ಇನ್ನು 9 ದಿನ ದಸರಾ ಸಂಭ್ರಮ: ರಾಜ್ಯಾದ್ಯಂತ ವಿಭಿನ್ನ ರೀತಿಯಲ್ಲಿ ನವರಾತ್ರಿ ಆಚರಣೆ!
ಶಕ್ತಿದೇವತೆಯ ಹಬ್ಬ ನವರಾತ್ರಿ ಇಂದಿನಿಂದ ಆರಂಭವಾಗುತ್ತಿದೆ. ಒಂಭತ್ತು ದಿನ ಒಂದೊಂದು ಶಕ್ತಿದೇವತೆಯನ್ನು ಆರಾಧಿಸುವುದೇ ನವರಾತ್ರಿಯ ವಿಶೇಷ. ರಾಜ್ಯದಲ್ಲಿ ಇದನ್ನು ನಾಡಹಬ್ಬದಂತೆ ಆಚರಿಸಿಕೊಂಡು ಬರಲಾಗುತ್ತಿದೆ. ನವರಾತ್ರಿಯು ನಾಡಹಬ್ಬದ ರೂಪ ಪಡೆದು ದಸರಾ ಆಗಿದೆ. ದಸರಾ ಅಂದಕೂಡಲೇ ಮನಸ್ಸಿಗೆ ಬರುವುದು ಮೈಸೂರು ದಸರಾ. ಆದರೆ ರಾಜ್ಯದಲ್ಲಿ ಇನ್ನೂ ಹಲವೆಡೆ ಇದನ್ನು ಸಾಮೂಹಿಕ ಹಬ್ಬವಾಗಿ ಆಚರಿಸಲಾಗುತ್ತಿದೆ. ಅಂತಹ ಸ್ಥಳಗಳ ಮಾಹಿತಿ ಇಲ್ಲಿದೆ.
5 ಶತಮಾನದ ಇತಿಹಾಸವುಳ್ಳ ಮೈಸೂರು ದಸರಾ
ದಸರಾ ಹಬ್ಬ(Dasara) ಮೈಸೂರಿನಲ್ಲಿ(Mysore) ಆರಂಭವಾಗುವುದಕ್ಕೆ ಮುಂಚೆಯೇ ಶ್ರೀರಂಗಪಟ್ಟಣದಲ್ಲಿ ಆಚರಿಸಲಾಗುತ್ತಿತ್ತು. ವಿಜಯನಗರ ಸಾಮ್ರಾಜ್ಯದ(Vijayanagara) ಸಾಮಂತ ರಾಜ್ಯವಾಗಿದ್ದ ಶ್ರೀರಂಗಪಟ್ಟಣದಲ್ಲಿ ರಾಜ ಶ್ರೀರಂಗರಾಯ ಆಳ್ವಿಕೆ ನಡೆಸುತ್ತಿದ್ದ. ಹಾಗಾಗಿ ವಿಜಯನಗರದ ಆಳ್ವಿಕೆಗೊಳಪಟ್ಟಿದ್ದರಿಂದ ಅಲ್ಲಿನ ಆಚರಣೆಗಳು ಇಲ್ಲಿಯೂ ಅನುಸರಿಸುವುದು ಸಾಮಾನ್ಯವಾಗಿತ್ತು. 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ಪ್ರಾರಂಭವಾದ ದಸರಾ ನವರಾತ್ರಿ ಉತ್ಸವ(Dasara Navratri Celebration) 1805ರಲ್ಲಿ ಯದುವಂಶದ ಅರಸರ ರಾಜಧಾನಿ ಮೈಸೂರಿಗೆ ಸ್ಥಳಾಂತರಗೊಂಡಿತು. ಇಲ್ಲಿ ಸಾಂಸ್ಕೃತಿಕ ಕಲೆಗಳ ಪ್ರದರ್ಶನ, ಸೇನೆಯ ಬಲಾಬಲ ಪರಿಚಯ, ನಾಡಿನ ಜನತೆಗೆ ರಾಜರ ದರ್ಶನ ಇತ್ಯಾದಿಗಳೆಲ್ಲವೂ ನಡೆಯುತ್ತಿದ್ದವು. ಇಂದು ಅಂದಿನ ವೈಭವ ಇಲ್ಲದಿದ್ದರೂ ಸರಳವಾಗಿ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ.
ಸಾಂಕ್ರಾಮಿಕ ರೋಗ ನಿವಾರಣೆಗೆ ಕೊಡಗು ದಸರಾ!
ಕೊಡಗನ್ನು ಆಳಿದ ಹಾಲೇರಿ ವಂಶಸ್ಥರು ವಿಜಯದಶಮಿ ಆಚರಣೆಯನ್ನು ಮಾಡುತ್ತಿದ್ದರು. ಈ ಹಿಂದೆ ಕೊಡಗಿನಲ್ಲಿ ವಿವಿಧ ಮಾರಕ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡು ಸಾವು ನೋವುಗಳು ಸಂಭವಿಸಿತ್ತು. ಇದರಿಂದ ಚಿಂತಿತರಾದ ಅಂದಿನ ಅರಸರು, ಪರಿಹಾರಕ್ಕಾಗಿ ನಾಲ್ಕು ಶಕ್ತಿ ದೇವತೆಗಳಾದ ಮಾರಿಯಮ್ಮ ದೇವರಿಗೆ ಮೊರೆ ಹೋಗಿ ಕರಗಗಳ ನಗರ ಪ್ರದಕ್ಷಿಣೆ ಮಾಡಿಸಿದರು. ಇದಾದ ಬಳಿಕ ಸಾಂಕ್ರಮಿಕ ರೋಗ ಮರೆಯಾಯಿತು. ಹೀಗೆ ಮಡಿಕೇರಿ ದಸರಾ ಆರಂಭವಾಯಿತು. ಕಳೆದ ಬಾರಿಯಂತೆ ಈ ಬಾರಿಯೂ ಸರಳ ದಸರಾ ಆಚರಿಸಲಾಗುತ್ತಿದ್ದು ಅ.7ರಂದು ಮಡಿಕೇರಿಯ ಪಂಪಿನ ಕೆರೆಯಲ್ಲಿ ಸಂಜೆ ನಗರದ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವದ ಮೂಲಕ ಆರಂಭವಾಗಲಿದೆ. ಅ.15ರಂದು ರಾತ್ರಿ ಮಡಿಕೇರಿಯ ದಶ ದೇವಾಲಯಗಳ ಮಂಟಪಗಳ ಶೋಭಾಯಾತ್ರೆ ನಡೆಯಲಿದೆ.
ಮಂಗಳೂರಲ್ಲಿ ನವದುರ್ಗೆಯರ ಆರಾಧನೆ
ವಿಶ್ವವಿಖ್ಯಾತ ಮೈಸೂರು ದಸರಾ ಮಾದರಿಯಲ್ಲೇ ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ನವರಾತ್ರಿಯ ನವದುರ್ಗಾರಾಧನೆ ‘ಮಂಗಳೂರು ದಸರಾ’ ನಾಡಿನ ಮೈಮನ ಸೂರೆಗೊಳ್ಳುತ್ತದೆ. ಈ ಬಾರಿಯೂ ಕಳೆದ ಬಾರಿಯಂತೆ ಕೋವಿಡ್ ಮಾರ್ಗಸೂಚಿಯೊಂದಿಗೆ ‘ನಮ್ಮ ದಸರಾ ನಮ್ಮ ಸುರಕ್ಷೆ’ ಎಂಬ ಘೋಷವಾಕ್ಯದಡಿ ಅ.7ರಿಂದ ಅ.16ರವರೆಗೆ ನಡೆಯಲಿದೆ. ಶಾರದಾ ಮೂರ್ತಿಯ ವಿಸರ್ಜನೆಯ ದಸರಾ ಮೆರವಣಿಗೆ ಹೊರತುಪಡಿಸಿ ಉಳಿದ ದಿನಗಳಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿವರ್ಷದಂತೆ ನಡೆಯಲಿವೆ. ಅ.7ರಂದು ಶಾರದೆ ಸೇರಿದಂತೆ ನವದುರ್ಗೆಯರ ಪ್ರತಿಷ್ಠಾಪನೆ ನಡೆಯಲಿದೆ. ಅ.15ರಂದು ಮಹಾಪೂಜೆ ನಡೆದು ರಾತ್ರಿ 8ರಿಂದ ಕ್ಷೇತ್ರದೊಳಗೆ ಸರಳ ಮೆರವಣಿಗೆಯೊಂದಿಗೆ ಪುಷ್ಕರಣಿಯಲ್ಲಿ ಶಾರದಾ ವಿಸರ್ಜನೆ ಮಾಡಲಾಗುತ್ತದೆ.
ಹಂಪಿಯಲ್ಲಿ ಐತಿಹಾಸಿಕ ಬನ್ನಿ ಮಹೋತ್ಸವ
ವಿಜಯನಗರ ಸಾಮ್ರಾಜ್ಯದ ಕಾಲದಲ್ಲೇ ಹಂಪಿ ಪ್ರದೇಶದಲ್ಲಿ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಆ ಪರಂಪರೆಯನ್ನು ಈಗಲೂ ವಾಲ್ಮೀಕಿ ನಾಯಕ ಸಮಾಜ ಮುಂದುವರಿಸಿಕೊಂಡು ಬರುತ್ತಿದೆ. ಶ್ರೀಕೃಷ್ಣದೇವರಾಯರ ಕಾಲದಲ್ಲಿ ಸೋಲರಿಯದ ಏಳು ಸಾವಿರ ಸೈನಿಕರವುಳ್ಳ ಬೇಡರ ಪಡೆಯಿತ್ತು. ಆ ಬೇಡರ ವಂಶಸ್ಥರೇ ಇಂದಿಗೂ ದಸರಾ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಹೊಸಪೇಟೆಯ ಧರ್ಮದ ಗುಡ್ಡದಲ್ಲಿ ದೇವರ ಬನ್ನಿಯನ್ನು ಮುಡಿಯಲಾಗುತ್ತದೆ. ಹೊಸಪೇಟೆಯ ಏಳುಕೇರಿ, ಕಮಲಾಪುರದ ಏಳುಕೇರಿ ಮತ್ತು ನಾಗೇನಹಳ್ಳಿ, ಬಸವನದುರ್ಗ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಶಕ್ತಿ ದೇವತೆಗಳನ್ನು ದೇವರ ಗುಡಿಗಳಲ್ಲಿ ಪ್ರತಿಷ್ಠಾಪಿಸಿ 9 ದಿನಗಳವರೆಗೆ ಪೂಜಿಸಲಾಗುತ್ತದೆ. ಆನಂತರ ನಗರಕ್ಕೆ ಆಗಮಿಸಿ ಇಡೀ ದಿನ ಭಜನೆ, ಕೋಲಾಟ ನಡೆಯುತ್ತದೆ. ಮಾರನೇ ದಿನ ಊರಬನ್ನಿ ನಡೆಯುತ್ತದೆ.
ರಂಭಾಪುರಿ, ಶೃಂಗೇರಿಯಲ್ಲಿ ಸಂಭ್ರಮದ ಶರನ್ನವರಾತ್ರಿ
ಚಿಕ್ಕಮಗಳೂರು ಜಿಲ್ಲೆಯ ರಂಭಾಪುರೀ ಪೀಠ ಹಾಗೂ ಶೃಂಗೇರಿ ಪೀಠದಲ್ಲಿ ಶರನ್ನವರಾತ್ರಿ ಆಚರಣೆ ಮಾಡಲಾಗುತ್ತಿದೆ. ಶೃಂಗೇರಿಯಲ್ಲಿ ಶ್ರೀ ಶಾರಾದಾಂಬೆಗೆ 9 ದಿನ ವಿಶೇಷ ಅಲಂಕಾರ ಮಾಡಲಾಗುವುದು. ಕೊನೆಯ ದಿನ ಶೃಂಗೇರಿಯ ರಾಜಬೀದಿಯಲ್ಲಿ ರಥೋತ್ಸವ, ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ಬಾಳೆಹೊನ್ನೂರಿನ ರಂಭಾಪುರೀ ಪೀಠ ಈ ಬಾರಿಯ ದಸರಾ ಮಹೋತ್ಸವ ಆಚರಣೆಗೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕಡೆನಂದಿಹಳ್ಳಿ ಗ್ರಾಮ ಆಯ್ಕೆ ಮಾಡಿಕೊಂಡಿದೆ. ಶರನ್ನರಾತ್ರಿಯ 9 ದಿನವೂ ರಂಭಾಪುರೀ ಪೀಠ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ. ಕೊನೆಯ ದಿನ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ಸಂಪ್ರದಾಯದಂತೆ ಡಾ. ಪ್ರಸನ್ನ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ದಸರಾ ದರ್ಬಾರ್ ನಡೆಸಿಕೊಡಲಿದ್ದಾರೆ.
ಮೈಸೂರಿನಂತೆ ಶಿವಮೊಗ್ಗದಲ್ಲೂ ಜಂಬೂ ಸವಾರಿ
ಮೈಸೂರಿನಂತೆ ಶಿವಮೊಗ್ಗದಲ್ಲೂ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ದಸರಾಕ್ಕೆ ಚಾಲನೆ ನೀಡಲಾಗುತ್ತದೆ. 9 ದಿನಗಳ ಕಾಲ ನಡೆಯುವ ದಸರಾ ಆಚರಣೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ರೈತ ದಸರಾ, ಮಹಿಳಾ ದಸರಾ, ಪರಿಸರ ದಸರಾ, ಕಲಾ ದಸರಾ, ಯುವ ದಸರಾ, ಆಹಾರ ದಸರಾ, ಸಾಂಸ್ಕೃತಿಕ ದಸರಾ, ಮಕ್ಕಳ ದಸರಾ, ಕ್ರೀಡಾ ದಸರಾ ಹೀಗೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತವೆ. ವಿಜಯದಶಮಿಯಂದು ಅಂಬಾರಿಯ ಮೇಲೆ ದೇವಿಯ ಮೆರವಣಿಗೆ ಮಾಡಲಾಗುತ್ತದೆ. ಜಂಬೂ ಸವಾರಿ ಬನ್ನಿಮಂಟಪಕ್ಕೆ ತೆರಳಿ ಬನ್ನಿ ಕಡಿಯುವುದರೊಂದಿಗೆ ದಸರಾ ಮುಗಿಯುತ್ತದೆ. ನಂತರ ರಾವಣ ಸಂಹಾರ ಆಗುತ್ತಿದ್ದಂತೆ ಚಿತ್ತಾಕರ್ಷಕ ಪಟಾಕಿಗಳನ್ನು ಸಿಡಿಸಿ ಸಾರ್ವಜನಿಕರಿಗೆ ಮನರಂಜನೆ ನೀಡಲಾಗುತ್ತದೆ.
ದಾಂಡೇಲಿಯಲ್ಲಿ ರಾಮಲೀಲಾ ಉತ್ಸವ
ಉತ್ತರ ಕನ್ನಡದ ದಾಂಡೇಲಿಯಲ್ಲಿ ಕಳೆದ ಆರು ದಶಕಗಳಿಂದ ದಸರಾ ಪ್ರಯುಕ್ತ ರಾಮಲೀಲಾ ಉತ್ಸವ ಆಚರಿಸಲಾಗುತ್ತಿದೆ. ದುಷ್ಟಶಕ್ತಿಗಳ ಪ್ರತೀಕವಾದ ಅಸುರರ ಪ್ರತಿಕೃತಿಗಳನ್ನು ದಹಿಸುವುದು ಇಲ್ಲಿನ ವಿಶೇಷತೆ. ಸುಮಾರು 50 ಅಡಿ ಎತ್ತರದ ರಾವಣ, 45 ಅಡಿ ಎತ್ತರದ ಕುಂಭಕರ್ಣ ಮತ್ತು 30 ಅಡಿ ಎತ್ತರದ ಮೇಘನಾದನ ಪ್ರತಿಕೃತಿಗಳನ್ನು ದಹಿಸುತ್ತಿದ್ದಂತೆ ದಾಂಡೇಲಿಯ ದಸರಾಕ್ಕೆ ತೆರೆಬೀಳುತ್ತದೆ. ಸಿಡಿಮದ್ದುಗಳ ಪ್ರದರ್ಶನ ಜನತೆಗೆ ಇನ್ನಷ್ಟುರಂಜನೆ ಒದಗಿಸುತ್ತದೆ. ದಾಂಡೇಲಿ ಕಾಗದ ಕಾರ್ಖಾನೆಗೆ ಉದ್ಯೋಗಿಗಳು, ಕಾರ್ಮಿಕರಾಗಿ ಉತ್ತರ ಭಾರತದಿಂದ ಬಂದವರು ತಮ್ಮ ಜತೆ ರಾಮಲೀಲಾ ಉತ್ಸವ, ದಾಂಡಿಯಾವನ್ನೂ ತಂದರು. ಕೊರೋನಾ ಪೂರ್ವ ಕಾಲದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಈ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಕಳೆದ ವರ್ಷದಿಂದ ಕೊರೋನಾದಿಂದಾಗಿ ರಾಮಲೀಲಾ ಉತ್ಸವ ಕಳೆಗುಂದಿದೆ.
ವಿಜಯದಶಮಿಯ ಹಿಂದಿದೆ 3 ಪೌರಾಣಿಕ ಕತೆ
ಬ್ರಹ್ಮನ ವರಬಲದಿಂದ ಮದೋನ್ಮತ್ತನಾಗಿದ್ದ ಮಹಿಷಾಸುರನ ಸಂಹಾರ ಮಾಡಲು, ದೇವತೆಗಳೆಲ್ಲ ತಮ್ಮ ಶರೀರದ ಒಂದೊಂದು ಅಂಶವನ್ನು ತೆಗೆದು ಆದಿಶಕ್ತಿಯನ್ನು ಸೃಷ್ಟಿಮಾಡಿ, ಮಹಿಷÜನ ಮೇಲೆ ಯುದ್ಧಕ್ಕೆ ಕಳುಹಿಸಿ ಅವನನ್ನು ಸಂಹಾರ ಮಾಡಲು ನೆರವಾಗುತ್ತಾರೆ. ಹತ್ತು ದಿನಗಳಲ್ಲಿ ಸಪ್ತಮಾತೃಕೆಯರ ನೆರವಿನಿಂದ ಮಹಿಷನನ್ನು ಶಕ್ತಿ ಮತ್ತು ಯುಕ್ತಿಯಿಂದ ಚಾಮುಂಡಿ ದೇವಿ ಕೊಲ್ಲುತ್ತಾಳೆ. ಆದ್ದರಿಂದಲೇ ಹತ್ತನೇಯ ದಿನ ವಿಜಯದಶಮಿಯನ್ನು ಆಚರಿಸುವುದು ರೂಢಿಯಾಗಿದೆ ಎಂದು ಹೇಳುತ್ತದೆ. ರಾಮಾಯಣದ ಪ್ರಕಾರ ಶ್ರೀರಾಮಚಂದ್ರನು ಲಂಕಾಸುರ ರಾವಣನ ಮೇಲೆ ಯುದ್ಧ ಮಾಡುವ ಮುನ್ನ ದುರ್ಗೆಯನ್ನು ಪೂಜಿಸಿ ವರ ಪಡೆದಿದ್ದನೆಂಬ ಕಥೆ ಇದೆ. ದುಷ್ಟಶಕ್ತಿ ರಾವಣನ ಮೇಲೆ ರಾಮನ ಜಯದ ಸಂಕೇತವಾಗಿ ನವರಾತ್ರಿಯನ್ನು ಆಚರಿಸುತ್ತಾರೆ ಎಂದು ಹೇಳುತ್ತಾರೆ. ಮಹಾಭಾರತದಲ್ಲಿ ಪಾಂಡವರು ಕೌರವರ ಮೇಲೆ ವಿಜಯ ಸಾಧಿಸಿದ ದಿನವೂ ವಿಜಯದಶಮಿ ಎಂದು ಹೇಳಲಾಗುತ್ತದೆ. ಕರ್ನಾಟಕದಲ್ಲಿ ವಿಜಯನಗರ ಸಂಸ್ಥಾನದಲ್ಲಿ ದಸರಾ ಉತ್ಸವಕ್ಕೆ ಚಾಲನೆ ಸಿಕ್ಕಿದರೆ, ಮೈಸೂರು ಸಂಸ್ಥಾನದ ಒಡೆಯರ ಕಾಲದಲ್ಲಿ ಮನೆ ಮನೆಗಳಲ್ಲೂ ಪ್ರಚಲಿತವಾಯಿತು.
ಭಾರತದ ಇತರೆಡೆಗಳಲ್ಲಿ ದಸರಾ
ಇದೇ ಹಬ್ಬವನ್ನು ಭಾರತದ ಉತ್ತರ ಭಾಗಗಳಲ್ಲಿ ‘ದಶೇರ’ವಾಗಿಯೂ, ‘ದುರ್ಗಾ ಪೂಜೆ’ಯಾಗಿಯೂ ಆಚರಿಸುತ್ತಾರೆ. 9 ದಿನಗಳ ಈ ಹಬ್ಬಕ್ಕೆ ‘ನವರಾತ್ರಿ’ ಎಂಬ ಹೆಸರೂ ಇದೆ. ಆಯುಧ ಪೂಜೆ, ವಿಜಯ ದಶಮಿಗಳನ್ನೊಳಗೊಂಡ ಹಲವು ದಿನಗಳ ಹಬ್ಬದಾಚರಣೆ ಕರ್ನಾಟಕದಲ್ಲಿ, ಅದರಲ್ಲೂ ಮೈಸೂರು ಪ್ರಾಂತ್ಯದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಬಂಗಾಳದಲ್ಲಿ ಈ ಸಮಯದಲ್ಲಿ ದುರ್ಗೆಯ ಪೂಜೆ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಸಾರ್ವಜನಿಕವಾಗಿ ದೇವಿ ಪೂಜೆಯನ್ನು ನಡೆಸುವ ಪರಿಪಾಠವೂ ಇದೆ. ಸಿಂಹದ ಮೇಲೆ ಕುಳಿತು ವಿವಿಧ ಬಗೆಯ ಆಯುಧಗಳನ್ನು ಹಿಡಿದಿರುವ ದೇವಿಯ ದೊಡ್ಡ ಮೂರ್ತಿಯನ್ನು ಇರಿಸಿ ಬೆಳಗ್ಗೆ ಸಂಜೆಗಳಲ್ಲಿ ಪೂಜೆ ಭಜನೆಗಳನ್ನು ಅರ್ಪಿಸುತ್ತಾರೆ. ಒಂಭತ್ತೂ ದಿನಗಳು ಒಂಭತ್ತು ರೂಪದಲ್ಲಿ ದೇವಿಯನ್ನು ಆರಾಸುತ್ತಾರೆ. ಅವುಗಳೆಂದರೆ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿಧಾತ್ರಿ.
ಗೊಂಬೆ ಇಟ್ಟು ಪೂಜಿಸುವುದು ಏಕೆ?
ನವರಾತ್ರಿ ಪ್ರಮುಖ ಆಕರ್ಷಣೆ ದಸರಾ ಬೊಂಬೆ. ಇದು ದಕ್ಷಿಣ ಭಾರತದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲಿ ಜನಪ್ರಿಯ. ಕನ್ನಡದಲ್ಲಿ ಇದನ್ನು ಗೊಂಬೆ ಹಬ್ಬ ಎಂದೂ ಕರೆಯುತ್ತಾರೆ. ದಸರಾ ಗೊಂಬೆ ಕೂರಿಸುವ ಪದ್ಧತಿ 18ನೇ ಶತಮಾನದಿಂದ ಮನೆಮನೆಯಲ್ಲೂ ಜಾರಿಗೆ ಬಂದಿದೆ. ದಸರಾ ಹಬ್ಬದಲ್ಲಿ ಮನೆ ಮನೆಗಳಲ್ಲಿ ಗೊಂಬೆಗಳನ್ನು ಕೂರಿಸುವ ಪದ್ಧತಿಯು ಮೈಸೂರು ಪ್ರಾಂತ್ಯದಲ್ಲಿ ಮೊಟ್ಟಮೊದಲು ಆರಂಭವಾಯಿತು ಎನ್ನಲಾಗುತ್ತದೆ. ಮೈಸೂರು ದಸರಾ ಎಂದು ಜಗತ್ಪ್ರಸಿದ್ಧಿ ಪಡೆದಿರುವ ಆಚರಣೆ ಮೈಸೂರು ಅರಮನೆಯಲ್ಲಿ ನಡೆದರೆ, ಪ್ರಜೆಗಳೆಲ್ಲರ ಮನೆಯಲ್ಲಿ ಹಬ್ಬದ ಸಂಭ್ರಮವಾಗಿ ಪಟ್ಟದ ಗೊಂಬೆಗಳನ್ನು ಇಟ್ಟು ಪೂಜಿಸುವ ಪದ್ಧತಿ ಬೆಳೆದುಕೊಂಡು ಬಂತು. ಸಮಸ್ತ ಸೃಷ್ಟಿಒಂದೇ ವಸ್ತುವಿನಿಂದ ಆಗಿದೆ ಎಂದು ಮಹತ್ವವನ್ನು ಸಾರುವುದೇ ದಸರಾ ಸಮಯದಲ್ಲಿ ಬೊಂಬೆ ಇಡುವುದರ ಸಂಕೇತ. ಬೊಂಬೆಗಳನ್ನು ಕೂರಿಸುವುದರಲ್ಲಿ ದೇವತೆಗಳಿಂದ ಹಿಡಿದು ಸಾಧು-ಸಂತರು, ಸತ್ಪುರುಷರು, ಸಾಮಾನ್ಯ ಮನುಷ್ಯರು, ಜನರ ಜೀವನಶೈಲಿ, ಹಳ್ಳಿ ಬದುಕು, ವ್ಯಾಪಾರ, ಕೃಷಿ, ಕ್ರೀಡೆ, ಉದ್ಯೋಗ ಪಶು-ಪಕ್ಷಿಗಳು ಹೀಗೆ ಸಕಲವೂ ದೇವರ ಅನುಗ್ರಹವಾಗಿದ್ದು, ಯಾವುದನ್ನೂ ತುಚ್ಛವಾಗಿ ನೋಡಬಾರದು, ಈ ಪ್ರಕೃತಿಯಲ್ಲಿರುವ ಪ್ರತಿಯೊಂದು ಮುಖ್ಯವೇ ಎಂದು ಬೊಂಬೆಗಳು ಸಂದೇಶ ಸಾರುತ್ತವೆ.