ಮೋದಿ ಪ್ರಧಾನಿಯಾಗಿದ್ದರಿಂದ ನನಗೆ ಪದ್ಮಭೂಷಣ ಬಂತು: ಎಸ್‌.ಎಲ್‌. ಭೈರಪ್ಪ

ಮೋದಿಯವರು 2024 ಮತ್ತು 2029ರಲ್ಲಿ ಮತ್ತೆ ಗೆಲ್ಲಬೇಕು. 2029ರಲ್ಲಿ ಗೆದ್ದ ಮೇಲೆ ಅಧಿಕಾರ ನಡೆಸಿ ರಾಜಕೀಯ ನಿವೃತ್ತಿ ಪಡೆಯಲಿ: ಡಾ.ಎಸ್‌.ಎಲ್‌. ಭೈರಪ್ಪ 

Novelist SL Bhyrappa Talks Over Padma Bhushan Award grg

ಮೈಸೂರು(ಜ.27):  ಪದ್ಮಭೂಷಣ ಪ್ರಶಸ್ತಿಗೆ ನನ್ನನ್ನು ಪರಿಗಣಿಸಿರುವುದಕ್ಕೆ ಸಂತೋಷವಾಗಿದೆ. ಮೋದಿಯವರು ಪ್ರಧಾನಿಯಾಗಿದ್ದರಿಂದ ನನಗೆ ಪ್ರಶಸ್ತಿ ಬಂತು. ಇಲ್ಲದಿದ್ದರೆ ಬರುತ್ತಿರಲಿಲ್ಲ ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್‌.ಎಲ್‌. ಭೈರಪ್ಪ ಹೇಳಿದರು. ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪ್ರಶಸ್ತಿ ಬಂದಿದ್ದಕ್ಕೆ ನನಗೆ ಸಂತೋಷವಾಗಿದೆ ಎಂಬುದಕ್ಕಿಂತ ಹೆಚ್ಚೇನು ಹೇಳಲಾರೆ. ನಾನೊಬ್ಬ ಲೇಖಕ, ಪ್ರಶಸ್ತಿ ಬಂದರೆ ಖಂಡಿತ ಸಂತೋಷವಾಗುತ್ತದೆ. ಈ ಪ್ರಶಸ್ತಿಗಿಂತ ಮೀರಿದ್ದು ಎಂದರೆ ನನ್ನ ಪುಸ್ತಕಗಳನ್ನು ಲಕ್ಷಾಂತರ ಮಂದಿ ಓದಿ ಸಂತೋಷಪಟ್ಟಿದ್ದಾರೆ. ನನಗೆ ಈಗ 92 ವರ್ಷ. ಇನ್ನು ಎಷ್ಟುವರ್ಷ ಬದುಕಿರುತ್ತೇನೆ ಎನ್ನುವುದಕ್ಕಿಂತ ನಾನು ಸತ್ತ ಮೇಲೆ ಪುಸ್ತಕ ಎಷ್ಟುವರ್ಷ ಬದುಕಿರುತ್ತದೆ ಎಂಬುದು ಮುಖ್ಯ ಎಂದರು.

ನಾನು ಬರೆದ ಬರವಣಿಗೆ ಇನ್ನೂ ಐವತ್ತು, ನೂರು, ಇನ್ನೂರು ವರ್ಷಕ್ಕೆ ಅದು ಪ್ರಸ್ತುತ ಆಗಿರುತ್ತದೆಯೋ ಎಂಬುದನ್ನು ನೋಡಬೇಕು. ಹಾಗೆ ಆಗಿದ್ದರೆ ಅದು ನಿಜವಾದ ಪ್ರಶಸ್ತಿ. ಕುಮಾರವ್ಯಾಸ ಸುಮಾರು 500 ವರ್ಷ ಹಿಂದಿನವನು. ಆದರೆ, ಈಗಲೂ ಹಳ್ಳಿಗಳಲ್ಲಿ ಆತ ಬರೆದ ಕಾವ್ಯವನ್ನು ಓದುತ್ತಾರೆ. ಭೀಷ್ಮ, ಕರಣನ ಕುರಿತು ಹೇಳಿ ಎಂದು ಕೇಳುತ್ತಾರೆ. ಏಕೆಂದರೆ ಆ ಬರವಣಿಗೆಗೆ ಆ ಶಕ್ತಿ ಇದೆ. ನಮ್ಮ ಬರವಣಿಗೆಯಲ್ಲಿ ಆ ಶಕ್ತಿ ಇದೆಯಾ ಎಂಬುದನ್ನು ಆಲೋಚಿಸಬೇಕು ಎಂದು ಅವರು ಹೇಳಿದರು.

ಮೋದಿ ಬಂದ ಮೇಲೆ ಪದ್ಮಶ್ರೀ ಪ್ರಶಸ್ತಿ ಹಿರಿಮೆ-ಗರಿಮೆ ಹೆಚ್ಚಾಗಿದೆ: ಸಿ.ಟಿ.ರವಿ

ಪ್ರಶಸ್ತಿ ಕೊಟ್ಟಿರುವ ಮೋದಿ ಸರ್ಕಾರಕ್ಕೆ ಕೃತಜ್ಞತೆ ಹೇಳುತ್ತೇನೆ. ನನಗೆ ಪ್ರಶಸ್ತಿ ಕೊಟ್ಟರು ಎಂಬ ಕಾರಣಕ್ಕೆ ಮೋದಿ ಸರ್ಕಾರವನ್ನು ಹೊಗಳುತ್ತಿಲ್ಲ. ನನಗೂ, ರಾಜಕೀಯಕ್ಕೂ ಸಂಬಂಧ ಇಲ್ಲ. ಮೋದಿಯವರು 2024 ಮತ್ತು 2029ರಲ್ಲಿ ಮತ್ತೆ ಗೆಲ್ಲಬೇಕು. 2029ರಲ್ಲಿ ಗೆದ್ದ ಮೇಲೆ ಅಧಿಕಾರ ನಡೆಸಿ ರಾಜಕೀಯ ನಿವೃತ್ತಿ ಪಡೆಯಲಿ. ಅಲ್ಲಿಯವರೆಗೆ ಅವರಂತೆಯೇ ವ್ಯಕ್ತಿತ್ವವುಳ್ಳರನ್ನು ತಯಾರು ಮಾಡಬೇಕು. ಸೇವೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಧೈರ್ಯದಿಂದ ಇರುವವರು ಈವರೆಗೆ ಯಾರು ಪ್ರಧಾನಿಯಾಗಿ ಬಂದಿರಲಿಲ್ಲ ಎಂದರು.

ಭಾರತದ ಇತಿಹಾಸ ಓದಿದ್ದೇನೆ. ಬೇರೆ ದೇಶದ ರಾಜಕೀಯ ಇತಿಹಾಸ ಓದಿದ್ದೇನೆ. ಭಾರತದಲ್ಲಿ ಮೋದಿ ಅವರಂತಹ ಸರ್ಕಾರ ಯಾವಾಗಲೂ ಬಂದಿರಲಿಲ್ಲ. ಆದ್ದರಿಂದ ಸಂತೋಷವಾಗುತ್ತದೆ. ಅವರು ತಮ್ಮ ಅಧಿಕಾರಾವಧಿಯ ಎರಡು ಅವಧಿಯಲ್ಲಿ ಸಾಕಷ್ಟುಪ್ರಗತಿ ಮಾಡಿದ್ದಾರೆ. ಅಷ್ಟೇ ಸವಾಲು ಕೂಡ ಅವರಿಗಿದೆ. ಬ್ರಿಟನ್‌ ಮುಂತಾದ ದೇಶದಲ್ಲಿ ಸಾಕಷ್ಟುಬಾರಿ ನೋಡಿದ್ದೇನೆ. ಸೋತವರು ಗೆದ್ದವರನ್ನು ಕ್ರೀಡಾ ಮನೋಭಾವದಂತೆ ಅಭಿನಂದಿಸುತ್ತಾರೆ. ಆದರೆ, ನಮ್ಮಲ್ಲಿ ವಿರೋಧ ಪಕ್ಷದವರ ಬಾಯಲ್ಲಿ ಬರಿ ಬೈಗಳುವೇ ಇರುತ್ತದೆ. ಪ್ರತಿಪಕ್ಷಗಳು ಜವಾಬ್ದಾರಿಯಿಂದ ನಡೆದುಕೊಳ್ಳುವುದಿಲ್ಲ ಎಂದರು.

ಈ ವೇಳೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಭೈರಪ್ಪ ಅವರನ್ನು ಅಭಿನಂದಿಸಿ, ಅವರ ಕಾಲಿಗೆ ನಮಸ್ಕರಿಸಿ ಗೌರವಿಸಿದರು.

Padma Awards 2023: ಎಸ್‌ಎಂ ಕೃಷ್ಣಗೆ ಪದ್ಮವಿಭೂಷಣ, ಎಸ್‌ಎಲ್‌ ಭೈರಪ್ಪ, ಸುಧಾಮೂರ್ತಿಗೆ ಪದ್ಮಭೂಷಣ ಗೌರವ!

ಬಿಬಿಸಿ ಸಾಕ್ಷ್ಯಚಿತ್ರ ಈಗ ಅನಗತ್ಯ:

ಭಾರತಕ್ಕೆ ವಿಶ್ವದಲ್ಲಿ ಅತ್ಯುನ್ನತ ಸ್ಥಾನ ಲಭಿಸಿದೆ. ಜಿ20 ಅಧ್ಯಕ್ಷ ಸ್ಥಾನ ಈಗ ದೊರಕಿದೆ. ಅದನ್ನು ತಡೆಯಲಾರದೆ ಬಿಬಿಸಿ ಈ ಖ್ಯಾತೆ ತೆಗೆದಿದೆ. ಗುಜರಾತ್‌ ಗಲಭೆ ಪ್ರಕರಣದ ಕುರಿತು ಸುಪ್ರೀಂಕೋರ್ಟ್‌ ಕೂಡ ತೀರ್ಪು ನೀಡಿದೆ. ಹೀಗಿರುವಾಗ ಒಂದನ್ನು ಹೇಳಿ, ಮತ್ತೊಂದನ್ನು ಮರೆಮಾಚುವುದು ಬೇಕಿತ್ತಾ? ರೈಲಿಗೆ ಬೆಂಕಿ ಹಾಕಿ ಸಿಖ್‌ರನ್ನು ಹತ್ಯೆ ಮಾಡಿದ್ದನ್ನು ಹೇಳುವುದಿಲ್ಲ ಎಂದರು.

ಭಾರತದಲ್ಲಿ ಖಂಡಿತವಾಗಿಯೂ ಸಮಾನ ನಾಗರಿಕ ಸಂಹಿತೆ ಜಾರಿ ಆಗಬೇಕು. ಎಲ್ಲಾ ಕಾನೂನು ಎಲ್ಲರಿಗೂ ಅನ್ವಯ ಆಗಬೇಕು. ಅಲ್ಪಸಂಖ್ಯಾತರು ಹಾಗೆ, ಹೀಗೆ ಅಂತ ಹೇಳಿ ಅವರನ್ನು ಬೇರೆ ಎಂದು ಮಾಡಿದರು. ಸ್ವಾತಂತ್ರ್ಯ ಬಂದಾಗ ಸರಿಯಾದ ಫೌಂಡೇಷನ್‌ ಆಗಬೇಕಿತ್ತು ಎಂದು ಅವರು ಹೇಳಿದರು.

Latest Videos
Follow Us:
Download App:
  • android
  • ios