿಯಮದಂತೆ ಎರಡು ಮಗವಿಗೂ ಲಿಂಗ ಪರೀಕ್ಷೆ ಮಾಡಿ ಕೈಗೆ ಮಾಹಿತಿ ಬ್ಯಾಂಡ್ ಹಾಕಲಾಗಿತ್ತು. ಆದರೆ ಮುತ್ತವ್ವಳ ಮಗುವಿನ ಬ್ಯಾಂಡ್ ಕಳಚಿತ್ತು. ಸಿಬ್ಬಂದಿಯ ಕಣ್ತಪ್ಪಿ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಈ ಎಡವಟ್ಟು ಆಗಿದೆ ಎಂದು ಕಿಮ್ಸ್‌ ಆಡಳಿತ ಮಂಡಳಿ ಮೂಲಗಳು ತಿಳಿಸಿದೆ.

ಕಲಘಟಗಿ ಬಂದ್ ಯಶಸ್ವಿ- ಸಂತೋಷ ಲಾಡ್ ವಿರುದ್ಧ ರೈತರ ಆಕ್ರೋಶ

ಆದರೆ ಗಂಡು ಮಗುವಿನ ಕೈಯಲ್ಲಿದ್ದ ಬ್ಯಾಂಡ್‌ ಕಳಚಿ ಬಿದ್ದಿದೆ ಸರಿ. ಹೆಣ್ಣು ಮಗುವಿನ ಕೈ ಬ್ಯಾಂಡ್‌ ಕಳಚಿ ಬಿದ್ದಿತ್ತಾ? ಎಂದು ಪ್ರಶ್ನೆ ಇದೀಗ ಸಾರ್ವಜನಿಕರದ್ದು. ಆದರೆ ಈ ಬಗ್ಗೆ ಕಿಮ್ಸ್‌ ಬಳಿ ಉತ್ತರವಿಲ್ಲ. ಈ ನಡುವೆ ಈ ಎಡವಟ್ಟು ಮಾಡಿರುವ ನರ್ಸ್‌ ಮೇಲೆ ಕಿಮ್ಸ್‌ ಆಡಳಿತ ಮಂಡಳಿ ಶಿಸ್ತು ಕ್ರಮ ಕೈಗೊಂಡಿದೆ.

ನರ್ಸ್ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮಗು ಬದಲಾವಣೆಯಾಗಿತ್ತು. ಈಗ ಪಾಲಕರಿಬ್ಬರಿಗೂ ಅವರವರ ಮಗುವನ್ನು ನೀಡಲಾಗಿದೆ. ನಿರ್ಲಕ್ಷ್ಯ ತೋರಿದ ನರ್ಸ್‌ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಿಮ್ಸ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ತಿಳಿಸಿದ್ದಾರೆ. 

Follow Us:
Download App:
  • android
  • ios