ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಯುವಕನನ್ನು ರೈಲ್ವೆ ಪೊಲೀಸರು ವಿಚಾರಿಸಿದಾಗ, ಆತ ಕೇರಳದ ಕುಖ್ಯಾತ ದರೋಡೆಕೋರ ಎಂದು ತಿಳಿದುಬಂದಿದೆ. ಬಂಧಿತ ಕಾಸರಗೋಡು ಮೂಲದ ಆಶಿಫ್‌ನಿಂದ ಸುಮಾರು ₹13.06 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಕೇರಳದ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದನು.
ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಯುವಕನ ವಿಚಾರಣೆ ನಡೆಸಿದ ರೈಲ್ವೆ ಪೊಲೀಸರಿಗೆ ಶಾಕ್ ಆಗಿದ್ದು, ವಿಚಾರಣೆ ವೇಳೆ ಆತ ಕುಖ್ಯಾತ ದರೋಡೆಕೋರನಾಗಿದ್ದು, ಇದೀಗ ಆತನನ್ನು ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತನಿಂದ ಅಂದಾಜು13.06 ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶಂಕಾಸ್ಪದ ತಿರುಗಾಡುತ್ತಿದ್ದ ಕುಖ್ಯಾತ ದರೋಡೆ ಆರೋಪಿ
ಕಾಸರಗೋಡು ಮೂಲದ ಆಶಿಫ್ ಪಿ.ಎಚ್. (25) ಬಂಧಿತ ಆರೋಪಿ. ರೈಲು ನಿಲ್ದಾಣದಲ್ಲಿ ಅಲೆದಾಡುತ್ತಿದ್ದ ಈತನ ಬ್ಯಾಗ್ ತಪಾಸಣೆ ನಡೆಸಿದಾಗ ಯಾವುದೇ ದಾಖಲೆಗಳಿಲ್ಲದ 93.5 ಗ್ರಾಂ ತೂಕದ ಚಿನ್ನಾಭರಣಗಳು ಪತ್ತೆಯಾಗಿವೆ. ಇದರಲ್ಲಿ 4 ಬಳೆಗಳು, 3 ಹಾರಗಳು, 4 ಉಂಗುರಗಳು, ಚೈನ್, ಬ್ರೇಸ್‌ಲೆಟ್ ಹಾಗೂ ಸ್ಟಡ್‌ಗಳು ಸೇರಿವೆ.
ಕೇರಳದಲ್ಲಿ ದೊಡ್ಡ ಕಳ್ಳ
ವಿಚಾರಣೆ ವೇಳೆ ಈತ ಕೇರಳದ ತ್ರಿಶೂರ್ ಜಿಲ್ಲೆಯ ಪಾವರಟ್ಟಿ ಎಂಬಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಪಾವರಟ್ಟಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ಎರ್ನಾಕುಳಂ ಮತ್ತು ಕಾಸರಗೋಡು ವ್ಯಾಪ್ತಿಯಲ್ಲಿ ನಡೆದ ಹಲವು ಕಳವು ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿಯ ವಿರುದ್ಧ ಹಲವು ಬಾಕಿ ವಾರಂಟ್‌ಗಳಿದ್ದು, ಹೆಚ್ಚಿನ ತನಿಖೆಗಾಗಿ ಆತನನ್ನು ಕೇರಳ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.


