Asianet Suvarna News Asianet Suvarna News

ರಾಜಕಾಲುವೆ ಒತ್ತುವರಿ: ಮಾಜಿ ಸಚಿವ ಲಮಾಣಿ ಸೇರಿ 13 ಜನರಿಗೆ ನೋಟಿಸ್‌

ನಗರಸಭೆಯಿಂದ ಪರವಾನಗಿ ಪಡೆದುಕೊಂಡೇ ಮನೆ ನಿರ್ಮಾಣ: ರುದ್ರಪ್ಪ ಲಮಾಣಿ| ರಾಜಕೀಯ ದ್ವೇಷ ಸಾಧಿಸುವ ಉದ್ದೇಶದಿಂದ ನೋಟಿಸ್‌ ಕೊಟ್ಟಿದ್ದಾರೆ. ಇದು ಕಾನೂನು ಬಾಹಿರವಾಗಿದ್ದು, ಅದನ್ನು ರದ್ದುಪಡಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿದ ಲಮಾಣಿ| 

Notice to Thirteen people Including Former Minister Rudrappa Lamani grg
Author
Bengaluru, First Published Nov 7, 2020, 2:39 PM IST

ಹಾವೇರಿ(ನ.07): ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದು, ಒಂದು ವಾರದೊಳಗೆ ಕಟ್ಟಡ ತೆರವುಗೊಳಿಸಬೇಕು. ತಪ್ಪಿದಲ್ಲಿ ಕಟ್ಟಡ ತೆರವುಗೊಳಿಸಬೇಕಾಗುತ್ತದೆ ಎಂದು ಕಾಂಗ್ರೆಸ್‌ ನಾಯಕ, ಮಾಜಿ ಸಚಿವ ರುದ್ರಪ್ಪ ಲಮಾಣಿ ಸೇರಿ 13 ಜನರಿಗೆ ಹಾವೇರಿ ನಗರಸಭೆ ನೋಟಿಸ್‌ ಜಾರಿಮಾಡಿದೆ. ಮನೆ ನಿರ್ಮಿಸಿಕೊಳ್ಳಲು ನಗರಸಭೆಯೇ ಪರವಾನಗಿ ಕೊಟ್ಟಿದೆ. ಅಲ್ಲದೇ ಮನೆ ಪೂರ್ಣಗೊಂಡಿರುವ ಬಗ್ಗೆಯೂ ದೃಢೀಕರಣ ಕೊಟ್ಟಿದೆ. ಆದರೀಗ ಏಕಾಏಕಿ ನೋಟಿಸ್‌ ಕೊಟ್ಟಿರುವ ನಗರಸಭೆ ಪೌರಾಯುಕ್ತರ ನಡೆ ಚರ್ಚೆಗೆ ಗ್ರಾಸವಾಗಿದೆ.

ನೋಟಿಸ್‌ನಲ್ಲಿ ಏನಿದೆ?:

ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ಬರುವ ಬಸವೇಶ್ವರ ನಗರ, ಮಂಜುನಾಥ ನಗರ, ಇಜಾರಿಲಕಮಾಪುರದಲ್ಲಿ ಹಾದು ಹೋಗುವ ರಾಜಕಾಲುವೆಯಲ್ಲಿ 1.09 ಗುಂಟೆ ಅಳತೆಯ ರಾಜಕಾಲುವೆ ಜಾಗೆಯನ್ನು ಅತಿಕ್ರಮಣ ಮಾಡಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದರಿಂದ ಮಳೆನೀರು ಸರಾಗವಾಗಿ ಹರಿದು ಹೋಗಲು ಬಹಳ ತೊಂದರೆಯಾಗಿ ಸಾರ್ವಜನಿಕರ ಮನೆಗಳಿಗೆ ನೀರು ನುಗ್ಗುತ್ತಿದೆ. ಕಾರಣ ನೋಟಿಸ್‌ ಮುಟ್ಟಿದ 7 ದಿನದೊಳಗೆ ರಾಜಕಾಲುವೆಯನ್ನು ಅತಿಕ್ರಮಣ ಮಾಡಿ ನಿರ್ಮಾಣ ಮಾಡಿ ಕಟ್ಟಿರುವ ಕಟ್ಟಡವನ್ನು ತೆರವುಗೊಳಿಸಬೇಕು. ತಪ್ಪಿದಲ್ಲಿ ಪುರಸಭೆ ಅಧಿನಿಯಮ 1964ರ ಪ್ರಕಾರ ತೆರವುಗೊಳಿಸಲಾಗುವುದು. ಅಲ್ಲದೇ ತೆರವುಗೊಳಿಸಿದ ವೆಚ್ಚವನ್ನು ವಸೂಲಿ ಮಾಡಲಾಗುವುದು. ಒಂದು ವೇಳೆ ವೆಚ್ಚವನ್ನು ಭರಿಸದಿದ್ದಲ್ಲಿ ನಿಮ್ಮ ಆಸ್ತಿ ಮೇಲೆ ಭೂಜಾ ದಾಖಲಿಸಲಾಗುವುದು ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿಯವರಿಗೆ ಕೊಟ್ಟಿರುವ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಶಿಗ್ಗಾಂವಿಯಲ್ಲಿ ಟೆಕ್ಸ್‌ಟೈಲ್‌ ಪಾರ್ಕ್ ನಿರ್ಮಾಣಕ್ಕೆ ನೋಡಲ್‌ ಅಧಿಕಾರಿ ನೇಮಕ: ಬೊಮ್ಮಾಯಿ

ಆಯುಕ್ತರಿಗೆ ದೂರು:

ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರು ನೋಟಿಸ್‌ ಸಂಬಂಧ ಪ್ರಾದೇಶಿಕ ಆಯುಕ್ತರಿಗೆ ದೂರು ಕೊಟ್ಟಿದ್ದು, ನಿಯಮಾನುಸಾರ ನಿವೇಶನ ಖರೀದಿಸಿ, ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಮನೆ ಕಟ್ಟಿಕೊಳ್ಳಲಾಗಿದೆ. ರಾಜಕೀಯ ದ್ವೇಷ ಸಾಧಿಸುವ ಉದ್ದೇಶದಿಂದ ನೋಟಿಸ್‌ ಕೊಟ್ಟಿದ್ದಾರೆ. ಇದು ಕಾನೂನುಬಾಹಿರವಾಗಿದ್ದು, ಅದನ್ನು ರದ್ದುಪಡಿಸುವಂತೆ ಮನವಿ ಮಾಡಿದ್ದಾರೆ.

ತಡೆಯಾಜ್ಞೆ:

ಇಜಾರಿಲಕಮಾಪುರ ಗ್ರಾಮದ ಸರ್ವೆ ನಂ. 27, ಪ್ಲಾಟ್‌ ನಂ. 67 ಹಾಗೂ 50ಕ್ಕೆ ಸಂಬಂಧಿಸಿದಂತೆ ನಗರಸಭೆಯ ಪೌರಾಯುಕ್ತರು ನೀಡಿರುವ ನೋಟಿಸ್‌ಗೆ ಮುಂದಿನ ಆದೇಶ ಆಗುವವರೆಗೂ ತಡೆಯಾಜ್ಞೆ ನೀಡಿ, ಈ ಪ್ರಕರಣದ ವಿಚಾರಣೆಯನ್ನು ಡಿ. 12ಕ್ಕೆ ನಿಗದಿಪಡಿಸಲಾಗಿದೆ ಎಂದು ಪ್ರಾದೇಶಿಕ ಆಯುಕ್ತರು ತಡೆಯಾಜ್ಞೆ ನೀಡಿದ್ದಾರೆ.

1949ರಲ್ಲೇ ಬಿನ್‌ಶೇತ್ಕಿಯಾಗಿದ್ದು, ನಾನು ಇತ್ತೀಚೆಗೆ ಖರೀದಿ ಮಾಡಿಕೊಂಡಿರುವ ಬಗ್ಗೆ ದಾಖಲೆಗಳಿವೆ. ನಗರಸಭೆಯಿಂದ ಪರವಾನಗಿ ಪಡೆದುಕೊಂಡೇ ಮನೆ ನಿರ್ಮಿಸಿಕೊಂಡಿರುವೆ. ಅವರೇ ಸಿಸಿ ಕೊಟ್ಟಿದ್ದಾರೆ. ಆಗ ಇಲ್ಲಿ ರಾಜಕಾಲುವೆ ಇದೆ ಎಂಬುದು ನಗರಸಭೆಯವರಿಗೆ ಗೊತ್ತಿರಲಿಲ್ಲವೇ? ನನ್ನ ಮನೆ ತೆರವುಗೊಳಿಸುವುದರಿಂದ ಊರಿಗೆ ಒಳ್ಳೆಯದಾಗುತ್ತದೆ ಎಂದರೆ ನನ್ನ ಮನೆ ಕೆಡವಲಿ, ರಾಜಕೀಯ ದುರುದ್ದೇಶದಿಂದ ನೋಟಿಸ್‌ ಕೊಟ್ಟಿರುವುದು ಸರಿಯಲ್ಲ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ತಿಳಿಸಿದ್ದಾರೆ. 
 

Follow Us:
Download App:
  • android
  • ios