Asianet Suvarna News Asianet Suvarna News

ಈಗ ನನ್ನ ತಂದೆ ಮೌಲ್ಯ ಅರ್ಥವಾಗುತ್ತಿವೆ

ನನ್ನ ಮೌಲ್ಯ ನಾನು ಸತ್ತ ಮೇಲೆ ನಿನಗೆ ತಿಳಿಯುತ್ತೆ ಎಂದು ಯಾವಾಗಲೂ ಹೇಳುತ್ತಿದ್ದರು. ಅದರಂತೆ ನಿಧನರಾದ 5 ವರ್ಷಗಳ ನಂತರ ನನಗೆ ನನ್ನ ತಂದೆ ರೈತ ನಾಯಕ ಕೆ.ಎಸ್‌.ಪುಟ್ಟಣ್ಣಯ್ಯರ ಮೌಲ್ಯಗಳು ಅರ್ಥವಾಗುತ್ತಿವೆ ಎಂದು ಪುತ್ರ ದರ್ಶನ್‌ ಭಾವುಕರಾಗಿ ನೋವು ಹಂಚಿಕೊಂಡರು.

Now I understand the value of my father snr
Author
First Published Feb 20, 2023, 5:46 AM IST | Last Updated Feb 20, 2023, 5:46 AM IST

 ಪಾಂಡವಪುರ :  ನನ್ನ ಮೌಲ್ಯ ನಾನು ಸತ್ತ ಮೇಲೆ ನಿನಗೆ ತಿಳಿಯುತ್ತೆ ಎಂದು ಯಾವಾಗಲೂ ಹೇಳುತ್ತಿದ್ದರು. ಅದರಂತೆ ನಿಧನರಾದ 5 ವರ್ಷಗಳ ನಂತರ ನನಗೆ ನನ್ನ ತಂದೆ ರೈತ ನಾಯಕ ಕೆ.ಎಸ್‌.ಪುಟ್ಟಣ್ಣಯ್ಯರ ಮೌಲ್ಯಗಳು ಅರ್ಥವಾಗುತ್ತಿವೆ ಎಂದು ಪುತ್ರ ದರ್ಶನ್‌ ಭಾವುಕರಾಗಿ ನೋವು ಹಂಚಿಕೊಂಡರು.

ತಾಲೂಕಿನ ಕ್ಯಾತನಹಳ್ಳಿಯಲ್ಲಿ ರೈತನಾಯಕ, ಮಾಜಿ ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ 5ನೇ ಪುಣ್ಯಸ್ಮರಣೆ ಅಂಗವಾಗಿ ಸಮಾಧಿಗೆ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಂದೆ ಜತೆಗಿನ ಒಡನಾಟವನ್ನು ನೆನೆದು ಭಾವುಕರಾದರು.

ಪುಟ್ಟಣ್ಣಯ್ಯ ಅವರು ಮಾಡಿದ ಕೆಲಸಗಳು ಚಿರಸ್ಥಾಯಿಯಾಗಿವೆ. ರಾಜ್ಯದ ಉದ್ದಗಲಕ್ಕೂ ಬೆಳಗಾವಿ, ಬಾಗಲಕೋಟೆಯಿಂದೆಲ್ಲ ಕರೆ ಮಾಡಿ ತಮ್ಮನ್ನು ಹೋರಾಟಕ್ಕೆ ಆಹ್ವಾನಿಸುತ್ತಿದ್ದಾರೆ. ಈಗಾಗಲೇ ಹೋರಾಟದಲ್ಲಿ ನಿರತರಾಗಿರುವ ರೈತರಿಗೆ ನ್ಯಾಯ ಕೊಡಿಸಬೇಕಾಗಿದೆ. ಪುಟ್ಟಣ್ಣಯ್ಯರ ಆದರ್ಶ ಹಾಗೂ ಹೋರಾಟದ ಗುಣಗಳನ್ನು ಅಳವಡಿಸಿಕೊಂಡು ನಾವು ಹೋರಾಟ ಮಾಡಬೇಕಾಗಿದೆ ಎಂದರು.

ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕೆ.ಎಸ್‌.ಪುಟ್ಟಣ್ಣಯ್ಯ ಅವರು ಹೃದಯ ಶ್ರೀಮಂತಿಕೆಯಿಂದ ರೈತರು ಹಾಗೂ ದುಡಿಯುವ ವರ್ಗದ ಧ್ವನಿಯಾಗಿದ್ದರು. ತಮ್ಮ ಇಡೀ ಜೀವಮಾನವನ್ನೆ ಹೋರಾಟಕ್ಕಾಗಿ ಮುಡಿಪಾಗಿಟ್ಟಿದ್ದರು. 5ನೇ ಪುಣ್ಯಸ್ಮರಣೆಯಂದು ಒಂದು ದೊಡ್ಡ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ, ಶಿವರಾತ್ರಿಯಾದ್ದರಿಂದ ಅದು ಸಾಧ್ಯವಾಗಿಲ್ಲ. ಮಾಚ್‌ರ್‍ ತಿಂಗಳಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸುತ್ತೇವೆ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ ಕೆಂಪೂಗೌಡ ಮಾತನಾಡಿ, ಇಂದೂ ಕ್ಷೇತ್ರದಲ್ಲಿ ಎಲ್ಲೆ ಹೋದರೂ ಪುಟ್ಟಣ್ಣಯ್ಯನವರು ಇರಬೇಕಿತ್ತು ಎಂದು ಜನರು ಅವರನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಅವರ ನಿಧನ ನಂತರ ಅವರ ಪುತ್ರ ದರ್ಶನ್‌ ಅವರ ಜಾಗಕ್ಕೆ ತರಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ ನಾವೆಲ್ಲ ಅದಕ್ಕಾಗಿ ದುಡಿಯಬೇಕಿದೆ ಎಂದರು.

ಈ ವೇಳೆ ರೈತಸಂಘದ ವರಿಷ್ಠ ನಾಯಕಿ ಸುನೀತಾ ಪುಟ್ಟಣ್ಣಯ್ಯ ಸೇರಿದಂತೆ ಹಲವು ಮುಖಂಡರಿದ್ದರು.

ಬದುಕು ಹಸನಾಗಿಸಲು ಹೋರಾಟ ಅತೀ ಮುಖ್ಯ

ಭಾರತೀನಗರ (ಅ.03):ರೈತರ ಬದುಕು ಅಸನಾಗಲು ರೈತಸಂಘಟನೆ ಹೋರಾಟ ಅತಿಮುಖ್ಯ ಎಂದು ರಾಜ್ಯ ರೈತ ಸಂಘದ ಕಾರ್ಯದರ್ಶಿ ದರ್ಶನ್‌ ಪುಟ್ಟಣ್ಣಯ್ಯ ಹೇಳಿದರು.

ಅಣ್ಣೂರು ಗ್ರಾಮದಲ್ಲಿ ರೈತಸಂಘದ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ರೈತರು ಸಂಕಷ್ಟಕ್ಕೆ ಸಿಲುಕುವ ಮೊದಲೇ ಎಚ್ಚೆತ್ತುಕೊಂಡು ರೈತರ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡಬೇಕಾಗಿದೆ ಎಂದರು.

 ರೈತಸಂಘದಲ್ಲಿ ದುಡಿಯುವಂತಹ ಕಾರ್ಯಕರ್ತರು ಯಾವುದೇ ಸ್ವಾರ್ಥಗಳನ್ನು ಇಟ್ಟುಕೊಳ್ಳಬಾರದು. ರೈತರ (Farmers ) ಬದುಕಿಗಾಗಿ ಹೋರಾಟ ನಡೆಸಬೇಕು. ಅಂತಹವರಿಗೆ ಮಾತ್ರ ರೈತ ಸಂಘ ಮನ್ನಣೆ ನೀಡುತ್ತದೆ. ಇಲ್ಲದಿದ್ದರೆ ಸಂಘದಿಂದ ಉಚ್ಚಾಟನೆಗೊಳಿಸಲಾಗುವುದು ಎಂದರು.

ರಾಜ್ಯರೈತ ಸಂಘದ ಮುಖಂಡ ಪ್ರಸನ್ನ ಎನ್‌.ಗೌಡ ಮಾತನಾಡಿ, ರೈತರು ಕಬ್ಬು (Sugar Cane) ಬೆಳೆದು ನಷ್ಟಕೊಳಗಾಗುತ್ತಿದ್ದಾರೆ. ಟನ್‌ ಕಬ್ಬಿಗೆ 5700 ರು. ರೈತರಿಗೆ ಖರ್ಚು ಬೀಳುತ್ತಿದೆ. ಸರ್ಕಾರವನ್ನು ಒತ್ತಾಯಿಸಿದರೆ ಯಾವುದೇ ಪ್ರತಿಫಲ ಸಿಗುತ್ತಿಲ್ಲ. ಇದಕ್ಕೆಲ್ಲಾ ನಮ್ಮ ಜನಪ್ರತಿನಿಧಿಗಳೇ ಕಾರಣರಾಗಿದ್ದಾರೆ. ಕನಿಷ್ಠ ಟನ್‌ ಕಬ್ಬಿಗೆ 4500 ರು. ನಿಗಧಿಗೊಳಿಸಬೇಕು ಎಂದು ಒತ್ತಾಯಿಸಿದರು.

ಕೆಆರ್‌ಎಸ್‌ ಅಣೆಕಟ್ಟೆಸುತ್ತ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಇದನ್ನು ತಡೆಯಲು ಮುಂದಾಗಬೇಕು. ರೈತರ ಅಭಿವೃದ್ಧಿ, ಕೈಗಾರಿಕಾ ಪ್ರದೇಶ ಅಭಿವೃದ್ಧಿ ಹಾಗೂ ಇನ್ನಿತರೆ ಉದ್ದೇಶಗಳ ಅಭಿವೃದ್ಧಿಗಾಗಿ ರೈತಸಂಘ ಹೋರಾಟ ಅತಿ ಮುಖ್ಯವಾಗಿದೆ ಎಂದರು.

ಜಲಜೀವನ್‌ ಮೀಷನ್‌ ಯೋಜನೆಯಡಿ ಮೀಟರ್‌ ಅಳವಡಿಕೆ ಮತ್ತು ರೈತರ ಬೋರ್‌ ವೆಲ್‌ಗೆ (Borewell) ಮೀಟರ್‌ ಅಳವಡಿಕೆಗೆ ಬಂದರೆ ಅಧಿಕಾರಿಗಳನ್ನು ಕಂಬಕ್ಕೆ ಕಟ್ಟಿಹಾಕಿ ಮೀಟರ್‌ ಅಳವಡಿಕೆಗೆ ಅವಕಾಶಕೊಡಬೇಡಿ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ರೈತ ಸಂಘದ ಮುಖಂಡ ಎಸ್‌.ಸಿ.ಮಧುಚಂದನ್‌ ಮಾತನಾಡಿ, ರೈತರ ಬೇಡಿಕೆಗಳ ಈಡೇರಿಕೆಗಾಗಿ ಅ.5ರಂದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಜಿಲ್ಲೆಯ 5 ಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ರೈತರು ಆಗಮಿಸಿ ಬೆಂಬಲ ನೀಡಬೇಕು ಎಂದು ಕೋರಿದರು.

ಕಾರ್ಯಕ್ರಮಕ್ಕೂ ಮೊದಲು ಕೆ.ಎಂ.ದೊಡ್ಡಿಯ ಮದ್ದೂರು-ಮಳವಳ್ಳಿ ಹೆದ್ದಾರಿಯಿಂದ ಎತ್ತಿನಗಾಡಿಯ ಮೂಲಕ ರೈತಮುಖಂಡರನ್ನು ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿ ಗ್ರಾಮಕ್ಕೆ ಬರಮಾಡಿಕೊಂಡರು. ಗ್ರಾಮದ ಮುಖ್ಯದ್ವಾರದಲ್ಲಿ ಗ್ರಾಮಘಟಕದ ನಾಮಫಲಕ ಅನಾವರಣಗೊಳಿಸಿದರು.

ಕಾರ್ಯಕ್ರಮದ ವೇಳೆ ಮಕ್ಕಳ ತಜ್ಞ ಡಾ.ಮೋಹನ್‌ ಬಾಬು ಮತ್ತು ದರ್ಶನ್‌ ಪುಟ್ಟಣ್ಣಯ್ಯ ಅವರನ್ನು ಅಭಿನಂದಿಸಿ ಗೌರವಿಸಿದರು. ವೇದಿಕೆಯಲ್ಲಿ ರೈತಸಂಘದ ತಾಲೂಕು ಅಧ್ಯಕ್ಷ ಜಿ.ಕೆ.ರಾಮಕೃಷ್ಣ, ಕಾರ್ಯಾಧ್ಯಕ್ಷ ಜೆ.ಡಂ.ವೀರಸಂಗಯ್ಯ, ಎಸ್‌.ಬಿ.ಪುಟ್ಟಸ್ವಾಮಿ, ಯಧುಶೈಲಸಂಪತ್ತು, ಜಿ.ಎಸ್‌.ಲಿಂಗಪ್ಪಾಜಿ, ಜಿ.ಎಂ.ಶಂಕರ್‌, ವರದರಾಜು, ಎಸ್‌.ಕೆ.ರವಿಕುಮಾರ್‌, ಮರಿಸ್ವಾಮಿ, ಪಟೇಲ್ಬೋರೇಗೌಡ, ಕೃಷ್ಣಪ್ಪ, ಶಿವರಾಜು, ರಾಜೇಶ್‌, ಧನಂಜಯ, ಶಂಕರ್‌, ಚನ್ನಪ್ಪ ಸೇರಿದಂತೆ ಅಣ್ಣೂರು ಗ್ರಾಮಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios