Asianet Suvarna News Asianet Suvarna News

ಅರಮನೆ, ಮೃಗಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ

ನಾಡಹಬ್ಬ ದಸರಾ ಸಂದರ್ಭದಲ್ಲಿ ಅರಮನೆ ಮತ್ತು ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿದ್ದ ಪ್ರವಾಸಿಗರ ಸಂಖ್ಯೆಯಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ

 Number Of tourists visiting palace and zoo Raises
Author
First Published Oct 7, 2022, 4:58 AM IST

ಮಹೇಂದ್ರ ದೇವನೂರು

 ಮೈಸೂರು (ಅ.07): ನಾಡಹಬ್ಬ ದಸರಾ ಸಂದರ್ಭದಲ್ಲಿ ಅರಮನೆ ಮತ್ತು ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿದ್ದ ಪ್ರವಾಸಿಗರ ಸಂಖ್ಯೆಯಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ.

ಕೋವಿಡ್‌ (Covid) ಪೂರ್ವದಲ್ಲಿದ್ದ ಪ್ರವಾಸಿಗರ ಸಂಖ್ಯೆಗೆ ಹೋಲಿಸಿದರೆ ಇನ್ನೂ ಅಷ್ಟು ಸಂಖ್ಯೆಯ ಪ್ರವಾಸಿಗರನ್ನು (Tourist) ಮುಟ್ಟಲು ಸಾಧ್ಯವಾಗಿಲ್ಲ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಬಾರಿ ಪ್ರಮಾಣದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. 2019ರಲ್ಲಿ ಅರಮನೆಗೆ 1.20 ಲಕ್ಷ ಮಂದಿ ಭೇಟಿ ನೀಡಿದ್ದರೆ, 2021ರಲ್ಲಿ 40,896 ಮಂದಿ ಭೇಟಿ ನೀಡಿದ್ದರು. ಆದರೆ ಈ ಬಾರಿ ಒಂಬತ್ತು ದಿನಗಳಲ್ಲಿ 98,142 ಮಂದಿ ಭೇಟಿ ನೀಡಿದ್ದಾರೆ.

ಪ್ರತಿವರ್ಷ ದಸರಾ (Dasara) ಮಹೋತ್ಸವ ಸಂದರ್ಭದಲ್ಲಿ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿತ್ತೆ ಹೊರತು ಕಡಿಮೆ ಆಗುತ್ತಿರಲಿಲ್ಲ. ಆದರೆ 2020ರಲ್ಲಿ ಕೊರೋನಾ ಕಾರಣಕ್ಕೆ ದಸರಾ ನಡೆಯಲಿಲ್ಲ. ಪ್ರವಾಸಿಗರಿಗೂ ನಿರ್ಬಂಧವಿತ್ತು. 2021ರಲ್ಲಿ ಸರಳವಾಗಿ ದಸರಾ ಆಚರಿಸಲಾಯಿತು.

ಈ ಎಲ್ಲಾ ಕಾರಣಕ್ಕೆ ಪ್ರವಾಸಿಗರ ಸಂಖ್ಯೆಯಲ್ಲಿ ಸಾಕಷ್ಟು ಏರುಪೇರು ಉಂಟಾಯಿತು. ಲಕ್ಷಾಂತರ ಮಂದಿ ಭೇಟಿ ನೀಡುತ್ತಿದ್ದ ಅರಮನೆ ಮತ್ತು ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದಿಢೀರನೆ 30 ರಿಂದ 40 ಸಾವಿರಕ್ಕೆ ಕುಸಿದಿತ್ತು. ಆದರೆ ಈ ಬಾರಿ ಅದ್ಧೂರಿಯಾಗಿ ದಸರಾ ಆಚರಿಸಿದರೂ, ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದರೆ ಕೋವಿಡ್‌ ಪೂರ್ವದ ಪ್ರವಾಸಿಗರ ಸಂಖ್ಯೆಗೆ ಹೋಲಿಸಿದರೆ, 10 ರಿಂದ 30 ಸಾವಿರ ಮಂದಿ ಕಡಿಮೆಯೇ ಭೇಟಿ ನೀಡಿದ್ದಾರೆ.

ಅರಮನೆಗೆ ವಿಜಯದಶಮಿ ದಿನ ಹೊರತುಪಡಿಸಿ 9 ದಿನಗಳಲ್ಲಿ 98,142 ಮಂದಿ ಭೇಟಿ ನೀಡಿದ್ದರೆ, ಅ. 2ರ ಗಾಂಧಿಜಯಂತಿ ದಿನದಂದು 21,062 ಮಂದಿ ಭೇಟಿ ನೀಡಿದ್ದಾರೆ. 3 ರಂದು 18,118 ಮಂದಿ ಮತ್ತು ಅ. 1 ರಂದು 15,242 ಮಂದಿ ಭೇಟಿ ನೀಡಿರುವುದೇ ಅತಿ ಹೆಚ್ಚು ಮಂದಿ ಪ್ರವಾಸಿಗರು ಭೇಟಿ ನೀಡಿದ ದಿನಗಳು, ಈ ಪೈಕಿ ಹಿರಿಯರು 78,796 ಮಂದಿ, ವಿದೇಶಿಯರು 309, ಶಾಲಾ ವಿದ್ಯಾರ್ಥಿಗಳು 7,335 ಮತ್ತು ಮಕ್ಕಳು 11,702 ಮಂದಿ ಸೇರಿದ್ದಾರೆ.

ಇನ್ನು ಮೃಗಾಲಯಕ್ಕೆ ಈ ವರ್ಷ ಹತ್ತು ದಿನಗಳಲ್ಲಿ 1.55 ಲಕ್ಷ ಮಂದಿ ಭೇಟಿ ನೀಡಿದ್ದಾರೆ. 2019 ರಲ್ಲಿ ಈ ಸಂಖ್ಯೆ 1.65 ಲಕ್ಷ ಮಂದಿ ಭೇಟಿ ನೀಡಿದ್ದರು. 2021ರಲ್ಲಿ 75 ಸಾವಿರ ಮಂದಿ ಭೇಟಿ ನೀಡಿದ್ದರು.

ಆಯುಧಪೂಜೆಯ ದಿನ 23,350 ಮತ್ತು ವಿಜಯದಶಮಿಯ ದಿನ 36,420 ಮಂದಿ ಮೃಗಾಲಯಕ್ಕೆ ಭೇಟಿ ನೀಡಿದ್ದು, ಕ್ರಮವಾಗಿ . 23,16 ಮತ್ತು . 35.92 ಲಕ್ಷ ಆದಾಯ ಸಂಗ್ರಹವಾಗಿದೆ. ಒಟ್ಟಾರೆ 10 ದಿನಗಳ ಪ್ರವಾಸಿಗರ ಭೇಟಿಯಿಂದ 1.53 ಕೋಟಿ ಆದಾಯ ಮೃಗಾಲಯಕ್ಕೆ ಬಂದಿದೆ.

2021 ರಲ್ಲಿ ಭೇಟಿ ನೀಡಿದ್ದ 75 ಸಾವಿರ ಮಂದಿಯಿಂದ 77.63 ಲಕ್ಷ ಆದಾಯ ಸಂಗ್ರಹವಾಗಿತ್ತು. ಕಳೆದ ವರ್ಷ ಆಯುಧಪೂಜೆಯ ದಿನ 9,033 ಮಂದಿ ಮತ್ತು ವಿಜಯದಶಮಿಯ ದಿನ 27,093 ಮಂದಿ ಭೇಟಿ ನೀಡಿದ್ದರು.

ಚಾಮುಂಡಿಬೆಟ್ಟಕ್ಕೂ ಸಾವಿರಾರು ಮಂದಿ ಭೇಟಿ

ನಗರದ ಚಾಮುಂಡಿಬೆಟ್ಟಕ್ಕೂ ಇದೇ ವೇಳೆ ಲಕ್ಷಾಂತರ ಮಂದಿ ಭೇಟಿ ನೀಡಿದ್ದಾರೆ. ಪ್ರತಿದಿನ ಬೆಳಗ್ಗೆ 6 ಗಂಟೆಯಿಂದಲೇ ದೇವರ ದರ್ಶನ ಆರಂಭವಾದರೆ, ರಾತ್ರಿ 9 ಗಂಟೆಯವರೆಗೂ ದೇವರ ದರ್ಶನಕ್ಕೆ ಅವಕಾಶ ಇರುತ್ತಿತ್ತು. ಈ ಹಿನ್ನೆಲೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡಿರಬಹುದು ಎಂದು ಅಂದಾಜಿಸಲಾಗಿದೆ.

Follow Us:
Download App:
  • android
  • ios