Mysuru ಸಾಲು ಸಾಲು ರಜೆ : ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ

  • ಕೊರೋನಾ ಸೋಂಕು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ 
  • ನಾಡಹಬ್ಬ ದಸರಾ ಮತ್ತು ಸಾಲು ಸಾಲು ರಜೆ ಇರುವುದರಿಂದ ಮೈಸೂರಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮನ
Number Of tourists rises in Mysuru Due to Dasara Festival snr

ಮೈಸೂರು (ಅ.09):  ಕೊರೋನಾ (Covid) ಸೋಂಕು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿಗೆ (Mysuru) ಬರುವ ಪ್ರವಾಸಿಗರ (Tourist) ಸಂಖ್ಯೆಯಲ್ಲಿ ಏರಿಕೆ ಆಗುತ್ತಿದೆ.

ನಾಡಹಬ್ಬ ದಸರಾ (Dasara) ಮತ್ತು ಸಾಲು ಸಾಲು ರಜೆ ಇರುವುದರಿಂದ ಮೈಸೂರಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಮೈಸೂರಿಗೆ ಬೆಂಗಳೂರು (Bengaluru), ಗೋವಾ (Goa), ಚೆನ್ನೈ (chennai), ಹೈದರಾಬಾದ್‌ (Hyderabad), ಕೊಚ್ಚಿ ಮತ್ತು ಬೆಳಗಾವಿಯಿಂದ (Belagavi) ಆಗಮಿಸುವ ಪ್ರವಾಸಿಗರು ಹೆಚ್ಚು ಮಂದಿ ಇದ್ದು, ಎಲ್ಲಾ ವಿಮಾನಗಳು ಬಹುತೇಕ ಭರ್ತಿ ಆಗುತ್ತಿವೆ.

72 ಮಂದಿ ಸಾಮರ್ಥ್ಯವಿರುವ ಅಲಯನ್ಸ್‌ ಏರ್‌, ಟ್ರ್ಯೂಜೆಟ್‌, ಇಂಡಿಗೊ(Indigo) ವಿಮಾನಗಳು ಈ ನಗರಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದು, ಪ್ರತಿನಿತ್ಯವೂ 60ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಆಗಮಿಸುತ್ತಿದ್ದಾರೆ. ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಸ್ವಲ್ಪ ಏರಿಕೆ ಕಂಡಿದೆ. ಅ. 15 ರಂದು ವಿಜಯದಶಮಿ ಮೆರವಣಿಗೆ ಮತ್ತು ಪೂಜೆ ಇರುವುದಿಂದ ವಿದೇಶಿ ಪ್ರಯಾಣಿಕರ ಸಂಖ್ಯೆ ಆ ದಿನಗಳಲ್ಲಿ ಹೆಚ್ಚಾಗಲಿದೆ.

ಇನ್ನು 9 ದಿನ ದಸರಾ ಸಂಭ್ರಮ: ರಾಜ್ಯಾದ್ಯಂತ ವಿಭಿನ್ನ ರೀತಿಯಲ್ಲಿ ನವರಾತ್ರಿ ಆಚರಣೆ!

ಕೋವಿಡ್‌ 2ನೇ ಅಲೆಯ ನಿಯಮ ಸಡಿಲಿಕೆ ಏರಿಕೆ ಕಂಡಿದ್ದು, ಸ್ಥಗಿತಗೊಂಡಿದ್ದ ಎಲ್ಲಾ ವಿಮಾನಗಳು ಈಗ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಪ್ರಸ್ತುತ ಅಲಯನ್ಸ್‌ ಏರ್‌ (Aliance Air) ಸಂಸ್ಥೆಯು ಗುರುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಂಗಳೂರು, ಕೊಚ್ಚಿ, ಬುಧವಾರ ಮಾತ್ರ ಬೆಂಗಳೂರು, ಕೊಚ್ಚಿ, ಸೋಮವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರದಂದು ಹೈದರಾಬಾದ್‌ ಮತ್ತು ಗೋವಾಗೆ ಸಂಪರ್ಕ ಕಲ್ಪಿಸುತ್ತದೆ. ಟ್ರ್ಯೂಜೆಟ್‌ ಏರ್‌ಲೈನ್ಸ್‌ (Truejet Airlines) ವಿಮಾನವು ಬುಧವಾರ, ಗುರುವಾರ ಮತ್ತು ಶುಕ್ರವಾರದಂದು ಬೆಳಗಾವಿಗೆ, ಇಂಡಿಗೋ ವಿಮಾನವು (Airplane) ಗುರುವಾರ ಹೊರತುಪಡಿಸಿ ಉಳಿದ ದಿನ ಹೈದರಾಬಾದ್‌ಗೆ, ಸೋಮವಾರ, ಬುಧವಾರ ಮತ್ತು ಶುಕ್ರವಾರ ಚೆನ್ನೈಗೆ ಸಂಪರ್ಕ ಕಲ್ಪಿಸುತ್ತಿದೆ.

ಪ್ರಸ್ತುತ ಶಿರಡಿ, ತಿರುಪತಿ ಮತ್ತು ಮುಂಬೈಗೆ (Mumbai) ಬೇಡಿಕೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿಗೂ ವಿಮಾನ ಸೇವೆ ಆರಂಭವಾಗು ನಿರೀಕ್ಷೆ ಇದೆ.

ದೀಪಾಲಂಕಾರವನ್ನು ಕಣ್ತುಂಬಿಕೊಳ್ಳಲು ಬರುತ್ತಿರುವ ಜನ : 

  ಕೊರೋನಾ ಆತಂಕದಲ್ಲಿದ್ದ ಜನರು ಇದೀಗ ಮೈಸೂರು ದಸರಾ ಮಹೋತ್ಸವದ ವಿವಿಧ ಬಣ್ಣಗಳ ದೀಪಾಲಂಕಾರವನ್ನು (Lightings) ಕಣ್ತುಂಬಿಕೊಳ್ಳಲು ಹೊರ ಬರುತ್ತಿದ್ದು, ಅರಮನೆ ಸುತ್ತಮುತ್ತಲಿನ ಪ್ರದೇಶದಲ್ಲಿ ಟ್ರಾಫಿಕ್‌ ಜಾಮ್‌ (Traffic Jam) ಆಗಿತ್ತು.

ಮೈಸೂರು : ಗಮನಿಸಿ! ಹಲವೆಡೆ ವಾಹನ ಸಂಚಾರ -ಪಾರ್ಕಿಂಗ್ ನಿಷೇಧ

ಈ ಬಾರಿ ಸರಳ ದಸರಾವಾಗಿದ್ದರೂ ಸಹ ಅರಮನೆ ಆವರಣದಲ್ಲಿ ಪ್ರತಿದಿನ ಸಂಜೆ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು, ನಗರದ ಸುತ್ತಮುತ್ತಲಿನಲ್ಲಿ 106 ಕಿ.ಮೀ. ನಲ್ಲಿ 121 ರಸ್ತೆಗಳು, 96 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗಿದ್ದು, ದೀಪಾಲಂಕಾರ ಪ್ರವಾಸಿಗರು, ಸ್ಥಳೀಯರನ್ನು ಸೆಳೆಯುತ್ತಿದೆ.

ಸ್ಥಳೀಯರು ಮತ್ತು ಪ್ರವಾಸಿಗರು ಕೊರೋನಾಗೆ ಡೋಂಟ್‌ ಕೇರ್‌ ಹೇಳಿ ಕುಟುಂಬ ಸಮೇತರಾಗಿ ಬೈಕ್‌ (Bike), ಕಾರುಗಳಲ್ಲಿ (Car) ನಗರದೆಲ್ಲೆಡೆ ಸುತ್ತಾಡಿ ವಿವಿಧ ಬಗೆಯ ಬಣ್ಣಗಳಿಂದ ಜಗಮಗಿಸುತ್ತಿರುವ ವಿದ್ಯುತ್‌ ದೀಪಾಲಂಕಾರವನ್ನು ನೋಡಿ ಕಣ್ತುಂಬಿಕೊಂಡರು.

ದೀಪಾಲಂಕಾರವನ್ನು ನೋಡುವುದರ ಜೊತೆಗೆ ಹಲವು ಕಡೆಗಳಲ್ಲಿ ಯುವಕ, ಯುವತಿಯರು ದೀಪಗಳ ಮುಂದೆ ನಿಂತು ತಮ್ಮ ಮೊಬೈಲ್‌ಗಳಿಂದ ಸೆಲ್ಪಿಗೆ ಮೊರೆ ಹೋಗಿದ್ದಾರೆ. ಪುಟ್ಟಮಕ್ಕಳು ಬಣ್ಣ ಬಣ್ಣದ ದೀಪಗಳನ್ನು ನೋಡಿ ಕುಣಿದು ಖುಷಿ ಪಟ್ಟರು.

ಅರಮನೆ ಸುತ್ತಮುತ್ತ ಟ್ರಾಫಿಕ್‌ ಜಾಮ್‌:

ದಸರಾ ಮಹೋತ್ಸವದ ಅಂಗವಾಗಿ ನಗದಲ್ಲೆಡೆ ವಿದ್ಯುತ್‌ ದೀಪಾಲಂಕಾರ ಮಾಡಿರುವುದರಿಂದ ಒಟ್ಟಿಗೆ ಸ್ಥಳೀಯರು, ಪ್ರವಾಸಿಗರು, ಸುತ್ತಮುತ್ತಲಿನ ತಾಲೂಕಿನಿಂದ ಸಾರ್ವಜನಿಕರು ಬಂದಿರುವುದರಿಂದ ಹಾಗೂ ನಗರದ ಹಲವೆಡೆ ಏಕಮುಖ ಸಂಚಾರ ಮಾಡಿರುವುದರಿಂದ ಟ್ರಾಫಿಕ್‌ ಜಾಮ್‌ ಆಗಿದ್ದು, ಸಾರ್ವಜನಿಕರು ತಮ್ಮ ವಾಹನಗಳಲ್ಲಿ ಸಂಚರಿಸಲು ಹರಸಾಹಸ ಪಟ್ಟರು.

ಸುಸ್ತಾದ ಸಂಚಾರ ಪೊಲೀಸರು: ದೀಪಾಲಂಕಾರವನ್ನು ಸವಿಯಲು ಸಾರ್ವಜನಿಕರು ಮತ್ತು ಪ್ರವಾಸಿಗರು ಆಗಮಿಸಿದ್ದರಿಂದ ಹಾಗೂ ವಾಹನ ಸಂಚಾರ ದಟ್ಟಣೆ ಹೆಚ್ಚಾದ ಕಾರಣ ಪೊಲೀಸರು ಸಂಚಾರವನ್ನು ಹತೋಟಿಗೆ ತರಲು ಹರಸಾಹಸಪಟ್ಟರು.

ತಿಂಡಿ ತಿನಿಸುಗಳ ವ್ಯಾಪಾರಸ್ಥರ ಮುಖದಲ್ಲಿ ಮಂದಹಾಸ:

ಕೊರೋನಾದಿಂದಾಗಿ ಕಳೆದ ಒಂದುವರೇ ವರ್ಷದಿಂದ ವ್ಯಾಪಾರವಿಲ್ಲದೆ ಕಂಗಾಲಾಗಿದ್ದ ತಿಂಡಿ ತಿನಸು ವ್ಯಾಪಾರಸ್ಥರು, ದಸರಾ ಮಹೋತ್ಸವದ ದೀಪಾಲಂಕಾರವನ್ನು ಕಣ್ತುಂಬಿಕೊಳ್ಳಲು ಬಂದ ಸಾರ್ವಜನಿಕರು, ಪ್ರವಾಸಿಗರಿಂದ ರಸ್ತೆಬದಿಯ ಫಾಸ್ಟ್‌ಫುಡ್‌, ಹೋಟೆಲ್‌ನವರಿಗೆ ಭರ್ಜರಿ ವ್ಯಾಪಾರವಾಗಿದ್ದು, ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಕಂಡಿತು.

Latest Videos
Follow Us:
Download App:
  • android
  • ios